ಸಾರಾಂಶ
ಬೆಂಗಳೂರು : ಕಾಶ್ಮೀರದ ಪಹಲ್ಗಾಮ್ ಉಗ್ರ ದಾಳಿ ಖಂಡಿಸಿ ಅಖಿಲ ಭಾರತ ವಿದ್ಯಾರ್ಥಿ ಪರಿಷತ್‌ನಿಂದ ನಗರದ ಸ್ವಾತಂತ್ರ್ಯ ಉದ್ಯಾನದಲ್ಲಿ ಬುಧವಾರ ಪ್ರತಿಭಟನೆ ನಡೆಯಿತು.
ಪ್ರವಾಸಿಗರ ಮೇಲೆ ದಾಳಿ ನಡೆಸಿ ಹತ್ಯೆಗೈದ ಉಗ್ರರನ್ನು ಹಾಗೂ ದಾಳಿಯ ಹಿಂದಿರುವ ಪಾಕಿಸ್ತಾನಕ್ಕೆ ಪತ್ತೆ ಮಾಡಿ ತಕ್ಕ ಉತ್ತರ ನೀಡಬೇಕು. ಜತೆಗೆ ಕಾಶ್ಮೀರಕ್ಕೆ ಬರುವ ಪ್ರವಾಸಿಗರಿಗೆ ಸೂಕ್ತ ಭದ್ರತೆ ಒದಗಿಸಬೇಕು ಎಂದು ಒತ್ತಾಯಿಸಿದರು. ಜಮ್ಮು ಮತ್ತು ಕಾಶ್ಮೀರ ಭಾರತದ ಸಿಂಧೂರ ಎನ್ನುವುದನ್ನು ವಿದ್ಯಾರ್ಥಿ ಪರಿಷತ್ ಹಿಂದಿನಿಂದಲೂ ಪ್ರತಿಪಾದಿಸುತ್ತಿದೆ.
ಈಚೆಗೆ ಕೇಂದ್ರ ಸರ್ಕಾರದ ನೀತಿಗಳಿಂದ ಜಮ್ಮು ಕಾಶ್ಮೀರದಲ್ಲಿ ಶಾಂತಿ ಸುವ್ಯವಸ್ಥೆ ಹತೋಟಿಗೆ ಬಂದಿತ್ತು. ಆದರೆ, ಜಮ್ಮು ಕಾಶ್ಮೀರದ ಪಹಲ್ಗಾಮ್ ಪ್ರವಾಸಿಗರ ಮೇಲೆ ನಡೆದಿರುವ ದಾಳಿ ಉಗ್ರರ ಹೇಡಿತನದ್ದಾಗಿದೆ ಎಂದು ಖಂಡಿಸಿದರು. ಜಮ್ಮು ಮತ್ತು ಕಾಶ್ಮೀರ ಭಾರತದ ಅವಿಭಾಜ್ಯ ಅಂಗ. ಇದು ಸಾರ್ವಕಾಲಿಕ ಸತ್ಯ. ಅಲ್ಲಿನ ಪ್ರತ್ಯೇಕವಾದಿ ಮನಸ್ಥಿತಿ ಬದಲಿಸಬೇಕು ಎಂದು ಆಗ್ರಹಿಸಿದರು.
ಎಬಿವಿಪಿ ಮಲ್ಲೇಶ್ವರಂ ಜಿಲ್ಲಾ ಸಂಚಾಲಕ್ ಕೋಟಪ್ಪ ಮರಡಿ, ಪ್ರಾಂತ ಮಾಧ್ಯಮ ಸಂಚಾಲಕಿ ಪ್ರೀತಿ ಆರಾಧ್ಯ, ದಿವಿಜ್ ಗೌಡ, ಧ್ಯಾನ್, ಭಾಗ್ಯವಂತ, ರಾಮ ಸ್ವರೂಪ್ ಹಾಗೂ ಶಿವ ಇದ್ದರು.