ಕುವೆಂಪು ಸಾರ್ವಕಾಲಿಕ ಶ್ರೇಷ್ಟ ಕವಿ

| Published : Mar 28 2025, 12:33 AM IST

ಸಾರಾಂಶ

ಗಾಂಧೀಜಿ ಅವರ ಸರ್ವೋದಯ ಪರಿಕಲ್ಪನೆ, ರಾಮಕೃಷ್ಣ ಪರಮಹಂಸ ಹಾಗೂ ವಿವೇಕಾನಂದರ ಆಧ್ಯಾತ್ಮ ಮತ್ತು ಸಮನ್ವಯತೆ, ಶ್ರೀ ಅರವಿಂದರ ಪೂರ್ಣದೃಷ್ಟಿಯು ಕುವೆಂಪು ಅವರ ಸಾಹಿತ್ಯದಲ್ಲಿ ಅಡಕವಾಗಿದೆ

ಕನ್ನಡಪ್ರಭ ವಾರ್ತೆ ಮೈಸೂರು

ಕುವೆಂಪು ಅವರು ಸಾರ್ವಕಾಲಿಕ ಶ್ರೇಷ್ಟ ಕವಿ. ಕುವೆಂಪು ಅವರ ಸಾಹಿತ್ಯ ಅತ್ಯಂತ ಶ್ರೇಷ್ಠವಾಗಿದೆ ಎಂದು ಕರ್ನಾಟಕ ರಾಜ್ಯ ಮುಕ್ತ ವಿವಿ ಕುವೆಂಪು ಸಂಶೋಧನಾ ಮತ್ತು ವಿಸ್ತರಣಾ ಕೇಂದ್ರದ ಸಂಯೋಜನಾಧಿಕಾರಿ ಡಾ.ಎನ್.ಆರ್. ಚಂದ್ರೇಗೌಡ ತಿಳಿಸಿದರು.

ನಗರದ ಯುವರಾಜ ಕಾಲೇಜಿನ ಅಮೃತ ಮಹೋತ್ಸವ ಸಭಾಂಗಣದಲ್ಲಿ ಕನ್ನಡ ವಿಭಾಗವು ಐಕ್ಯೂಎಸಿ ಸಹಯೋಗದಲ್ಲಿ ಮಂಗಳವಾರ ಆಯೋಜಿಸಿದ್ದ ವಿಶೇಷ ಉಪನ್ಯಾಸದಲ್ಲಿ ಕುವೆಂಪು ಅವರ ರಕ್ತಾಕ್ಷಿ- ಒಂದು ಅವಲೋಕನ ಕುರಿತು ಅವರು ಮಾತನಾಡಿದರು.

ಗಾಂಧೀಜಿ ಅವರ ಸರ್ವೋದಯ ಪರಿಕಲ್ಪನೆ, ರಾಮಕೃಷ್ಣ ಪರಮಹಂಸ ಹಾಗೂ ವಿವೇಕಾನಂದರ ಆಧ್ಯಾತ್ಮ ಮತ್ತು ಸಮನ್ವಯತೆ, ಶ್ರೀ ಅರವಿಂದರ ಪೂರ್ಣದೃಷ್ಟಿಯು ಕುವೆಂಪು ಅವರ ಸಾಹಿತ್ಯದಲ್ಲಿ ಅಡಕವಾಗಿದೆ ಎಂದರು.

ಕುವೆಂಪು ಅವರ ರಕ್ತಾಕ್ಷಿ ನಾಟಕ ಷೇಕ್ಸ್ ಪೀಯರ್‌ ನ ಹ್ಯಾಮ್ಲೆಟ್ ನಾಟಕದ ಅನುವಾದವಲ್ಲ. ಪ್ರಸಂಗ ಯಥವತ್ತಾಗಿದ್ದರೂ ಸಹ ಪಾತ್ರಗಳಲ್ಲಿ ಬದಲಾವಣೆ ಮಾಡಿಕೊಂಡಿದ್ದಾರೆ. ಆದರೆ, ಕಥಾವಸ್ತುವಿನಲ್ಲಿ ಪೂರ್ಣ ಪ್ರಮಾಣದಲ್ಲಿ ಹ್ಯಾಮ್ಲೆಟ್ ನಾಟಕವನ್ನು ಅನುಸರಿಸಿಲ್ಲ. ರಕ್ತಾಕ್ಷಿ ಬೇರೆ ರೀತಿಯಲ್ಲಿ ರೂಪಾಂತರಗೊಳ್ಳುತ್ತಾ, ಇಲ್ಲಿಯ ಒಂದು ಸಂಸ್ಕೃತಿಗೆ ಧಕ್ಕೆ ಬರದ ರೀತಿಯಲ್ಲಿ ಇಲ್ಲಿಯ ಐತಿಹಾಸಿಕ ಸಂಗತಿಗಳನ್ನು ತೆಗೆದುಕೊಂಡು ತನ್ನದೆ ಆದ ದೃಷ್ಟಿಕೋನದಲ್ಲಿ ಬಹಳ ಮಹತ್ವಪೂರ್ಣವಾಗಿ ಕುವೆಂಪು ಅವರು ರಚಿಸಿದ್ದಾರೆ ಎಂದು ಅವರು ಹೇಳಿದರು.

ಯುವರಾಜ ಕಾಲೇಜಿನ ಪ್ರಾಂಶುಪಾಲ ಪ್ರೊ.ಎಸ್. ಮಹದೇವಮೂರ್ತಿ, ಆಡಳಿತಾಧಿಕಾರಿ ಪ್ರೊ.ಕೆ. ಅಜಯಕುಮಾರ್, ಪರೀಕ್ಷಾ ನಿಯಂತ್ರಾಣಾಧಿಕಾರಿ ಪ್ರೊ. ನಾಗೇಶ್ ಬಾಬು, ಐಕ್ಯೂಎಸಿ ಸಂಯೋಜಕ ಪ್ರೊ.ಬಿ.ಎಂ. ವೆಂಕಟೇಶ್, ಕನ್ನಡ ವಿಭಾಗದ ಮುಖ್ಯಸ್ಥ ಡಾ.ಸಿ.ಡಿ. ಪರಶುರಾಮ, ಪ್ರಾಧ್ಯಾಪಕರಾದ ಡಾ.ಜೆ. ರಾಜೇಶ್, ಡಾ.ಕೆ. ಯಶೋಧ ನಂಜಪ್ಪ, ಡಾ.ಎಂ.ಎಸ್. ವಸಂತಾ ಮೊದಲಾವರು ಇದ್ದರು. ಡಾ. ಕೋಕಿಲಾ ನಿರೂಪಿಸಿದರು.