ಯುವಕರು ಮಾದಕ ವ್ಯಸನದಿಂದ ದೂರವಿರಿ: ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಎಂ.ಬಿ.ಸಂಕದ

| Published : Jun 27 2024, 01:04 AM IST

ಯುವಕರು ಮಾದಕ ವ್ಯಸನದಿಂದ ದೂರವಿರಿ: ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಎಂ.ಬಿ.ಸಂಕದ
Share this Article
  • FB
  • TW
  • Linkdin
  • Email

ಸಾರಾಂಶ

ಇಂದಿನ ವಿದ್ಯಾರ್ಥಿಗಳ ಕೈಯಲ್ಲಿ ಮುಂದಿನ ದೇಶದ ಭವಿಷ್ಯವಿದೆ. ವಿದ್ಯಾರ್ಥಿಗಳು ಮಾದಕ ವಸ್ತುಗಳ ವ್ಯಸನಕ್ಕೆ ಬಲಿಪಶುಯಾಗದೇ ಉತ್ತಮ ಆರೋಗ್ಯದಿಂದ ಜೀವನದಲ್ಲಿ ಸಫಲರಾಗಿ ಎಂದು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಎಂ.ಬಿ.ಸಂಕದ ಹೇಳಿದರು.

ಕನ್ನಡಪ್ರಭ ವಾರ್ತೆ ಗದಗ

ಇಂದಿನ ವಿದ್ಯಾರ್ಥಿಗಳ ಕೈಯಲ್ಲಿ ಮುಂದಿನ ದೇಶದ ಭವಿಷ್ಯವಿದೆ. ವಿದ್ಯಾರ್ಥಿಗಳು ಮಾದಕ ವಸ್ತುಗಳ ವ್ಯಸನಕ್ಕೆ ಬಲಿಪಶುಯಾಗದೇ ಉತ್ತಮ ಆರೋಗ್ಯದಿಂದ ಜೀವನದಲ್ಲಿ ಸಫಲರಾಗಿ ಎಂದು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಎಂ.ಬಿ.ಸಂಕದ ಹೇಳಿದರು.

ನಗರದ ಆದರ್ಶ ವಿದ್ಯಾಸಂಸ್ಥೆಯ ವಿ.ಆರ್. ಕುಷ್ಠಗಿ ಮೆಮೋರಿಯಲ್ ವಾಣಿಜ್ಯ ಮಹಾವಿದ್ಯಾಲಯದಲ್ಲಿ ಬುಧವಾರ ಜಿಲ್ಲಾಡಳಿತ, ಜಿಪಂ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮ ವಿಭಾಗ, ಜಿಲ್ಲಾ ಪೊಲೀಸ್ ಇಲಾಖೆ, ಗದಗ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ವಿ.ಆರ್. ಕುಷ್ಟಗಿ ಮೆಮೋರಿಯಲ್ ವಾಣಿಜ್ಯ ಮಹಾವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನಾ ಘಟಕ ಹಾಗೂ ರೆಡ್ ಕ್ರಾಸ್ ಸಹಯೋಗದಲ್ಲಿ ನಡೆದ ಮಾದಕ ವ್ಯಸನ ಮತ್ತು ಅಕ್ರಮ ಕಳ್ಳಸಾಗಣೆ ವಿರುದ್ಧದ ಅಂತಾರಾಷ್ಟ್ರೀಯ ದಿನದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ನಮ್ಮ ದೇಶದಲ್ಲಿ ಮೊದಲು ಬಡತನ, ಹಸಿವು, ಶೈಕ್ಷಣಿಕ ಸಮಸ್ಯೆಗಳಿದ್ದವು. ಪ್ರಸ್ತುತ ನಮ್ಮ ಸಮಾಜದಲ್ಲಿ ಮಾದಕ ವ್ಯಸನದಂತಹ ಗಂಭೀರ ಸಮಸ್ಯೆಗಳು ಹೆಚ್ಚಾಗಿದ್ದು, ಜಗತ್ತಿನಲ್ಲಿ ಹಲವಾರು ಜನ ಈ ಮಾದಕ ವ್ಯಸನಕ್ಕೆ ಬಲಿಪಶುವಾಗಿದ್ದಾರೆ. ಇಂತಹ ಸಮಸ್ಯೆಯಿಂದ ಕೇವಲ ವೈಯಕ್ತಿಕ ಹಾನಿಯಲ್ಲದೆ, ದೇಶದ ಆರ್ಥಿಕತೆ ಸೇರಿದಂತೆ ದೇಶದ ಅಭಿವೃದ್ಧಿಗೂ ಹಿನ್ನಡೆಯಾಗುತ್ತಿದೆ.

ಮಾದಕ ವ್ಯಸನ ಮುಕ್ತ ಸಮಾಜ ನಿರ್ಮಾಣ ಕಾರ್ಯ ಕೇವಲ ಪೊಲೀಸ್ ಇಲಾಖೆಗೆ ಸೀಮಿತವಲ್ಲ. ಸಾರ್ವಜನಿಕರು ಜವಾಬ್ದಾರಿಯುತವಾಗಿ ಮಾದಕ ವಸ್ತುಗಳನ್ನು ಅಕ್ರಮವಾಗಿ ಕಳ್ಳಸಾಗಣೆ ಮಾಡುತ್ತಿದ್ದು, ತಿಳಿದು ಬಂದರೆ ತಕ್ಷಣ ಪೊಲೀಸ್ ಇಲಾಖೆಯ ಗಮನಕ್ಕೆ ತರಬೇಕು ಎಂದರು.

