ಯುವಜನತೆ ಸದೃಢ ಭಾರತ ನಿರ್ಮಾಣಕ್ಕೆ ಪಣ ತೊಡಬೇಕು

| Published : Oct 10 2023, 01:00 AM IST

ಸಾರಾಂಶ

ಮುಂಡರಗಿ ಬಸ್ ನಿಲ್ದಾಣದ ಆವರಣದಲ್ಲಿ ಸ್ವಾತಂತ್ರ್ಯ ಅಮೃತ ಮಹೋತ್ಸವದ ಪ್ರಯುಕ್ತ ಹಮ್ಮಿಕೊಂಡಿರುವ ನಮ್ಮ ಮಣ್ಣು, ನಮ್ಮ ದೇಶ ಎಂಬ ಜನಜಾಗೃತಿ ಕಾರ್ಯಕ್ರಮ ಉದ್ಘಾಟನೆ

ಮುಂಡರಗಿ: ದೇಶದ ಸ್ವಾತಂತ್ರ್ಯಕ್ಕಾಗಿ ಅನೇಕ ಮಹನೀಯರು ತ್ಯಾಗ ಬಲಿದಾನ ಮಾಡಿದ್ದಾರೆ. ಆದ್ದರಿಂದ ಇಂದು ನಾವು ಸುಖವಾಗಿದ್ದೇವೆ. ಯುವಜನತೆ ದೇಶಭಕ್ತಿ ಮೈಗೂಡಿಸಿಕೊಂಡು ಸದೃಢ ಭಾರತ ನಿರ್ಮಾಣಕ್ಕೆ ಪಣ ತೊಡಬೇಕು ಎಂದು ಮುಂಡರಗಿ ತಾಲೂಕು ಅಂಚೆ ಇಲಾಖೆ ಅಧಿಕಾರಿ ಗೀತಾ ರಿತ್ತಿ ಹೇಳಿದರು. ಅವರು ಸೋಮವಾರ ಮುಂಡರಗಿ ಬಸ್ ನಿಲ್ದಾಣದ ಆವರಣದಲ್ಲಿ ದಕ್ಷಿಣ ಮಧ್ಯವಲಯ ಸಾಂಸ್ಕೃತಿಕ ಕೇಂದ್ರ ನಾಗಪುರ, ಕದಂಬ ಸಂಸ್ಥೆ ಬೀದರ್ ಇವರಿಂದ ಸ್ವಾತಂತ್ರ್ಯ ಅಮೃತ ಮಹೋತ್ಸವದ ಪ್ರಯುಕ್ತ ಹಮ್ಮಿಕೊಂಡಿರುವ ನಮ್ಮ ಮಣ್ಣು, ನಮ್ಮ ದೇಶ ಎಂಬ ಜನಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಯುವಕರಿಗೆ ಸ್ವಾತಂತ್ರ್ಯ ಹೋರಾಟಗಾರರು ಮಾದರಿಯಾಗಬೇಕು. ಯುವ ಸಮುದಾಯ ದೇಶಭಕ್ತಿ ಬೆಳೆಸಿಕೊಳ್ಳಬೇಕು. ಜಗತ್ತಿನಲ್ಲಿ ಹೆಚ್ಚು ಜನಸಂಖ್ಯೆ ಮತ್ತು ಅಧಿಕ ಯುವ ಸಮುದಾಯವನ್ನು ಹೊಂದಿರುವ ದೇಶ ಭಾರತ. ಶ್ರೀಮಂತ ಸಂಸ್ಕೃತಿ, ಸಂಸ್ಕಾರ ಮತ್ತು ಸಂಪನ್ಮೂಲ ಹೊಂದಿರುವ ದೇಶದಲ್ಲಿ ಯುವಕರು ತಮ್ಮ ಸಾಧನೆ ಜತೆಗೆ ದೇಶ ಸೇವೆಗೆ ಮುಂದೆ ಬರಬೇಕಿದೆ ಎಂದರು. ಈ ಸಂದರ್ಭದಲ್ಲಿ ಕಲಾ ತಂಡದ ಮುಖಂಡ ರಾಜಶೇಖರಯ್ಯ ಹಿರೇಮಠ ಮಾತನಾಡಿ, ದೇಶಕ್ಕಾಗಿ ಬಲಿದಾನಗೈದ ವೀರಯೋಧರ ಸ್ಮರಣೆಗಾಗಿ ಕೇಂದ್ರ ಸರ್ಕಾರ ವಿಭಿನ್ನ ರೀತಿಯಲ್ಲಿ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದ್ದು, ನಮ್ಮ ಮಣ್ಣು, ನಮ್ಮ ದೇಶ ಇದೊಂದು ವಿಶಿಷ್ಟ ಕಾರ್ಯಕ್ರಮವಾಗಿದೆ. ನಮ್ಮ ದೇಶದ ಜನತೆಗೆ ದೇಶ, ಭಾಶ, ಮಣ್ಣು, ಮಣ್ಣಿನ ಮಹತ್ವದ ಕುರಿತು ತಿಳುವಳಿಕೆ ನೀಡುವುದು ಈ ಕಾರ್ಯಕ್ರಮದ ಉದ್ದೇಶವಾಗಿದೆ. ದೇಶ ಮೊದಲು ಎಂಬ ಭಾವನೆ ಯುವಕರಲ್ಲಿ ಮೂಡಿದಾಗ ಮಾತ್ರ ಭಾರತ ವಿಶ್ವದಲ್ಲಿ ರಾರಾಜಿಸಲು ಸಾಧ್ಯವಾಗುತ್ತದೆ ಎಂದರು. ಕಾರ್ಯಕ್ರಮದಲ್ಲಿ ಈ ನೆಲ, ಈ ಜಲ ಈ ಮಣ್ಣು ನಮ್ಮದು, ರಕ್ಷಿಸುವ ಹೊಣೆಗಾರಿಕೆ ಎಂದೆಂದಿಗೂ ನಮ್ಮದು ಎನ್ನುವ ದೇಶ, ಭಾಷೆ, ಸೈನಿಕರು ಹಾಗೂ ಮಣ್ಣಿನ ಮತ್ತು ನೆಲ, ಜಲದ ಕುರಿತು ಜಾಗೃತಿ ಗೀತೆಗಳನ್ನು ಹಾಡಿ ಜನತೆಗೆ ತಿಳಿಯಪಡಿಸಿದರು. ಅಲ್ಲದೇ ಸಾರ್ವಜನಿಕರಿಗೆ ನೆಲ, ಜಲ, ಮಣ್ಣಿನ ಕುರಿತು ಜಾಗೃತಿಗಾಗಿ ಪ್ರಮಾಣ ವಚನ ಬೋಧಿಸಿದರು. ಈ ಸಂದರ್ಭದಲ್ಲಿ ಅಂಚೆ ಸಹಾಯಕ ಅಧಿಕಾರಿ ಕಲ್ಲಪ್ಪ ಹ್ಯಾಟಿ, ಕೆ.ಎಸ್.ಆರ್.ಟಿ.ಸಿ. ಬಸ್ ನಿಲ್ದಾಣದ ನಿಯಂತ್ರಣಾಧಿಕಾರಿ ಎಚ್.ಡಿ.ಹಡಗಲಿ ಹಾಗೂ ಅಂಚೆ ಇಲಾಖೆ ಮತ್ತು ಕೆ.ಎಸ್.ಆರ್.ಟಿ.ಸಿ. ಸಿಬ್ಬಂದಿ ವರ್ಗದವರು ಹಾಗೂ ಕಲಾವಿದರಾದ ಶಕುಂತಲಾ ಹಾಲಕೇರಿ, ಬಸವರಾಜ ಬಾಚಲಾಪೂರ, ಬಿ.ಎ. ಹಸಬಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು. ನಂತರ ತಾಲೂಕಿನ ಬರದೂರು ಹಾಗೂ ಡಂಬಳ ಗ್ರಾಮಕ್ಕೆ ತೆರಳಿ ಕಾರ್ಯಕ್ರಮ ನಿರ್ವಹಿಸಿದರು.