ಯುವಕರು ಧರ್ಮದತ್ತ ಮುಖಮಾಡಿದಾಗ ಧರ್ಮ ಉಳಿಯಲು ಸಾಧ್ಯ. ಯುವಜನತೆ ಧಾರ್ಮಿಕತೆಯತ್ತ ಬರಬೇಕು. ಜತೆಗೆ, ಭಾರತದ ಸಂಸ್ಕೃತಿ, ಘನತೆ ಎತ್ತಿ ಹಿಡಿಯಬೇಕು ಎಂದು ಹುಕ್ಕೇರಿಮಠ ಸದಾಶಿವ ಶ್ರೀ ಹೇಳಿದರು.

ಹಾವೇರಿ:ಯುವಕರು ಧರ್ಮದತ್ತ ಮುಖಮಾಡಿದಾಗ ಧರ್ಮ ಉಳಿಯಲು ಸಾಧ್ಯ. ಯುವಜನತೆ ಧಾರ್ಮಿಕತೆಯತ್ತ ಬರಬೇಕು. ಜತೆಗೆ, ಭಾರತದ ಸಂಸ್ಕೃತಿ, ಘನತೆ ಎತ್ತಿ ಹಿಡಿಯಬೇಕು ಎಂದು ಹುಕ್ಕೇರಿಮಠ ಸದಾಶಿವ ಶ್ರೀ ಹೇಳಿದರು.ನಗರದ ರಜನಿ ಸಭಾಂಗಣದಲ್ಲಿ ಬೃಹತ್ ಸಿದ್ಧಚಕ್ರ ಮಹಾಮಂಡಲ ವಿಧಾನ ಮಹೋತ್ಸವದ ನಾಲ್ಕನೇ ದಿನ ಸೋಮವಾರ ಯುವ ಸಮ್ಮೇಳನದ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದ ಅವರು, ದೇಶದ ಜನಸಂಖ್ಯೆಯ ಶೇ.70ರಷ್ಟು ಯುವಜನತೆ ಇದೆ, ಇಡೀ ಜಗತ್ತನೇ ನಡುಗಿಸುವ ಶಕ್ತಿ ಭಾರತ ದೇಶಕ್ಕಿದೆ. ಯುವ ಜನತೆ ವ್ಯಸನಗಳ ದಾಸರಾಗದೇ, ವ್ಯಸನ ಮುಕ್ತರಾಗಿ ದೇಶಕ್ಕೆ ಹೊಸ ಶಕ್ತಿಯಾಗಲು ಸಂಕಲ್ಪ ಮಾಡಬೇಕು ಎಂದರು.ವಿದೇಶಿಗರು ನಮ್ಮ ಸಂಸ್ಕೃತಿಗೆ ಮಾರುಹೋಗಿದ್ದಾರೆ, ಆದರೆ ಇಂದಿನ ಜನತೆ ನಮ್ಮ ಸಂಸ್ಕೃತಿ ಮರೆತು ವಿದೇಶಿ ಸಂಸ್ಕೃತಿ ಅಳವಡಿಸಿಕೊಳ್ಳತ್ತಿರುವುದು ವಿಷಾದಕರ ಸಂಗತಿಯಾಗಿದೆ. ಜಗತ್ತಿನ ಇತಿಹಾಸದಲ್ಲಿ ಭಾರತಕ್ಕೆ ವಿಶೇಷ ಸ್ಥಾನವಿದೆ. ವಿದೇಶಿಗರು ಭಾರತದ ಸಂಸ್ಕೃತಿ, ಸಂಸ್ಕಾರ, ಮಠ-ಮಂದಿರ ಹಾಗೂ ಮಸೀದಗಳ ಪರಂಪರೆ ಕಣ್ತುಂಬಿಕೊಳ್ಳಲು ಬರುತ್ತಾರೆ. ಭಾರತ ಆರ್ಥಿಕತೆ ಮೇಲೆ ನಿಂತಿಲ್ಲ, ಇಲ್ಲಿನ ಪರಂಪರೆ-ಸಂಸ್ಕೃತಿ ಹಾಗೂ ಸಂಸ್ಕಾರಗಳ ಮೇಲೆ ನಿಂತಿದೆ. ಯುವಕರು ಟೆಕ್ನಾಲಜಿ ಕಡೆ ಓಡುತ್ತಿದ್ದಾರೆ, ಶಿಕ್ಷಣದಂತೆ ಸಂಸ್ಕಾರಕ್ಕೆ ಮಹತ್ವ ನೀಡುವುದು ಇಂದು ಅನಿವಾರ್ಯವಾಗಿದೆ ಎಂದು ಹೇಳಿದರು.ಸಕಲ ಜೀವರಾಶಿಗಳು ಲೇಸನ್ನೇ ಬಯಸುವ ಜೈನ ಧರ್ಮ ವಿಶ್ವ ಧರ್ಮವಾಗಿದೆ. ಸ್ವಧರ್ಮ ನಿಷ್ಠೆ, ಪರಧರ್ಮ ಸಹಿಷ್ಣುತೆ ಜೈನ ಧರ್ಮದ ಸಾರವಾಗಿದೆ. ಅನೇಕ ಪ್ರಕಾರದ ಕಾಯಿಗಳಿವೆ, ಆದರೆ ನಾವು ಉತ್ತಮ ತೆಂಗಿನಕಾಯಿ ಮಾತ್ರ ದೇವರಿಗೆ ಅರ್ಪಣೆ ಮಾಡುತ್ತೇವೆ. ಕೊಬ್ಬರಿ ಪ್ರಸಾದವಾಗಿ ಸ್ವೀಕರಿಸುತ್ತೇವೆ. ತೆಂಗಿನಕಾಯಿಯಲ್ಲಿ ಉತ್ತಮ ಕೊಬ್ಬರಿ ಇರುವಂತೆ ಕಾಯದೊಳಗೆ ಕಬರ ಇರಬೇಕು. ಇದನ್ನು ಮರೆಯಬಾರದು, ಸತ್ತಮೇಲೆ ಮೇಲೆ ಹೆಜ್ಜೆ ಗುರುತು ಉಳಿಸುವ ಕೆಲಸಮಾಡಬೇಕು ಎಂದು ಹೇಳಿದರು. ಸಾನ್ನಿಧ್ಯ ವಹಿಸಿದ್ದ ಚರ್ಯಾಶಿರೋಮಣಿ ಮುನಿಶ್ರೀ 108 ವಿದಿತಸಾಗರ ಮಹಾರಾಜರು ಮಾತನಾಡಿ, ಭಾರತ ದೇಶದಾದ್ಯಂತ ವಿದೇಶಿ ಸಂಸ್ಕೃತಿ ಪರಿಣಾಮ ಬೀರುತ್ತಿದೆ. ನಮ್ಮ ಸಂಸ್ಕೃತಿ ಹಾಗೂ ಪರಂಪರೆ ಉಳಿಸುದು ಅನಿವಾರ್ಯವಾಗಿದೆ. ನಮ್ಮ ಶ್ರೀಮಂತ ಪರಂಪರೆ ಕುರಿತು ಹಿರಿಯರು ಇಂದಿನ ಪೀಳಿಗೆಗೆ ಪ್ರೀತಿ ಮತ್ತು ವಾತ್ಸಲ್ಯದಿಂದ ಅರಿವು ಮೂಡಿಸಬೇಕು ಎಂದು ಹೇಳಿದರು.ಉದ್ಘಾಟನೆ ನೆರವೇರಿಸಿದ ಮೂಡುಬಿದಿರೆ ಎಕ್ಸಲೆಂಟ್ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಯುವರಾಜ ಜೈನ ಮಾತನಾಡಿ, ಯುವಕರು ಉದ್ಯೋಗ ಹುಡುಕುವ ಬದಲು ಉದ್ಯೋಗ ಕೊಡುವಂತೆ ಬೆಳೆಯಬೇಕು. ಜ್ಞಾನದಿಂದ ಜಗತ್ತಿನಲ್ಲಿ ಹೆಸರು ಮಾಡಬಹುದು. ಮಕ್ಕಳಿಗೆ ಶಿಕ್ಷಣದ ಜೊತಗೆ ಸಂಸ್ಕಾರದ ಅವಶ್ಯಕತೆ ಇದ್ದು, ಮಕ್ಕಳು ತಂದೆ-ತಾಯಿ ಮುಂದೆ ತಲೆ ತಗ್ಗಿಸಬೇಕು, ತಂದೆ-ತಾಯಿ ಬೇರೆಯವರ ಮುಂದೆ ತಲೆ ತಗ್ಗಿಸುವ ಕೆಲಸಮಾಡದಂತೆ ಮಕ್ಕಳಿಗೆ ಪಾಲಕರು ಸಂಸ್ಕಾರ ನೀಡಬೇಕು. ಜಪಾನ ದೇಶದಲ್ಲಿ ಮಕ್ಕಳಿಗೆ ಎಲ್ಲ ಕೆಲಸ ಮಾಡಲು ಹಚ್ಚುತ್ತಾರೆ. ಮಕ್ಕಳು ಕೆಲಸ ಮಾಡಿದರೆ ಹಾಳಾಗಲ್ಲ, ಮಕ್ಕಳಿಗೆ ಕೆಲಸ ಕಲಿಸಬೇಕು, ಜೀವನದಲ್ಲಿ ಶಿಕ್ಷಣದ ಜೊತಗೆ ಶಿಸ್ತು, ಜೀವನ ಕೌಶಲ್ಯ ಕಲಿಸಬೇಕು ಎಂದು ಹೇಳಿದರು.ಕಲಾವಿದರಾದ ವಿನೋದ ಪ್ರಭಾಕರ, ಶ್ರೇಯಸ್ ಜೈನ್ ಮತ್ತು ಐಐಟಿಯಲ್ಲಿ ಉತ್ತಮ ಸಾಧನೆ ಮಾಡಿದ ಅಭಿಷೇಕ ಪಾಟೀಲ ಅವರನ್ನು ಸನ್ಮಾನಿಸಲಾಯಿತು.ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ದರ್ಶನ್ ಲಮಾಣಿ ಫೋಟೋ ಅನಾವರಣಗೊಳಿಸಿದರು. ಕರ್ನಾಟಕ ಜೈನ್ ಅಸೋಸಿಯೇಶನ್ ಕಾರ್ಯಕಾರಿ ಮಂಡಳಿ ಸದಸ್ಯ ಎಸ್. ಎ. ವಜ್ರಕುಮಾರ ಅಧ್ಯಕ್ಷತೆ ವಹಿಸಿದ್ದರು. ಪದ್ಮಶ್ರೀ ಮಾತಾಜಿ, ಪ್ರತಿಷ್ಠಾಚಾರ್ಯರಾದ ಮಾಣಿಕ ಶ್ರೀಪಾಲ ಚಂದಗಡೆ ಇತರರು ಇದ್ದರು. ಗುಣಪಾಲ ಜೈನ ಸ್ವಾಗತಿಸಿದರು. ಕುಮುದಾ ಕಾರ್ಯಕ್ರಮ ನಿರೂಪಿಸಿದರು. ಬಾಹುಬಲಿ ಪಾಟೀಲ ವಂದಿಸಿದರು.