ತೈಲ ದರ ಏರಿಕೆ ಖಂಡಿಸಿ ಎಎಪಿ ಪ್ರತಿಭಟನೆ

| Published : Jun 26 2024, 12:42 AM IST / Updated: Jun 27 2024, 04:32 AM IST

ಸಾರಾಂಶ

ಗ್ಯಾರಂಟಿ ಬಗ್ಗೆ ಸರಿಯಾಗಿ ಅಧ್ಯಯನ ಮಾಡದೆ ತರಾತುರಿಯಲ್ಲಿ ಅನುಷ್ಠಾನಗೊಳಿಸಿದ್ದರಿಂದ ಹಾಗೂ ನಿರಂತರವಾಗಿ ನಡೆಯುತ್ತಿರುವ ಭ್ರಷ್ಟಾಚಾರ ತಡೆಯುವಲ್ಲಿ ವಿಫಲಗೊಂಡಿರುವುದರಿಂದ ರಾಜ್ಯ ಸರ್ಕಾರದ ಬೊಕ್ಕಸ ಖಾಲಿಯಾಗಿದೆ.

 ಕೋಲಾರ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಮಾಡಿರುವ ರಾಜ್ಯ ಸರ್ಕಾರದ ಕ್ರಮ ಖಂಡಿಸಿ ಆಮ್ ಆದ್ಮಿ ಪಾರ್ಟಿ ನಗರದ ಹೊಸ ಬಸ್ ನಿಲ್ದಾಣ ವೃತ್ತದಲ್ಲಿ ಪ್ರತಿಭಟನೆ ನಡೆಸಿ, ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.ಜಿಲ್ಲಾ ಆಮ್ ಆದ್ಮಿ ಪಾರ್ಟಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ವಿ.ರಮೇಶ್ ಮಾತನಾಡಿ, ಪೆಟ್ರೋಲ್ ಮತ್ತು ಡೀಸೆಲ್ ದರವನ್ನು ಕ್ರಮವಾಗಿ ೩ ರೂ. ಮತ್ತು3.50 ರೂ. ಹೆಚ್ಚಿಸುವ ಮೂಲಕ ರಾಜ್ಯ ಸರ್ಕಾರ ಜನಸಾಮಾನ್ಯರ ಮೇಲೆ ಬರೆ ಎಳೆದಿದೆ. ಇದು ಸರ್ಕಾರದ ಬೊಕ್ಕಸ ಖಾಲಿಯಾಗಿರುವುದನ್ನು ಸೂಚಿಸುತ್ತದೆ ಎಂದರು.

ಗ್ಯಾರಂಟಿ ತಂದ ಸಂಕಷ್ಟ

ಅಸಮರ್ಪಕ ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡಿ ಸಂಕಷ್ಟಕ್ಕೆ ಸಿಲುಕಿರುವ ಕಾಂಗ್ರೆಸ್ ಸರ್ಕಾರ ಪೆಟ್ರೋಲ್, ಡೀಸೆಲ್ ಮೇಲಿನ ತೆರಿಗೆ ಏರಿಕೆ ಮಾಡುವ ಮೂಲಕ ಜನಸಾಮಾನ್ಯರ ಮೇಲೆ ತೆರಿಗೆ ಭಾರವನ್ನು ಹೊರಿಸಿದೆ ಎಂದು ಕಿಡಿಕಾರಿದರು.ರಾಜ್ಯ ಕಾರ್ಯದರ್ಶಿ ಸುರೇಶ್ ಮಾತನಾಡಿ, ದೆಹಲಿಯ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರ ಜನಪ್ರಿಯ ಯೋಜನೆಗಳನ್ನು ನಕಲು ಮಾಡಿದ ಸಿದ್ದರಾಮಯ್ಯ ಅಧ್ಯಯನ ರಹಿತವಾಗಿ ತರಾತುರಿಯಲ್ಲಿ ಅನುಷ್ಠಾನಗೊಳಿಸಿದ್ದರಿಂದ, ನಿರಂತರವಾಗಿ ನಡೆಯುತ್ತಿರುವ ಭ್ರಷ್ಟಾಚಾರ ತಡೆಯುವಲ್ಲಿ ವಿಫಲಗೊಂಡಿರುವುದರಿಂದ ರಾಜ್ಯ ಸರ್ಕಾರದ ಬೊಕ್ಕಸ ಖಾಲಿಯಾಗಿದೆ. ಹಾಗಾಗಿ ಮದ್ಯ ಮತ್ತು ಪೆಟ್ರೋಲ್, ಡೀಸೆಲ್ ದರವನ್ನು ಭಾರಿ ಪ್ರಮಾಣದಲ್ಲಿ ಏರಿಕೆ ಮಾಡಲಾಗಿದೆ ಎ₹ದರು.

