420 ರಾಜಕಾರಣ ಬಿಟ್ಟು ದೇಶದ್ರೋಹಿಗಳನ್ನು ಮಟ್ಟ ಹಾಕಿ: ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ

| Published : Sep 13 2024, 01:30 AM IST / Updated: Sep 13 2024, 05:56 AM IST

ಸಾರಾಂಶ

ಈ ಹಿಂದೆ ಜಿಲ್ಲೆಯ ಕೆರಗೋಡಿನಲ್ಲಿ ಹನುಮ ಧ್ವಜ ಇಳಿಸುವ ಕೆಲಸ ಮಾಡಿದರು. ರಾಜ್ಯದಲ್ಲಿರುವ ಹಿಂದೂ ವಿರೋಧಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದ ನಡವಳಿಕೆಯ ಪರಿಣಾಮವಾಗಿ ದೇಶದ್ರೋಹಿಗಳು ಇಂತಹ ಅಟ್ಟಹಾಸಕ್ಕೆ ಕೈ ಹಾಕುತ್ತಿದ್ದಾರೆ.

 ನಾಗಮಂಗಲ : ಗಣೇಶ ಮೂರ್ತಿ ಮೆರವಣಿಗೆ ಸಮಯದಲ್ಲಿ ಹಿಂದೂ ಕಾರ್ಯಕರ್ತರ ಮೇಲೆ ಕಲ್ಲು, ಬಾಟಲ್ ತೂರಿ ಪೆಟ್ರೋಲ್‌ ಬಾಂಬ್ ಎಸೆದಿರುವುದು, ತಲವಾರ್‌ ತಂದು ರಸ್ತೆಯಲ್ಲಿ ಹಲ್ಲೆ ನಡೆಸಲು ಯತ್ನ ನಡೆಸಿರುವುದು ದೇಶದ್ರೋಹಿಗಳ ಪೂರ್ವನಿಯೋಜಿತ ಕೃತ್ಯ. ಇಷ್ಟಾದರೂ ಕೂಡ ಆಡಳಿತ ಪಕ್ಷದ ಒತ್ತಡಕ್ಕೆ ಮಣಿದು ಪೊಲೀಸರು ಮೂಕ ಪ್ರೇಕ್ಷಕರಾಗಿ ಕೈಕಟ್ಟಿಕೊಂಡು ಎಲ್ಲವನ್ನೂ ನೋಡುತ್ತಿದ್ದಾರೆಂದರೆ ಇದು ನಾಚಿಕೆಗೇಡಿನ ಸಂಗತಿ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಕಿಡಿಕಾರಿದರು.

ಈ ಹಿಂದೆ ಜಿಲ್ಲೆಯ ಕೆರಗೋಡಿನಲ್ಲಿ ಹನುಮ ಧ್ವಜ ಇಳಿಸುವ ಕೆಲಸ ಮಾಡಿದರು. ರಾಜ್ಯದಲ್ಲಿರುವ ಹಿಂದೂ ವಿರೋಧಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದ ನಡವಳಿಕೆಯ ಪರಿಣಾಮವಾಗಿ ದೇಶದ್ರೋಹಿಗಳು ಇಂತಹ ಅಟ್ಟಹಾಸಕ್ಕೆ ಕೈ ಹಾಕುತ್ತಿದ್ದಾರೆ. ರೈತರ ಹೋರಾಟಕ್ಕೆ ದೇಶಾದ್ಯಂತ ಹೆಸರಾಗಿರುವ ಮಂಡ್ಯ ಜಿಲ್ಲೆ ಕೋಮು ಗಲಭೆ ವಿಚಾರದಲ್ಲಿ ರಾಷ್ಟ್ರದೆಲ್ಲೆಡೆ ಚರ್ಚೆಯಾಗುತ್ತಿರುವುದು ದುರಾದೃಷ್ಟ. ಆಡಳಿತ ಕಾಂಗ್ರೆಸ್ ಪಕ್ಷದ ಕುಮ್ಮಕ್ಕಿನಿಂದ ಈರೀತಿ ಚಟುವಟಿಕೆಗಳು ಹೆಚ್ಚಾಗಿ ದೇಶದ್ರೋಹಿಗಳು ಅಟ್ಟಹಾಸದಿಂದ ಮೆರೆಯುತ್ತಿದ್ದಾರೆ. ಗಲಭೆಯಲ್ಲಿ ನಷ್ಟವಾಗಿರುವ ಆಸ್ತಿ ಪಾಸ್ತಿಗಳ ಸಂಪೂರ್ಣ ವೆಚ್ಚದ ಪರಿಹಾರವನ್ನು ರಾಜ್ಯದ ಮುಖ್ಯಮಂತ್ರಿ ಹಾಗೂ ಗೃಹ ಸಚಿವರು ಭರಿಸಿಕೊಡಬೇಕೆಂದು ಆಗ್ರಹಿಸಿದರು.

