ಬೆಂಗಳೂರು : ರಾಜ್ಯ ಸರ್ಕಾರದ ಪಂಚ ಗ್ಯಾರಂಟಿಗಳಲ್ಲಿ ಗೃಹ ಲಕ್ಷ್ಮೀ ಯೋಜನೆ ಅಡಿ ಸಹಾಯಧನ ಪಡೆಯುತ್ತಿದ್ದವರಲ್ಲಿ 1.95 ಲಕ್ಷ ಫಲಾನುಭವಿಗಳು ಮೃತಪಟ್ಟಿದ್ದರೂ ಅವರಿಗೆ ಹಣ ಪಾವತಿಸುತ್ತಿರುವುದು ಪತ್ತೆಯಾಗಿದೆ. ಪತ್ತೆಯಾಗಿರುವ ಮೃತ ಫಲಾನುಭವಿಗಳ ವಿವರ ಪಡೆದು ಅವರನ್ನು ಪಟ್ಟಿಯಿಂದ ತೆಗೆದುಹಾಕಿ, ಹಣ ಪಾವತಿ ಸ್ಥಗಿತಗೊಳಿಸಲಾಗಿದೆ.

ಪಂಚ ಗ್ಯಾರಂಟಿಗಳ ಪೈಕಿ ಅನರ್ಹರಿಗೆ ಲಾಭವಾಗುವುದನ್ನು ತಡೆದು, ಅರ್ಹರಿಗೆ ಮಾತ್ರ ಯೋಜನೆಯ ನೆರವು ನೀಡುವ ಉದ್ದೇಶದೊಂದಿಗೆ ಫಲಾನುಭವಿಗಳ ಪಟ್ಟಿ ಪರಿಷ್ಕರಣೆ ನಿರ್ಧರಿಸಲಾಗಿದೆ. ಅದರಲ್ಲಿ ಮೊದಲಿಗೆ ಗೃಹ ಲಕ್ಷ್ಮೀ ಯೋಜನೆ ಅಡಿ ಮೃತರು ಮತ್ತು ತೆರಿಗೆ ಪಾವತಿದಾರರು ಸಹಾಯಧನ ಪಡೆಯುತ್ತಿರುವುದನ್ನು ಪತ್ತೆ ಮಾಡಲಾಗಿದೆ. ಅದರಂತೆ 2026ರ ಮಾರ್ಚ್‌ ಅಂತ್ಯದ ವೇಳೆಗೆ 1.95 ಲಕ್ಷ ಫಲಾನುಭವಿಗಳು ಮೃತಪಟ್ಟಿದ್ದರೂ ಅವರ ಬ್ಯಾಂಕ್‌ ಖಾತೆಗೆ ಗೃಹಲಕ್ಷ್ಮೀ ಹಣ ಪಾವತಿಸಿರುವುದು ಪತ್ತೆಯಾಗಿದೆ. ಇದೀಗ ಮೃತ ಫಲಾನುಭವಿಗಳ ವಿವರ ಪಡೆದು, ಅವರ ಬ್ಯಾಂಕ್‌ ಖಾತೆಗೆ ಹಣ ಪಾವತಿ ಸ್ಥಗಿತಗೊಳಿಸಿ ಸರ್ಕಾರ ಕ್ರಮ ಕೈಗೊಂಡಿದೆ.

ಬೆಳಗಾವಿಯಲ್ಲೇ ಅತಿಹೆಚ್ಚು:

ಗೃಹಲಕ್ಷ್ಮೀ ಹಣ ಸಂದಾಯವಾಗುತ್ತಿದ್ದ ಮೃತ ಫಲಾನುಭವಿಗಳ ಪೈಕಿ ಬೆಳಗಾವಿಯಲ್ಲೇ ಅತಿಹೆಚ್ಚು ಮೃತ ಫಲಾನುಭವಿಗಳು ಪತ್ತೆಯಾಗಿದ್ದು, ಅವರ ಖಾತೆಗೆ ಸರ್ಕಾರದಿಂದ ಹಣ ಪಾವತಿಯಾಗಿದೆ. ಬೆಳಗಾವಿಯಲ್ಲಿ 15850, ಬೆಂಗಳೂರು ನಗರ 14038, ತುಮಕೂರು 12139, ಮೈಸೂರು 11541 ಮೃತ ಫಲಾನುಭವಿಗಳ ಖಾತೆಗೆ ಹಣ ಸಂದಾಯ ಮಾಡಲಾಗಿದೆ.


