- ಸಾಲಕಟ್ಟೆ, ಮಿಟ್ಲಕಟ್ಟೆ, ಕೆ.ಬೇವಿನಹಳ್ಳಿಯಲ್ಲಿ ಅಭಿವೃದ್ಧಿ ಕಾಮಗಾರಿಗಳ ವೀಕ್ಷಣೆ

- - -

ಕನ್ನಡಪ್ರಭ ವಾರ್ತೆ ಹರಿಹರ

ತಾಲೂಕಿನಲ್ಲಿ ಶುಕ್ರವಾರ “ಬೆಳಗಿನ ನಡೆ– ಗ್ರಾಮಗಳ ಕಡೆ ಕಾರ್ಯಕ್ರಮ ಅಂಗವಾಗಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗಿತ್ತೆ ಮಾಧವ ವಿಠ್ಠಲ್ ರಾವ್ ವಿವಿಧ ಗ್ರಾಮ ಪಂಚಾಯಿತಿಗಳಿಗೆ ಭೇಟಿ ನೀಡಿ, ನಡೆಯುತ್ತಿರುವ ಅಭಿವೃದ್ಧಿ ಕಾಮಗಾರಿಗಳ ಪ್ರಗತಿ ಹಾಗೂ ಸಾರ್ವಜನಿಕ ಸೌಲಭ್ಯಗಳ ಸ್ಥಿತಿಯನ್ನು ಸಮಗ್ರವಾಗಿ ಪರಿಶೀಲಿಸಿದರು.

ಬೆಳ್ಳಂಬೆಳಗ್ಗೆ ಸಾಲಕಟ್ಟೆ ಗ್ರಾಮ ಪಂಚಾಯಿತಿಯ ಮಿಟ್ಲಕಟ್ಟೆ ಗ್ರಾಮಕ್ಕೆ ಭೇಟಿ ನೀಡಿದ ಅವರು, ಎ ಮತ್ತು ಬಿ ಅಂಗನವಾಡಿ ಕೇಂದ್ರಗಳ ದುರಸ್ತಿ ಕಾರ್ಯ ಪರಿಶೀಲಿಸಿದರು. ಬಳಿಕ ಕೆ.ಬೇವಿನಹಳ್ಳಿ ಗ್ರಾಮ ಪಂಚಾಯಿತಿಗೆ ಭೇಟಿ ನೀಡಿ, ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಮೂಲಸೌಕರ್ಯಗಳು, ಔಷಧಿಗಳ ಸಮರ್ಪಕ ಸಂಗ್ರಹ ಹಾಗೂ ನಿರ್ವಹಣೆ ಕುರಿತು ಪರಿಶೀಲನೆ ನಡೆಸಿ ಅಗತ್ಯ ಮಾರ್ಗದರ್ಶನ ನೀಡಿದರು. ಹೆರಿಗೆ ಕೇಂದ್ರವನ್ನು ಇನ್ನಷ್ಟು ಸಮರ್ಪಕವಾಗಿ ನಿರ್ವಹಿಸುವಂತೆ ಸೂಚಿಸಿದರು.


ಅಂಗನವಾಡಿ ಕೇಂದ್ರ ಹಾಗೂ ಗ್ರಂಥಾಲಯಕ್ಕೆ ಭೇಟಿ ನೀಡಿ, ಆಕರ್ಷಕ ಬಣ್ಣ ಬಳಿಸಲು ಸೂಚನೆ ನೀಡಿದರು. ರೈತರೊಂದಿಗೆ ಸಂವಾದ ನಡೆಸಿ, ಅವರ ಸಮಸ್ಯೆಗಳು ಮತ್ತು ಅಭಿಪ್ರಾಯಗಳನ್ನು ಆಲಿಸಿದರು. ಶುದ್ಧ ಕುಡಿಯುವ ನೀರಿನ ಘಟಕಕ್ಕೆ ಭೇಟಿ ನೀಡಿ, ಅದರ ಉತ್ತಮ ನಿರ್ವಹಣೆಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ಅನಂತರ ಸರ್ಕಾರಿ ಶಾಲೆಗೆ ಭೇಟಿ ನೀಡಿ, ಶಾಲಾ ಕಟ್ಟಡದ ಸ್ಥಿತಿ ಹಾಗೂ ಆಹಾರ ಧಾನ್ಯಗಳ ಸಂಗ್ರಹವನ್ನು ಪರಿಶೀಲಿಸಿದರು. ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿ, ಅವರ ಸಮಸ್ಯೆಗಳು ಹಾಗೂ ಅಗತ್ಯಗಳನ್ನು ಆಲಿಸಿದರು.

