ಜಿಲ್ಲೆಯ ಪಾಲಿಗೆ ಅಭಿವೃದ್ಧಿ ಶೂನ್ಯ: ಭರವಸೆಯೇ ಇಲ್ಲದ 2024

| Published : Dec 30 2024, 01:04 AM IST

ಸಾರಾಂಶ

ಉತ್ತರ ಕನ್ನಡದ ಪಾಲಿಗೆ 2024 ಅಭಿವೃದ್ಧಿ ಶೂನ್ಯ ಹಾಗೂ ಭರವಸೆಯೂ ಇಲ್ಲದ ವರ್ಷ. ಎಲ್ಲ ಕ್ಷೇತ್ರಗಳಲ್ಲೂ ಜಿಲ್ಲೆಯ ಪ್ರಗತಿ ಕುಂಠಿತಗೊಂಡ ವರ್ಷ.

ಕಾರವಾರ: ಉತ್ತರ ಕನ್ನಡದ ಪಾಲಿಗೆ 2024 ಅಭಿವೃದ್ಧಿ ಶೂನ್ಯ ಹಾಗೂ ಭರವಸೆಯೂ ಇಲ್ಲದ ವರ್ಷ. ಎಲ್ಲ ಕ್ಷೇತ್ರಗಳಲ್ಲೂ ಜಿಲ್ಲೆಯ ಪ್ರಗತಿ ಕುಂಠಿತಗೊಂಡ ವರ್ಷ.

ಹೆದ್ದಾರಿಗಳು, ಜಿಲ್ಲಾ ಮುಖ್ಯ ರಸ್ತೆಗಳು, ಗ್ರಾಮೀಣ ರಸ್ತೆಗಳು ಗಬ್ಬೆದ್ದುಹೋಗಿವೆ. ಹೊಂಡಮಯವಾಗಿ ವಾಹನಗಳ ಸಂಚಾರಕ್ಕೆ ದುಸ್ತರವಾಗಿದೆ. ಆದರೆ ಹೊಸದಾಗಿ ರಸ್ತೆ ನಿರ್ಮಾಣ ಇರಲಿ, ಬಿದ್ದ ಹೊಂಡಗಳೂ ಮಣ್ಣು, ಡಾಂಬರು ಕಾಣದ ವರ್ಷ ಇದಾಗಿದೆ.

ಯಾವುದೆ ಕ್ಷೇತ್ರದಲ್ಲೂ ಅಭಿವೃದ್ಧಿ ಕಾಣಿಸುತ್ತಿಲ್ಲ. 2025ರಲ್ಲೂ ಅಭಿವೃದ್ಧಿ ಕಾಣುವ ಭರವಸೆ ಇಲ್ಲ. ಇರುವ ಸೌಲಭ್ಯಗಳು, ಯೋಜನೆಗಳ ನಿರ್ವಹಣೆಯೂ ಸರಿಯಾಗಿ ಆಗುತ್ತಿಲ್ಲ.

ಜಿಲ್ಲೆಯಲ್ಲಿ ಪ್ರವಾಸಿ ತಾಣಗಳಿಗೆ ಬರ ಇಲ್ಲ. ಧಾರ್ಮಿಕ, ನೈಸರ್ಗಿಕ, ಮಾನವ ನಿರ್ಮಿತ ಹೀಗೆ ವಿವಿಧ ಪ್ರವಾಸಿ ತಾಣಗಳಿವೆ. ಆದರೆ ಈ ಪ್ರವಾಸಿ ತಾಣಗಳಲ್ಲಿ ಈ ಹಿಂದೆ ಇದ್ದ ಚಟುವಟಿಕೆಗೂ ಬೀಗ ಬಿತ್ತು. ಹೊಸದಾಗಿ ಯಾವುದೆ ಪ್ರವಾಸಿ ಆಕರ್ಷಣೆಯೂ ತಲೆ ಎತ್ತಲಿಲ್ಲ. ಪ್ರವಾಸಿ ತಾಣಗಳಲ್ಲಿ ಸುರಕ್ಷತಾ ಸಿಬ್ಬಂದಿಗೂ ಜೀವರಕ್ಷಕ ಉಪಕರಣಗಳಿಲ್ಲದೆ ಪ್ರವಾಸಿಗರು ಜೀವ ಕಳೆದುಕೊಂಡು ಜಿಲ್ಲೆಯ ಪ್ರವಾಸದ ಬಗ್ಗೆಯೇ ಹೊರ ಜಿಲ್ಲೆಯ ಜನತೆ ಭಯಪಡುವಂತಾಯಿತು.

