2026ರ ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ಸರ್ಕಾರ ಪ್ರಜಾಪ್ರಭುತ್ವ ಚಲನಶೀಲತೆಯನ್ನು ಮತ್ತಷ್ಟು ವಿಸ್ತರಿಸಲು ಮತ್ತು ಯುವ ಸಮುದಾಯಕ್ಕೆ ದೇಶದ ಸಂಸದೀಯ ವ್ಯವಸ್ಥೆ ಪರಿಚಯಿಸಲು ರಾಜ್ಯದ ಎಲ್ಲಾ ತಾಲೂಕು ಕೇಂದ್ರಗಳಲ್ಲಿ ಯುವ ಸಂಸತ್ ಸಭೆ ಆಯೋಜಿಸುತ್ತಿದೆ

ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ

ದೇಶದ ಭವಿಷ್ಯದ ಹಿತದೃಷ್ಟಿಯಿಂದ ಪ್ರಜ್ಞಾವಂತ ಯುವಕರು ರಾಜಕೀಯ ಕ್ಷೇತ್ರ ಪ್ರವೇಶಿಸಬೇಕು. ದೇಶದ ಶಾಸಕಾಂಗ ಮತ್ತು ಕಾರ್ಯಾಂಗದ ವ್ಯವಸ್ಥೆಗಳನ್ನು ಅರಿತುಕೊಳ್ಳುವಂತೆ ಶಾಸಕ ಎಚ್.ಟಿ.ಮಂಜು ಕರೆ ನೀಡಿದರು.

ಪಟ್ಟಣದ ಟಿಎಪಿಸಿಎಂಎಸ್‌ನ ಎಸ್.ಎಂ.ಲಿಂಗಪ್ಪ ಸಮುದಾಯ ಭವನದಲ್ಲಿ ತಾಲೂಕು ಆಡಳಿತ, ತಾಲೂಕು ಪಂಚಾಯ್ತಿ, ಉನ್ನತ ಶಿಕ್ಷಣ ಇಲಾಖೆ, ಶಾಲಾ ಶಿಕ್ಷಣ ಇಲಾಖೆ, ತಾಲೂಕು ವಕೀಲರ ಸಂಘ ಹಾಗೂ ಸಮಾಜ ಕಲ್ಯಾಣ ಇಲಾಖೆಗಳ ವತಿಯಿಂದ ಆಯೋಜಿಸಿದ್ದ ತಾಲೂಕು ಮಟ್ಟದ ಯುವ ಸಂಸತ್‌ ಸಭೆ ಉದ್ಘಾಟಿಸಿ ಮಾತನಾಡಿದರು.

2026ರ ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ಸರ್ಕಾರ ಪ್ರಜಾಪ್ರಭುತ್ವ ಚಲನಶೀಲತೆಯನ್ನು ಮತ್ತಷ್ಟು ವಿಸ್ತರಿಸಲು ಮತ್ತು ಯುವ ಸಮುದಾಯಕ್ಕೆ ದೇಶದ ಸಂಸದೀಯ ವ್ಯವಸ್ಥೆ ಪರಿಚಯಿಸಲು ರಾಜ್ಯದ ಎಲ್ಲಾ ತಾಲೂಕು ಕೇಂದ್ರಗಳಲ್ಲಿ ಯುವ ಸಂಸತ್ ಸಭೆ ಆಯೋಜಿಸುತ್ತಿದೆ ಎಂದರು.

ತಾಲೂಕಿನ ಎಲ್ಲಾ ಪ್ರೌಢಶಾಲೆಗಳು, ಪದವಿ ಪೂರ್ವ ಮತ್ತು ಪದವಿ ಕಾಲೇಜುಗಳು, ತಾಂತ್ರಿಕ ಹಾಗೂ ಸ್ನಾತಕೋತ್ತರ ಕಾಲೇಜುಗಳ ವಿದ್ಯಾರ್ಥಿಗಳನ್ನು ಒಳಗೊಂಡಂತೆ ಇಂದು ರಾಜ್ಯ ವಿಧಾನಸಭೆ ಮಾದರಿಯಲ್ಲಿಯೇ ಅಧಿಕಾರಿಗಳು ಆಸನ ವ್ಯವಸ್ಥೆ ಮಾಡಿ ಸ್ಪೀಕರ್, ಮುಖ್ಯಮಂತ್ರಿ, ವಿವಿಧ ಇಲಾಖಾ ಸಚಿವರು, ವಿಪಕ್ಷದ ನಾಯಕರು ಮತ್ತು ಶಾಸಕರುಗಳನ್ನು ವಿದ್ಯಾರ್ಥಿಗಳಿಂದಲೇ ಆಯ್ಕೆ ಮಾಡಿ ಇಲ್ಲಿ ಸಂಸದೀಯ ಕಲಾಪಗಳಿಗೆ ವೇದಿಕೆ ನಿರ್ಮಿಸಿದ್ದಾರೆ ಎಂದರು.

