ಯುವಕರ ಮತದಾನ ಅತ್ಯಮೂಲ್ಯ: ಜಿಲ್ಲಾಧಿಕಾರಿ

| Published : Apr 02 2024, 01:09 AM IST / Updated: Apr 02 2024, 09:20 AM IST

ಸಾರಾಂಶ

ಪ್ರತಿಯೊಬ್ಬರು ಕಡ್ಡಾಯವಾಗಿ ಮತದಾನ ಮಾಡಬೇಕು ಎಂದು ಕೃಷಿ ವಿವಿಯಲ್ಲಿ ಮತದಾನದ ಕುರಿತು ಜಾಗೃತಿ ಅಭಿಯಾನದಲ್ಲಿ ಚಂದ್ರಶೇಖರ ನಾಯಕ ಹೇಳಿದರು. ಇದೇ ಸಂದರ್ಭದಲ್ಲಿ ಪ್ರತಿಜ್ಞಾವಿಧಿಯನ್ನು ಸ್ವೀಕರಿಸಲಾಯಿತು.

 ರಾಯಚೂರು :  ಪ್ರತಿಯೊಬ್ಬರು ಕಡ್ಡಾಯವಾಗಿ ಮತದಾನ ಮಾಡಬೇಕು. ಮುಖ್ಯವಾಗಿ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಯುವಕರ ಮತದಾನ ಅತ್ಯಮೂಲ್ಯವಾಗಿರುತ್ತದೆ ಎಂದು ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಎಲ್.ಚಂದ್ರಶೇಖರ ನಾಯಕ ಹೇಳಿದರು.

ಸ್ಥಳೀಯ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ಕ್ರೀಡಾಂಗಣದಲ್ಲಿ ಜಿಲ್ಲಾಡಳಿತ, ಜಿಪಂ, ಜಿಲ್ಲಾ ಸ್ವೀಪ್ ಸಮಿತಿ ಹಾಗೂ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ವತಿಯಿಂದ ಸೋಮವಾರ ಹಮ್ಮಿಕೊಂಡಿದ್ದ ಮತದಾನ ಜಾಗೃತಿ ಅಭಿಯಾನ ಉದ್ದೇಶಿಸಿ ಅವರು ಮಾತನಾಡಿದರು.ಯುವ ಮತದಾರರು ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರು ಇರುವುದನ್ನು ನೋಡಿಕೊಳ್ಳುವುದು ಮೊಟ್ಟ ಮೊದಲ ಕಾರ್ಯವಾಗಿದೆ. ಒಂದು ವೇಳೆ ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರು ಇಲ್ಲದೇ ಇದ್ದಲ್ಲಿ ಹೆಸರನ್ನು ನೋಂದಾಯಿಸಿಕೊಳ್ಳಬೇಕು. ಮತ್ತು ತಮ್ಮ ಸುತ್ತಮುತ್ತಲಿನ ಜನರಿಗೆ ಕಡ್ಡಾಯವಾಗಿ ಮತದಾನ ಮಾಡಲು ತಿಳಿಸಬೇಕು ಎಂದು ತಿಳಿಸಿದರು. ಮತದಾರರ ಪಟ್ಟಿಯಲ್ಲಿ ಹೆಸರನ್ನು ಖಚಿತಪಡಿಸಿಕೊಳ್ಳುವುದು ಬಹಳ ಮುಖ್ಯವಾಗಿರುತ್ತದೆ ಮತ್ತು ಹೆಲ್ಪ್‌ಲೈನ್ ಆ್ಯಪ್ ಮುಖಾಂತರ ಸುಲಭವಾಗಿ ತಿಳಿದುಕೊಳ್ಳಬಹುದಾಗಿದೆ. ಸಾರ್ವಜನಿಕರು ಯಾವುದೇ ಆಮಿಷ ಹಾಗೂ ಭಯಕ್ಕೆ ಒಳಗಾಗದೇ ಮತದಾನ ಮಾಡುವ ಮೂಲಕ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಎತ್ತಿ ಹಿಡಿಯಬೇಕಿದೆ ಎಂದರು.

