ಕನ್ನಡ ಭಾಷೆ ಕೇವಲ ಸಂವಹನದ ಮಾಧ್ಯಮವಲ್ಲ. ಅದು ನಮ್ಮ ಸಂಸ್ಕೃತಿ, ಪರಂಪರೆ, ಇತಿಹಾಸ ಮತ್ತು ಅಸ್ಮಿತೆಯ ಪ್ರತೀಕವಾಗಿದೆ. ಆಧುನಿಕತೆ ಹಾಗೂ ಜಾಗತೀಕರಣದ ನಡುವೆಯೂ ಕನ್ನಡ ಭಾಷೆಯ ಮೇಲಿನ ಅಭಿಮಾನ ಉಳಿಸಿ ಬೆಳೆಸುವ ಜವಾಬ್ದಾರಿ ಇಂದಿನ ಯುವಜನತೆಯ ಮೇಲಿದೆ ಎಂದು ಡಾ. ಎಚ್.ಎಸ್. ಸತ್ಯನಾರಾಯಣ ಹೇಳಿದರು.

ಕಾರ್ಕಳ : ಕನ್ನಡ ಭಾಷೆ ಕೇವಲ ಸಂವಹನದ ಮಾಧ್ಯಮವಲ್ಲ. ಅದು ನಮ್ಮ ಸಂಸ್ಕೃತಿ, ಪರಂಪರೆ, ಇತಿಹಾಸ ಮತ್ತು ಅಸ್ಮಿತೆಯ ಪ್ರತೀಕವಾಗಿದೆ. ಆಧುನಿಕತೆ ಹಾಗೂ ಜಾಗತೀಕರಣದ ನಡುವೆಯೂ ಕನ್ನಡ ಭಾಷೆಯ ಮೇಲಿನ ಅಭಿಮಾನ ಉಳಿಸಿ ಬೆಳೆಸುವ ಜವಾಬ್ದಾರಿ ಇಂದಿನ ಯುವಜನತೆಯ ಮೇಲಿದೆ ಎಂದು ಡಾ. ಎಚ್.ಎಸ್. ಸತ್ಯನಾರಾಯಣ ಹೇಳಿದರು.

ಕ್ರಿಯೇಟಿವ್ ಪದವಿಪೂರ್ವ ಕಾಲೇಜಿನ ಸಪ್ತಸ್ವರ ವೇದಿಕೆಯಲ್ಲಿ ವಿದ್ಯಾರ್ಥಿಗಳಿಗಾಗಿ ಆಯೋಜಿಸಿದ್ದ ‘ಪ್ರಸ್ತುತ ಕನ್ನಡ ನಾಡು-ನುಡಿಯ ಅಸ್ಮಿತೆಯಲ್ಲಿ ವಿದ್ಯಾರ್ಥಿಗಳ ಪಾತ್ರ’ ಎಂಬ ವಿಷಯದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.ಕನ್ನಡಕ್ಕೆ ಸಾವಿರಾರು ವರ್ಷಗಳ ಇತಿಹಾಸ, ಶ್ರೀಮಂತ ಸಾಹಿತ್ಯ ಪರಂಪರೆ ಹಾಗೂ ವೈವಿಧ್ಯಮಯ ಸಂಸ್ಕೃತಿಯಿದೆ. ಇಂಗ್ಲಿಷ್ ಸೇರಿದಂತೆ ಇತರ ಭಾಷೆಗಳನ್ನು ಕಲಿಯುವುದು ಅಗತ್ಯವಾದರೂ ಮಾತೃಭಾಷೆಯನ್ನು ಕಡೆಗಣಿಸಬಾರದು ಎಂದರು.

ಕಾಲೇಜಿನ ಸಹ ಸಂಸ್ಥಾಪಕ ಡಾ. ಗಣನಾಥ ಶೆಟ್ಟಿ ಮಾತನಾಡಿ, ಕನ್ನಡವೆಂದರೆ ಕೇವಲ ಮಾತನಾಡುವ ಭಾಷೆಯಲ್ಲ. ಅದು ನಮ್ಮ ನೆಲದ ಇತಿಹಾಸ, ಜನಜೀವನ, ಆಚಾರ-ವಿಚಾರ, ಕಲೆ, ಸಾಹಿತ್ಯ, ಪರಂಪರೆ ಮತ್ತು ಸ್ವಾಭಿಮಾನದ ಸಂಕೇತ ಎಂದರು.ಕನ್ನಡ ವಿಭಾಗದ ಮುಖ್ಯಸ್ಥ ಶಿವಕುಮಾರ್, ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಕನ್ನಡ ಉಪನ್ಯಾಸಕ ಲಕ್ಷ್ಮಿಕಾಂತ್ ಸ್ವಾಗತಿಸಿ, ವಂದಿಸಿದರು.