ಸಾರಾಂಶ
ಬೆಂಗಳೂರು : ತೀವ್ರ ಕುತೂಹಲ ಮೂಡಿಸಿರುವ ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನದ ನೇಮಕ ಪ್ರಕ್ರಿಯೆಗೆ ಸುಮಾರು ಒಂದು ತಿಂಗಳ ಕಾಲ ಬ್ರೇಕ್ ಬೀಳುವ ಸಾಧ್ಯತೆಯಿದೆ.
ಸೋಮವಾರದಿಂದ ಸಂಸತ್ತಿನ ಮುಂಗಾರು ಅಧಿವೇಶನ ಆರಂಭವಾಗುತ್ತಿದ್ದು, ಅಧಿವೇಶನ ಮುಗಿಯುವವರೆಗೆ ರಾಜ್ಯಾಧ್ಯಕ್ಷ ನೇಮಕ ಪ್ರಕ್ರಿಯೆ ಕೈಗೆತ್ತಿಕೊಳ್ಳುವ ಸಾಧ್ಯತೆ ಕಡಿಮೆ ಎಂದು ಉನ್ನತ ಮೂಲಗಳು ತಿಳಿಸಿವೆ.
ಮುಖ್ಯವಾಗಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರ ನೇಮಕ ಪ್ರಕ್ರಿಯೆಗೆ ಚಾಲನೆ ಸಿಗಬೇಕಾಗಿದೆ. ಅದಕ್ಕೂ ಪೂರ್ವದಲ್ಲಿ ಕರ್ನಾಟಕವೂ ಸೇರಿ ಬಾಕಿ ಉಳಿದ ಬೆರಳೆಣಿಕೆಯಷ್ಟು ರಾಜ್ಯಗಳ ಅಧ್ಯಕ್ಷರ ನೇಮಕ ಪ್ರಕ್ರಿಯೆ ಮುಗಿಸುವ ಚಿಂತನೆ ವರಿಷ್ಠರಲ್ಲಿದೆ. ಇದೀಗ ಸಂಸತ್ ಅಧಿವೇಶನದ ಹಿನ್ನೆಲೆಯಲ್ಲಿ ಗೊಂದಲ ಬೇಡ ಎಂಬ ಉದ್ದೇಶದಿಂದ ರಾಷ್ಟ್ರೀಯ ಅಧ್ಯಕ್ಷರ ನೇಮಕ ಪ್ರಕ್ರಿಯೆಯೂ ವಿಳಂಬವಾಗಬಹುದು ಎನ್ನಲಾಗುತ್ತಿದೆ. ಹಾಗಾದಲ್ಲಿ ರಾಜ್ಯಾಧ್ಯಕ್ಷರ ನೇಮಕ ಪ್ರಕ್ರಿಯೆಯೂ ವಿಳಂಬವಾಗಬಹುದು ಎಂದು ತಿಳಿದು ಬಂದಿದೆ.
ಸಂಸತ್ ಅಧಿವೇಶನಕ್ಕೂ ಮೊದಲೇ ರಾಷ್ಟ್ರೀಯ ಹಾಗೂ ರಾಜ್ಯಾಧ್ಯಕ್ಷರ ನೇಮಕ ಪ್ರಕ್ರಿಯೆ ಕೈಗೆತ್ತಿಕೊಳ್ಳಲಾಗುತ್ತದೆ ಎಂಬ ಚರ್ಚೆ ಬಿಜೆಪಿ ಪಾಳೆಯದಲ್ಲೇ ನಡೆದಿತ್ತು. ಇದೀಗ ಸಂಸತ್ ಅಧಿವೇಶನ ಆರಂಭವಾಗುತ್ತಿರುವುದರಿಂದ ಪ್ರಕ್ರಿಯೆಗೆ ತಾತ್ಕಾಲಿಕ ಬ್ರೇಕ್ ಬಿದ್ದಿದೆ ಎಂಬ ಮಾತು ಬಿಜೆಪಿಯಿಂದಲೇ ಬಲವಾಗಿ ಕೇಳಿಬಂದಿದೆ.ಕಳೆದ ಹಲವು ತಿಂಗಳುಗಳಿಂದ ರಾಜ್ಯಾಧ್ಯಕ್ಷರ ನೇಮಕ ಸಂಬಂಧ ಊಹಾಪೋಹ, ಚರ್ಚೆಗಳು ನಡೆಯುತ್ತಲೇ ಇವೆ. ಹಾಲಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರನ್ನು ಮುಂದುವರೆಸುವ ಬಗ್ಗೆ ಅಪಸ್ವರವೂ ಕೇಳಿಬಂದಿದೆ. ಹಲವು ನಾಯಕರು ಹೈಕಮಾಂಡ್‌ಗೆ ದೂರನ್ನೂ ನೀಡಿದ್ದಾರೆ. ಹೀಗಾಗಿ, ಬಿಜೆಪಿ ರಾಜ್ಯಾಧ್ಯಕ್ಷರ ನೇಮಕ ಪ್ರಕ್ರಿಯೆ ಸಾಕಷ್ಟು ಕುತೂಹಲ ಮೂಡಿಸಿದೆ.