ಸಾಲಕಟ್ಟೆ ಗ್ರಾಮದ ಸರ್ಕಾರಿ ಶಾಲೆ ಮತ್ತು ಅಂಗನವಾಡಿ ಕೇಂದ್ರಕ್ಕೆ ಭೇಟಿ ನೀಡಿ, ಶಾಲಾ ಕೊಠಡಿಗಳ ಸ್ಥಿತಿ, ಮಕ್ಕಳ ಹಾಜರಾತಿ ಹಾಗೂ ಆಹಾರ ಧಾನ್ಯಗಳ ಲಭ್ಯತೆ ಕುರಿತು ಪರಿಶೀಲನೆ ನಡೆಸಿದರು. ಅಂಗನವಾಡಿ ಕೇಂದ್ರದ ಹೊರಭಾಗಕ್ಕೆ ಆಕರ್ಷಕ ಬಣ್ಣ ಬಳಿಸುವಂತೆ ಸೂಚಿಸಿದರು.

ಜಲಜೀವನ್ ಮಿಷನ್ ಕಾಮಗಾರಿ ಪರಿಶೀಲನೆ ನಡೆಸಿದರು. ಅನಂತರ ಗ್ರಾಮದಲ್ಲಿ ವಿವಿಧ ಸ್ಥಳಗಳ ಅಳತೆ, ವ್ಯತ್ಯಾಸ ಸೇರಿದಂತೆ ಇತರೆ ಇ-ಸ್ವತ್ತು ಸಂಬಂಧಿತ ಸಮಸ್ಯೆಗಳ ಕುರಿತು ಗ್ರಾಮ ಪಂಚಾಯಿತಿಯಲ್ಲಿ ಚರ್ಚೆ ನಡೆಸಲಾಯಿತು.

ಗ್ರಾಮದಲ್ಲಿ ಸರ್ವೆ ಕಾರ್ಯವನ್ನು ಕೈಗೊಂಡು, ಸಮಸ್ಯೆಗಳನ್ನು ಶೀಘ್ರದಲ್ಲಿ ಬಗೆಹರಿಸಲು ಪಂಚಾಯಿತಿ ಆಡಳಿತಾಧಿಕಾರಿಯೂ ಆದ ತಹಸೀಲ್ದಾರ್ ಜಿ. ಸಂತೋಷ್‌ ಕುಮಾರ್, ಕಾರ್ಯನಿರ್ವಾಹಕ ಅಧಿಕಾರಿ ಹಾಗೂ ಪಿಡಿಒ ಅವರಿಗೆ ಸೂಚನೆ ನೀಡಿದರು. ಸಮಸ್ಯೆಗಳನ್ನು ಕೂಡಲೇ ಪರಿಹರಿಸುವುದಾಗಿ ಗ್ರಾಮಸ್ಥರಿಗೆ ಭರವಸೆ ನೀಡಿದರು.

ಕಾರ್ಯಕ್ರಮದ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಅಧಿಕಾರಿಗಳು, ಸಿಬ್ಬಂದಿ ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.

- - -

-13HRR.01 & 01 A:

ಹರಿಹರ ತಾಲೂಕಿನಲ್ಲಿ “ಬೆಳಗಿನ ನಡೆ– ಗ್ರಾಮಗಳ ಕಡೆ ಕಾರ್ಯಕ್ರಮ ಅಂಗವಾಗಿ ಜಿಪಂ ಸಿಇಒ ಗಿತ್ತೆ ಮಾಧವ ವಿಠಲ್ ರಾವ್ ವಿವಿಧ ಗ್ರಾಮ ಪಂಚಾಯಿತಿಗಳಿಗೆ ಭೇಟಿ ನೀಡಿ, ಅಭಿವೃದ್ಧಿ ಕಾಮಗಾರಿಗಳ ಪ್ರಗತಿ ಹಾಗೂ ಸಾರ್ವಜನಿಕ ಸೌಲಭ್ಯಗಳ ಪರಿಸ್ಥಿತಿ ಪರಿಶೀಲಿಸಿ ಅಧಿಕಾರಿಗಳಿಗೆ ಸಲಹೆ-ಸೂಚನೆ ನೀಡಿದರು.