ತಾಲ್ಲೂಕಿನ ಆಯ್ದ 60 ಗ್ರಾಮಗಳಿಗೆ ನೀರು ಪೂರೈಕೆ ಮಾಡುವ ʼಬಹು ಗ್ರಾಮಗಳ ಕುಡಿಯುವ ನೀರು ಯೋಜನೆʼಯಡಿ ಕುರುಬಖೇಳಗಿ ಗ್ರಾಪಂಯ ಕಪಲಾಪೂರ ಗ್ರಾಮದ ಹೊರ ವಲಯದಲ್ಲಿ ನೂತನವಾಗಿ ನಿರ್ಮಾಣಗೊಂಡ ಓವರ್ ಹೆಡ್ ಟ್ಯಾಂಕ್ ಅನ್ನು ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (ಸಿಇಒ) ಗಿಟ್ಟೆ ಮಾಧವ್ ವಿಠ್ಠಲರಾವ್ ಪರಿಶೀಲಿಸಿದರು.

ಕನ್ನಡಪ್ರಭ ವಾರ್ತೆ ಭಾಲ್ಕಿ

ತಾಲ್ಲೂಕಿನ ಆಯ್ದ 60 ಗ್ರಾಮಗಳಿಗೆ ನೀರು ಪೂರೈಕೆ ಮಾಡುವ ʼಬಹು ಗ್ರಾಮಗಳ ಕುಡಿಯುವ ನೀರು ಯೋಜನೆʼಯಡಿ ಕುರುಬಖೇಳಗಿ ಗ್ರಾಪಂಯ ಕಪಲಾಪೂರ ಗ್ರಾಮದ ಹೊರ ವಲಯದಲ್ಲಿ ನೂತನವಾಗಿ ನಿರ್ಮಾಣಗೊಂಡ ಓವರ್ ಹೆಡ್ ಟ್ಯಾಂಕ್ ಅನ್ನು ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (ಸಿಇಒ) ಗಿಟ್ಟೆ ಮಾಧವ್ ವಿಠ್ಠಲರಾವ್ ಪರಿಶೀಲಿಸಿದರು.

ಬೆಳಗ್ಗೆಯ ನಡೆ-ಹಳ್ಳಿ ಕಡೆ ಅಭಿಯಾನದ ಅಂಗವಾಗಿ ಶುಕ್ರವಾರ ತಾಲ್ಲೂಕಿನ ಖಟಕಚಿಂಚೋಳಿ, ಏಣಕೂರ, ಕುರುಬಖೇಳಗಿ, ತಳವಾಡ (ಕೆ), ಧನ್ನೂರ, ಹಲಬರ್ಗಾ ಹಾಗೂ ಮಳಚಾಪೂರ ಈ ಗ್ರಾಪಂ/ಗ್ರಾಮಗಳಲ್ಲಿ ಗ್ರಾಮ ಸಂಚಾರ ಕೈಗೊಂಡ ಸಿಇಒ ಅವರು, ಗ್ರಾಮದ ಪ್ರತಿಯೊಂದು ಓಣಿಯಲ್ಲಿ ಸಂಚರಿಸಿ ಕುಡಿಯುವ ನೀರು ಹಾಗೂ ದಿನನಿತ್ಯ ಗೃಹ ಬಳಕೆಗಾಗಿ ಬಳಸುವ ನೀರಿನ ಸಮಸ್ಯೆಯನ್ನು ಪರಿಶೀಲಿಸಿದರು.

ಖಟಕಚಿಂಚೋಳಿ ಗ್ರಾಮದಲ್ಲಿ ಜೆಜೆಎಂ ಕಾಮಗಾರಿಯನ್ನು ಪರಿಶೀಲಿಸಿದ ಅವರು ಗ್ರಾಮದಲ್ಲಿ ಪೋಲಾಗುತ್ತಿರುವ ನೀರಿನ ತಡೆಗಾಗಿ ಸೂಚಿಸಿದರು. ಗ್ರಾಮದಲ್ಲಿನ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿ ಔಷಧಿ ದಾಸ್ತಾನು ಪರಿಶೀಲಿಸಿದರು. ಬಾಣಂತಿಯರ ಆರೋಗ್ಯ, ಯೋಗಕ್ಷೇಮ ವಿಚಾರಿಸಿದರು.

