ಸಾರಾಂಶ
ಬೆಳಗಾವಿ ಜಿಲ್ಲಾ ಪಂಚಾಯಿತಿ ಮುಖ್ಯ ಲೆಕ್ಕಾಧಿಕಾರಿ ಪರಶುರಾಮ ದುಡುಗುಂಟಿ ನೇತೃತ್ವದ ತಂಡ ನಗರದ ಜಂಟಿ ಕೃಷಿ ನಿರ್ದೇಶಕರ ಕಚೇರಿಗೆ ಬುಧವಾರ ದಿಢೀರ್ ಭೇಟಿ ನೀಡಿ ಕಡತಗಳ ಪರಿಶೀಲನೆ ನಡೆಸಿತು.
ಕನ್ನಡಪ್ರಭ ವಾರ್ತೆ ಬೆಳಗಾವಿ
ಜಿಲ್ಲಾ ಪಂಚಾಯಿತಿ ಮುಖ್ಯ ಲೆಕ್ಕಾಧಿಕಾರಿ ಪರಶುರಾಮ ದುಡುಗುಂಟಿ ನೇತೃತ್ವದ ತಂಡ ನಗರದ ಜಂಟಿ ಕೃಷಿ ನಿರ್ದೇಶಕರ ಕಚೇರಿಗೆ ಬುಧವಾರ ದಿಢೀರ್ ಭೇಟಿ ನೀಡಿ ಕಡತಗಳ ಪರಿಶೀಲನೆ ನಡೆಸಿತು.ಜಂಟಿ ಕೃಷಿ ನಿರ್ದೇಶಕರ ಕಚೇರಿಯಲ್ಲಿ ಕೆಲ ಅನಧಿಕೃತ ಸಿಬ್ಬಂದಿ ಇರುವುದು. ವಿವಿಧ ಯೋಜನೆಗಳ ಅನುಷ್ಠಾನದಲ್ಲಿ ಏಜೆಂಟರ ಹಾವಳಿ, ಲೆಕ್ಕಪತ್ರ ಕಡತಗಳು ಸೇರಿ ಯೋಜನೆಗಳ ದಾಖಲೆಗಳನ್ನು ಸಮರ್ಪಕವಾಗಿ ನಿರ್ವಹಿಸದಿರುವುದನ್ನು ಕಂಡು ಕಿಡಿಕಾರಿದ ಜಿಪಂ ಸಿಎಒ ದುಡುಗುಂಡಿ ಅವರು, ಅಲ್ಲಿದ್ದ ಕೃಷಿ ಇಲಾಖೆ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
ಸಮಯ ಪರಿಪಾಲನೆ ಮಾಡದ ಮತ್ತು ಅನಧಿಕೃತವಾಗಿ ಗೈರು ಹಾಜರಾದ ಕೃಷಿ ಇಲಾಖೆ ಸಿಬ್ಬಂದಿ ವಿರುದ್ಧ ಸಿಡಿಮಿಡಿಗೊಂಡ ದುಡುಗುಂಟಿ, ಅಂಥ ಸಿಬ್ಬಂದಿ ಮೇಲೆ ಶಿಸ್ತುಕ್ರಮ ಕೈಗೊಳ್ಳುವಂತೆ ಸೂಚಿಸಿದರು.ದುಡುಗುಂಟಿ ಅವರ ಅನಿರೀಕ್ಷಿತ ಭೇಟಿ ವೇಳೆ ಕಚೇರಿ ಒಳ ಮತ್ತು ಹೊರಾಂಗಣದಲ್ಲಿ ಅನೈರ್ಮಲ್ಯ ಮತ್ತು ಅಸ್ವಚ್ಛತೆ, ಕರ್ತವ್ಯದಲ್ಲಿ ಶಿಸ್ತು ಪಾಲನೆ ಇಲ್ಲದಿರುವುದು ಸೇರಿದಂತೆ ಕಚೇರಿಯ ಅವ್ಯವಸ್ಥೆ ಕಂಡು ಕೃಷಿ ಇಲಾಖೆ ಅಧಿಕಾರಿಗಳನ್ನು ಹಿಗ್ಗಾಮುಗ್ಗಾ ಜಾಡಿಸಿದರು. ಜಿಪಂ ಸಿಬ್ಬಂದಿ ಶಶಿಕಾಂತ ನೇಸರಗಿ, ಸುವರ್ಣಾ ಮಹೇಂದ್ರಕರ್ ಇತರರು ಇದ್ದರು.