ಜಿಲ್ಲಾ ಕುಷ್ಠರೋಗ ನಿಯಂತ್ರಣ ಅಧಿಕಾರಿ ಡಾ. ರಾಜೇಂದ್ರ ಬಸರಿಗಿಡದ ಮಾತನಾಡಿ, ಸಾಮಾಜಿಕ ಜಾಲತಾಣ ಮತ್ತು ಚಲನಚಿತ್ರಗಳ ಪ್ರಭಾವಕ್ಕೆ ಒಳಗಾಗಿ ಇಂದಿನ ವಿದ್ಯಾರ್ಥಿಗಳು ಮಾದಕ ವ್ಯಸನಕ್ಕೆ ತುತ್ತಾಗುತ್ತಾರೆ ಅಂತಹ ವಿದ್ಯಾರ್ಥಿಗಳು ಜಿಲ್ಲಾ ಮಾನಸಿಕ ಆರೋಗ್ಯ ಕೇಂದ್ರದಿಂದ ನೀಡುವ ಉಚಿತ ಚಿಕಿತ್ಸೆಯನ್ನು ಪಡೆದುಕೊಳ್ಳಬಹುದು ಎಂದು ತಿಳಿಸಿದರು.

ಡಿಎಚ್‌ಒ ಡಾ. ಎಸ್.ಎಸ್. ನೀಲಗುಂದ ಮಾತನಾಡಿ, ಮಾದಕ ವ್ಯಸನದಿಂದ ದೇಹದ ಅಂಗಾಂಗಗಳು ವಿಫಲಗೊಳ್ಳುತ್ತವೆ. ಹಾಗಾಗಿ ಮಾದಕ ವಸ್ತುಗಳಿಂದ ದೂರವಿರಿ ಎಂದು ಹೇಳಿದರು.

ಜಿಮ್ಸ್‌ನ ಸಹಾಯಕ ಪ್ರಾಧ್ಯಾಪಕ ಡಾ. ಅರವಿಂದ ಕೆ. ಮಾತನಾಡಿ, ಚಿಕಿತ್ಸೆಗಿಂತ ತಡೆಗಟ್ಟುವಿಕೆ ಉತ್ತಮವಾಗಿದ್ದು, ಒಂದು ಸಿಗರೇಟ್ ಸೇರುವುದರಿಂದ ಜೀವನದ ಅತ್ಯಮೂಲ್ಯ 11 ನಿಮಿಷಗಳನ್ನು ಕಳೆದುಕೊಳ್ಳುತ್ತೆ ಹಾಗೂ ಸಿಗರೇಟ್‌ನಲ್ಲಿ 6000ಕ್ಕೂ ಹೆಚ್ಚು ಹಾನಿಕಾರಕ ರಾಸಾಯನಿಕಗಳಿರುತ್ತವೆ. ಅದರಲ್ಲಿ 60ಕ್ಕೂ ಹೆಚ್ಚು ರಾಸಾಯನಿಕಗಳು ಕ್ಯಾನ್ಸರ್ ರೋಗಕ್ಕೆ ದಾರಿ ಮಾಡಿಕೊಡುತ್ತವೆ. ವಿದ್ಯಾರ್ಥಿಗಳು ಕುತೂಹಲದಿಂದ ಮಾದಕ ವ್ಯಸನ ಪ್ರಾರಂಭಿಸಿ ಅದರಿಂದ ಹೊರಬರದಂತೆ ದಾಸರಾಗುತ್ತಾರೆ. ಹಾಗಾಗಿ ಒಳ್ಳೆಯ ಅಭ್ಯಾಸಗಳನ್ನು ರೂಢಿಸಿಡಿಕೊಂಡು ಜೀವನದಲ್ಲಿ ಸಫಲವಾಗಬೇಕು ಎಂದು ತಿಳಿಸಿದ ಅವರು, ಪಿಪಿಟಿ ಮೂಲಕ ಮಾದಕ ವ್ಯಸನದ ಕಾರಣಗಳು, ಅದರಿಂದಾಗುವ ಪರಿಣಾಮ ಸೇರಿದಂತೆ ವ್ಯಸನದಿಂದ ಹೇಗೆ ಮುಕ್ತರಾಗಬೇಕೆಂಬುದರ ಕುರಿತು ವಿವರಿಸಿದರು.

ಈ ವೇಳೆ ಪೊಲೀಸ್ ಇಲಾಖೆಯ ಎಸ್.ಎಂ. ಶಿರಗುಪ್ಪಿ, ಆರೋಗ್ಯ ಶಿಕ್ಷಣಾಧಿಕಾರಿ ರೂಪಸೇನ ಚವಾಣ, ಉಪ ಪ್ರಾ. ಡಾ. ವಿ.ಟಿ. ನಾಯ್ಕರ, ಪ್ರಾಧ್ಯಾಪಕ ಆರ್.ಆರ್. ಕುಲಕರ್ಣಿ ಸೇರಿದಂತೆ ಆರೋಗ್ಯ ಇಲಾಖೆಯ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಇದ್ದರು. ಪ್ರೊ. ಬಾಹುಬಲಿ ಜೈನರ್ ಕಾರ್ಯಕ್ರಮ ನಿರ್ವಹಿಸಿದರು.