ನಮ್ಮ ತಂದೆ-ತಾಯಿ ಓದಿಲ್ಲ. ಆದರೆ ನನ್ನನ್ನು ಓದಿಸಿದರು. ಅವರ ಪರಿಶ್ರಮದಿಂದಲೇ ನಾನು ಇಂದು ಅಧಿಕಾರಿಯಾಗಿ ನಿಮ್ಮ ಮುಂದೆ ನಿಂತಿದ್ದೇನೆ. ನೀವು ಓದಿಲ್ಲದಿದ್ದರೂ ನಿಮ್ಮ ಮಕ್ಕಳನ್ನು ಚೆನ್ನಾಗಿ ಓದಿಸಿ, ಶಾಲೆಗೆ ಕಳುಹಿಸಿ, ಪ್ರಜ್ಞಾವಂತರನ್ನಾಗಿ ಮಾಡಿ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ದಲ್ಜಿತ್ ಕುಮಾರ ಕರೆ ನೀಡಿದರು.

ಹಾವೇರಿ: ತಾಲೂಕಿನ ಕನವಳ್ಳಿ ಗ್ರಾಮದಲ್ಲಿ ಮಂಗಳವಾರ ವಿಬಿಜಿ ರಾಮ್ ಜಿ ಯೋಜನೆಯಡಿ ಪ್ರಗತಿಯಲ್ಲಿರುವ ನೀರುಗಾಲುವೆ ಅಭಿವೃದ್ಧಿ ಕಾಮಗಾರಿ ಸ್ಥಳದಲ್ಲಿ ಆಯೋಜಿಸಿದ್ದ ಶ್ರಮದಾನ ಪಾಲ್ಗೊಂಡಿದ್ದ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ದಲ್ಜಿತ್ ಕುಮಾರ ಅವರು ಕಾರ್ಮಿಕರೊಂದಿಗೆ ಗುದ್ದಲಿ, ಸಲಿಕೆ ಹಿಡಿದು ಸ್ವತಃ ಶ್ರಮದಾನ ಮಾಡಿದರು.

ಅಧಿಕಾರಿಗಳು ಮತ್ತು ಕಾರ್ಮಿಕರು ಒಟ್ಟಾಗಿ ಕೆಲಸ ಮಾಡಿದಾಗ ಗ್ರಾಮೀಣ ಅಭಿವೃದ್ಧಿಗೆ ಮತ್ತಷ್ಟು ವೇಗ ದೊರೆಯಲಿದೆ ಎಂಬ ಸಂದೇಶ ಸಾರಿದರು.ಶ್ರಮದಾನದಲ್ಲಿ ಪಾಲ್ಗೊಂಡ ಅಧಿಕಾರಿಗಳನ್ನು ಸನ್ಮಾನಿಸಲು ಶ್ಯಾಲು, ಮಾಲೆ ತರಿಸಲಾಗಿತ್ತು. ಆದರೆ ಸಿಇಒ ಅವರು ಅಧಿಕಾರಿಗಳ ಬದಲಾಗಿ ಶ್ರಮಿಸುತ್ತಿದ್ದ ಹಿರಿಯರು ಹಾಗೂ ಮಹಿಳಾ ಕಾರ್ಮಿಕರನ್ನು ಸನ್ಮಾನಿಸುವಂತೆ ಸೂಚಿಸಿದರು. ಕಾರ್ಮಿಕರ ಶ್ರಮವನ್ನು ಗೌರವಿಸಿದ ಅವರ ನಡೆಗೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದರು.

ಬಳಕ ಮಾತನಾಡಿದ ಅವರು, ನಮ್ಮ ತಂದೆ-ತಾಯಿ ಓದಿಲ್ಲ. ಆದರೆ ನನ್ನನ್ನು ಓದಿಸಿದರು. ಅವರ ಪರಿಶ್ರಮದಿಂದಲೇ ನಾನು ಇಂದು ಅಧಿಕಾರಿಯಾಗಿ ನಿಮ್ಮ ಮುಂದೆ ನಿಂತಿದ್ದೇನೆ. ನೀವು ಓದಿಲ್ಲದಿದ್ದರೂ ನಿಮ್ಮ ಮಕ್ಕಳನ್ನು ಚೆನ್ನಾಗಿ ಓದಿಸಿ, ಶಾಲೆಗೆ ಕಳುಹಿಸಿ, ಪ್ರಜ್ಞಾವಂತರನ್ನಾಗಿ ಮಾಡಿ ಎಂದು ಮನವಿ ಮಾಡಿದರು.

