ಸಾರಾಂಶ
ಒತ್ತಡದ ಬದುಕಿನಲ್ಲಿ ಕರ್ತವ್ಯ ನಿರ್ವಹಿಸುವ ಪತ್ರಕರ್ತರು ತಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು. ಮಾನಸಿಕ ಮತ್ತು ದೈಹಿಕ ಆರೋಗ್ಯ ಕಾಪಾಡಿಕೊಳ್ಳಬೇಕು ಎಂದು ಜಿಲ್ಲಾ ಕನ್ನಡ ಸಂಘಟನೆಗಳ ಕ್ರಿಯಾ ಸಮಿತಿ ಅಧ್ಯಕ್ಷ ಅಶೋಕ ಚಂದರಗಿ ಹೇಳಿದರು.
ಕನ್ನಡಪ್ರಭ ವಾರ್ತೆ ಬೆಳಗಾವಿ
ಒತ್ತಡದ ಬದುಕಿನಲ್ಲಿ ಕರ್ತವ್ಯ ನಿರ್ವಹಿಸುವ ಪತ್ರಕರ್ತರು ತಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು. ಮಾನಸಿಕ ಮತ್ತು ದೈಹಿಕ ಆರೋಗ್ಯ ಕಾಪಾಡಿಕೊಳ್ಳಬೇಕು ಎಂದು ಜಿಲ್ಲಾ ಕನ್ನಡ ಸಂಘಟನೆಗಳ ಕ್ರಿಯಾ ಸಮಿತಿ ಅಧ್ಯಕ್ಷ ಅಶೋಕ ಚಂದರಗಿ ಹೇಳಿದರು.ಬೆಳಗಾವಿ ಪತ್ರಕರ್ತರ ಬಳಗದ ವತಿಯಿಂದ ನಗರದ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಭಾಂಗಣದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಹಿರಿಯ ಪತ್ರಕರ್ತರಾದ ಎಚ್.ವಿ.ನಾಗರಾಜ, ಮನಿಷಾ ಸುಭೇದಾರ ಹಾಗೂ ಕೇಶವ ಆದಿ ಅವರ ಸತ್ಕಾರ, ಸ್ನೇಹಕೂಟ ಸಮಾರಂಭದಲ್ಲಿ ಮಾತನಾಡಿದ ಅವರು, ಪತ್ರಕರ್ತರ ಸಂಘಗಳು ಪ್ರತಿಷ್ಠೆ, ಭಿನ್ನಾಭಿಪ್ರಾಯಗಳನ್ನು ಬದಿಗಿರಿಸಿ ಪತ್ರಕರ್ತರ ಕಲ್ಯಾಣಕ್ಕಾಗಿ ದುಡಿಯಬೇಕು ಎಂದು ಸಲಹೆ ನೀಡಿದರು.ಹಿರಿಯ ಪತ್ರಕರ್ತ ಎಚ್.ವಿ.ನಾಗರಾಜ ಸನ್ಮಾನ ಸ್ವೀಕರಿಸಿ ಮಾತನಾಡಿ, ಮೂರು ದಶಕಗಳಿಂದ ಬೆಳಗಾವಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದೇನೆ. ಇಲ್ಲಿನ ಪತ್ರಿಕಾ ಬಳಗ ನನಗೆ ಕೊಟ್ಟ ಪ್ರೋತ್ಸಾಹ ಅನನ್ಯ. ಕೊನೆ ಉಸಿರು ಇರುವವರೆಗೂ ಪತ್ರಕರ್ತನಾಗಿ ದುಡಿಯುತ್ತೇನೆ ಎಂದು ತಿಳಿಸಿದರು.