ಸಾಕ್ಷ್ಯನಾಶ ಮಾಡುವ ಉದ್ದೇಶದಿಂದಾಗಿಯೇ ಬ್ಯಾನರ್ ಗಲಾಟೆಯಲ್ಲಿ ಮೃತಪಟ್ಟ ಯುವಕ ರಾಜಶೇಖರ ಅವರ ಮೃತದೇಹವನ್ನು ಮಣ್ಣಿನಲ್ಲಿ ಹೂತಿಡುವ ಬದಲು, ದಹನ ಮಾಡಲಾಗಿದೆ ಎಂದು ಮಾಜಿ ಸಚಿವ ಬಿ.ಶ್ರೀರಾಮುಲು ಆರೋಪಿಸಿದ್ದಾರೆ.

ಬಳ್ಳಾರಿ: ಸಾಕ್ಷ್ಯನಾಶ ಮಾಡುವ ಉದ್ದೇಶದಿಂದಾಗಿಯೇ ಬ್ಯಾನರ್ ಗಲಾಟೆಯಲ್ಲಿ ಮೃತಪಟ್ಟ ಯುವಕ ರಾಜಶೇಖರ ಅವರ ಮೃತದೇಹವನ್ನು ಮಣ್ಣಿನಲ್ಲಿ ಹೂತಿಡುವ ಬದಲು, ದಹನ ಮಾಡಲಾಗಿದೆ ಎಂದು ಮಾಜಿ ಸಚಿವ ಬಿ.ಶ್ರೀರಾಮುಲು ಆರೋಪಿಸಿದ್ದಾರೆ.

ಪದ್ಧತಿಯಂತೆ ಯುವಕನ ಮೃತದೇಹವನ್ನು ಮಣ್ಣಿನಲ್ಲಿ ಹೂಳಬೇಕಿತ್ತು

ಪದ್ಧತಿಯಂತೆ ಯುವಕನ ಮೃತದೇಹವನ್ನು ಮಣ್ಣಿನಲ್ಲಿ ಹೂಳಬೇಕಿತ್ತು. ಕುಟುಂಬಸ್ಥರು ಪರಿಪರಿಯಾಗಿ ಕೇಳಿಕೊಂಡರೂ ಒಪ್ಪದೇ ದಹನ ಮಾಡಲಾಗಿದೆ. ಮೃತದೇಹದಲ್ಲಿ ಒಂದಲ್ಲ, ನಾಲ್ಕಾರು ಬುಲೆಟ್‌ಗಳಿವೆ. ಬುಲೆಟ್ ವಿಚಾರ ಹೊರಬಾರದಂತೆ ಎಎಸ್ಪಿ ರವಿಕುಮಾರ ಕುಟುಂಬಸ್ಥರನ್ನು ಬೆದರಿಸಿ ಮೃತದೇಹವನ್ನು ಸುಟ್ಟು ಹಾಕಿದ್ದಾರೆ ಎಂದು ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು.

ಬಿಜೆಪಿಯವರ ಮೇಲೆ ಸುಳ್ಳು ಆರೋಪ

ಗಲಾಟೆ ಪ್ರಕರಣದಲ್ಲಿ ಕಾಂಗ್ರೆಸ್‌ನವರು ನೇರ ಭಾಗಿಯಾಗಿದ್ದರೂ ಬಿಜೆಪಿಯವರ ಮೇಲೆ ಸುಳ್ಳು ಆರೋಪ ಮಾಡುತ್ತಿರುವುದು ಅನೇಕ ಸಾಕ್ಷ್ಯಗಳಿಂದ ಗೊತ್ತಾಗಿದೆ. ಪ್ರಕರಣದಲ್ಲಿ ಪೊಲೀಸರು ಸರಿಯಾಗಿ ಕರ್ತವ್ಯ ನಿರ್ವಹಿಸಿಲ್ಲ. ಗುಂಡಿನ ದಾಳಿಗೆ ಬೆಂಬಲ ನೀಡಿದ ಡಿವೈಎಸ್ಪಿ ಚಂದ್ರಕಾಂತ್ ನಂದರೆಡ್ಡಿ ಹಾಗೂ ಸಾಕ್ಷ್ಯ ನಾಶಪಡಿಸಲು ಯತ್ನಿಸಿದ ಎಎಸ್ಪಿ ರವಿಕುಮಾರ ಅವರನ್ನು ಸರ್ಕಾರ ಕೂಡಲೇ ಅಮಾನತುಗೊಳಿಸಬೇಕು ಎಂದು ಒತ್ತಾಯಿಸಿದರು.

