ಕನ್ನಡಪ್ರಭ ವಾರ್ತೆ ಮೇಲುಕೋಟೆ

ಯುವಜನತೆ ದುಶ್ಚಟಗಳಿಗೆ ಬಲಿಯಾಗದೆ ಉನ್ನತ ಶಿಕ್ಷಣ ಪಡೆದು ಉತ್ತಮ ರಾಷ್ಟ್ರ ನಿರ್ಮಾಣ ಕಾರ್ಯದಲ್ಲಿ ಪಾಲ್ಗೊಳ್ಳಬೇಕು ಎಂದು ಗ್ರಾಪಂ ಅಭಿವೃದ್ಧಿ ಅಧಿಕಾರಿ ರಾಜೇಶ್ವರ್ ಕರೆ ನೀಡಿದರು.

ಸರ್ಕಾರಿ ಪ್ರಥಮದರ್ಜೆ ಕಾಲೇಜಿನ ವಾರ್ಷಿಕೋತ್ಸವ ಮತ್ತು ಪಠ್ಯೇತರ ಚಟುವಟಿಕೆಗಳ ಸಮಾರೋಪ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿ, ವಿದ್ಯಾರ್ಥಿಗಳು ಕಾಲೇಜು ಜೀವನವನ್ನು ಮೋಜು- ಮಸ್ತಿಗೆ ಬಳಸಿಕೊಳ್ಳದೆ ಉತ್ತಮ ವ್ಯಕ್ತಿತ್ವ ರೂಪಿಸಿಕೊಳ್ಳಲು ಬಳಸಿಕೊಳ್ಳಬೇಕು ಎಂದರು.

ಶ್ರದ್ಧೆಯಿಂದ ವಿದ್ಯಾಭ್ಯಾಸದಲ್ಲಿ ತೊಡಗಿಸಿಕೊಂಡು ಸಾಧನೆ ಮಾಡಿದರೆ ನಿಮ್ಮ ಕುಟುಂಬದ ಜೀವನಮಟ್ಟವೇ ಬದಲಾಗುತ್ತದೆ. ಸ್ಪರ್ಧಾತ್ಮಕ ಯುಗದಲ್ಲಿ ಅದಕ್ಕೆ ತಕ್ಕಂತೆ ಅಭ್ಯಾಸ ಅಗತ್ಯ ಎಂದು ತಿಳಿಸಿದರು.

ಕಾಲೇಜಿನ ವಿದ್ಯಾರ್ಥಿಗಳು ಮತ್ತು ಅಧ್ಯಾಪಕರು ತಂಡಗಳನ್ನು ಮಾಡಿಕೊಂಡು ಕಾಲೇಜು ಉಳಿವಿಗಾಗಿ ದಾಖಲಾತಿ ಹೆಚ್ಚಿಸಲು ಈ ಶೈಕ್ಷಣಿಕ ವರ್ಷದಿಂದಲೇ ಕೆಲಸ ಮಾಡಬೇಕು. ಸರ್ಕಾರ ಕಾಲೇಜಿಗಾಗಿ ಕೋಟ್ಯಂತರ ರುಪಾಯಿ ಖರ್ಚು ಮಾಡಿದೆ. ಈ ಭಾಗದ ವಿದ್ಯಾರ್ಥಿಗಳು ಇದರ ಸದುಪಯೋಗಪಡಿಸಿಕೊಳ್ಳಬೇಕು ಎಂದರು.


ಇದೇ ವೇಳೆ 2024- 25ನೇ ಸಾಲಿನಲ್ಲಿ ಪದವಿ ವಾರ್ಷಿಕ ಪರೀಕ್ಷೆಯಲ್ಲಿ ಅತಿಹೆಚ್ಚು ಅಂಕಗಳಿಸಿದ ಎಂ.ಎಸ್ ದೀಪಿಕಾ (ಬಿಎ) ಮತ್ತು ಎಂ.ಡಿ ವೈಶಾಲಿ (ಬಿಕಾಂ) ಮತ್ತು 2025- 26ನೇ ಸಾಲಿನಲ್ಲಿ ಬಿಎ ವಿಭಾಗದ ಕೆ.ಎಂ. ಪ್ರಿಯಾ ಮತ್ತು ಬಿಕಾಂ ವಿಭಾಗದ ದರ್ಶನ್‌ಗೆ ಅತ್ಯುತ್ತಮ ವಿದ್ಯಾರ್ಥಿ ಪುರಸ್ಕಾರ ನೀಡಿ ಅಭಿನಂದಿಸಲಾಯಿತು.

ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಸಮಾರಂಭದಲ್ಲಿ ಅಧ್ಯಕ್ಷತೆಯನ್ನು ಪ್ರಾಂಶುಪಾಲ ಡಾ.ನಂಜುಂಡಯ್ಯ ವಹಿಸಿದ್ದರು. ವೇದಿಕೆಯಲ್ಲಿ ಚಲನಚಿತ್ರ ಹಾಸ್ಯ ಕಲಾವಿದರಾದ ಹಾಲತಿ ಜಯರಾಮು, ಸರ್ಕಾರಿ ಬಾಲಕರ ಶಾಲೆ ಮುಖ್ಯಶಿಕ್ಷಕ ಸ್ಥಾನೀಕಂ ಸಂತಾನರಾಮನ್, ಕಾಲೇಜಿನ ಸಾಂಸ್ಕೃತಿಕ ಸಮಿತಿ ಸಂಚಾಲಕ, ಸಹಾಯಕ ಪ್ರಾಧ್ಯಾಪಕ ಸ್ವಾಮಿ, ರಾಜ್ಯ ಎಸ್.ಡಿ.ಎಂ.ಸಿ ಸಮಿತಿ ಅಮೃತಿ ಶಂಕರ್, ಸಹ ಪ್ರಾಧ್ಯಾಪಕರಾದ ಡಾ.ಸುಮ. ಇ., ಡಾ.ಭವಾನಿ, ಡಾ.ವೆಂಕಟೇಶಗೌಡ, ಸಹಾಯಕ ಪ್ರಾಧ್ಯಾಪಕರಾದ ಸಂತೋಷ್ ಎನ್., ಪರಮೇಶ್ವರ್ ಸಿ., ಯೋಗೇಶ್ ಎಂ., ಎಸ್.ಮಹೇಶ್‌ಕುಮಾರ್, ಅರುಣ್‌ಕುಮಾರ್.ಎಚ್.ಸಿ., ಡಾ.ಮಹೇಶ್‌ಕುಮಾರ್, ಆಶಾ ಎಚ್.ಬಿ., ರೇಖಾವತಿ, ಕಚೇರಿ ಸಹಾಯಕರಾದ ಅಭಿಲಾಷ, ಶಾಂಭವಿ ಮತ್ತು ವಿದ್ಯಾರ್ಥಿಗಳು ಹಾಜರಿದ್ದರು.