ಸಾರಾಂಶ
ರಾಜ್ಯದ ವಾರ್ಷಿಕ ಆದಾಯದಲ್ಲಿ ಸಿಂಹಪಾಲು ಹೊಂದಿರುವ ಬೆಂಗಳೂರಿನ ಅಭಿವೃದ್ಧಿಗೆ ಬಿಡಿಗಾಸು ನೀಡಿರುವ ನಿಮ್ಮ ಹಾಗೆ ಬೆಂಗಳೂರನ್ನು ಪ್ರತ್ಯೇಕ ರಾಜ್ಯ ಮಾಡುವಂತೆ ನಾವು ಆಗ್ರಹಿಸುವುದಿಲ್ಲ ಎಂದು ಬಿಜೆಪಿ ಮುಖಂಡ ಹಾಗೂ ಬೆಂಗಳೂರು ನಾಗರಿಕ ಹಕ್ಕು ಹೋರಾಟ ಸಮಿತಿ ಅಧ್ಯಕ್ಷ ಎನ್.ಆರ್.ರಮೇಶ್ ವ್ಯಂಗ್ಯ.
ಕನ್ನಡಪ್ರಭ ವಾರ್ತೆ ಬೆಂಗಳೂರು
ರಾಜ್ಯದ ವಾರ್ಷಿಕ ಆದಾಯದಲ್ಲಿ ಸಿಂಹಪಾಲು ಹೊಂದಿರುವ ಬೆಂಗಳೂರಿನ ಅಭಿವೃದ್ಧಿಗೆ ಬಿಡಿಗಾಸು ನೀಡಿರುವ ನಿಮ್ಮ ಹಾಗೆ ಬೆಂಗಳೂರನ್ನು ಪ್ರತ್ಯೇಕ ರಾಜ್ಯ ಮಾಡುವಂತೆ ನಾವು ಆಗ್ರಹಿಸುವುದಿಲ್ಲ ಎಂದು ಬಿಜೆಪಿ ಮುಖಂಡ ಹಾಗೂ ಬೆಂಗಳೂರು ನಾಗರಿಕ ಹಕ್ಕು ಹೋರಾಟ ಸಮಿತಿ ಅಧ್ಯಕ್ಷ ಎನ್.ಆರ್.ರಮೇಶ್ ವ್ಯಂಗ್ಯವಾಗಿ ಹೇಳಿದ್ದಾರೆ.ಈ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಬಹಿರಂಗ ಪತ್ರ ಬರೆದಿರುವ ಅವರು, ರಾಜ್ಯದ ಬೊಕ್ಕಸಕ್ಕೆ ಪ್ರತಿ ವರ್ಷ ಕನಿಷ್ಠ ₹36,000 ಕೋಟಿ ಅಬಕಾರಿ ಸುಂಕ ಸೇರಿ ವಿವಿಧ ಆದಾಯದ ಮೂಲಗಳಿಂದ ₹1,73,300 ಕೋಟಿ ಮೊತ್ತದ ಆದಾಯ ಲಭಿಸುತ್ತಿದೆ. ಈ ಪೈಕಿ ಬೆಂಗಳೂರಿನ ಪಾಲು ಶೇ.46.3 ರಷ್ಟಿರುತ್ತದೆ. ಅಂದರೆ ಬೆಂಗಳೂರಿನಿಂದ ವಿವಿಧ ಆದಾಯ ಮೂಲಗಳಿಂದ ಸರ್ಕಾರಕ್ಕೆ ಕನಿಷ್ಠ ₹80,238 ಕೋಟಿಗೂ ಅಧಿಕ ಮೊತ್ತ ಲಭಿಸುತ್ತಿದೆ ಎಂದು ವಿವರಿಸಿದ್ದಾರೆ.
ಇದಲ್ಲದೆ ದೇಶದ ಐಟಿ ರಾಜಧಾನಿ ಎಂದೇ ಕರೆಯಲ್ಪಡುವ ಬೆಂಗಳೂರು ರಾಜ್ಯದ ಶೇ.98ರಷ್ಟು ತಂತ್ರಾಂಶ ರಫ್ತು ಮಾಡುತ್ತಿದೆ. ಈ ಮೂಲಕ ರಾಜ್ಯ ಸರ್ಕಾರದ ಬೊಕ್ಕಸಕ್ಕೆ ನಗರದಲ್ಲಿರುವ 3,856 ಐಟಿ ಕಂಪೆನಿಗಳ ಮೂಲಕ ವಾರ್ಷಿಕವಾಗಿ ಕನಿಷ್ಠ ₹1.30 ಲಕ್ಷ ಕೋಟಿಗಳಷ್ಟು ಬೃಹತ್ ಮೊತ್ತ ಆದಾಯದ ರೂಪದಲ್ಲಿ ಸಿಗುತ್ತದೆ ಎಂದು ಹೇಳಿದ್ದಾರೆ.ಇಷ್ಟು ದೊಡ್ಡ ಪ್ರಮಾಣದ ಆದಾಯವನ್ನು ಸರ್ಕಾರಕ್ಕೆ ನೀಡುವ ಬೆಂಗಳೂರಿನ ಅಭಿವೃದ್ಧಿಗೆ ಕಳೆದ ಬಜೆಟ್‌ನಲ್ಲಿ ₹3 ಸಾವಿರ ಕೋಟಿ ಹಾಗೂ ಪ್ರಸ್ತುತ ಸಾಲಿನಲ್ಲಿ ₹3050 ಕೋಟಿಯನ್ನು ಮುಖ್ಯಮಂತ್ರಿಗಳು ಅನುದಾನ ಮೀಸಲಿಟ್ಟಿದ್ದಾರೆ. ತನ್ಮೂಲಕ ಮುಖ್ಯಮಂತ್ರಿಗಳು ಬೆಂಗಳೂರಿಗೆ ದೊಡ್ಡ ಅನ್ಯಾಯವನ್ನು ಮಾಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ರಾಜ್ಯ ಸರ್ಕಾರಕ್ಕೆ ಬೆಂಗಳೂರಿನಿಂದ ವಾರ್ಷಿಕ ಆದಾಯದ ಪ್ರಮಾಣದಲ್ಲಿ ಶೇ.2.87ರಷ್ಟು ಮೊತ್ತವನ್ನು ಮಾತ್ರವೇ ದೇಶದ ಮಾಹಿತಿ ತಂತ್ರಜ್ಞಾನದ ರಾಜಧಾನಿ ಬೆಂಗಳೂರಿಗೆ ನೀಡಿ ಕಡೆಗಣಿಸಿದ್ದಾರೆ. ಈಗಲಾದರೂ ಆಯವ್ಯದಲ್ಲಿ ಬೆಂಗಳೂರು ಮಹಾನಗರಕ್ಕೆ ತಾವು ಮಾಡಿರುವ ಅನ್ಯಾಯವನ್ನು ಸರಿಪಡಿಸಿ ವಾಸ್ತವವಾಗಿ ಬೆಂಗಳೂರಿನ ಸಮಗ್ರ ಅಭಿವೃದ್ಧಿ ಕಾರ್ಯಗಳಿಗೆ ಅವಶ್ಯಕತೆಯಿರುವಷ್ಟು ಪ್ರಮಾಣದ ಅನುದಾನವನ್ನು ನೀಡುವ ಮೂಲಕ ತಮ್ಮಿಂದಾಗಿರುವ ಪ್ರಮಾದವನ್ನು ಸರಿಪಡಿಸಬೇಕೆಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರನ್ನು ಆಗ್ರಹಿಸಿದ್ದಾರೆ.