ಅರ್ಹರಿಗೆ ತಲುಪಿಸುವುದಷ್ಟೇ ಗುರಿ:

ಈ ಕುರಿತು ಮಾಹಿತಿ ನೀಡಿರುವ ವಿಧಾನಪರಿಷತ್‌ ಸದಸ್ಯ ಮತ್ತು ರಾಜ್ಯ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಉಪಾಧ್ಯಕ್ಷ ದಿನೇಶ್‌ ಗೂಳಿಗೌಡ, ಗೃಹಲಕ್ಷ್ಮೀ ಯೋಜನೆಯನ್ನು ಯಾವುದೇ ಕಾರಣಕ್ಕೂ ಸ್ಥಗಿತಗೊಳಿಸುವುದಿಲ್ಲ. ಅಂಥ ಉದ್ದೇಶ ಸರ್ಕಾರಕ್ಕೆ ಇಲ್ಲ. ಆದರೆ, ಅನರ್ಹರು ಯೋಜನೆಯ ಲಾಭ ಪಡೆಯುತ್ತಿರುವುದನ್ನು ತಪ್ಪಿಸಲು ಫಲಾನುಭವಿಗಳ ಪಟ್ಟಿ ಪರಿಷ್ಕರಣೆ ಮಾಡಲಾಗುತ್ತಿದೆ ಎಂದು ತಿಳಿಸಿದ್ದಾರೆ.

ಗೃಹಲಕ್ಷ್ಮೀ ಯೋಜನೆಯು ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆ. ಅದರ ದುರುಪಯೋಗ ತಡೆದು, ಅರ್ಹರಿಗೆ ಮಾತ್ರ ಯೋಜನೆ ಲಾಭ ತಲುಪಿಸುವ ಸಲುವಾಗಿ ಫಲಾನುಭವಿಗಳ ಪಟ್ಟಿ ಪರಿಷ್ಕರಣೆ ಮಾಡಲಾಗುತ್ತಿದೆ. ಅದನ್ನು ಹೊರತುಪಡಿಸಿ ಯೋಜನೆ ಸ್ಥಗಿತಗೊಳಿಸುವ ಉದ್ದೇಶ ಸರ್ಕಾರಕ್ಕಿಲ್ಲ. ರಾಜ್ಯದ 1.24 ಕೋಟಿಗೂ ಹೆಚ್ಚಿನ ಮನೆಯ ಯಜಮಾನಿಯರಿಗೆ ಪ್ರತಿ ತಿಂಗಳು ತಲಾ 2 ಸಾವಿರ ರು. ಗೃಹಲಕ್ಷ್ಮೀ ಹಣ ಪಾವತಿಸಲಾಗುತ್ತಿದೆ.

ಇತ್ತೀಚೆಗೆ ಫಲಾನುಭವಿಗಳ ಪಟ್ಟಿ ಪರಿಶೀಲಿಸಿದಾಗ 1.95 ಲಕ್ಷ ಯಜಮಾನಿಯರು ಮರಣ ಹೊಂದಿದ್ದು, ತಾಂತ್ರಿಕ ಕಾರಣಗಳಿಂದ ಅವರ ಬ್ಯಾಂಕ್‌ ಖಾತೆಗೂ ಹಣ ಸಂದಾಯವಾಗುತ್ತಿರುವುದು ಗಮನಕ್ಕೆ ಬಂದಿದೆ. ಈ ರೀತಿಯ ದುರುಪಯೋಗ ತಡೆಯಲು ಸರ್ಕಾರ ಕೆಲಸ ಮಾಡುತ್ತಿದೆ ಎಂದು ತಿಳಿಸಿದ್ದಾರೆ.