ಕಾಂಗ್ರೆಸ್‌ ಆಡಳಿತ ವೈಫಲ್ಯ

ಗ್ಯಾರಂಟಿ ಯೋಜನೆಗಳ ಮೂಲಕ ಒಂದು ಕೈಯಲ್ಲಿ ಕೊಟ್ಟಂತೆ ಮಾಡಿ, ಇನ್ನೊಂದು ಕೈಯಲ್ಲಿ ದುಪ್ಪಟ್ಟು ಹಣವನ್ನು ಕಸಿದುಕೊಳ್ಳುತ್ತಿದೆ. ಸದಾ ಬಡವರ, ಮಧ್ಯಮ ವರ್ಗದವರ ಪರ ಸರ್ಕಾರ ಎಂದು ಹೇಳುತ್ತಲೇ ಅವರ ಬೆನ್ನಿಗೆ ಚೂರಿ ಇರಿಯುತ್ತಿದೆ. ತನ್ನ ಆಡಳಿತ ವೈಫಲ್ಯವನ್ನು ಜನಸಾಮಾನ್ಯರ ಹೊರೆಯನ್ನಾಗಿಸಿ ಪರಿವರ್ತಿಸುತ್ತಿದೆ. ಜನರ ಮೇಲೆ ಸರ್ಕಾರದ ನಷ್ಟವನ್ನು ಹೊರಿಸುತ್ತೀರಿ ಎಂದಾದರೆ ಗೃಹಲಕ್ಷ್ಮಿ, ಗೃಹಜ್ಯೋತಿ, ಶಕ್ತಿ ಇತ್ಯಾದಿ ಯೋಜನೆಗಳು ಅಲಂಕಾರಕ್ಕೆಂದು ಮಾಡಿದ್ದೀರಾ ಎಂದು ಪ್ರಶ್ನಿಸಿದರು.

ಸಾಲದ ಹಣದಲ್ಲಿ ಉಚಿತ ಯೋಜನೆಗಳನ್ನು ಕೊಡುತ್ತಿರುವ ರಾಜ್ಯ ಸರ್ಕಾರ ನಷ್ಟದ ಹಾದಿಯಲ್ಲಿ ಸಾಗುತ್ತಿದೆ. ಲೋಕಸಭೆ ಚುನಾವಣೆಯ ಸೋಲಿನ ನೆಪವೊಡ್ಡಿ ಗ್ಯಾರಂಟಿ ಯೋಜನೆಗಳನ್ನು ರದ್ದು ಪಡಿಸಲು ಯತ್ನಿಸುತ್ತಿದೆ. ಆದರೆ, ನುಡಿದಂತೆ ನಡೆಯುತ್ತಿರುವ ಸರ್ಕಾರ ಎಂದು ಹೇಳಿಕೊಂಡಿರುವ ಸಿದ್ದರಾಮಯ್ಯ ಜನರಿಂದಲೇ ತೆರಿಗೆ ಮೂಲಕ ಬೊಕ್ಕಸ ತುಂಬಿಸಿಕೊಳ್ಳಲು ಯತ್ನಿಸುತ್ತಿರುವುದು ವಿಪರ್ಯಾಸ ಎಂದು ಆಕ್ರೋಶ ವ್ಯಕ್ತಪಡಿಸಿದರು.ಸರಕು ಸಾಗಣೆ ದರ ಹೆಚ್ಚಳ

ರಾಜ್ಯ ಜಂಟಿ ಕಾರ್ಯದರ್ಶಿ ನಾಗರಾಜ್ ಮಾತನಾಡಿ, ಇದೀಗ ಪೆಟ್ರೋಲ್ ದರ ಮತ್ತೆ ನೂರರ ಗಡಿ ದಾಟಿದೆ. ಡೀಸೆಲ್ ದರ 90ರ ಸಮೀಪಕ್ಕೆ ಬಂದಿದೆ. ಇವೆರಡರ ದರ ಜಾಸ್ತಿಯಾಗುತ್ತಿದ್ದಂತೆ ಆಹಾರ ಪದಾರ್ಥಗಳ ದರ ಹೆಚ್ಚಾಗುತ್ತದೆ. ಜನಸಾಮಾನ್ಯರ ದೈನಂದಿನ ಖರ್ಚುವೆಚ್ಚಗಳು ಏರಿಕೆಯಾಗುತ್ತವೆ. ಈಗಾಗಲೇ ಹಣದುಬ್ಬರ, ನಿರುದ್ಯೋಗ, ಏರುತ್ತಿರುವ ಅನಾರೋಗ್ಯ ಪ್ರಮಾಣ ಜನಸಾಮಾನ್ಯರನ್ನು ಹೈರಾಣಾಗಿಸಿದೆ. ಇದರ ಬೆನ್ನಲ್ಲೇ ರಾಜ್ಯ ಸರ್ಕಾರ ಪೆಟ್ರೋಲ್, ಡೀಸೆಲ್ ದರ ಏರಿಕೆ ಮಾಡಿ ಬದುಕಿನ ಜೊತೆ ಆಟವಾಡುತ್ತಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರಿಂದ ಇಂತಹ ಜನವಿರೋಧಿ ನಡೆಯನ್ನು ನಿರೀಕ್ಷಿಸಿರಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು. ಪ್ರತಿಭಟನೆಯಲ್ಲಿ ಜಿಲ್ಲಾ ಸಂಘಟನಾ ಕಾರ್ಯದರ್ಶಿ ವಿಜಯಕುಮಾರ್, ಜಿಲ್ಲಾ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಜಮೀಲ್, ಮಾಲೂರು ತಾಲೂಕು ಅಧ್ಯಕ್ಷ ರೇವಣ್ಣ, ನಗರ ಘಟಕದ ಅಧ್ಯಕ್ಷ ಸಯ್ಯದ್ ನಿಸ್ವಾನ್ ಮುಖಂಡರಾದ ಜಯಪ್ರಭು, ನವಾಜ್, ಖಾದರ್ ಇದ್ದರು.