ಮಂಗಳೂರು: ದೇವರ ದಾಸಿಮಯ್ಯ ಅವರು ವಚನ ಸಾಹಿತ್ಯದ ಮೂಲಕ ಕನ್ನಡ ಸಾಹಿತ್ಯಕ್ಕೆ ಅಪಾರ ಕೊಡುಗೆ ನೀಡಿದ್ದಾರೆ. ಸರ್ಕಾರವು ಮಹನೀಯರ ಜಯಂತಿಗಳನ್ನು ಆಚರಿಸುತ್ತಿದ್ದು, ಯುವ ಜನರು ಅವರೆಲ್ಲರ ಸಂದೇಶಗಳನ್ನು ತಿಳಿದುಕೊಂಡು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಕರ್ನಾಟಕ ಗೇರು ಅಭಿವೃದ್ಧಿ ನಿಗಮ ಅಧ್ಯಕ್ಷೆ ಮಮತಾ ಗಟ್ಟಿ ಹೇಳಿದ್ದಾರೆ.ನಗರದ ವಿಶ್ವವಿದ್ಯಾನಿಲಯ ಕಾಲೇಜಿನಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯ್ತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಂಯುಕ್ತ ಆಶ್ರಯದಲ್ಲಿ ನಡೆದ ದೇವರ ದಾಸಿಮಯ್ಯ ಜಯಂತಿ ಉದ್ಘಾಟಿಸಿ ಅವರು ಮಾತನಾಡಿದರು.

ಪ್ರತಿಯೊಂದು ಜಯಂತಿ ಆಚರಣೆಗಳು ಅರ್ಥಪೂರ್ಣವಾಗಿದ್ದು, ಹಿಂದಿನ ಆಚಾರ ವಿಚಾರಗಳು, ಸಾಮಾಜಿಕ ಕ್ರಾಂತಿಗಳ ಬಗ್ಗೆ ಇಂದಿನ ಯುವ ಜನಾಂಗ ತಿಳಿದುಕೊಳ್ಳುವ ಅಗತ್ಯವಿದೆ ಎಂದು ಹೇಳಿದರು.

ಉಡುಪಿ ಶ್ರೀ ಪೂರ್ಣಪ್ರಜ್ಞ ಸಂಧ್ಯಾ ಕಾಲೇಜಿನ ಸಹಾಯಕ ಪ್ರಾಧ್ಯಾಪಕಿ ಡಾ.ಪ್ರಜ್ಞಾ ಮಾರ್ಪಳ್ಳಿ ಉಪನ್ಯಾಸ ನೀಡಿ, ವೃತ್ತಿಯಲ್ಲಿ ನೇಕಾರರಾಗಿದ್ದ ದೇವರ ದಾಸಿಮಯ್ಯ ಅವರ ಸಾಹಿತ್ಯ ಸೃಷ್ಟಿ ಮತ್ತು ಬದುಕು ಬಹಳ ಮಹತ್ತರ. ಅತ್ಯಂತ ಸರಳವಾದ ಭಾಷೆಯಲ್ಲಿ ಕ್ಲಿಷ್ಟಕರ ಸಂಗತಿಗಳನ್ನು ಮನಮುಟ್ಟುವ ಹಾಗೆ ವಚನಗಳ ಮೂಲಕ ಸಾರಿದವರಲ್ಲಿ ದೇವರ ದಾಸಿಮಯ್ಯ ಕೂಡ ಒಬ್ಬರು. ಭಕ್ತಿ ಮತ್ತು ಸಾಮಾಜಿಕ ವಿಚಾರಗಳನ್ನು ಸರಳವಾಗಿ ವಚನಗಳಲ್ಲಿ ಮೂಡಿಸಿದ್ದಾರೆ ಎಂದರು.

ದೇವಾಂಗ ಸಮಾಜದ ಶರವಣ ಮತ್ತು ತ್ಯಾಗರಾಜ್, ಸಂಸ್ಥೆಯ ಕನ್ನಡ ವಿಭಾಗ ಮುಖ್ಯಸ್ಥೆ ಲಕ್ಷ್ಮೀದೇವಿ ಎಲ್. ಮತ್ತಿತರರು ಇದ್ದರು. ವಿಶ್ವವಿದ್ಯಾನಿಲಯ ಕಾಲೇಜಿನ ಪ್ರಾಂಶುಪಾಲ ಡಾ. ಗಣಪತಿ ಗೌಡ ಎಸ್. ಅಧ್ಯಕ್ಷತೆ ವಹಿಸಿದ್ದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ರಾಜೇಶ್ ಜಿ. ಸ್ವಾಗತಿಸಿದರು. ಸಂಸ್ಥೆಯ ಕನ್ನಡ ಪ್ರಾಧ್ಯಾಪಕ ಡಾ. ಮಾಧವ್ ವಂದಿಸಿದರು. ವಿದ್ಯಾರ್ಥಿನಿ ಪೂರ್ಣಿಮಾ ನಿರೂಪಿಸಿದರು.