ಸಾರಾಂಶ
ಭಾರತ ದೇಶದಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಯುವಜನತೆಗೆ ಅನೇಕ ಯೋಜನೆ, ಕಾರ್ಯಕ್ರಮ ನೀಡುತ್ತಿದ್ದು, ಯುವಜನತೆಗೆ ಉಜ್ವಲ ಭವಿಷ್ಯವಿದೆ.
ದೇವದುರ್ಗ: ಭಾರತ ದೇಶದಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಯುವಜನತೆಗೆ ಅನೇಕ ಯೋಜನೆ, ಕಾರ್ಯಕ್ರಮ ನೀಡುತ್ತಿದ್ದು, ಯುವಜನತೆಗೆ ಉಜ್ವಲ ಭವಿಷ್ಯವಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ತಿಳಿಸಿದರು.
ತಾಲೂಕಿನ ತಿಂಥಿಣಿ ಬ್ರಿಜ್ ಬಳಿ ಇರುವ ಕಾಗಿನೆಲೆ ಪೀಠದಲ್ಲಿ ಶುಕ್ರವಾರ ಜರುಗಿದ ಹಾಲುಮತ ಸಂಸ್ಕೃತಿ ವೈಭವ 2024ರ ಕಾರ್ಯಕ್ರಮದಲ್ಲಿ ಯುವಜನ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದರು.ತಂದೆ ಬಿ.ಎಸ್.ಯಡಿಯೂರಪ್ಪ ಅವರು ರಾಜ್ಯದಲ್ಲಿ ಸಮಸ್ಯೆಗಳ, ಜನವಿರೋಧಿ ಆಡಳಿತದ ವಿರುದ್ಧ ನಿರಂತರ ಹೋರಾಟ ಮಾಡಿ ಇತಿಹಾಸ ಮಾಡಿದ್ದಾರೆ. ಅಧಿಕಾರಕ್ಕೆ ಬಂದಾಗ ಸರ್ವರಿಗೂ ಸಮಬಾಳು-ಸಮಪಾಲು, ಸಾಮಾಜಿಕ ನ್ಯಾಯ ಎಂಬ ತತ್ವದಡಿಯಲ್ಲಿ ಸೇವೆ ಸಲ್ಲಿಸಿದ್ದಾರೆ.
ಶಿಕಾರಿಪುರದಲ್ಲಿ 9 ಬಾರಿ ಶಾಸಕರಾಗಿ, ವಿರೋಧ ಪಕ್ಷದ ನಾಯಕರಾಗಿ, ಉಪಮುಖ್ಯಮಂತ್ರಿಯಾಗಿ, ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸುವ ಅವಕಾಶ ಬಂದಿದ್ದು, ಕ್ಷೇತ್ರದ ಇತರೆ ಸಮುದಾಯಗಳ ಜೊತೆಗೆ ಹಾಲುಮತ ಸಮಾಜ ಬಂಧುಳಿಂದ ಅವರು ದೊಡ್ಡ ಶಕ್ತಿಯಾಗಿದ್ದಾರೆ.ಅನಿರೀಕ್ಷಿತವಾಗಿ ರಾಜಕಾರಣಕ್ಕೆ ಬಂದಾಗ ಮೊದಲ ಬಾರಿಗೆ ಶಾಸಕನಾಗಿ ಬೆನ್ನೆಲುಬಾಗಿ ನಿಂತವರು ಹಾಲುಮತ ಸಮಾಜ ಬಂಧುಗಳು.
ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ದಾಸ ಶ್ರೇಷ್ಠ ಕನಕದಾಸರ ಕಾಗಿನೆಲೆ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ 60 ಕೋಟಿ ರು. ಹುಟ್ಟೂರಾದ ಬಾಡಾ ಕ್ಷೇತ್ರದ ಅಭಿವೃದ್ಧಿಗೆ 10 ಕೋಟಿ ರು. ಅನುದಾನ ನೀಡಿದ್ದರು.ರಾಜ್ಯದಲ್ಲಿ ಸರ್ಕಾರ ಕನಕ ಜಯಂತಿಯನ್ನು ಸಂಭ್ರಮ, ಅದ್ಧೂರಿಯಾಗಿ ಅಚರಿಸಿಲು ರಜೆ ಘೋಷಿಸಿ ಸರ್ಕಾರದ ಕಾರ್ಯಕ್ರಮವನ್ನು ಜಾರಿಗೊಳಿಸಿದ ಕೀರ್ತಿ ಯಡಿಯೂರಪ್ಪನವರಿಗೆ ಸಲ್ಲುತ್ತದೆ.
ಸ್ವಾಭಿಮಾನದ ಸಂಕೇತವಾಗಿರುವ ಹಾಲುಮತ ಸಮಾಜದವರು ರಾಜಕೀಯ, ಸಾಹಿತ್ಯ, ಸಾಂಸ್ಕೃತಿಕ ಕ್ಷೇತ್ರ ಸೇರಿದಂತೆ ಎಲ್ಲಾ ರಂಗಗಳಲ್ಲಿಯೂ ಕೊಟ್ಟಿರುವ ಕೊಡುಗೆ ಅಭಿನಂದನೀಯ. ಸಮಾಜದ ಸಮಸ್ಯೆಗಳಿರಬಹುದು, ಬೇಡಿಕೆಗಳಿರಬಹುದು ಎಲ್ಲಾ ಬಂಧುಗಳ ಜೊತೆಗೆ ಕೇಂದ್ರ ಸರ್ಕಾರ ನಿಮ್ಮ ಪರವಾಗಿರುತ್ತದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ತಿಳಿಸಿದರು.