ಸಾರಾಂಶ
ಬೆಂಗಳೂರು : ಬಿಜೆಪಿ ರಾಜ್ಯಾಧಕ್ಷ್ಯ ಬಿ.ವೈ.ವಿಜಯೇಂದ್ರ ಸೂಚನೆ ಲೆಕ್ಕಿಸದೆ ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಮತ್ತಿತರರು ''''ವೀರಶೈವ ಲಿಂಗಾಯತ ಮಹಾಸಂಗಮ''''ದ ಪೂರ್ವಸಿದ್ಧತಾ ಸಭೆಗಳನ್ನು ಮುಂದುವರೆಸಲು ಮುಂದಾಗಿದ್ದಾರೆ.
ಮಂಗಳವಾರ ನಗರದ ಅರಮನೆ ಮೈದಾನದ ಗಾಯತ್ರಿ ಗ್ರ್ಯಾಂಡ್‌ನಲ್ಲಿ ಬೆಳಗ್ಗೆ 11ಕ್ಕೆ ಈ ಪೂರ್ವಸಿದ್ಧತಾ ಸಭೆ ಕರೆಯಲಾಗಿದ್ದು, ಬೆಂಗಳೂರು ಸುತ್ತಮುತ್ತಲ ಸುಮಾರು ಹತ್ತು ಜಿಲ್ಲೆಗಳ ಮುಖಂಡರು ಇದರಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಖುದ್ದು ರೇಣುಕಾಚಾರ್ಯ ಅವರೇ ತಿಳಿಸಿದ್ದಾರೆ.ಚಾಮರಾಜನಗರ, ಮೈಸೂರು, ಮಂಡ್ಯ, ರಾಮನಗರ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಿಕ್ಕಬಳ್ಳಾಪುರ, ಕೋಲಾರ ಸೇರಿ ಹತ್ತು ಜಿಲ್ಲೆಗಳ ವೀರಶೈವ ಲಿಂಗಾಯತ ಸಮುದಾಯದ ಮುಖಂಡರು, ವಿವಿಧ ಮಠಗಳ ಸ್ವಾಮೀಜಿಗಳು ಆಗಮಿಸುತ್ತಾರೆ ಎಂದು ಮಾಹಿತಿ ನೀಡಿದ್ದಾರೆ.
ಕಳೆದ ಗುರುವಾರ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಹುಟ್ಟುಹಬ್ಬದ ಅಂಗವಾಗಿ ಅವರ ನಿವಾಸದಲ್ಲಿ ಸೇರಿದ್ದ ಮುಖಂಡರು ರೇಣುಕಾಚಾರ್ಯ ನೇತೃತ್ವದಲ್ಲಿ ಸಭೆ ಮಾಡಿದ್ದರು. ಯತ್ನಾಳ್ ಬಣಕ್ಕೆ ಸಡ್ಡು ಹೊಡೆಯಲು ಯಡಿಯೂರಪ್ಪ ಮತ್ತು ವಿಜಯೇಂದ್ರ ಪರ ವೀರಶೈವ ಲಿಂಗಾಯತ ಮಹಾಸಂಗಮ ಆಯೋಜಿಸಲು ನಿರ್ಧಾರ ಕೈಗೊಂಡಿದ್ದರು. ಇದರ ಮರುದಿನವೇ ತುಮಕೂರಿನಿಂದ ಪೂರ್ವಸಿದ್ಧತಾ ಸಭೆ ಆರಂಭಿಸಲಾಗಿತ್ತು. ಅದರ ಬೆನ್ನಲ್ಲೇ ವಿಜಯೇಂದ್ರ ಅವರು ವೀರಶೈವ ಲಿಂಗಾಯತ ಸಮುದಾಯದ ಹೆಸರಿನಲ್ಲಿ ಸಭೆ ನಡೆಸುವುದಕ್ಕೆ ವಿರೋಧ ವ್ಯಕ್ತಪಡಿಸಿದ್ದರು. ಅಲ್ಲದೆ, ತಕ್ಷಣ ಈ ಸಭೆಗಳನ್ನು ನಿಲ್ಲಿಸುವಂತೆ ಸೂಚನೆಯನ್ನೂ ನೀಡಿದ್ದರು. ಆದರೆ, ಇದೀಗ ಅವರ ಸೂಚನೆಗೆ ಕ್ಯಾರೇ ಎನ್ನದೆ ರೇಣುಕಾಚಾರ್ಯ ಮತ್ತಿತರರು ಸಭೆ ನಡೆಸುತ್ತಿದ್ದಾರೆ.