ಸಾರಾಂಶ
ರಾಜ್ ಕುಟುಂಬದ ಕುಡಿ ಯುವ ರಾಜಕುಮಾರ ಅಭಿನಯದ ಯುವ ಸಿನಿಮಾಕ್ಕೆ ಹೊಸಪೇಟೆಯಲ್ಲಿ ಭರ್ಜರಿ ಓಪನಿಂಗ್ ದೊರೆತಿದ್ದು, ಮೂರು ಚಿತ್ರಮಂದಿರಗಳಲ್ಲಿ ಸಿನಿಮಾ ಪ್ರದರ್ಶನ ಕಂಡಿದೆ.
ಹೊಸಪೇಟೆ: ರಾಜ್ ಕುಟುಂಬದ ಕುಡಿ ಯುವ ರಾಜಕುಮಾರ ಅಭಿನಯದ ಯುವ ಸಿನಿಮಾಕ್ಕೆ ಹೊಸಪೇಟೆಯಲ್ಲಿ ಭರ್ಜರಿ ಓಪನಿಂಗ್ ದೊರೆತಿದ್ದು, ಮೂರು ಚಿತ್ರಮಂದಿರಗಳಲ್ಲಿ ಸಿನಿಮಾ ಪ್ರದರ್ಶನ ಕಂಡಿದೆ.
ನಗರದ ಸರಸ್ವತಿ ಚಿತ್ರಮಂದಿರದ ಎದುರು ರಾತ್ರಿ ೧೨ ಗಂಟೆಯಿಂದಲೇ ಜಮಾಯಿಸಿದ ಪುನೀತ್ ರಾಜ್ ಕುಮಾರ ಅಭಿಮಾನಿಗಳು ಸಿನಿಮಾ ಪ್ರದರ್ಶನಕ್ಕೆ ಒತ್ತಾಯಿಸಿದರು. ಅಪ್ಪು ನೆಚ್ಚಿನ ಪುತ್ರ ಯುವ ರಾಜಕುಮಾರ ಸಿನಿಮಾ ನೋಡಲು ಬಂದಿದ್ದೇವೆ. ಅಪ್ಪು ಪುತ್ರನ ಸಿನಿಮಾ ಪ್ರದರ್ಶನ ಮಾಡಲೇಬೇಕು ಎಂದು ಅಭಿಮಾನಿಗಳು ಒತ್ತಾಯಿಸಿದರು. ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಜಮಾಯಿಸಿದ್ದರಿಂದ; ಚಿತ್ರಮಂದಿರದ ಎದುರು ಪೊಲೀಸ್ ಬಂದೋಬಸ್ತ್ ಹೆಚ್ಚಿಸಲಾಯಿತು. ಅಭಿಮಾನಿಗಳು ಪುನೀತ್ ರಾಜ್ ಕುಮಾರ, ಯುವ ರಾಜಕುಮಾರ ಪರ ಘೋಷಣೆ ಮೊಳಗಿಸಿದರು. ಅಭಿಮಾನಿಗಳು ಭಾರೀ ಪ್ರಮಾಣದಲ್ಲಿ ಜಮಾಯಿಸಿದರಿಂದ; ಪೊಲೀಸರು ಚಿತ್ರಮಂದಿರ ಮಾಲೀಕರ ಬಳಿ ಹಾಗೂ ಸಿನಿಮಾ ವಿತರಕರ ಬಳಿ ಚರ್ಚಿಸಿ ಬೆಳಗಿನಜಾವ ೫:೩೦ಕ್ಕೆ ಸರಸ್ವತಿ ಚಿತ್ರಮಂದಿರ, ಮೀರ್ ಆಲಂ ಥೇಟರ್ ನಲ್ಲಿ ಮೊದಲ ಪ್ರದರ್ಶನ ನಡೆಸಲಾಯಿತು.ಸಿನಿಮಾ ಎರಡು ಟಾಕೀಸ್ ಗಳಲ್ಲಿ ಪ್ರದರ್ಶನ ಆರಂಭಗೊಳ್ಳುತ್ತಲೇ ಅಭಿಮಾನಿಗಳು ಜೈಕಾರ ಮೊಳಗಿಸಿದರು. ಯುವ ರಾಜಕುಮಾರ ಪರ ಘೋಷಣೆ ಮೊಳಗಿಸಿದರು.
ಇನ್ನು ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಜಮಾಯಿಸಿದ್ದರಿಂದ ನಗರದ ಲಕ್ಷ್ಮೀ ಚಿತ್ರಮಂದಿರದಲ್ಲೂ ಯುವ ಸಿನಿಮಾದ ಪ್ರದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಮೊದಲ ದಿನವೇ ಹೊಸಪೇಟೆಯ ಮೂರು ಚಿತ್ರಮಂದಿರಗಳಲ್ಲಿ ೧೩ ಪ್ರದರ್ಶನವನ್ನು ಯುವ ಸಿನಿಮಾ ಕಾಣುತ್ತಿದ್ದು, ಭರ್ಜರಿ ಆರಂಭ ಕಂಡಿದೆ.ಇನ್ನು ಜಿಲ್ಲೆಯ ಹಗರಿಬೊಮ್ಮನಹಳ್ಳಿಯ ವಿಷ್ಣು ಚಿತ್ರಮಂದಿರ, ಹೂವಿನಹಡಗಲಿಯ ಶಂಕರ್ ಚಿತ್ರಮಂದಿರದಲ್ಲೂ ಯುವ ಸಿನಿಮಾ ಭರ್ಜರಿ ಆರಂಭ ಕಂಡಿದೆ. ಹೊಂಬಾಳೆ ಸಂಸ್ಥೆ ನಿರ್ಮಾಣದ ಯುವ ಚಿತ್ರವನ್ನು ನಿರ್ದೇಶಕ ಸಂತೋಷ್ ಆನಂದರಾಮ್ ನಿರ್ದೇಶಿಸಿದ್ದಾರೆ. ಸಪ್ತಮಿಗೌಡ, ಸುಧಾರಾಣಿ, ಅಚ್ಯುತ್ ತಾರಾಗಣದಲ್ಲಿದ್ದಾರೆ. ಹೊಸಪೇಟೆಯ ಸರಸ್ವತಿ ಚಿತ್ರಮಂದಿರದಲ್ಲಿ ಪುನೀತ್ ರಾಜಕುಮಾರ, ಯುವ ರಾಜಕುಮಾರ ಮತ್ತು ರಾಜ್ ಕುಮಾರ ಕುಟುಂಬದ ಅಭಿಮಾನಿಗಳು ಕಟೌಟ್ ಗಳನ್ನು ನಿರ್ಮಿಸಿ ಯುವ ರಾಜಕುಮಾರ ಅಭಿನಯದ ಮೊಟ್ಟ ಮೊದಲ ಸಿನಿಮಾಕ್ಕೆ ಭರ್ಜರಿ ಸ್ವಾಗತ ನೀಡಿದ್ದಾರೆ.