ಕಾಂಗ್ರೆಸ್ ಸರ್ಕಾರದಲ್ಲಿ ಅಭಿವೃದ್ಧಿ ಶೂನ್ಯ

| Published : Nov 25 2025, 01:15 AM IST

ಸಾರಾಂಶ

ಕಾಂಗ್ರೆಸ್ ಸರ್ಕಾರದಲ್ಲಿ ಅಭಿವೃದ್ಧಿ ಶೂನ್ಯ ಎಂದು ವಿಧಾನ ಪರಿಷತ್‌ ಸದಸ್ಯ ಹಾಗೂ ಮಧುಗಿರಿ ಜಿಲ್ಲಾ ಬಿಜೆಪಿ ಅಧ್ಯಕ್ಷ ಚಿದಾನಂದ ಎಂ.ಗೌಡ ಆರೋಪಿಸಿದರು.

ಕನ್ನಡಪ್ರಭ ವಾರ್ತೆ ಮಧುಗಿರಿ

ಕಾಂಗ್ರೆಸ್ ಸರ್ಕಾರದಲ್ಲಿ ಅಭಿವೃದ್ಧಿ ಶೂನ್ಯ ಎಂದು ವಿಧಾನ ಪರಿಷತ್‌ ಸದಸ್ಯ ಹಾಗೂ ಮಧುಗಿರಿ ಜಿಲ್ಲಾ ಬಿಜೆಪಿ ಅಧ್ಯಕ್ಷ ಚಿದಾನಂದ ಎಂ.ಗೌಡ ಆರೋಪಿಸಿದರು.

ಪಟ್ಟಣದ ಬಿಜೆಪಿ ಕಚೇರಿಯಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಕುರ್ಚಿ ಕದನ ಜೋರಾಗಿ ನಡೆಯುತ್ತಿದ್ದು, ರೈತ ವಿರೋಧಿ ನೀತಿ ಅನುಸರಿಸುವ ನಿಟ್ಟಿನಲ್ಲಿ ಅಧಿಕಾರಕ್ಕಾಗಿ ಅನ್ನದಾತ ಮತ್ತು ಅಭಿವೃದ್ಧಿಯನ್ನು ಮರೆತಿದೆ. ಈ ಹಿಂದೆ ನಮ್ಮ ಬಿಜೆಪಿ ಸರ್ಕಾರವಿದ್ದಾಗ ರೈತರಿಗೆ ಉಚಿತವಾಗಿ ಟ್ರಾನ್ಸ್ ಫಾರಂಗಳನ್ನು ನೀಡುತ್ತಿದ್ದೆವು. ಆದರೆ ಈಗ ಒಂದು ಟ್ರಾನ್ಸ ಫಾರಂಗೆ 3 ಲಕ್ಷ ಹಣ ಕಟ್ಟಬೇಕಿದೆ. ರೈತಪರ ಎಂದು ಹೇಳಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರ್ಕಾರ 3 ಗಂಟೆ ನಿರಂತರ ವಿದ್ಯುತ್‌ ನೀಡಲು ಸಾಧ್ಯವಾಗುತ್ತಿಲ್ಲ. 3 ಸಲ ಹಾಲಿನ ದರ ಹೆಚ್ಚಿಸಿ ಅದನ್ನು ರೈತರಿಗೆ ಕೊಡದೆ ವಂಚಿಸುತ್ತಿದೆ ಎಂದು ದೂರಿದರು.

ಕೇಂದ್ರ ಸರ್ಕಾರ ಪ್ರಧಾನ ಮಂತ್ರಿ ಕಿಸಾನ್‌ ಸಮ್ಮಾನ್‌ ಯೋಜನೆಯಡಿ ರಾಜ್ಯದ 51 ಲಕ್ಷ ರೈತರಿಗೆ 6 ಸಾವಿರ ಹಣ ಅವರ ಖಾತೆಗೆ ನೇರವಾಗಿ ನೀಡುತ್ತಿದೆ .ಕಿಸಾನ್‌ ಕ್ರೆಡಿಟ್ ಕಾರ್ಡ್ 3 ರಿಂದ 5ಲಕ್ಷಕ್ಕೆ ಏರಿಸಲಾಗಿದೆ. ರೈತರ ಆದಾಯ ದ್ವಿಗುಣಗೊಳಿಸಲು ಬಂಜರು ಭೂಮಿಯಲ್ಲಿ ಸೌರ ವಿದ್ಯುತ್ ಘಟಕ ಸ್ಥಾಪಿಸಲು ಉತ್ತೇಜನ ನೀಡುತ್ತಿದೆ ಎಂದರು.

ರೈತ ವಿರೋಧಿ ನೀತಿ ಕಾಂಗ್ರೆಸ್‌ ಸರ್ಕಾರದ ವೈಫಲ್ಯಗಳನ್ನು ಖಂಡಿಸಿ ಮಧುಗಿರಿ ಬಿಜೆಪಿ ಸಂಘಟನಾತ್ಮಕ ಜಿಲ್ಲೆಯಿಂದ 27, 28ರಂದು ಎಲ್ಲ ಮಂಡಲಗಳ ಹಾಗೂ ಶಿರಾ, ಮಧುಗಿರಿ, ಪಾವಗಡ ಹಾಗೂ ಕೊರಟಗೆರೆ ತಾಲೂಕು ಮತ್ತು ಜಿಲ್ಲಾ ಕೇಂದ್ರಗಳಲ್ಲಿ ರೈತ ಮೊರ್ಚಾ ವತಿಯಿಂದ ಉಗ್ರ ಪ್ರತಿಭಟನೆ ಹಮ್ಮಿಕೊಳ್ಳುವುದಾಗಿ ತಿಳಿಸಿದ ಅವರು, ಬೆಳಗಾವಿ ಚಳಿಗಾಲದ ಅಧಿವೇಶನದಲ್ಲಿ ಲಕ್ಷಾಂತರ ರೈತರೊಂದಿಗೆ ಬೆಳಗಾವಿಯಲ್ಲಿ ಸರ್ಕಾರದ ಕಾರ್ಯ ವೈಖರಿ ವಿರುದ್ಧ ಪ್ರತಿಭಟಿಸಲಾಗುವುದು ಎಂದರು.

ಗೋಷ್ಠಿಯಲ್ಲಿ ತಾಲೂಕು ಬಿಜೆಪಿ ಅಧ್ಯಕ್ಷ ಹನುಮಂತರೆಡ್ಡಿ, ಜಿಲ್ಲಾ ಬಿಜೆಪಿ ಉಪಾಧ್ಯ, ಕೆ.ಎಸ್‌.ಪಾಂಡುರಂಗಾರೆಡ್ಡಿ, ಮಹಿಳಾ ಮೋರ್ಚಾ ಅಧ್ಯಕ್ಷೆ ಉಮಾ, ರಮೇಶ್, ಮೂರ್ತಿ, ಪವನ್ ಇತರರಿದ್ದರು.