ಕ್ಷೇತ್ರದ ಶಾಸಕನಾಗಿ ನಾನು ಈಗಾಗಲೇ ನನ್ನ ತಾಲೂಕಿನ ಪದವಿ ಕಾಲೇಜುಗಳ ವಿದ್ಯಾರ್ಥಿಗಳನ್ನು ಸದನ ನಡೆಯುವಾಗ ರಾಜ್ಯ ವಿಧಾನಸೌಧಕ್ಕೆ ಕರೆದುಕೊಂಡು ಹೋಗಿ ಕಲಾಪಗಳ ಖುದ್ದು ವೀಕ್ಷಣೆಗೆ ಅವಕಾಶ ಮಾಡಿಕೊಟ್ಟಿದ್ದೆ. ಪ್ರಜ್ಞಾವಂತ ವಿದ್ಯಾರ್ಥಿಗಳು ರಾಜಕೀಯ ಕ್ಷೇತ್ರದ ಕಡೆಗೆ ಒಲವು ಮೂಡಿಸಿಕೊಂಡು ದೇಶ ಕಟ್ಟುವ ಸಮರ್ಥ ನಾಯಕರಾಗಿ ಹೊರಹೊಮ್ಮಬೇಕೆನ್ನುವುದು ನನ್ನ ಆಸೆ ಎಂದರು.

ದೇಶದ ಶಾಸಕಾಂಗ ಮತ್ತು ಕಾರ್ಯಾಂಗ ಪರಿಶುದ್ದವಾಗಿರಬೇಕು. ಪ್ರಾಮಾಣಿಕ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಇದ್ದಾಗ ಮಾತ್ರ ಬಲಿಷ್ಠ ಭಾರತ ನಿರ್ಮಾಣಗೊಳ್ಳಲು ಸಾಧ್ಯ. ಬಲಿಷ್ಟ ಭಾರತ ನಿರ್ಮಾಣಕ್ಕಾಗಿ ಯುವಕರು ಶಾಸಕಾಂಗ ಮತ್ತು ಕಾರ್ಯಾಂಗದ ಜವಾಬ್ದಾರಿ ಹೊರಬೇಕು ಎಂದು ಸಲಹೆ ಮಾಡಿದರು.

ವಿದ್ಯಾರ್ಥಿ ದೆಸೆಯಲ್ಲಿಯೇ ತಮ್ಮ ಆಸಕ್ತಿದಾಯಕ ಕ್ಷೇತ್ರಗಳನ್ನು ಗುರುತಿಸಿಕೊಂಡು ನಿರ್ಧಿಷ್ಟ ಗುರಿಯೊಂದಿಗೆ ಸಾಧಕರಾಗಬೇಕು. ದೇಶದ ಸಮಸ್ಯೆಗಳ ಬಗ್ಗೆ ಅರಿವು ಹಾಗೂ ಚಿಂತನೆಗಳನ್ನು ಬೆಳೆಸಿಕೊಳ್ಳಬೇಕು. ವಿದ್ಯಾರ್ಥಿ ದೆಸೆಯಲ್ಲಿಯೇ ಮಕ್ಕಳಿಗೆ ಪ್ರಶ್ನೆ ಕೇಳುವ ಗುಣಗಳನ್ನು ಬೆಳೆಸಬೇಕು. ವಿದ್ಯಾರ್ಥಿಗಳು ತಮಗೆ ಸಿಕ್ಕ ಅವಕಾಶವನ್ನು ಸದ್ಬಳಕೆ ಮಾಡಿಕೊಂಡು ನಾಡಿನ ಸತ್ಪ್ರಜೆಗಳಾಗಿ ರೂಪುಗೊಳ್ಳುವಂತೆ ಕರೆ ನೀಡಿದರು.

ಕಾರ್ಯಕ್ರಮದಲ್ಲಿ ತಾಪಂ ಇಒ ಕೆ.ಸುಷ್ಮಾ, ಬಿಇಒ ವೈ.ಕೆ.ತಿಮ್ಮೇಗೌಡ, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಎಸ್.ಎಂ.ಅಶೋಕಕುಮಾರ್, ವಿವಿಧ ಕಾಲೇಜುಗಳ ಪ್ರಾಧ್ಯಾಪಕರಾದ ಶಿವಸ್ವಾಮಿ, ಅನುರಧ, ರಾಜೇಶ್ವರಿ ಹಲವರಿದ್ದರು.