ಲಾಂಗ್ ಮಚ್ಚು ಹಿಡಿದು ಇಂದು ರಸ್ತೆಯಲ್ಲಿ ಓಡಾಡಿರುವ ಕಿಡಿಗೇಡಿಗಳು ಕಾಂಗ್ರೆಸ್ ಪಕ್ಷದ ಶಾಸಕರು, ಮಂತ್ರಿಗಳ ಮನೆಗಳಿಗೂ ನುಗ್ಗುವ ಕಾಲ ದೂರವಿಲ್ಲ. ನಿಮ್ಮ 420 ರಾಜಕಾರಣ ಬಿಟ್ಟು ಹಿಂದೂ ಕಾರ್ಯಕರ್ತರ ಮೇಲೆ ದಬ್ಬಾಳಿಕೆ ದೌರ್ಜನ್ಯ ಮಾಡಿರುವ ದೇಶದ್ರೋಹಿಗಳನ್ನು ಮಟ್ಟಹಾಕಬೇಕು. ವಶಕ್ಕೆ ಪಡೆದಿರುವ ಹಿಂದೂ ಕಾರ್ಯಕರ್ತರನ್ನು ತಕ್ಷಣ ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿದರು.

ಭ್ರಷ್ಟಾಚಾರದಲ್ಲಿ ಮುಳುಗಿರುವ ಕಾಂಗ್ರೆಸ್ ಸರ್ಕಾರ ಕೋಮು ಗಲಭೆಗೆ ಕುಮ್ಮಕ್ಕು ನೀಡುವ ಮೂಲಕ ಹಿಂದಿನಿಂದ ಬೆನ್ನು ತಟ್ಟುವ ಕೆಲಸ ಮಾಡುತ್ತಿದೆ. ಇದರ ಪರಿಣಾಮವೇ ರಾಜ್ಯದಲ್ಲಿ ಇಂತಹ ಅಹಿತಕರ ಘಟನೆಗಳು ಹೆಚ್ಚು ನಡೆಯುತ್ತಿವೆ ಎಂದರು.

