ಜಿಲ್ಲಾಧಿಕಾರಿ ಅವರನ್ನು ಕೇಳಿದರೆ ಎಲ್ಲದಕ್ಕೂ ಸರ್ಕಾರಕ್ಕೆ ಪತ್ರ ಬರೆದಿದ್ದೇವೆ ಎನ್ನುತ್ತಿದ್ದಾರೆ. ಜಿಲ್ಲಾಡಳಿತಕ್ಕೂ ಸಚಿವರಿಗೂ ತಾಳಮೇಳವೇ ಇಲ್ಲ, ಇನ್ನು ಅಭಿವೃದ್ಧಿ ಹೇಗೆ ಸಾಧ್ಯ. ಅಭಿವೃದ್ಧಿಯ ಇಲ್ಲದಿದ್ದಾಗ ಅಭಿವೃದ್ಧಿ ಪರಿಶೀಲನಾ ಸಭೆ ಯಾಕೆ ನಡೆಸಬೇಕಾಗಿತ್ತು ಎಂದವರು ಪ್ರಶ್ನಿಸಿದರು.
ಕನ್ನಡಪ್ರಭ ವಾರ್ತೆ ಉಡುಪಿ ಜಿಲ್ಲೆಯ ಉಸ್ತುವಾರಿ ಸಚಿವರು ಶನಿವಾರ ಶೂನ್ಯ ಅಭಿವೃದ್ಧಿಯ ಪ್ರಗತಿಯ ಪರಿಶೀಲನೆ ನಡೆಸಿದ್ದಾರೆ ಎಂದು ಜಿಲ್ಲೆಯ 5 ಬಿಜೆಪಿ ಶಾಸಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಒಂದೂವರೆ ವರ್ಷ ಕಳೆದರೂ ಜಿಲ್ಲೆಯ ಅಭಿವೃದ್ಧಿಗೆ ಒಂದು ರುಪಾಯಿ ಅನುದಾನ ಬಿಡುಗಡೆಯಾಗಿಲ್ಲ. ಸ್ವತಃ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಳ್ಕಾರ್ ಶನಿವಾರ ನಡೆಸಿದ ಪ್ರಗತಿ ಪರಿಶೀಲನಾ ಸಭೆಯಲ್ಲಿ ವಿವಿಧ ಇಲಾಖೆಗಳ ಅಭಿವೃದ್ಧಿ ಶೂನ್ಯ ಎಂದು ತೋರಿಸಲಾಗಿದೆ. ಜಿಲ್ಲಾ ರಸ್ತೆಗಳ ಅಭಿವೃದ್ಧಿಗೆ ಅನುದಾನ ಶೂನ್ಯ, 50 - 54 ಯೋಜನೆಯಡಿ ಅನುದಾನ ಶೂನ್ಯ, ಜಿಪಂಗೆ ಶಾಸನಬದ್ಧ ಅನುದಾನ ಶೂನ್ಯ, ಸಂಪರ್ಕ ರಸ್ತೆಗಳಿಗೆ ಅನುದಾನ ಶೂನ್ಯ, ಗ್ರಾಮಾಣಭಿವೃದ್ಧಿ ಇಲಾಖೆಗೆ ಅನುದಾನ ಶೂನ್ಯ.. ಎಂದು ಕಾರ್ಕಳ ಶಾಸಕ ಸುನಿಲ್ ಕುಮಾರ್ ದಾಖಲೆಗಳನ್ನು ಪ್ರದರ್ಶಿಸಿದರು.ಜಿಲ್ಲೆಯಲ್ಲಿ ಮರಳಿನ ಮತ್ತು ಕೆಂಪುಕಲ್ಲಿನ ಕೊರತೆ ತೀವ್ರವಾಗಿದೆ, ಕಡಲು ಕೊರೆತಕ್ಕೆ ಪರಿಹಾರವಿಲ್ಲ, 9 - 11 ಸಮಸ್ಯೆ ತೀವ್ರವಾಗಿದೆ, ಗ್ರಾಪಂಗಳಲ್ಲಿ ಲೈಸೆನ್ಸ್ ಸಿಗುತ್ತಿಲ್ಲ. ಶಾಸಕರ ಯಾವುದೇ ಪ್ರಶ್ನೆಗೆ ಉತ್ತರ ನೀಡುವುದಕ್ಕೆ ಸಚಿವರಿಗಾಗಿಲ್ಲ. ಜಿಲ್ಲೆಯ ಸಮಸ್ಯೆಗಳ ಬಗ್ಗೆ ಅವರಿಗೆ ಸರಿಯಾದ ಮಾಹಿತಿ ಇಲ್ಲ. ಅವರದ್ದೇ ಇಲಾಖೆಯ ಭಾಗ್ಯಲಕ್ಷ್ಮೀ ಯೋಜನೆಯ ಬಗ್ಗೆಯೂ ಅವರಲ್ಲಿ ಉತ್ತರವಿರಲಿಲ್ಲ. ಅವರೇ ಅಸಹಾಯಕರಾಗಿ ತಲೆತಗ್ಗಿಸಬೇಕಾಯಿತು ಎಂದು ಸುನಿಲ್ ಕುಮಾರ್ ಹೇಳಿದರು. ಜಿಲ್ಲಾಧಿಕಾರಿ ಅವರನ್ನು ಕೇಳಿದರೆ ಎಲ್ಲದಕ್ಕೂ ಸರ್ಕಾರಕ್ಕೆ ಪತ್ರ ಬರೆದಿದ್ದೇವೆ ಎನ್ನುತ್ತಿದ್ದಾರೆ. ಜಿಲ್ಲಾಡಳಿತಕ್ಕೂ ಸಚಿವರಿಗೂ ತಾಳಮೇಳವೇ ಇಲ್ಲ, ಇನ್ನು ಅಭಿವೃದ್ಧಿ ಹೇಗೆ ಸಾಧ್ಯ. ಅಭಿವೃದ್ಧಿಯ ಇಲ್ಲದಿದ್ದಾಗ ಅಭಿವೃದ್ಧಿ ಪರಿಶೀಲನಾ ಸಭೆ ಯಾಕೆ ನಡೆಸಬೇಕಾಗಿತ್ತು ಎಂದವರು ಪ್ರಶ್ನಿಸಿದರು.
