ಸಾರಾಂಶ
ಕಳೆದ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಮೈತ್ರಿ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಅವರನ್ನು ಕಾಂಗ್ರೆಸ್‌ನವರೇ ಸೋಲಿಸಿದರು. ಆದರೆ, ನಾವು ಕಾಂಗ್ರೆಸ್‌ನವರಂತೆ ಮೈತ್ರಿ ಅಭ್ಯರ್ಥಿಗೆ ಮೋಸ ಮಾಡಲ್ಲ.
ಕನ್ನಡಪ್ರಭ ವಾರ್ತೆ ಪಾಂಡವಪುರ
ಕಳೆದ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಮೈತ್ರಿ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಅವರನ್ನು ಕಾಂಗ್ರೆಸ್‌ನವರೇ ಸೋಲಿಸಿದರು. ಆದರೆ, ನಾವು ಅಂತಹ ದ್ರೋಹ ಮಾಡದೆ ಎನ್‌ಡಿಎ ಮೈತ್ರಿ ಪಕ್ಷದ ಅಭ್ಯರ್ಥಿಯಾಗಿ ಯಾರೇ ಕಣಕ್ಕಿಳಿದರೂ ಅವರನ್ನು ಹೆಚ್ಚಿನ ಮತಕೊಟ್ಟು ಗೆಲ್ಲಿಸಿಕೊಂಡು ಪ್ರಧಾನಿ ಮೋದಿ ಅವರ ಕೈಬಲ ಪಡಿಸುವ ಕೆಲಸ ಮಾಡೋಣ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಡಾ.ಎನ್.ಎಸ್.ಇಂದ್ರೇಶ್ ಹೇಳಿದರು.
ಪಟ್ಟಣದ ಸಪ್ತಪದಿ ಕನ್ವೆನ್ಷನ್ ಹಾಲ್‌ನಲ್ಲಿ ನಡೆದ ನೂತನ ಬಿಜೆಪಿ ಜಿಲ್ಲಾಧ್ಯಕ್ಷ ಡಾ.ಎನ್.ಎಸ್.ಇಂದ್ರೇಶ್ ಅವರಿಗೆ ಅಭಿನಂದನಾ ಸಮಾರಂಭ ಹಾಗೂ ಕಾರ್‍ಯಕರ್ತರ ಸಭೆಯಲ್ಲಿ ಭಾಗವಹಿಸಿ ಮಾತನಾಡಿ, ಬಿಜೆಪಿ ಶಿಸ್ತಿನ ಪಕ್ಷ. ಇಲ್ಲಿರುವ ಎಲ್ಲರು ಶಿಸ್ತಿನ ಸಿಪಾಯಿಗಳು ಇದ್ದಂತೆ ಎಂದರು.
ನಾವು ಕಾಂಗ್ರೆಸ್‌ನವರಂತೆ ಮೈತ್ರಿ ಅಭ್ಯರ್ಥಿಗೆ ಮೋಸ ಮಾಡಲ್ಲ. ಎನ್‌ಡಿಎ ಮೈತ್ರಿ ಅಭ್ಯರ್ಥಿಯಾಗಿ ಯಾರೇ ಸ್ಪರ್ಧೆ ಮಾಡಿದರೂ ಅವರ ಗೆಲುವಿಗೆ ನಾವೆಲ್ಲರು ಶ್ರಮಿಸಿ ಮೋದಿ ಅವರನ್ನು ಮತ್ತೊಮ್ಮೆ ಪ್ರಧಾನ ಮಂತ್ರಿಯನ್ನಾಗಿ ಮಾಡುತ್ತೇವೆ ಎಂದರು.
ಕಾಂಗ್ರೆಸ್ ಸರ್ಕಾರ ರೈತ ವಿರೋಧಿಯಾಗಿದೆ. ನರೇಂದ್ರ ಮೋದಿ ಅವರು ಕಿಸಾನ್ ಸನ್ಮಾನ್ ಯೋಜನೆಯಡಿ ರೈತರಿಗೆ 6 ಸಾವಿರ ನೀಡುತ್ತಿದೆ. ನಮ್ಮ ಹಿಂದಿನ ಬಿಜೆಪಿ ಸರ್ಕಾರ ನೀಡುತ್ತಿದ್ದ 4 ಸಾವಿರ ಹಣವನ್ನು ಈಗಿನ ಬಿಜೆಪಿ ಸರ್ಕಾರ ಕಡಿತಗೊಳಿಸಿದೆ ಎಂದು ಕಿಡಿಕಾರಿದರು.