ಪತ್ರಕರ್ತೆ ಮನಿಷಾ ಸುಭೇದಾರ ಸನ್ಮಾನ ಸ್ವೀಕರಿಸಿ ಮಾತನಾಡಿ, ಪ್ರಸ್ತುತ ದಿನಗಳಲ್ಲಿ ತನಿಖಾ ವರದಿಗಳು ಕಡಿಮೆಯಾಗುತ್ತಿವೆ. ಯುವ ಪತ್ರಕರ್ತರು ಅದರತ್ತ ಗಮನ ಹರಿಸಬೇಕು. ಅಭಿವೃದ್ಧಿ ಪತ್ರಿಕೋದ್ಯಮಕ್ಕೆ ಒತ್ತು ಕೊಡಬೇಕು. ಎಲ್ಲಕ್ಕಿಂತ ಮುಖ್ಯವಾಗಿ ಪತ್ರಕರ್ತರಾದವರು ನೊಂದವರ ಧ್ವನಿಯಾಗಬೇಕು ಎಂದರು.ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಉಪನಿರ್ದೇಶಕ ಗುರುನಾಥ ಕಡಬೂರ ಅಧ್ಯಕ್ಷತೆ ವಹಿಸಿ ಮಾತನಾಡಿ, ಬೆಳಗಾವಿಯಲ್ಲಿ ಪತ್ರಕರ್ತರ ಭವನ ನಿರ್ಮಿಸಬೇಕೆಂಬ ಬೇಡಿಕೆ ಬಹಳ ವರ್ಷಗಳಿಂದ ಇದೆ. ಎಲ್ಲ ಪತ್ರಕರ್ತರು ಚರ್ಚಿಸಿ, ವಿಧಾನಮಂಡಲ ಚಳಿಗಾಲದ ಅಧಿವೇಶನದೊಳಗೆ ಒಮ್ಮತದ ನಿರ್ಧಾರ ಕೈಗೊಳ್ಳೋಣ ಎಂದು ಮನವಿ ಮಾಡಿದರು.ಹಿರಿಯ ಪತ್ರಕರ್ತರಾದ ಸುಭಾಷ ಕುಲಕರ್ಣಿ, ದೀಲಿಪ ಕುರಂದವಾಡೆ ಮಾತನಾಡಿದರು. ಕುಂತಿನಾಥ ಕಲಮನಿ ಸ್ವಾಗತಿಸಿದರು. ರವೀಂದ್ರ ಉಪ್ಪಾರ ಪ್ರಾಸ್ತಾವಿಕವಾಗಿ ಮಾತನಾಡಿದರು. ಸುನೀತಾ ದೇಸಾಯಿ ಕಾರ್ಯಕ್ರಮ ನಿರೂಪಿಸಿದರು. ಎಲ್ಲ ಪತ್ರಿಕೆ, ಸುದ್ದಿವಾಹಿನಿಗಳ ಪ್ರತಿನಿಧಿಗಳೂ ಪಾಲ್ಗೊಂಡರು.ಹಿರಿಯ ಪತ್ರಕರ್ತರು ಕಿರಿಯ ಪತ್ರಕರ್ತರ ಹಿತ ಗಮನದಲ್ಲಿಟ್ಟುಕೊಂಡು ಕಾರ್ಯನಿರ್ವಹಿಸಬೇಕು. ಪತ್ರಕರ್ತರು ತಮ್ಮ ಕೆಲಸಕ್ಕೆ ಚೌಕಟ್ಟು ಹಾಕಿಕೊಳ್ಳಬೇಕು. ಅದರಡಿ ಯೋಜನಾ ಬದ್ಧವಾಗಿ ಕಾಯಕ ಮುಂದುರಿಸಬೇಕು. ಪತ್ರಿಕಾ ರಂಗಕ್ಕೆ ಧುಮುಕುವವರಲ್ಲಿ ಸಾಮಾಜಿಕ ಪ್ರಜ್ಞೆ ಬೇಕು.
-ಅಶೋಕ ಚಂದರಗಿ, ಜಿಲ್ಲಾ ಕನ್ನಡ ಸಂಘಟನೆಗಳ ಕ್ರಿಯಾ ಸಮಿತಿ ಅಧ್ಯಕ್ಷರು.