ಸಚಿವೆ ಜಿಲ್ಲೆಗೆ ಬರುವುದು ಕಾಂಗ್ರೆಸ್ ಪಕ್ಷದ ಪ್ರಗತಿ ಪರಿಶೀಲನೆಗೆ ಹೊರತು ಜಿಲ್ಲೆಯ ಪ್ರಗತಿ ಪರಿಶೀಲನೆಗೆ ಅಲ್ಲ ಎಂದು ಸುನಿಲ್ ಕುಮಾರ್ ಆರೋಪಿಸಿದರು. ನಮ್ಮನ್ನು ಒಂದು ದಿನವೂ ಕರೆದು ಜಿಲ್ಲೆಯ ಸಮಸ್ಯೆಗಳ ಬಗ್ಗೆ ಸಚಿವೆ ಕೇಳಿಲ್ಲ, ಸಭೆಯಲ್ಲಿ ಗದ್ದಲ ಬೇಡ ಎಂದು ನಾವು 5 ಮಂದಿ ಶಾಸಕರು 3 ಗಂಟೆಗಳ ಕಾಲ ಸಭೆಯಲ್ಲಿ ತಾಳ್ಮೆಯಿಂದ ಕುಳಿತಿದ್ದೆವು. ಎಂದರು. ಸುದ್ದಿಗೋಷ್ಠಿಯಲ್ಲಿ ಉಡುಪಿ ಶಾಸಕ ಯಶ್‌ಪಾಲ್ ಸುವರ್ಣ, ಕುಂದಾಪುರ ಶಾಸಕ ಕಿರಣ್ ಕೊಡ್ಗಿ, ಬೈಂದೂರು ಶಾಸಕ ಗುರುರಾಜ್ ಗಂಟಿಹೊಳೆ, ಕಾಪು ಶಾಸಕ ಸುರೇಶ್ ಶೆಟ್ಟಿಇದ್ದರು.ಸಮಿತಿಗೆ ಗೊತ್ತಿಲ್ಲದೆ ಅರ್ಜಿ ತಿರಸ್ಕಾರ!
ಜಿಲ್ಲೆಯಲ್ಲಿ ಅಕ್ರಮ ಸಕ್ರಮ ಸಮಿತಿಯ ಅಧ್ಯಕ್ಷರಾಗಿರುವ ಶಾಸಕರ ಗಮನಕ್ಕೆ ತಾರದೆ ಜಿಲ್ಲಾಧಿಕಾರಿ ಅವರು ಬಡವರ 6011 ಅಕ್ರಮ ಸಕ್ರಮ ಅರ್ಜಿಗಳನ್ನು ತಿರಸ್ಕರಿಸಿದ್ದಾರೆ. 16,471 ಅರ್ಜಿಗಳನ್ನು ತಿರಸ್ಕರಿಸುವಂತೆ ತಹಸೀಲ್ದಾರ್ ಅವರಿಂದ ಪ್ರಸ್ತಾಪಗಳನ್ನು ಪಡೆದಿದ್ದಾರೆ. ಸಮಿತಿಯ ಗಮನಕ್ಕೆ ತಾರದೆ ಈ ರೀತಿ ಅರ್ಜಿಗಳನ್ನು ತಿರಸ್ಕರಿಸುವ ಅಧಿಕಾರ ಜಿಲ್ಲಾಧಿಕಾರಿಗೆ ಯಾರು ಕೊಟ್ಟದ್ದು ಎಂದು ಬಿಜೆಪಿಯ ಐವರೂ ಶಾಸಕರು ಆಕ್ರೋಶ ವ್ಯಕ್ತಪಡಿಸಿದರು.ಬೆಳಗಾವಿ ಅಭಿವೇಶನದಲ್ಲಿ ಪ್ರತಿಭಟನೆ!
ಕರಾವಳಿಯ ಜಿಲ್ಲೆಗಳಲ್ಲಿ ಅಕ್ರಮ ಸಕ್ರಮ ಅರ್ಜಿ ತಿರಸ್ಕಾರ, 9 - 11 ಸಮಸ್ಯೆ, ಕೆಂಪುಕಲ್ಲು- ಮರಳಿನ ಕೊರತೆ, ವಿದ್ಯುತ್ ಬಿಲ್ ಪಾವತಿಗೆ ಹಣದ ಕೊರತೆ, ಕಡಲು ಕೊರತೆ, ಕಸ್ತೂರಿ ರಂಗನ್ ವರದಿಗೆ ವಿರೋಧ ಇತ್ಯಾದಿ ವಿಷಯಗಳನ್ನು ಮುಂದಿಟ್ಟುಕೊಂಡು ಬೆಳಗಾವಿ ಅಧಿವೇಶನದಲ್ಲಿ ಕಿವುಡು ಮತ್ತು ಮೂಕ ರಾಜ್ಯ ಸರ್ಕಾರದ ವಿರುದ್ಧ ಕರಾವಳಿಯ ಮೂರು ಜಿಲ್ಲೆಯ ಶಾಸಕರು ಪ್ರತಿಭಟನೆ ನಡೆಸುತ್ತೇವೆ ಎಂದು ಸುನಿಲ್ ಕುಮಾರ್ ಹೇಳಿದರು.