ಬ್ಯಾನರ್ ಗಲಾಟೆ ಪ್ರಕರಣದ ಮುಖ್ಯ ರೂವಾರಿ ಶಾಸಕ ಭರತ್ ರೆಡ್ಡಿ ಆಪ್ತ ಸತೀಶ್‌ ರೆಡ್ಡಿಯನ್ನು ಕೂಡಲೇ ಬಂಧಿಸಬೇಕು. ದ್ವೇಷ ಭಾಷಣ ಹಿನ್ನೆಲೆಯಲ್ಲಿ ಭರತ್ ರೆಡ್ಡಿ ವಿರುದ್ಧ ಕೂಡಲೇ ಪ್ರಕರಣ ದಾಖಲಿಸಬೇಕು ಎಂದು ಮಾಜಿ ಸಚಿವ ಬಿ.ಶ್ರೀರಾಮುಲು ಆಗ್ರಹಿಸಿದ್ದಾರೆ.

ಬಳ್ಳಾರಿ: ಬ್ಯಾನರ್ ಗಲಾಟೆ ಪ್ರಕರಣದ ಮುಖ್ಯ ರೂವಾರಿ ಶಾಸಕ ಭರತ್ ರೆಡ್ಡಿ ಆಪ್ತ ಸತೀಶ್‌ ರೆಡ್ಡಿಯನ್ನು ಕೂಡಲೇ ಬಂಧಿಸಬೇಕು. ದ್ವೇಷ ಭಾಷಣ ಹಿನ್ನೆಲೆಯಲ್ಲಿ ಭರತ್ ರೆಡ್ಡಿ ವಿರುದ್ಧ ಕೂಡಲೇ ಪ್ರಕರಣ ದಾಖಲಿಸಬೇಕು ಎಂದು ಮಾಜಿ ಸಚಿವ ಬಿ.ಶ್ರೀರಾಮುಲು ಆಗ್ರಹಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಎತ್ತಿಗೆ ಜ್ವರ ಬಂದರೆ ಎಮ್ಮೆಗೆ ಬರೆ ಹಾಕಿದಂತೆ, ಬ್ಯಾನರ್‌ ಗಲಭೆಗೆ ಮುಖ್ಯ ಆರೋಪಿ ಸತೀಶ್‌ ರೆಡ್ಡಿ ಹಾಗೂ ಆತನ ಬೆಂಬಲಿಗರನ್ನು ಬಂಧಿಸುವುದು ಬಿಟ್ಟು, ಒಂದು ದಿನದ ಹಿಂದೆಯಷ್ಟೇ ಅಧಿಕಾರ ವಹಿಸಿಕೊಂಡ ಎಸ್ಪಿ ಪವನ್ ನೆಜ್ಜೂರ್ ಅವರನ್ನು ಸಸ್ಪೆಂಡ್ ಮಾಡಿರುವುದು ಹಾಸ್ಯಾಸ್ಪದವಾಗಿದೆ. ಇದು ಪ್ರಕರಣದ ಕಣ್ಣೊರೆಸುವ ತಂತ್ರವಾಗಿದೆ ಎಂದು ದೂರಿದರು.

ಗುರುವಾರ ಸಂಜೆ ನಡೆದ ಗಲಭೆಯಲ್ಲಿ ಬೇರೆ ಭಾಗಗಳಿಂದ ಗೂಂಡಾಗಳು ಬಂದಿದ್ದರು. ಎಸ್ಪಿ ವೃತ್ತದಿಂದ ಜನಾರ್ದನ ರೆಡ್ಡಿ ಮನೆವರೆಗೆ ಸಾವಿರಾರು ಜನರು ಬರುತ್ತಿದ್ದರೂ ಪೊಲೀಸರು ಅವರನ್ನು ನಿಯಂತ್ರಿಸಲಿಲ್ಲ. ಬದಲಿಗೆ ಅವರಿಗೆ ಕುಮ್ಮಕ್ಕು ನೀಡಿದ್ದಾರೆ. ಘಟನೆಯಲ್ಲಿ ನಗರ ಡಿವೈಎಸ್ಪಿ ನಂದಾ ರೆಡ್ಡಿ ಅವರ ಕುಮ್ಮಕ್ಕಿದೆ. ರೆಡ್ಡಿ ಮನೆಗೆ ಬರುವವರನ್ನು ಅಲ್ಲಿಯೇ ತಡೆದಿದ್ದರೆ ಗಲಭೆ ನಡೆಯುತ್ತಿರಲಿಲ್ಲ. ಹೀಗಾಗಿ ಕೂಡಲೇ ಡಿವೈಎಸ್ಪಿ ನಂದಾ ರೆಡ್ಡಿ ಅವಯನ್ನು ಅಮಾನತು ಮಾಡಬೇಕು ಎಂದು ಆಗ್ರಹಿಸಿದರು.