ಗಲಾಟೆ ವೇಳೆ ಶಾಸಕ ಭರತ್‌ ರೆಡ್ಡಿ ಪಕ್ಕದಲ್ಲಿ ಮೃತ ರಾಜಶೇಖರ ಇದ್ದ. ಇದೇ ವೇಳೆಯೇ ಅಂಗರಕ್ಷಕ ಬಂದೂಕು ಸಿಡಿಸಿ ಕೊಂದಿದ್ದಾನೆ. ಎರಡು ಬಾರಿ ಮರಣೋತ್ತರ ಪರೀಕ್ಷೆ ಮಾಡಿ ಬುಲೆಟ್ ನಾಶಕ್ಕೆ ಯತ್ನಿಸಿದ್ದಾರೆ. ಜನಾರ್ದನ ರೆಡ್ಡಿ ತಲೆಗೆ ಕೊಲೆ ಪ್ರಕರಣ ಕಟ್ಟಲು ಹೊರಟಿದ್ದಾರೆ ಎಂದು ದೂರಿದರು.

ಘರ್ಷಣೆಯಲ್ಲಿ ಸತೀಶ್‌ ರೆಡ್ಡಿ ಗನ್‌ಮ್ಯಾನ್‌ಗಳಿಂದ ಪೊಲೀಸರು ಇದ್ದ ವೇಳೆಯೂ ಜನಾರ್ದನ ರೆಡ್ಡಿ ಮೇಲೆಯೇ ಫೈರಿಂಗ್ ಮಾಡಲಾಗಿದೆ. ಸ್ವಲ್ಪ ಅಂತರದಲ್ಲಿ ಜನಾರ್ದನ ರೆಡ್ಡಿ ತಪ್ಪಿಸಿಕೊಂಡರು. ಇಂದು ಕೂಡ ರೆಡ್ಡಿ ಮನೆಯ ಬಳಿ ಬುಲೆಟ್‌ಗಳು ಪತ್ತೆಯಾಗಿವೆ. ಎಸ್ಪಿ ಮೊದಲ ದಿನೇ ನೇಮಕಗೊಂಡಿದ್ದರಿಂದ ಗಲಾಟೆ ಬಗ್ಗೆ ತಡವಾಗಿ ಮಾಹಿತಿ ತಿಳಿದಿದೆ. ಆದರೆ, ಅದಕ್ಕೂ ಮುನ್ನ ಎಎಸ್ಪಿ ರವಿಕುಮಾರ್ ಘರ್ಷಣೆ ಸಂಬಂಧ ವಿಷಯ ತಿಳಿದರೂ ಬೇಕಂತಲೇ ವಿಳಂಬ ಮಾಡಿದ್ದಾರೆ. ಪರಿಸ್ಥಿತಿ ನಿಯಂತ್ರಣ ಮೀರಿದ ನಂತರ ಟಿಯರ್ ಗ್ಯಾಸ್ ಸಿಡಿಸಲು ಎಎಸ್ಪಿಯೇ ಅನುಮತಿ ನೀಡಿದ್ದಾರೆ ಎಂದು ಆರೋಪಿಸಿದರು.

ಘಟನಾ ಸ್ಥಳದಲ್ಲಿ ಎಸ್ಪಿ ಇರಲಿಲ್ಲ ಎಂಬ ಕಾರಣದಿಂದ ಅಮಾನತು ಮಾಡಲಾಗಿದೆ ಎಂದು ಡಿಕೆಶಿ ಹೇಳಿದ್ದಾರೆ. ಕಾಂಗ್ರೆಸ್ ಸರ್ಕಾರದ ಆಡಳಿತದಲ್ಲಿ ಡಿವೈಎಸ್ಪಿ ಗಣಪತಿ, ಡಿಸಿ ರವಿ, ವಾಲ್ಮೀಕಿ ಹಗರಣದಲ್ಲಿ ಚಂದ್ರಶೇಖರ್ ಸೇರಿದಂತೆ ಸಾಲು ಸಾಲು ಅಧಿಕಾರಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ದೂರಿದ ಶ್ರೀರಾಮುಲು, ಗಲಾಟೆ ಪ್ರಕರಣ ಸಂಬಂಧ ಡಿ.ಕೆ. ಶಿವಕುಮಾರ್ ಅವರು ಅಧಿಕಾರಿಗಳ ಸಭೆ ನಡೆಸಿದ್ದು, ಶಾಸಕ ನಾರಾ ಭರತ್ ರೆಡ್ಡಿಯನ್ನು ಸಭೆಯಿಂದ ದೂರ ಇಟ್ಟಿದ್ದು ಏಕೆ ಎಂದು ಪ್ರಶ್ನಿಸಿದರು.

