ರಾಜ್ಯದಲ್ಲಿ ಈಗ ಮತ್ತೆ ಸಿಎಂ ಬದಲಾವಣೆ ಕೂಗು

| N/A | Published : Oct 03 2025, 01:07 AM IST / Updated: Oct 03 2025, 04:00 AM IST

ಸಾರಾಂಶ

ರಾಜ್ಯದಲ್ಲಿ ಮುಖ್ಯಮಂತ್ರಿಗಳ ಬದಲಾವಣೆ ಬಗ್ಗೆ ಯಾರೂ ಮಾತಾಡಬಾರದು ಎಂದು ಇತ್ತೀಚೆಗೆ ಕಾಂಗ್ರೆಸ್‌ ಹೈಕಮಾಂಡ್‌ ಫರ್ಮಾನು ಹೊರಡಿಸಿತ್ತು.   ಈಗ ಮತ್ತೆ ಕೂಗು ಎದ್ದಿದೆ.  ಡಿಕೆಶಿ ಸಿಎಂ ಆಗುವುದು ನಿಶ್ಚಿತ’ ಎಂದ ಕೆಲವು ಕಾಂಗ್ರೆಸ್‌ ಶಾಸಕರು ಹಾಗೂ ಪಕ್ಷದ ಮುಖಂಡರು

ಬೆಂಗಳೂರು‘ : ರಾಜ್ಯದಲ್ಲಿ ಮುಖ್ಯಮಂತ್ರಿಗಳ ಬದಲಾವಣೆ ಬಗ್ಗೆ ಯಾರೂ ಮಾತಾಡಬಾರದು ಎಂದು ಇತ್ತೀಚೆಗೆ ಕಾಂಗ್ರೆಸ್‌ ಹೈಕಮಾಂಡ್‌ ಫರ್ಮಾನು ಹೊರಡಿಸಿತ್ತು. ಈಗ ಮತ್ತೆ ಸಿಎಂ ಬದಲಾವಣೆ ಕೂಗು ಎದ್ದಿದೆ. ಕೆಲವು ಕಾಂಗ್ರೆಸ್‌ ಶಾಸಕರು ಹಾಗೂ ಪಕ್ಷದ ಮುಖಂಡರು ‘ಡಿಕೆಶಿ ಸಿಎಂ ಆಗುವುದು ನಿಶ್ಚಿತ’ ಎಂದು ಹೇಳಿದ್ದಾರೆ. ಆದರೆ ಈ ಸಾಧ್ಯತೆಯನ್ನು ಖುದ್ದು ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ್‌ ತಳ್ಳಿಹಾಕಿದ್ದಾರೆ. ಇಂಥ ಹೇಳಿಕೆಯನ್ನು ಯಾರೂ ನೀಡಬಾರದು ಎಂದಿರುವ ಡಿಕೆಶಿ, ಈ ಹೇಳಿಕೆ ನೀಡಿದವರಿಗೆ ನೋಟಿಸ್‌ ಕೂಡ ಜಾರಿ ಮಾಡಿದ್ದಾರೆ.

ಡಿಕೆಶಿ ಒಂದು ದಿನ ಸಿಎಂ ಆಗೇ ಆಗ್ತಾರೆ: ಕೈ ಶಾಸಕ ರಂಗನಾಥ್‌

  ಬೆಂಗಳೂರು‘ : ರಾಜ್ಯದಲ್ಲಿ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ 140 ಸ್ಥಾನಗಳನ್ನು ಗೆಲ್ಲುವ ಹಿಂದೆ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರ ಬಹಳಷ್ಟು ಶ್ರಮವಿದೆ. ಹಾಗಾಗಿ ಹೈಕಮಾಂಡ್‌ ಅವರಿಗೆ ಸೂಕ್ತ ಸ್ಥಾನ ನೀಡುವ ಕುರಿತು ನಿರ್ಧಾರ ಮಾಡಬೇಕು. ಒಂದಲ್ಲ ಒಂದು ದಿನ ಡಿ.ಕೆ.ಶಿವಕುಮಾರ್‌ ಮುಖ್ಯಮಂತ್ರಿ ಆಗಿಯೇ ಆಗುತ್ತಾರೆ’

- ಹೀಗೆಂದು ಹೇಳುವ ಮೂಲಕ ಕುಣಿಗಲ್ ಶಾಸಕ ಎಚ್.ಡಿ.ರಂಗನಾಥ್ ಅವರು ರಾಜ್ಯದಲ್ಲಿ ಅಧಿಕಾರ ಹಸ್ತಾಂತರ ವಿಚಾರ ಮತ್ತೆ ಮುನ್ನೆಲೆ ತರುವ ಪ್ರಯತ್ನ ಮಾಡಿದ್ದಾರೆ.‘ಅಧಿಕಾರ ಹಸ್ತಾಂತರ ಕುರಿತು ಬಹಿರಂಗ ಹೇಳಿಕೆ ನೀಡಬಾರದು’ ಎಂಬ ಹೈಕಮಾಂಡ್‌ ಕಟ್ಟಾಜ್ಞೆ ಹೊರತಾಗಿಯೂ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡುವಾಗ ಈ ವಿಚಾರ ಪ್ರಸ್ತಾಪಿಸಿದ ರಂಗನಾಥ್ ತಮ್ಮ ರಾಜಕೀಯ ಗುರುಗಳೂ, ಸಂಬಂಧಿಕರೂ ಆದ ಡಿ.ಕೆ.ಶಿವಕುಮಾರ್‌ ಅವರಿಗೆ ಮುಖ್ಯಮಂತ್ರಿ ಸ್ಥಾನ ಸಿಗಬೇಕೆಂದು ಹೇಳಿದರು.