ಕಾಂಗ್ರೆಸ್ ಅಧಿಕಾರಕ್ಕೆ ಬಂದ ತಕ್ಷಣ ಹಿಂದೂ ವಿರೋಧಿಯಾಗಿ ನಡೆದುಕೊಳ್ಳುತ್ತಿದೆ. ಮಂಡ್ಯದ ಕೆರಗೋಡು ಗ್ರಾಮದಲ್ಲಿ ಹನುಮಾನ್ ಧ್ವಜ ತೆರವುಗೊಳಿಸಿತು. ವಿಧಾನಸೌಧದಲ್ಲಿ ಪಾಕಿಸ್ತಾನ್ ಜಿಂದಾಬಾದ್ ಎಂದು ಘೋಷಣೆ ಕೂಗಿದರು. ಇಂತಹ ಹಿಂದೂ ವಿರೋಧಿ ಸರ್ಕಾರವನ್ನು ದೇಶದಲ್ಲಿ ಅಧಿಕಾರಕ್ಕೆ ಬರಲು ಬಿಡಬಾರದು ಎಂದು ಆಕ್ರೋಶ ಹೊರಹಾಕಿದರು.
ಜಿಲ್ಲಾಡಳಿತ ಹಾಗೂ ರಾಜ್ಯ ಸರ್ಕಾರ ಕೆಆರ್ ಎಸ್ ವ್ಯಾಪ್ತಿಯಲ್ಲಿ ಟ್ರಯಲ್ ಬ್ಲಾಸ್ಟ್ ನಡೆಸುವ ವಿಚಾರವಾಗಿ ಜನರ ಬದುಕಿನ ಜನತೆ ಚೆಲ್ಲಾಟ ಆಡಿದರು. ಜಿಲ್ಲೆ ಜನತೆ ನೀರಿಲ್ಲದೆ ಸಂಕಷ್ಟಕ್ಕೆ ಸಿಲುಕಿದ್ದಾರೆ. ಆದರೆ, ಕಾಂಗ್ರೆಸ್ ನವರು ತಮಿಳುನಾಡಿಗೆ ನೀರು ಹರಿಬಿಟ್ಟು ಜನರ ಬದುಕಿನೊಂದಿಗೆ ಆಟವಾಡುತ್ತಿದ್ದಾರೆ ಎಂದು ಕಿಡಿಕಾರಿದರು.
ಕೆ.ಎಸ್.ನಂಜುಂಡೇಗೌಡ ಮಾತನಾಡಿ, ಕಾಂಗ್ರೆಸ್ ಪಕ್ಷ ದೇಶವನ್ನು 50 ವರ್ಷಗಳ ಕಾಲ ಅವಧಿಕಾರ ನಡೆಸಿದರು. ರೈತ ಮೇಲೆ ಆಸ್ತಿ ಜಪ್ತಿ ಮಾಡುತ್ತಿದ್ದು ಕಾಂಗ್ರೆಸ್ ಸರ್ಕಾರದಲ್ಲಿಯೇ ಹೆಚ್ಚು ಎಂದು ಆಕ್ರೋಶ ಹೊರಹಾಕಿದರು.
ಇದೇ ವೇಳೆ ಡಾ.ಎನ್.ಎಸ್.ಇಂದ್ರೇಶ್ ನೇತೃತ್ವದಲ್ಲಿ ಹಲವರು ಬಿಜೆಪಿ ಸೇರ್ಪಡೆಗೊಂಡರು. ಬಿಜೆಪಿ ನೂತನ ಜಿಲ್ಲಾಧ್ಯಕ್ಷ ಡಾ.ಎನ್.ಎಸ್.ಇಂದ್ರೇಶ್ ಅವರನ್ನು ಎಲ್ಲಾ ಮುಖಂಡರು ಕಾರ್ಯಕರ್ತರು ಅಭಿನಂದಿಸಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಮಹಿಳಾ ಘಟಕ ಅಧ್ಯಕ್ಷೆ ಮಂಗಳ ನವೀನ್ ಕುಮಾರ್, ತಾಲೂಕು ಅಧ್ಯಕ್ಷ ಧನಂಜಯ, ಮೈಶುಗರ್ ಮಾಜಿ ಅಧ್ಯಕ್ಷ ಜೆ.ಶಿವಲಿಂಗೇಗೌಡ, ಮುಖಂಡರಾದ ಕೆ.ಎಲ್.ಆನಂದ್, ಓಬಿಸಿ ಜಿಲ್ಲಾಧ್ಯಕ್ಷ ನರಸಿಂಹಚಾರ್, ಎಸ್.ಎನ್.ಟಿ.ಸೋಮಶೇಖರ್, ಅಶೋಕ, ನಿರಂಜನ್ ಬಾಬು, ಶಂಭೂನಹಳ್ಳಿ ಮಂಜುನಾಥ್, ಚಿಕ್ಕಮರಳಿ ನವೀನ್ ಕುಮಾರ್, ಶ್ರೀನಿವಾಸ್ ನಾಯ್ಕ, ಮಾಚಹಳ್ಳಿ ರಾಜಣ್ಣ, ಬೇಬಿಲೋಕೇಶ್, ಹೊಳಲು ಕೃಷ್ಣ, ಕೋಡಾಲ ಅಶೋಕ್ ಸೇರಿದಂತೆ ಹಲವರು ಹಾಜರಿದ್ದರು.