15 ದಿನ ಅಧಿವೇಶನ, 99.34 ತಾಸು ಕಲಾಪ - ಒಟ್ಟು 27 ವಿಧೇಯಕ ಅಂಗೀಕಾರ : ರಾಜ್ಯಪಾಲರ ಭಾಷಣದ ಮೇಲೆ 14 ಸದಸ್ಯರ ಚರ್ಚೆ

| N/A | Published : Mar 22 2025, 08:55 AM IST

Vidhan soudha

ಸಾರಾಂಶ

ಬಜೆಟ್‌ ಅಧಿವೇಶನವು ಒಟ್ಟು 15 ದಿನಗಳ ಕಾಲ ನಡೆದಿದ್ದು, 99.34 ಗಂಟೆಗಳ ಕಾರ್ಯಕಲಾಪ ನಡೆದಿದೆ. ಅಧಿವೇಶನದಲ್ಲಿ ಧನವಿನಿಯೋಗ ವಿಧೇಯಕ, ವಿವಾದಿತ ಕೆಟಿಪಿಪಿ (ತಿದ್ದುಪಡಿ) ವಿಧೇಯಕ ಸೇರಿ ಒಟ್ಟಾರೆ 27 ವಿಧೇಯಕಗಳನ್ನು ಮಂಡಿಸಿ, ಅಂಗೀಕರಿಸಲಾಗಿದೆ

ವಿಧಾನಸಭೆ : ಬಜೆಟ್‌ ಅಧಿವೇಶನವು ಒಟ್ಟು 15 ದಿನಗಳ ಕಾಲ ನಡೆದಿದ್ದು, 99.34 ಗಂಟೆಗಳ ಕಾರ್ಯಕಲಾಪ ನಡೆದಿದೆ. ಅಧಿವೇಶನದಲ್ಲಿ ಧನವಿನಿಯೋಗ ವಿಧೇಯಕ, ವಿವಾದಿತ ಕೆಟಿಪಿಪಿ (ತಿದ್ದುಪಡಿ) ವಿಧೇಯಕ ಸೇರಿ ಒಟ್ಟಾರೆ 27 ವಿಧೇಯಕಗಳನ್ನು ಮಂಡಿಸಿ, ಅಂಗೀಕರಿಸಲಾಗಿದೆ.

ಹದಿನಾರನೇ ವಿಧಾನಸಭೆಯ ಆರನೇ ಅಧಿವೇಶನ ಮಾ.3ರಿಂದ 21ರವರೆಗೆ ನಡೆದಿದೆ. ಮಾ.3ರಂದು ರಾಜ್ಯಪಾಲರು ಜಂಟಿ ಅಧಿವೇಶನವನ್ನುದ್ದೇಶಿಸಿ ಭಾಷಣ ಮಾಡಿದರು. ರಾಜ್ಯಪಾಲರ ಭಾಷಣದ ಮೇಲೆ 14 ಸದಸ್ಯರು 8.02 ಗಂಟೆಗಳ ಕಾಲ ಚರ್ಚೆಯಲ್ಲಿ ಭಾಗವಹಿಸಿದ್ದು, ಮಾ.17ರಂದು ರಾಜ್ಯಪಾಲರ ಭಾಷಣದ ವಂದನಾ ನಿರ್ಣಯ ಅಂಗೀಕರಿಸಲಾಯಿತು.

ಮಾ.7ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ 2025-26ನೇ ಸಾಲಿನ ರಾಜ್ಯ ಬಜೆಟ್‌ ಮಂಡಿಸಿದರು. ಬಜೆಟ್‌ ಮೇಲೆ 80 ಸದಸ್ಯರು, 28.56 ಗಂಟೆ ಕಾಲ ಚರ್ಚೆಯಲ್ಲಿ ಭಾಗವಹಿಸಿದ್ದರು. ಬಜೆಟ್ ಮೇಲಿನ ಚರ್ಚೆಗೆ ಸಿದ್ದರಾಮಯ್ಯ ಅವರು ಮಾ.21ರಂದು ಉತ್ತರ ನೀಡಿದ್ದು, ಅದನ್ನು ಮತಕ್ಕೆ ಹಾಕಿ ಅಂಗೀಕರಿಸಲಾಯಿತು. ಅಲ್ಲದೆ, 2024-25ನೇ ಸಾಲಿನ ಪೂರಕ ಅಂದಾಜುಗಳ ಮೂರನೇ ಹಾಗೂ ಅಂತಿಮ ಕಂತಿನ ಬೇಡಿಕೆಗೆ ಮಾ.21ರಂದೇ ಅಂಗೀಕರಿಸಲಾಯಿತು.

27 ವಿಧೇಯಕಗಳಿಗೆ ಅಂಗೀಕಾರ:

2025-26ನೇ ಸಾಲಿನ ಧನವಿನಿಯೋಗ ವಿಧೇಯಕಕ್ಕೆ ಅಧಿವೇಶನದ ಕೊನೆಯ ದಿನವಾದ ಶುಕ್ರವಾರ ಅಂಗೀಕರಿಸಲಾಯಿತು. ಅದರೊಂದಿಗೆ ಅಲ್ಪಸಂಖ್ಯಾತ (ಮುಸ್ಲಿಂ) ಸಮುದಾಯಕ್ಕೆ ಗುತ್ತಿಗೆಯಲ್ಲಿ ಮೀಸಲಾತಿ ನೀಡುವ ಕರ್ನಾಟಕ ಸಾರ್ವಜನಿಕ ಸಂಗ್ರಹಣೆಗಳಲ್ಲಿ ಪಾರದರ್ಶಕತೆ (ತಿದ್ದುಪಡಿ) ವಿಧೇಯಕ, ಗ್ರೇಟರ್‌ ಬೆಂಗಳೂರು ಆಡಳಿತ ವಿಧೇಯಕ ಸೇರಿ ಒಟ್ಟಾರೆ 27 ವಿಧೇಯಕಗಳನ್ನು ಮಂಡಿಸಿ, ಅನುಮೋದನೆ ಪಡೆಯಲಾಯಿತು.

