ಪ್ರಧಾನಮಂತ್ರಿ ನರೇಂದ್ರ ಮೋದಿ ಕರೆಯ ಹಿನ್ನೆಲೆ ದೇಶಾದ್ಯಂತ ಹರ್ ಘರ್ ತಿರಂಗಾ ಅಭಿಯಾನ ಆಚರಿಸಲಾಗುತ್ತಿದೆ
ಕುಷ್ಟಗಿ: ಬಿಜೆಪಿ ಯುವ ಮೋರ್ಚಾ ಮಂಡಲದಿಂದ ಹರ್ ಘರ್ ತಿರಂಗಾಅಭಿಯಾನದ ಅಂಗವಾಗಿ ಪಟ್ಟಣದಲ್ಲಿ ಬೈಕ್ ರ‍್ಯಾಲಿ ನಡೆಯಿತು.
ಪ್ರಧಾನಮಂತ್ರಿ ನರೇಂದ್ರ ಮೋದಿ ಕರೆಯ ಮೇರೆಗೆ ಹಾಗೂ ವಂದೇ ಮಾತರಂನ 150ನೇ ವರ್ಷದ ಆಚರಣೆಯ ಅಂಗವಾಗಿ ಆಯೋಜಿಸಿದ್ದ ರ‍್ಯಾಲಿಯಲ್ಲಿ ಬಿಜೆಪಿ ಕಾರ್ಯಕರ್ತರು ತ್ರಿವರ್ಣ ಧ್ವಜವನ್ನು ಎತ್ತರಕ್ಕೆ ಹಾರಿಸೋಣ, ವಂದೇ ಮಾತರಂ ಘೋಷವನ್ನು ಆಕಾಶದೆತ್ತರಕ್ಕೆ ಮೊಳಗಿಸೋಣ ಎಂಬ ಘೋಷಣೆಯೊಂದಿಗೆ ಬೈಕ್‌ಗಳಲ್ಲಿ ರಾಷ್ಟ್ರಧ್ವಜ ಹಿಡಿದು ಸಾಗಿದರು.ಪಟ್ಟಣದ ವೀರಯೋಧ ಸಂದೀಪ್ ಉನ್ನಿಕೃಷ್ಣನ್ ವೃತ್ತದಿಂದ ಆರಂಭವಾದ ರ‍್ಯಾಲಿಯು ಪ್ರಮುಖ ರಸ್ತೆಗಳ ಮೂಲಕ ಸಂಚರಿಸಿ ವೀರಯೋಧ ಮಲ್ಲಯ್ಯ ವೃತ್ತದಲ್ಲಿ ಮುಕ್ತಾಯಗೊಂಡಿತು.ರ‍್ಯಾಲಿಯುದ್ದಕ್ಕೂ ದೇಶಭಕ್ತಿಯ ಘೋಷಣೆ ಮೊಳಗಿಸಿ ವೀರಯೋಧರಿಗೆ ಜಯಘೋಷ ಕೂಗಲಾಯಿತು.
ಯುವ ಮೋರ್ಚಾ ಅಧ್ಯಕ್ಷ ಉಮೇಶ್ ಯಾದವ್ ಮಾತನಾಡಿ, ಪ್ರಧಾನಮಂತ್ರಿ ನರೇಂದ್ರ ಮೋದಿ ಕರೆಯ ಹಿನ್ನೆಲೆ ದೇಶಾದ್ಯಂತ ಹರ್ ಘರ್ ತಿರಂಗಾ ಅಭಿಯಾನ ಆಚರಿಸಲಾಗುತ್ತಿದೆ. ಸ್ವಾತಂತ್ರ್ಯೋತ್ಸವದ ಸಂದರ್ಭದಲ್ಲಿ ಪ್ರತಿಯೊಂದು ಮನೆಯಲ್ಲೂ ರಾಷ್ಟ್ರಧ್ವಜ ಹಾರಿಸುವ ಮೂಲಕ ದೇಶದ ಬಗ್ಗೆ ಗೌರವ ಮತ್ತು ಹೆಮ್ಮೆ ವ್ಯಕ್ತಪಡಿಸುವುದು ಅಭಿಯಾನದ ಪ್ರಮುಖ ಉದ್ದೇಶವಾಗಿದೆ ಎಂದರು.ಯುವಜನರು ಕೇವಲ ಹಬ್ಬದ ಸಂದರ್ಭಗಳಲ್ಲಿ ಮಾತ್ರವಲ್ಲದೆ ಪ್ರತಿನಿತ್ಯ ದೇಶದ ಪ್ರಗತಿ, ಏಕತೆ ಮತ್ತು ಸಮಗ್ರತೆಯ ಬಗ್ಗೆ ಜಾಗೃತರಾಗಬೇಕು.ಇಂತಹ ದೇಶಭಕ್ತಿ ಕಾರ್ಯಕ್ರಮ ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವುದರಿಂದ ಮುಂದಿನ ಪೀಳಿಗೆಗೂ ರಾಷ್ಟ್ರಪ್ರೇಮದ ಸಂದೇಶ ತಲುಪಿಸಲು ಸಾಧ್ಯವಾಗುತ್ತದೆ. ಹರ್ ಘರ್ ತಿರಂಗಾ ಅಭಿಯಾನವು ಪ್ರತಿಯೊಬ್ಬ ನಾಗರಿಕನಲ್ಲೂ ರಾಷ್ಟ್ರಧ್ವಜದ ಬಗ್ಗೆ ಗೌರವ ಹಾಗೂ ದೇಶದ ಬಗ್ಗೆ ಹೆಮ್ಮೆಯ ಭಾವನೆ ಮೂಡಿಸುವಂತಾಗಬೇಕು ಎಂದು ಹೇಳಿದರು.
ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಕೆ.ಮಹೇಶ್ ಮಾತನಾಡಿ, ಹರ್ ಘರ್ ತಿರಂಗಾ ಅಭಿಯಾನವು ಕೇವಲ ಒಂದು ಪಕ್ಷದ ಕಾರ್ಯಕ್ರಮವಲ್ಲ, ರಾಷ್ಟ್ರದ ಗೌರವ ಎತ್ತಿ ಹಿಡಿಯುವ ಜನರ ಅಭಿಯಾನವಾಗಿದೆ. ದೇಶಾದ್ಯಂತ ಬಿಜೆಪಿ ಕಾರ್ಯಕರ್ತರು ಹಾಗೂ ದೇಶಭಕ್ತರು ವಿವಿಧ ಕಾರ್ಯಕ್ರಮ ಹಮ್ಮಿಕೊಂಡು ರಾಷ್ಟ್ರಧ್ವಜದ ಮಹತ್ವ ಜನರಿಗೆ ತಿಳಿಸುತ್ತಿದ್ದಾರೆ ಎಂದರು.ಹರ್ ಘರ್ ತಿರಂಗಾ ಯಾತ್ರೆ, ಪಂಜಿನ ಮೆರವಣಿಗೆ, ಬೃಹತ್ ರಾಷ್ಟ್ರಧ್ವಜ ಮೆರವಣಿಗೆ ಹಾಗೂ ಬೈಕ್ ರ‍್ಯಾಲಿಗಳ ಮೂಲಕ ದೇಶಭಕ್ತಿ ಮತ್ತು ರಾಷ್ಟ್ರೀಯ ಏಕತೆಯ ಸಂದೇಶ ಜನರಿಗೆ ತಲುಪಿಸಲಾಗುತ್ತಿದೆ. ಪ್ರತಿಯೊಬ್ಬರೂ ತಮ್ಮ ಮನೆಗಳಲ್ಲಿ ರಾಷ್ಟ್ರಧ್ವಜ ಹಾರಿಸಿ ಅಭಿಯಾನದಲ್ಲಿ ಭಾಗವಹಿಸಬೇಕು. ರಾಷ್ಟ್ರಧ್ವಜವು ಸ್ವಾತಂತ್ರ್ಯ, ತ್ಯಾಗ, ಏಕತೆ ಮತ್ತು ಸಾರ್ವಭೌಮತ್ವದ ಸಂಕೇತವಾಗಿದ್ದು, ಅದಕ್ಕೆ ಗೌರವ ನೀಡುವುದು ಪ್ರತಿಯೊಬ್ಬ ಭಾರತೀಯನ ಕರ್ತವ್ಯವಾಗಿದೆ ಎಂದರು.
ಈ ಸಂದರ್ಭದಲ್ಲಿ ತಾಲೂಕು ಬಿಜೆಪಿ ಅಧ್ಯಕ್ಷ ಮಹಾಂತೇಶ್ ಬಾದಾಮಿ, ರವಿಕುಮಾರ್ ಹಿರೇಮಠ್, ರಮೇಶ್ ಕೊಳ್ಳಿ, ಪ್ರಭು, ಶಂಕರ್‌ಗೌಡ, ದೊಡ್ಡಬಸವ ಸುಂಕದ, ಶರಣು ವಡ್ಡಿಗೇರಿ, ಸುಕುಮುನಿ ಕೊರಡಕೇರಿ, ಪುಂಡಲೀಕ, ದ್ಯಾಮಣ್ಣ, ಭೀಮಣ್ಣ, ಬಸವರಾಜ್, ಸುಪ್ರೀತ್, ಮುತ್ತಣ್ಣ, ಅಡವಿಬಾವಿ ಹಾಗೂ ಮಹಿಳಾ ಮೋರ್ಚಾ ಪ್ರಮುಖರಾದ ಶೈಲಜಾ ಬಾಗಲಿ, ಮಯೂರಿ ಮಾಟಲದಿನ್ನಿ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.