ಗಲಭೆಗೆ ಸಂಬಂಧಿಸಿ ಈವರೆಗೂ ಯಾರನ್ನೂ ಬಂಧಿಸಿಲ್ಲ. ಬಳ್ಳಾರಿಯನ್ನು ರಿಪಬ್ಲಿಕ್‌ ಆಫ್‌ ಕಾಂಗ್ರೆಸ್‌ ಆಗಿ ಮಾಡುತ್ತಿದ್ದಾರೆ. ನಾನು ಮತ್ತು ಜನಾರ್ದನ ರೆಡ್ಡಿ ಸ್ವಲ್ಪ ಎಚ್ಚರ ತಪ್ಪಿದ್ದರೆ ನಮ್ಮ ಪ್ರಾಣ ಉಳಿಯುತ್ತಿರಲಿಲ್ಲ. ಹೀಗಾಗಿ ಗೃಹ ಸಚಿವರು ಈಗಲಾದರೂ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಸೂಕ್ತ ಕ್ರಮ ಕೈಗೊಳ್ಳಬೇಕು. ಕರ್ನಾಟಕ ರಾಜ್ಯ ಗೂಂಡಾ ರಾಜ್ಯವಾಗಿ ಪರಿವರ್ತನೆಯಾಗುತ್ತಿದೆ. ಗುಂಡು ಹಾರಿಸಿದವರ ಗನ್‌ಗಳನ್ನು ಈಗಾಗಲೇ ಪೊಲೀಸ್‌ ಇಲಾಖೆ ವಶಪಡಿಸಿಕೊಂಡಿದ್ದು, ಕೂಡಲೇ ಖಾಸಗಿ ಗನ್‌ ಮ್ಯಾನ್‌ಗಳನ್ನು ಬಂಧಿಸಬೇಕು ಎಂದು ಒತ್ತಾಯಿಸಿದರು.

ಕೆ.ಜಿ.ಹಳ್ಳಿ, ಡಿ.ಜೆ. ಹಳ್ಳಿ ಪ್ರಕರಣವನ್ನು ನೆನಪಿಸಿದೆ

ಬಳ್ಳಾರಿ ಬ್ಯಾನರ್ ಗಲಭೆ ಪ್ರಕರಣ ಕೆ.ಜಿ.ಹಳ್ಳಿ, ಡಿ.ಜೆ. ಹಳ್ಳಿ ಪ್ರಕರಣವನ್ನು ನೆನಪಿಸಿದೆ. ಬಳ್ಳಾರಿಯಲ್ಲಿ ಜನಾರ್ದನ ರೆಡ್ಡಿ ಅವರಿಗೆ ಪೆಟ್ರೊಲ್‌ ಬಾಂಬ್‌ ಹಾಕಿ ಬೆದರಿಸುವ ಕೆಲಸ ಮಾಡಿದೆ. ಹೀಗಾಗಿ, ಸರ್ಕಾರ ಜನಾರ್ದನ ರೆಡ್ಡಿ ಅವರಿಗೆ ಸೂಕ್ತ ರಕ್ಷಣೆ ನೀಡಬೇಕು ಎಂದು ಒತ್ತಾಯಿಸಿದರು.