2018-19ನೇ ಸಾಲಿನಲ್ಲಿ ಕೆಕೆಆರ್ಡಿಬಿ ಅನುದಾನದಲ್ಲಿ ನಿರ್ಮಾಣಗೊಂಡ ನೂತನ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಹಳೆಯ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಸ್ಥಳಾಂತರಿಸುವಂತೆ ಫೋನ್ ಕರೆ ಮೂಲಕ ಜಿಲ್ಲಾ ಆರೋಗ್ಯ ಅಧಿಕಾರಿಗೆ ಸಿಇಒ ಸೂಚಿಸಿದರು. ಖಟಕಚಿಂಚೋಳಿ ಹಾಗೂ ಏಣಕೂರ ಗ್ರಾಮದಲ್ಲಿ ಬಸ್ ನಿಲ್ದಾಣ ನಿರ್ಮಿಸಲಾಗುವುದು ಎಂದರು.

ಮಳಚಾಪೂರ ಗ್ರಾ.ಪಂ. ಖಾನಾಪುರ ಗ್ರಾಮದಲ್ಲಿ ವಿಬಿ ಜಿ ರಾಮ್ ಜಿ ಯೋಜನೆಯಡಿ ನಡೆಯುತ್ತಿದ್ದ ಸಿಸಿಟಿ ಸಮುದಾಯ ಕಾಮಗಾರಿ ಸ್ಥಳಕ್ಕೆ ಭೇಟಿ ನಿಡಿ ಪರಿಶೀಲಿಸಿದರು. ಕೂಲಿಕಾರರೊಂದಿಗೆ ಸಂವಾದ ನಡೆಸಿದರು. ಧನ್ನೂರ ಗ್ರಾಪಂಯ ಸೇವಾನಗರ ತಾಂಡಾದ ಶಾಲೆಯಲ್ಲಿನ ಮಕ್ಕಳ ವಿದ್ಯಾಭ್ಯಾಸವನ್ನು ಗಮನಿಸಿದರು. ಹಲಬರ್ಗಾದಲ್ಲಿರುವ ಬಿಸಿಎಂ ಬಾಲಕರ ವಸತಿ ನಿಲಯಕ್ಕೆ ಭೇಟಿ ನೀಡಿ ವಿದ್ಯಾರ್ಥಿಗಳಿಗೆ ನೀಡುವ ಸೌಲಭ್ಯಗಳ ಕುರಿತು ವಿಚಾರಿಸಿದರು.

ತಾಪಂ ಇಒ ಬೀರೇಂದ್ರ ಸಿಂಗ್ ಠಾಕೂರ್, ಗ್ರಾಮೀಣ ಕುಡಿಯುವ ನೀರು ಇಲಾಖೆ ಅಭಿಯಂತರ ದತ್ತಾತ್ರೆಯ ಮೇಧಾ, ಎಇಇ ಮಾಣಿಕರಾವ ಕೆರೂರ, ಜೆಇ ಖಾಜಾ ಆಯಾಜುದ್ದಿನ, ಏಣಕೂರ ಗ್ರಾಪಂ ಪಿಡಿಒ ಆನಂದ್ ಬೇಲೂರೆ, ಕುರುಬಖೇಳಗಿ ಗ್ರಾಪಂ ಪಿಡಿಒ ಶ್ರೀಕಾಂತ್, ಮಳಚಾಪೂರ ಗ್ರಾಪಂ ಪಿಡಿಒ ವಿಶ್ವಶಾಲಾ, ತಾಂತ್ರಿಕ ಸಂಯೋಜಕ ಅಮರನಾಥ ಪಾಟೀಲ್, ಐಇಸಿ ಸಂಯೋಜಕ ಗಣಪತಿ ಹರಕೂಡೆ, ಟಿಎಇ ಮುಕೇಶ ಪಾಟೀಲ್, ರವಿ ಹಾಗೂ ಇತರರು ಇದ್ದರು.