ಕನ್ನಡಪ್ರಭ ವಾರ್ತೆ ಮೈಸೂರು

ಕುಡಿಯುವ ನೀರಿನ ಮಾದರಿಯನ್ನು ಪರಿಶೀಲನೆಗೆ ಒಳಪಡಿಸಿದಾಗ ಫಲಿತಾಂಶ ತೃಪ್ತಿಕರವಾಗಿಲ್ಲ ಎಂದು ಕಂಡುಬಂದಲ್ಲಿ, ಸೂಕ್ತ ಕ್ರಮ ಕೈಗೊಂಡು ನಂತರ ಅದೇ ಸ್ಥಳದಲ್ಲಿ ಪುನಃ ಕುಡಿಯುವ ನೀರಿನ ಮಾದರಿಯನ್ನು ಪರಿಶೀಲಿಸಿ, ಯೋಗ್ಯವಾದ ಕುಡಿಯುವ ನೀರು ಸರಬರಾಜಾಗುತ್ತಿರುವ ಬಗ್ಗೆ ಖಾತ್ರಿ ಪಡಿಸಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಜಿ. ಲಕ್ಷ್ಮಿಕಾಂತ ರೆಡ್ಡಿ ತಿಳಿಸಿದರು.ನಗರದ ಜಿಪಂ ಮಿನಿ ಸಭಾಂಗಣದಲ್ಲಿ ಮಂಗಳವಾರ ನಡೆದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಮಿಷನ್ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಕುಡಿಯುವ ನೀರು ಕಲುಷಿತವಾದಲ್ಲಿ ಹಲವಾರು ಸಾಂಕ್ರಾಮಿಕ ರೋಗ ಹರಡುವ ಸಾಧ್ಯತೆ ಇದ್ದು, ಕುಡಿಯುವ ನೀರಿನ ಪರಿಶೀಲನೆಯ ಬಗ್ಗೆ ಹೆಚ್ಚು ನಿಗಾ ವಹಿಸಿ ಎಂದರು‌.ಕೋಟ್ಪ್ ಕಾಯ್ದೆಯಡಿ ದಾಳಿ ನಡೆಸಿ ಸೆಕ್ಷನ್ 4 ರಡಿ ಏಪ್ರಿಲ್ 2025 ರಿಂದ 2026 ರವರಗೆ 2,98,400 ರೂ. ದಂಡ ಸಂಗ್ರಹಿಸಲಾಗಿದೆ. ಇದು ಉತ್ತಮ ಕೆಲಸವಾಗಿದ್ದು, ಇನ್ನೂ ಹೆಚ್ಚಿನ ದಾಳಿ ನಡೆಸಿ. ಹುಕ್ಕವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದ್ದು, ಇದು ಕಂಡು ಬಂದಲ್ಲಿ ಕ್ರಿಮಿನಲ್ ಮೊಕದ್ದಮೆ ದಾಖಲಿಸಿ ಎಂದು ಅವರು ಸೂಚಿಸಿದರು.ಮಕ್ಕಳಿಗೆ ನೀಡಲಾಗುವ ಲಸಿಕೆ ಹಾಗೂ ಇನ್ನಿತರೆ ಮಾಹಿತಿಗಳನ್ನು ಪ್ರಾಥಮಿಕ ಆರೋಗ್ಯ ಕೇಂದ್ರವಾರು ನಿಗದಿತ ಅವಧಿಯಲ್ಲಿ ನೀಡಲಾಗಿರುವ ಆ್ಯಪ್ ಗಳಲ್ಲಿ ಅಪ್ ಡೇಟ್ ಆಗಬೇಕು. ಇಲ್ಲವಾದಲ್ಲಿ ಕ್ರಮ ಕೈಗೊಳ್ಳುವುದಾಗಿ ಅವರು ಎಚ್ಚರಿಸಿದರು.ರಾಷ್ಟ್ರೀಯ ಬಾಲ ಸ್ವಸ್ಥ್ಯ ಕಾರ್ಯಕ್ರಮ ಯೋಜ‌ನೆಯಡಿ ಮಕ್ಕಳ ಸ್ಕ್ರೀನಿಂಗ್ ನಡೆದ ನಂತರ ಅವರಿಗೆ ಬೇಕಿರುವ ಚಿಕಿತ್ಸೆ ಪಡೆದಿರುವ ಬಗ್ಗೆ ಖಾತ್ರಿ ಪಡಿಸಿಕೊಳ್ಳಿ, ಅಪೌಷ್ಟಿಕತೆಯಿಂದ ಬಳಲುವ ಮಕ್ಕಳ ಸಂಖ್ಯೆ ಎಚ್.ಡಿ. ಕೋಟೆ ತಾಲೂಕಿನಲ್ಲಿ ಹೆಚ್ಚಿದ್ದು, ಇಲ್ಲಿ ತೀವ್ರ ನಿಗಾ ವಹಿಸಿ ಎಂದರು.‌ವೈದ್ಯಕೀಯ ತ್ಯಾಜ್ಯ ವಸ್ತುಗಳ ವಿಲೇವಾರಿ ಕುರಿತಂತೆ ಪ್ರಾಥಮಿಕ‌ಆರೋಗ್ಯ ಕೇಂದ್ರದ ಹಂತದಲ್ಲೇ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಸಭೆಯಲ್ಲಿ ಚರ್ಚಿಸಲಾಯಿತು.ಜಿಲ್ಲಾ ಆರೋಗ್ಯ ಇಲಾಖೆಯ ಕಾರ್ಯಕ್ರಮ ಅನುಷ್ಠಾಬಾಧಿಕಾರಿ ಡಾ. ಸಿರಾಜ್ ಅಹಮದ್, ಡಾ. ಗೋಪಿನಾಥ್, ಡಾ. ನಾಗರಾಜ್, ಡಾ. ಬೃಂದಾ, ಡಾ. ಸುವರ್ಣಾ ಮೊದಲಾದವರು ಇದ್ದರು.