ವಿಧಾನ ಪರಿಷತ್‌ ಸದಸ್ಯ ಸಿ.ಟಿ.ರವಿ ಮಾತನಾಡಿ, ಶೇ.90ರಷ್ಟು ಹಿಂದೂಗಳೇ ಇರುವ ನಾಗಮಂಗಲದಲ್ಲಿ ಇಂತಹ ಸಂಕಷ್ಟ ಬರುತ್ತೆ ಎಂದರೆ ನಾವು ಎಲ್ಲಿದ್ದೇವೆಂಬ ಪ್ರಶ್ನೆ ಉದ್ಭವಗಾಗುತ್ತದೆ. ಪೆಟ್ರೋಲ್ ಬಾಂಬ್ ಹಾಕಿ ಅಂಗಡಿಗಳನ್ನು ಸುಟ್ಟು ಕೋಟ್ಯಂತರ ನಷ್ಟ ಮಾಡುವುದು, ಗಣಪತಿ ಮೆರವಣಿಗೆ ಮೇಲೆ ಕಲ್ಲು, ಚಪ್ಪಲಿ ತೂರುವುದು. ಬೆಳ್ಳೂರಿನಲ್ಲಿ ಕೆಲ ದಿನಗಳ ಹಿಂದೆ ಗಾಣಿಗ ಸಮಾಜದ ದೇವಿ ಉತ್ಸವದ ವೇಳೆ ಗಲಾಟೆ ಮಾಡಿರುವುದು ಸಣ್ಣ ಘಟನೆಯೇ. ನಾವು ಏನು ಮಾಡಿದರೂ ಸರ್ಕಾರ ನಮ್ಮ ಬೆಂಬಲಕ್ಕೆ ನಿಲ್ಲುತ್ತದೆ ಎಂದು ಅವರಿಗೆ ಗೊತ್ತಿದೆ. ಸರ್ಕಾರ ಮತಾಂಧರಿಗೆ ಬೆಂಬಲ ಕೊಡುವ ಕೆಲಸ ಮಾಡುತ್ತಿರುವುದರಿಂದಲೇ ಇಂತಹ ಕೃತ್ಯಗಳು ನಡೆಯುತ್ತಿವೆ ಎಂದು ಕಾಂಗ್ರೆಸ್ ಸರ್ಕಾರದ ವಿರುದ್ಧ ಹರಿಹಾಯ್ದರು.

ಗಣಪತಿ ಪ್ರತಿಷ್ಠಾಪಿಸಿದವರ ಮೇಲೆಯೇ ಎಫ್‌ಐಆರ್ ಹಾಕುತ್ತಾರೆಂದರೆ ಈ ಸರ್ಕಾರದ ಮೇಲೆ ಯಾರು ವಿಶ್ವಾಸ ಇಡುತ್ತಾರೆ. ಗೃಹ ಸಚಿವರ ಮನೆಗೆ ಬೆಂಕಿಹಾಕಿ ಸುಟ್ಟಿದ್ದರೆ ದೊಡ್ಡ ಘಟನೆಯಾಗುತ್ತಿತ್ತು. ಇದು ಆಕಸ್ಮಿಕ ಘಟನೆಯಲ್ಲ ಮಸೀದಿಯಲ್ಲಿ ಕಲ್ಲುಗಳನ್ನು ದಾಸ್ತಾನಿಟ್ಟುಕೊಂಡು, ಬೀಗ ಹಾಕಿದ್ದ ಅಂಗಡಿಗಳನ್ನು ಮುರಿದು ಪೆಟ್ರೋಲ್‌ ಬಾಂಬ್ ಎಸೆದು ಬೆಂಕಿ ಹಚ್ಚಿದ್ದಾರೆಂದರೆ ಪೂರ್ವನಿಯೋಜಿತ ಸಂಚಲ್ಲವೇ. ಹಾಗಾಗಿ ಈ ಪ್ರಕರಣದ ಸಮಗ್ರ ತನಿಖೆಯಾಗಬೇಕು. ಇಲ್ಲದಿದ್ದರೆ ಜನರೇ ಕಾನೂನು ಕೆಗೆತ್ತಿಕೊಳ್ಳುತ್ತಾರೆ. ಆಗ ರಕ್ಷಣೆ ಮಾಡುವವರಾರು ಯಾರು ಎಂದು ಪ್ರಶ್ನಿಸಿದರು.

ಮಾಜಿ ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣ, ಮಾಜಿ ಸಂಸದ ಪ್ರತಾಪ್‌ಸಿಂಹ, ಮಾಜಿ ಶಾಸಕ ಸುರೇಶ್‌ಗೌಡ ಮಾತನಾಡಿದರು. ಮಾಜಿ ಸಚಿವ ಕೆ.ಸಿ.ನಾರಾಯಣಗೌಡ, ಬಿಜೆಪಿ ಜಿಲ್ಲಾಧ್ಯಕ್ಷ ಇಂದ್ರೇಶ್ ಸೇರಿದಂತೆ ಬಿಜೆಪಿ ಹಾಗೂ ಜೆಡಿಎಸ್ ಪಕ್ಷದ ಮುಖಂಡರು ಇದ್ದರು.