ವಿಬಿಜಿರಾಮ್ ಜಿ ಯೋಜನೆಯು ಗ್ರಾಮೀಣ ಕುಟುಂಬಗಳಿಗೆ ಉದ್ಯೋಗದ ಭದ್ರತೆ ಒದಗಿಸುವುದರ ಜತೆಗೆ ಗ್ರಾಮಗಳ ಮೂಲಸೌಕರ್ಯ ಹಾಗೂ ನೈಸರ್ಗಿಕ ಸಂಪನ್ಮೂಲಗಳ ಅಭಿವೃದ್ಧಿಗೆ ಸಹಕಾರಿಯಾಗಲಿದೆ. ಕೆರೆ, ನೀರುಗಾಲುವೆ, ಜಲಸಂರಕ್ಷಣೆ ಸೇರಿದಂತೆ ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿಗೆ ಯೋಜನೆಯಡಿ ಆದ್ಯತೆ ನೀಡಲಾಗುತ್ತಿದೆ. ಗ್ರಾಮಸ್ಥರು ಕಾಮಗಾರಿಗಳ ಸಂರಕ್ಷಣೆಯಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಬೇಕು ಎಂದರು.

ಯೋಜನೆಯಡಿ ನಡೆಯುವ ಕಾಮಗಾರಿಗಳಲ್ಲಿ ಪಾರದರ್ಶಕತೆ, ಗುಣಮಟ್ಟ ಹಾಗೂ ಸಮಯಪಾಲನೆ ಕಾಪಾಡಬೇಕು. ಉದ್ಯೋಗದ ಅಗತ್ಯವಿರುವ ಅರ್ಹ ಕುಟುಂಬಗಳು ಗ್ರಾಮ ಪಂಚಾಯಿತಿಯನ್ನು ಸಂಪರ್ಕಿಸಿ ಯೋಜನೆಯ ಸದುಪಯೋಗ ಪಡೆದುಕೊಳ್ಳಬೇಕು ಎಂದು ತಿಳಿಸಿದರು.

ಕಾಮಗಾರಿ ಸ್ಥಳದಲ್ಲಿ ಆಯೋಜಿಸಿದ್ದ ಆರೋಗ್ಯ ಶಿಬಿರದಲ್ಲಿ 300ಕ್ಕೂ ಹೆಚ್ಚು ಕಾರ್ಮಿಕರ ಆರೋಗ್ಯ ತಪಾಸಣೆ ನಡೆಸಿ, ಬಿಪಿ, ಶುಗರ್ ಸೇರಿದಂತೆ ವಿವಿಧ ತಪಾಸಣೆ ಮಾಡಿ ಅಗತ್ಯ ಸಲಹೆ ನೀಡಲಾಯಿತು.

ಕಾರ್ಯಕ್ರಮದಲ್ಲಿ ಜಿಪಂ ಉಪಕಾರ್ಯದರ್ಶಿ ಡಾ. ಪುನೀತ, ತಾಪಂ ಇಒ ಡಾ. ಪಿ.ಎನ್. ಹುಬ್ಬಳ್ಳಿ, ಶ್ರೀಮಂತ ಹದಗಲ್, ಡಾ. ರೇಖಾ, ಅಕ್ಷಯ್, ಗಿರೀಶ್ ಬೆನ್ನೂರು, ಮಹಾ ಗುಂಡೇಶ್ವರ ಮುಗುಳಿ ಸೇರಿದಂತೆ ಅಧಿಕಾರಿಗಳು, ನರೇಗಾ ಸಿಬ್ಬಂದಿ, ತಾಪಂ, ಗ್ರಾಪಂ ಸಿಬ್ಬಂದಿ ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.