ಮೃತಪಟ್ಟವರ ಬ್ಯಾಂಕ್‌ ಖಾತೆಗೆ ಹಣ ಪಾವತಿ ತಡೆಯಲು ಮತ್ತು ಅರ್ಹರಿಗೆ ಯೋಜನೆ ತಲುಪುವಂತೆ ಮಾಡಲು ಹಿಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಲಿಖಿತ ಮನವಿ ಸಲ್ಲಿಸಿ, ಫಲಾನುಭವಿಗಳ ಜೀವಿತ ಪ್ರಮಾಣಪತ್ರ ಕಡ್ಡಾಯಗೊಳಿಸುವಂತೆ ಕೋರಿದ್ದೆ. ಅದೇ ರೀತಿ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರಿಗೂ, ಲೋಪ ಸರಿಪಡಿಸಿ, ಮೃತ ಮತ್ತು ಅನರ್ಹರನ್ನು ಯೋಜನೆಯಿಂದ ಹೊರಗಿಡಲು ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದೆ. ಅದರಂತೆ ಇದೀಗ ಫಲಾನುಭವಿಗಳ ಪಟ್ಟಿ ಪರಿಷ್ಕರಣೆಯಾಗುತ್ತಿದೆ. ಇದರಿಂದ ಅರ್ಹ ಫಲಾನುಭವಿಗಳಿಗೆ ಯಾವುದೇ ಸಮಸ್ಯೆಯಾಗುವುದಿಲ್ಲ ಮತ್ತು ಗೃಹಲಕ್ಷ್ಮೀ ಹಣ ಅವರಿಗೆ ಪಾವತಿಯಾಗಲಿದೆ ಎಂದು ಸ್ಪಷ್ಟಪಡಿಸಿದ್ದಾರೆ.

ಮೃತ ಫಲಾನುಭವಿಗಳ ವಿವರ:

ಜಿಲ್ಲೆ ಸಂಖ್ಯೆ

ಬಾಗಲಕೋಟೆ 5907

ಬಳ್ಳಾರಿ 3415

ಬೆಳಗಾವಿ 15850

ಬೆಂಗಳೂರು ಗ್ರಾಮಾಂತರ 3911

ಬೆಂಗಳೂರು ನಗರ 14038

ಬೀದರ್‌ 4063

ಚಾಮರಾನಗರ 4739

ಚಿಕ್ಕಬಳ್ಳಾಪುರ 5358

ಚಿತ್ರದುರ್ಗ 6543

ದಕ್ಷಿಣ ಕನ್ನಡ 6159

ದಾವಣಗೆರೆ 5926

ಧಾರವಾಡ 5628

ಗದಗ 3868

ಹಾಸನ 8033

ಹಾವೇರಿ 5905

ಕಲಬುರಗಿ 6408

ಕೊಡಗು 2193

ಕೋಲಾರ 5615

ಕೊಪ್ಪಳ 4475

ಮಂಡ್ಯ 9168

ಮೈಸೂರು 11541

ರಾಯಚೂರು 5181

ರಾಮನಗರ 5713

ಶಿವಮೊಗ್ಗ 6409

ತುಮಕೂರು 12139

ಉಡುಪಿ 4311

ಉತ್ತರಕನ್ನಡ 5546

ವಿಜಯನಗರ 3825

ವಿಜಯಪುರ 5540

ಯಾದಗಿರಿ 2775

ಒಟ್ಟು 195224

ನಮ್ಮಲ್ಲಿ ಮಾತ್ರ

ಮೃತರು, ತೆರಿಗೆ ಪಾವತಿದಾರರನ್ನು ಗೃಹಲಕ್ಷ್ಮಿ ಯೋಜನೆಯಿಂದ ರಾಜ್ಯಾದ್ಯಂತ ಹೊರಗೆ ಹಾಕುತ್ತಿರುವ ಕುರಿತು ‘ಕನ್ನಡಪ್ರಭ’ ಮಾತ್ರ ನಿನ್ನೆ ವರದಿ ಮಾಡಿತ್ತು.