ನಗರ ಶಾಸಕ ಸಾವಿರಾರು ಗೂಂಡಾಗಳನ್ನು ಕರೆದುಕೊಂಡು ಮನೆಯ ಬಳಿ ಬಂದಾಗ ನಾವು ಕೈಕಟ್ಟಿ ಕುಳಿತುಕೊಳ್ಳಬೇಕಿತ್ತೇ? ದಾಳಿಯಾದಾಗ ಪ್ರತಿದಾಳಿಯಾಗಿದೆ. ನೂಕು ನುಗ್ಗಲು ಆದಾಗ ಎರಡು ಕಡೆ ದಾಳಿಯಾಗಿರಬಹುದು. ನನ್ನ ಎದುರೇ ಗುಂಡು ಹಾರಿಸಿದರು. ಶ್ರೀರಾಮುಲುಗೆ ಗುಂಡು ತಗುಲಿದೆ ಎಂದು ನಮ್ಮವರು ಓಡಿ ಬಂದರು. ಇದೊಂದು ದಿಢೀರ್ ಆದ ಘಟನೆ. ಎರಡು ಕಡೆ ಘಟನೆ ನಡೆದಿದೆ ಎಂಬ ಕಾರಣಕ್ಕಾಗಿಯೇ ಎರಡು ಕಡೆಯವರ ಬಂಧನವಾಗಿದೆ. ನಾನು ನಿರೀಕ್ಷಣಾ ಜಾಮೀನು ಪಡೆಯುವುದಿಲ್ಲ. ನನ್ನದೇನಾದರೂ ತಪ್ಪಿದ್ದರೆ ಬಂಧಿಸಲಿ ಎಂದು ಶ್ರೀರಾಮುಲು ತಿಳಿಸಿದರು. ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಬ್ಯಾನರ್ ಗಲಾಟೆಯ ಪ್ರಥಮ ಆರೋಪಿ ಶಾಸಕ ಭರತ್‌ ರೆಡ್ಡಿ ಜೊತೆ ತೋರಣಗಲ್ ವಿಮಾನ ನಿಲ್ದಾಣದಲ್ಲಿ ಮಾತನಾಡಿದರು. ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸಹ ಭರತ್ ರೆಡ್ಡಿಯನ್ನು ಸುದ್ದಿಗೋಷ್ಠಿಯಲ್ಲಿ ಕೂಡಿಸಿಕೊಂಡಿದ್ದಾರೆ. ಪ್ರಕರಣ ಮುಚ್ಚಿ ಹಾಕಲು ಮುಂದಾಗಿರುವ ಕಾಂಗ್ರೆಸ್‌ ಸರ್ಕಾರ, ಮೃತ ಯುವಕನಿಗೆ ಯಾವ ನ್ಯಾಯ ಕೊಡುತ್ತದೆ ? ಎಂದು ಪ್ರಶ್ನಿಸಿದರು.

ಇದೇ ವೇಳೆ ಮಾತನಾಡಿದ ಶಾಸಕ ಜನಾರ್ದನ ರೆಡ್ಡಿ, ಮಾಜಿ ಸಚಿವ ಬಿ.ಶ್ರೀರಾಮುಲು, ಜನಾರ್ದನ ರೆಡ್ಡಿಗೆ ದಾಳಿ ನಡೆದಿದೆ ಎಂದ ಮೇಲೆ ಘಟನೆ ಸ್ಥಳಕ್ಕೆ ಜನರು ಬರುವುದು ಸಹಜ. ಎಎಸ್ಪಿ ಈ ಘಟನೆ ತಡೆಯಬಹುದಿತ್ತು. ಪ್ರಕರಣ ಸಿಬಿಐಗೆ ವಹಿಸಿದರೆ ತಪ್ಪಿಸ್ಥರು ಯಾರೆಂಬುದು ಹೊರಗೆ ಬರಲಿದೆ. ಒಟ್ಟಾರೆ ಮನೆಯ ಆವರಣದಲ್ಲಿ ಹತ್ತಾರು ಬುಲೆಟ್ ಸಿಕ್ಕಿವೆ. ನನ್ನ ಬಳಿಯೇ ಏಳು ಇವೆ. ರಾಜಶೇಖರ ಮೃತ ದೇಹದಲ್ಲಿ ಬುಲೆಟ್ ಇದ್ದರಿಂದ ಸುಡಲಾಗಿದೆ ಎಂದು ಶಾಸಕ ರೆಡ್ಡಿ ಆಪಾದಿಸಿದರು.