ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗಿತ್ತೆ ಮಾಧವ ವಿಠಲರಾವ್ “ಬೆಳಗಿನ ನಡೆ – ಗ್ರಾಮಗಳ ಕಡೆ” ಕಾರ್ಯಕ್ರಮ ಅಂಗವಾಗಿ ಬುಧವಾರ ಹರಿಹರ ತಾಲೂಕಿನ ವಿವಿಧ ಗ್ರಾಮ ಪಂಚಾಯಿತಿಗಳಿಗೆ ಭೇಟಿ ನೀಡಿ, ಅಭಿವೃದ್ಧಿ ಕಾರ್ಯಗಳ ಪ್ರಗತಿ ಹಾಗೂ ಸಾರ್ವಜನಿಕ ಸೌಲಭ್ಯಗಳ ಸ್ಥಿತಿಗತಿ ಸಮಗ್ರವಾಗಿ ಪರಿಶೀಲಿಸಿದ್ದಾರೆ.

- ದೇವರ ಬೆಳಕೆರೆ, ನಿಟ್ಟೂರು, ಹನಗವಾಡಿ, ಹರಗನಹಳ್ಳಿಗೆ ಭೇಟಿ । ಅಧಿಕಾರಿಗಳಿಗೆ ಸಲಹೆ-ಸೂಚನೆ

- - -

ಕನ್ನಡಪ್ರಭ ವಾರ್ತೆ ಹರಿಹರ

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗಿತ್ತೆ ಮಾಧವ ವಿಠಲರಾವ್ “ಬೆಳಗಿನ ನಡೆ – ಗ್ರಾಮಗಳ ಕಡೆ” ಕಾರ್ಯಕ್ರಮ ಅಂಗವಾಗಿ ಬುಧವಾರ ಹರಿಹರ ತಾಲೂಕಿನ ವಿವಿಧ ಗ್ರಾಮ ಪಂಚಾಯಿತಿಗಳಿಗೆ ಭೇಟಿ ನೀಡಿ, ಅಭಿವೃದ್ಧಿ ಕಾರ್ಯಗಳ ಪ್ರಗತಿ ಹಾಗೂ ಸಾರ್ವಜನಿಕ ಸೌಲಭ್ಯಗಳ ಸ್ಥಿತಿಗತಿ ಸಮಗ್ರವಾಗಿ ಪರಿಶೀಲಿಸಿದರು.

ತಾಲೂಕಿನ ದೇವರ ಬೆಳಕೆರೆ ಗ್ರಾಮ ಪಂಚಾಯಿತಿಗೆ ಬೆಳ್ಳಂಬೆಳಗ್ಗೆ ಭೇಟಿ ನೀಡಿದ ಅವರು, ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ತೆರಳಿ ಆಸ್ಪತ್ರೆಯ ಮೂಲ ಸೌಕರ್ಯಗಳು ಹಾಗೂ ಔಷಧಿಗಳ ಪೂರೈಕೆ ವ್ಯವಸ್ಥೆ ಪರಿಶೀಲಿಸಿದರು. ಗ್ರಾಪಂ ಗ್ರಂಥಾಲಯದಲ್ಲಿ ರಿಜಿಸ್ಟರ್ ಮತ್ತು ಪುಸ್ತಕಗಳನ್ನು ಪರಿಶೀಲಿಸಿ, ಗ್ರಂಥಾಲಯಕ್ಕೆ, ಆಕರ್ಷಕವಾಗಿಸಲು ಬಣ್ಣ ಬಳಿಸುವಂತೆ ಸೂಚಿಸಿದರು.

ಅಂಗನವಾಡಿ ಕೇಂದ್ರಕ್ಕೆ ಭೇಟಿ ನೀಡಿ, ಮಕ್ಕಳ ಅನುಕೂಲಕ್ಕಾಗಿ ಹೊಸ ಕಟ್ಟಡ ನಿರ್ಮಾಣಕ್ಕೆ ಅಗತ್ಯ ಕ್ರಮ ಕೈಗೊಳ್ಳುವಂತೆ ಸೂಚಿಸಿದರು. ಅನಂತರ ಮೊರಾರ್ಜಿ ದೇಸಾಯಿ ವಸತಿಯುತ ಶಾಲೆಗೆ ಭೇಟಿ ನೀಡಿ, ಅಲ್ಲಿನ ಮೂಲಸೌಕರ್ಯಗಳನ್ನು ಪರಿಶೀಲಿಸಿ, ಸ್ವಚ್ಛತೆ ಮತ್ತು ಶಿಸ್ತುಬದ್ಧ ನಿರ್ವಹಣೆಗೆ ಒತ್ತು ನೀಡುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ಅನಂತರ ನಿಟ್ಟೂರು ಗ್ರಾಮಕ್ಕೆ ಭೇಟಿ ನೀಡಿ, ಸಾರ್ವಜನಿಕರಿಂದ ವಿವಿಧ ಸಮಸ್ಯೆಗಳು ಮತ್ತು ಅಹವಾಲುಗಳನ್ನು ಸ್ವೀಕರಿಸಿ, ಅವುಗಳಿಗೆ ಸೂಕ್ತ ಪರಿಹಾರ ಕಲ್ಪಿಸುವ ಭರವಸೆ ನೀಡಿದರು. ಬಳಿಕ ಹನಗವಾಡಿ ಗ್ರಾಮ ಪಂಚಾಯಿತಿಯ ಹರಗನಹಳ್ಳಿ ಗ್ರಾಮದ ಸರ್ಕಾರಿ ಶಾಲೆ ಹಾಗೂ ಅಂಗನವಾಡಿ ಕೇಂದ್ರಕ್ಕೆ ಭೇಟಿ ನೀಡಿ, ಅಲ್ಲಿನ ಮೂಲ ಸೌಕರ್ಯಗಳ ಸ್ಥಿತಿ ಪರಿಶೀಲಿಸಿದರು.

ಈ ಸಂದರ್ಭದಲ್ಲಿ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ಗ್ರಾಮ ಪಂಚಾಯಿತಿ ಸಿಬ್ಬಂದಿ ಉಪಸ್ಥಿತರಿದ್ದರು.

- - -

-28HRR. 01 & 01A:

ಹರಿಹರ ತಾಲೂಕಿನ ವಿವಿಧ ಗ್ರಾಮ ಪಂಚಾಯಿತಿಗಳಿಗೆ ಸಿಇಒ ಗಿತ್ತೆ ಮಾಧವ ವಿಠಲ ರಾವ್ “ಬೆಳಗಿನ ನಡೆ– ಗ್ರಾಮಗಳ ಕಡೆ” ಕಾರ್ಯಕ್ರಮ ಅಂಗವಾಗಿ ಬುಧವಾರ ಭೇಟಿ ನೀಡಿ, ಅಭಿವೃದ್ಧಿ ಕಾರ್ಯಗಳ ಪ್ರಗತಿ ಹಾಗೂ ಸಾರ್ವಜನಿಕ ಸೌಲಭ್ಯಗಳ ಸ್ಥಿತಿಗತಿ ಪರಿಶೀಲಿಸಿದರು.