ಹಾಗೆಯೇ, ಕೇಂದ್ರ ಸರ್ಕಾರಕ್ಕೆ ಸಲಹೆ ನೀಡುವ ಹಾಗೂ ಕೇಂದ್ರದ ವಿರುದ್ಧದ ನಾಲ್ಕು ನಿರ್ಣಯಗಳನ್ನು ಮಂಡಿಸಿ, ಅಂಗೀಕರಿಸಲಾಯಿತು. ಅದರೊಂದಿಗೆ ದರ್ಶನ್‌ ಪುಟ್ಟಣ್ಣಯ್ಯ, ಎಚ್‌.ಕೆ.ಸುರೇಶ್‌ ಅವರು 2 ಖಾಸಗಿ ವಿಧೇಯಕ ಮಂಡಿಸಿದರು.

ಉಳಿದಂತೆ, 12 ಅಧಿಸೂಚನೆಗಳು, 2 ಆಧ್ಯಾದೇಶಗಳು, 122 ವಾರ್ಷಿಕ ವರದಿಗಳು, 111 ಲೆಕ್ಕ ಪರಿಶೋಧನಾ ವರದಿಗಳು, ತಲಾ 1 ಅನುಪಾಲನಾ ವರದಿ ಹಾಗೂ ಅನುಸರಣಾ ವರದಿಯನ್ನು ಸದನದಲ್ಲಿ ಮಂಡಿಸಲಾಯಿತು. ಒಟ್ಟು 50 ಅರ್ಜಿಗಳನ್ನು ಸದನಕ್ಕೆ ಒಪ್ಪಿಸಲಾಯಿತು.

ಈ ಅಧಿವೇಶನದಲ್ಲಿ 3,096 ಪ್ರಶ್ನೆಗಳನ್ನು ಸ್ವೀಕರಿಸಲಾಗಿದ್ದು, ಅದರಲ್ಲಿ ಚುಕ್ಕೆ ಗುರುತಿನ 195 ಪ್ರಶ್ನೆಗಳ ಪೈಕಿ 189 ಹಾಗೂ ಚುಕ್ಕೆ ಗುರುತಿಲ್ಲದ 2,583 ಪ್ರಶ್ನೆಗಳ ಪೈಕಿ 2,190 ಪ್ರಶ್ನೆಗಳಿಗೆ ಸರ್ಕಾರ ಶಾಸಕರಿಗೆ ಉತ್ತರ ನೀಡಿದೆ. ನಿಯಮ 351ರ ಅಡಿ ಸ್ವೀಕೃತವಾದ 260 ಸೂಚನೆಗಳ ಪೈಕಿ 133 ಸೂಚನೆಗಳಿಗೆ ಉತ್ತರ ನೀಡಲಾಗಿದೆ. ಹಾಗೆಯೇ, ಗಮನ ಸೆಳೆಯುವ 388 ಸೂಚನೆಗಳ ಪೈಕಿ 175 ಸೂಚನಾ ಪತ್ರಗಳ ಉತ್ತರ ಸ್ವೀಕರಿಸಲಾಯಿತು.

18 ಶಾಸಕರ ಅಮಾನತು

ಗ್ಯಾರಂಟಿ ಅನುಷ್ಠಾನ ಸಮಿತಿಗೆ ಕಾಂಗ್ರೆಸ್‌ ಮುಖಂಡರು, ಕಾರ್ಯಕರ್ತರ ನೇಮಕ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಆರ್‌ಎಸ್‌ಎಸ್‌ ವಿರುದ್ಧ ನೀಡಿದ ಹೇಳಿಕೆ, ಸಹಕಾರ ಸಚಿವರ ಮೇಲೆ ಹನಿಟ್ರ್ಯಾಪ್ ಯತ್ನ, ಕೆಟಿಪಿಪಿ (ತಿದ್ದುಪಡಿ) ಕಾಯ್ದೆಗೆ ಸಂಬಂಧಿಸಿ ವಿರೋಧ ಪಕ್ಷಗಳು ಸದನದಲ್ಲಿ ಪ್ರತಿಭಟಿಸಿದವು. ಅದರಲ್ಲೂ ಸಹಕಾರ ಸಚಿವರ ಮೇಲೆ ಹನಿಟ್ರ್ಯಾಪ್ ಯತ್ನದ ತನಿಖೆಗೆ ಆಗ್ರಹಿಸಿ ಶುಕ್ರವಾರ ಸ್ಪೀಕರ್‌ ಪೀಠದ ಮೇಲಿನ ದಾಳಿಗೆ ಸಂಬಂಧಿಸಿ ಬಿಜೆಪಿಯ 18 ಶಾಸಕರನ್ನು 6 ತಿಂಗಳ ಕಾಲ ಅಮಾನತು ಮಾಡಿ ಸ್ಪೀಕರ್‌ ಯು.ಟಿ. ಖಾದರ್‌ ಆದೇಶಿಸಿದರು.