ಜಿಲ್ಲೆಯ ಜನತೆಯ ಬಹುಕಾಲದ ಕನಸು. ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ. ಅಪಘಾತ, ಹೃದಯಾಘಾತ ಅಥವಾ ತುರ್ತು ಸಂದರ್ಭದಲ್ಲಿ ಚಿಕಿತ್ಸೆಗಾಗಿ ಜನತೆ ದೂರದ ಗೋವಾ, ಮಂಗಳೂರು, ಮಣಿಪಾಲ, ಬೆಳಗಾವಿ, ಹುಬ್ಬಳ್ಳಿ-ಧಾರವಾಡದ ಆಸ್ಪತ್ರೆಗಳಿಗೆ ರೋಗಿ, ಗಾಯಾಳುಗಳನ್ನು ಕರೆದೊಯ್ಯಬೇಕು. ಆದರೆ ಅಷ್ಟು ದೂರ ಕ್ರಮಿಸುವುದರೊಳಗೆ ರೋಗಿಗಳ ಪ್ರಾಣಪಕ್ಷಿ ಹಾರಿಹೋದ ಉದಾಹರಣೆಗಳು ಸಾಕಷ್ಟಿವೆ. 2024ರಲ್ಲಿ ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆ ಮಂಜೂರಾಗಲಿದೆ ಎಂಬ ನಿರೀಕ್ಷೆ ಇತ್ತು. ಆದರೆ ಆ ನಿಟ್ಟಿನಲ್ಲಿ ಯಾವುದೆ ಪ್ರಕ್ರಿಯೆ ನಡೆಯದೆ ಜನತೆ ನಿರಾಶರಾದರು. ಜತೆಗೆ ಸದ್ಯಕ್ಕೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ದೊರೆಯುವ ಭರವಸೆಯೂ ಕ್ಷೀಣವಾಗಿದೆ.

ಜಿಲ್ಲೆಯ ಯುವ ಜನತೆ ಉದ್ಯೋಗಕ್ಕಾಗಿ ಮುಂಬಯಿ, ಬೆಂಗಳೂರು, ಗೋವಾ ಮತ್ತಿತರ ಕಡೆ ಅಲೆದಾಡುತ್ತಿದ್ದಾರೆ. ಯುವ ಜನತೆಯ ಕೈಗಳಿಗೆ ಉದ್ಯೋಗ ನೀಡುವ ಕೈಗಾರಿಕೆಗಳು ಬರಲಿವೆ ಎನ್ನುವ ನಿರೀಕ್ಷೆ ಜನತೆಯದ್ದಾಗಿತ್ತು. ಆದರೆ ಅದೂ ಹುಸಿಯಾಗಿದೆ.

ಕೃಷಿ, ಮೀನುಗಾರಿಕೆ, ತೋಟಗಾರಿಕೆ, ಪ್ರವಾಸೋದ್ಯಮ, ಶಿಕ್ಷಣ, ಆರೋಗ್ಯ, ಪ್ರವಾಸೋದ್ಯಮ, ಕೈಗಾರಿಕೆ... ಹೀಗೆ ಯಾವುದೆ ಕ್ಷೇತ್ರದಲ್ಲಿ ಯಾವುದೆ ಯೋಜನೆ ಬಂದಿಲ್ಲ. ಬರುವ ಲಕ್ಷಣಗಳೂ ಗೋಚರವಾಗಿಲ್ಲ. ಜಿಲ್ಲೆಯ ಪ್ರಗತಿ ಬಗ್ಗೆ ಹೇಳಲು ಏನೂ ಉಳಿದಿಲ್ಲ. ಹೇಗೆ ನೋಡಿದರೂ ನಿರಾಸೆ ಎನ್ನುವಂತಾಗಿದೆ.

ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಜನತೆ ಭಾರಿ ನಿರೀಕ್ಷೆ ಇಟ್ಟುಕೊಂಡಿದ್ದರು. ಜಿಲ್ಲೆಯ ಜ್ವಲಂತ ಸಮಸ್ಯೆಗಳಿಗೆ ಪರಿಹಾರ ದೊರೆತು ಜಿಲ್ಲೆಯ ಅಭಿವೃದ್ಧಿಗೆ ವೇಗ ದೊರೆಯಲಿದೆ ಎಂಬ ಮಾತುಗಳು ಕೇಳಿಬಂದಿದ್ದವು. ಆದರೆ ಅದಾವ ಮಾತುಗಳೂ ಈಗ ಕೇಳಿಬರುತ್ತಿಲ್ಲ. ಅಭಿವೃದ್ಧಿ ಎನ್ನುವ ಪದ ಮರೆತುಹೋದಂತೆ ಭಾಸವಾಗುತ್ತಿದೆ.