ವಾಲ್ಮೀಕಿ ಪುತ್ಥಳಿ ವಿಚಾರದಲ್ಲಿ ಕಾಂಗ್ರೆಸ್‌ ರಾಜಕೀಯ

ವಾಲ್ಮೀಕಿ ಪುತ್ಥಳಿ ವಿಚಾರದಲ್ಲಿ ಕಾಂಗ್ರೆಸ್‌ ರಾಜಕೀಯ ಮಾಡುತ್ತಿದೆ. ಮೊದಲನೇದಾಗಿ ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ಹಗರಣದಲ್ಲಿ ಬಿ.ನಾಗೇಂದ್ರ ಅವರ ಸಚಿವ ಸ್ಥಾನದಿಂದ ರಾಜೀನಾಮೆ ಪಡೆದಿದೆ. ಶಾಸಕ ರಾಜಣ್ಣ ಅವರ ತಪ್ಪು ಇಲ್ಲದಿದ್ದರೂ ಸಚಿವ ಸ್ಥಾನದಿಂದ ರಾಜೀನಾಮೆ ಪಡೆದಿದ್ದು ಈ ವರೆಗೂ ಸ್ಪಷ್ಟನೆ ಕೊಟ್ಟಿಲ್ಲ. ಆದರೆ, ಸರ್ಕಾರ ಇಷ್ಟೊಂದು ದೊಡ್ಡ ಗಲಭೆಯಾದರೂ ಶಾಸಕನ ರಾಜೀನಾಮೆ ಪಡೆಯಲು ಮುಂದಾಗದಿರುವುದು ವಿಪರ್ಯಾಸ ಎಂದರು.

ಮಾಜಿ ಸಚಿವ ಜನಾರ್ದನ ರೆಡ್ಡಿ ಮಾತನಾಡಿ, ಗಾಂಜಾ ಪೆಡ್ಲರ್‌ ಅನೇಕ ಪ್ರಕರಣಗಳಿರುವ ದೌಲಾ ಎಂಬುವವನೊಂದಿಗೆ ಶಾಸಕ ಭರತ್‌ ರೆಡ್ಡಿ ಇರುವ ಬಗ್ಗೆ ಹಾಗೂ ಎಸ್ಪಿ ವೃತ್ತದಿಂದ ಪೊಲೀಸರೇ ರಕ್ಷಣೆ ನೀಡಿ ಅವರ ಸಮ್ಮುಖದಲ್ಲಿ ಯುವಕರ ಗುಂಪನ್ನು ಕರೆ ತಂದು ದಾಳಿ ನಡೆಸಿರುವ ಕುರಿತು ವಿಡಿಯೋಗಳನ್ನು ಬಿಡುಗಡೆಗೊಳಿಸಿದರು. ಬಳಿಕ ಮಾತನಾಡಿ, ನಾಗೇಂದ್ರ ಅವರು ಒಂದು ಕಾಲದಲ್ಲಿ ರೌಡಿ ಗ್ಯಾಂಗ್‌ನಲ್ಲಿದ್ದು ಕೆಲಸ ಮಾಡುತ್ತಿದ್ದು, ಅದನ್ನು ಬಿಡಿಸಿ ಅವರನ್ನು ಕರೆತಂದು ಎಸ್ಪಿ ಮೀಸಲು ಕ್ಷೇತ್ರದಲ್ಲಿ ಶಾಸಕನ್ನಾಗಿ ಮಾಡಿದೆ. ಇಂದು ನಾಗೇಂದ್ರ ನಿರ್ನಾಮವಾಗಿ, ಈಗಾಗಲೇ ಜೀರೋ ಆಗಿದ್ದಾನೆ. ಸಿಬಿಐ, ಎಸ್‌ಐಟಿ, ಚೆಕ್‌ಬೌನ್ಸ್‌, ವಾಲ್ಮೀಕಿ ಹಗರಣ ಸೇರಿ ಅನೇಕ ಕೇಸ್‌ನಲ್ಲಿ ಮುಳುಗಿದ್ದಾನೆ. ಆತ ನಾಲಿಗೆ ಬಿಗಿ ಹಿಡಿದು ಮಾತನಾಡಬೇಕು ಎಂದು ಎಚ್ಚರಿಸಿದರು.

ಭರತ್‌ ದಬ್ಬಾಳಿಕೆ ತಡೆದುಕೊಳ್ಳಲಾಗದೇ ಕಣ್ಮರೆಯಾಗಿರುವ ನಾಗೇಂದ್ರ ಈಗ ಸಿಎಂ ಸೂಚನೆ ಮೇರೆಗೆ ಬಂದಿದ್ದಾರೆ. 2028ಕ್ಕೆ ರಾಜಕೀಯವಾಗಿ ನಿಮ್ಮ ಕಾಲ ಮುಗಿಯುತ್ತದೆ ಎಂದು ಜನಾರ್ದನ ರೆಡ್ಡಿ ಹೇಳಿದರು. ಮಾಜಿ ಶಾಸಕ ಜಿ.ಸೋಮಶೇಖರ ರೆಡ್ಡಿ ಮತ್ತಿತರರು ಸುದ್ದಿಗೋಷ್ಠಿಯಲ್ಲಿದ್ದರು.