ಇದೇ ವೇಳೆ ಕೃಷಿ ವಿಶ್ವ ವಿದ್ಯಾಲಯದ ಕುಲಪತಿ ಡಾ.ಎಂ.ಹನುಮಂತಪ್ಪ ಮಾತನಾಡಿ, ಯುವಕರ ಮತದಾನ ಅತ್ಯಂತ ಮುಖ್ಯವಾಗಿರುತ್ತದೆ. ಆದ್ದರಿಂದ ಯುವಕರು ಯಾವುದೇ ಆಮಿಷಕ್ಕೆ ಒಳಗಾಗದೇ, ಮತದಾನ ಮಾಡಬೇಕು ಮತ್ತು ತಮ್ಮ ಹಕ್ಕನ್ನು ಚಲಾಯಿಸಬೇಕು ಎಂದು ಹೇಳಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಿಖಿಲ್.ಬಿ ಮಾತನಾಡಿ, ಕಾರ್ಯಾಂಗ, ಶಾಸಕಾಂಗ ಮತ್ತು ನ್ಯಾಯಾಂಗವನ್ನು ಆಳುವಂತಹ ಮತ್ತು ಅದರ ಸಮನ್ವಯತೆಯನ್ನು ಕಾಪಾಡುವ ಏಕೈಕ ಶಕ್ತಿ ಎಂದರೆ ಅದು ಮತದಾನವಾಗಿರುತ್ತದೆ. ದೇಶದ ಭವಿಷ್ಯವಯ ಆ ದೇಶದ ಸಾಮಾನ್ಯ ವ್ಯಕ್ತಿಯ ಕೈಯಲ್ಲಿರುತ್ತದೆ ಮತ್ತು ಅವನ ಮತದಾನದಲ್ಲಿರುತ್ತದೆ. ಈ ವಿಚಾರವನ್ನು ಯುವಕರು ಅರ್ಥ ಮಾಡಿಕೊಂಡಲ್ಲಿ ದೇಶ ಅಭಿವೃದ್ಧಿ ಹೊಂದುತ್ತದೆ ಎಂದು ತಿಳಿಸಿದರು.

ಸಮಾರಂಭದಲ್ಲಿ ಮತದಾನ ಜಾಗೃತಿ ಅಭಿಯಾನದಂಗವಾಗಿ ಕಡ್ಡಾಯವಾಗಿ ಮತದಾನ ಮಾಡುವುದಾಗಿ ಪ್ರತಿಯೊಬ್ಬರಿಂದ ಸಹಿ ಸಂಗ್ರಹಿಸಲಾಯಿತು. ಇದೇ ವೇಳೆ ಮತದಾರರ ಪ್ರತಿಜ್ಞಾ ವಿಧಿಯನ್ನು ಸ್ವೀಕರಿಸಲಾಯಿತು.

ಈ ಸಂದರ್ಭದಲ್ಲಿ ಜಿಪಂ ಸಿಇಒ ಹಾಗೂ ಜಿಲ್ಲಾ ಸ್ವೀಪ್ ಸಮಿತಿ ಅಧ್ಯಕ್ಷ ರಾಹುಲ್ ತುಕಾರಾಮ ಪಾಂಡ್ವೆ, ಜಿಲ್ಲಾ ಸ್ವೀಪ್ ನೋಡೆಲ್ ಅಧಿಕಾರಿ ಡಾ.ಬಿ.ವೈ ವಾಲ್ಮೀಕಿ, ವಿವಿ ಸ್ನಾತ್ತಕೋತ್ತರ ವಿಭಾಗದ ಡೀನ್ ಡಾ.ಗುರುರಾಜ ಸುಂಕದ್, ಕುಲಸಚಿವ ಡಾ.ಎಂ ವೀರನಗೌಡ, ಆಡಳಿತಾಧಿಕಾರಿ ಡಾ.ಜಾಗೃತಿ.ಬಿ ದೇಶಮಾನೆ, ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ಸ್ವಚ್ಛತೆ ಪ್ರತಿಯೊಬ್ಬರ ಹೊಣೆ: ರಾಯಚೂರು ನಗರದಲ್ಲಿ ಸ್ವಚ್ಛತೆಯನ್ನು ಕಾಪಾಡುವ ಹೊಣೆ ಪ್ರತಿಯೊಬ್ಬರ ಮೇಲಿದ್ದು, ಎಲ್ಲಂದರಲ್ಲಿ ಕಸ ಹಾಕದೇ ಕಸದ ಬುಟ್ಟಿಯನ್ನು ಬಳಸಿ ನಗರವನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು ಮತ್ತು ನಗರವನ್ನು ಸ್ವಚ್ಛವಾಗಿಟ್ಟುಕೊಳ್ಳಲು ನಗರಸಭೆಯೊಂದಿಗೆ ಸಹಕರಿಸಬೇಕು ಎಂದು ಜಿಲ್ಲಾಧಿಕಾರಿ ಎಲ್.ಚಂದ್ರಶೇಖರ ನಾಯಕ ತಿಳಿಸಿದರು.