‘ಡಿ.ಕೆ.ಶಿವಕುಮಾರ್‌ ಅವರು ನಮ್ಮ ರಾಜಕೀಯ ಗುರುಗಳು. ಅವರ ಸಮಾಜಸೇವೆ, ಆಡಳಿತ ವೈಖರಿ, ಅಭಿವೃದ್ಧಿ ಮಾದರಿಗಳನ್ನು ನಡೆ-ನುಡಿಗಳಲ್ಲಿ ನೋಡುತ್ತಾ ಬಂದಿದ್ದೇವೆ. ಪಕ್ಷ 140 ಸ್ಥಾನಗಳನ್ನು ಗಳಿಸುವ ಹಿಂದೆ ಡಿಕೆಶಿ ಅವರ ಬಹಳಷ್ಟು ಶ್ರಮವಿದೆ ಎಂದು ಪಕ್ಷದ ಪ್ರತಿಯೊಬ್ಬ ನಾಯಕರೂ ಹೇಳುತ್ತಾರೆ. ಹಾಗಾಗಿ ಅವರಿಗೆ ಸೂಕ್ತ ಸ್ಥಾನ ನೀಡುವ ಬಗ್ಗೆ ಹೈಕಮಾಂಡ್‌ ನಿರ್ಧಾರ ಮಾಡಬೇಕು. ಅವರು ಮುಖ್ಯಮಂತ್ರಿ ಆಗಬೇಕು ಎನ್ನುವುದು ಪಕ್ಷದ ಕಾರ್ಯಕರ್ತರು, ಮುಖಂಡರು, ನಾಯಕರು ಸೇರಿ ನಮ್ಮೆಲ್ಲರ ಅಪೇಕ್ಷೆಯೂ ಆಗಿದೆ. ಅವರು ಒಂದಲ್ಲ ಒಂದು ದಿನ ಮುಖ್ಯಮಂತ್ರಿ ಆಗಿಯೇ ಆಗುತ್ತಾರೆ’ ಎಂದರು.

ಇನ್ನೂ ಎರಡೂವರೆ ವರ್ಷ ನಾನೇ ಸಿಎಂ: ಸಿದ್ದು ಪುನರುಚ್ಚಾರ

 ಮೈಸೂರು  : ಮುಖ್ಯಮಂತ್ರಿಯಾಗಿ ಇನ್ನೂ ಎರಡೂವರೆ ವರ್ಷ ನಾನೇ ಇರುತ್ತೇನೆ ಎಂದು ಸಿದ್ದರಾಮಯ್ಯ ಮತ್ತೊಮ್ಮೆ ಸ್ಪಷ್ಟಪಡಿಸಿದ್ದಾರೆ. ಈ ಮೂಲಕ, ‘ಡಿಸಿಎಂ ಡಿ.ಕೆ. ಶಿವಕುಮಾರ್‌ ಸಿಎಂ ಆಗಲಿದ್ದಾರೆ’ ಎಂದು ಪಕ್ಷದ ಕೆಲವು ನಾಯಕರು ನೀಡಿದ ಹೇಳಿಕೆಗೆ ತಿರುಗೇಟು ನೀಡಿದ್ದಾರೆ.

ಮೈಸೂರು ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಮುಂದಿನ ವರ್ಷವೂ ನಾನೇ ಯಾಕೆ ಅಂಬಾರಿಗೆ ಪುಷ್ಪಾರ್ಚನೆ ಮಾಡಬಾರದು? ಇಷ್ಟು ವರ್ಷ ಮಾಡಿಕೊಂಡು ಬಂದಿದ್ದೇನೆ. ಐ ಹೋಪ್ ಮಾಡುತ್ತೇನೆ‌’ ಎಂದರು.‘ಎರಡನೇ ಬಾರಿ ಸಿಎಂ‌ ಆಗೋದಿಲ್ಲ ಅಂದಿದ್ದರು. ಸಿಎಂ‌ ಕೂಡ ಆಗಿದ್ದೇನೆ. ಬಹಳ ಜನ ಬಹಳಷ್ಟು ಹೇಳುತ್ತಾರೆ, ಹೇಳಲಿ. ನವೆಂಬರ್‌ನಲ್ಲಿ ಸರ್ಕಾರಕ್ಕೆ ಎರಡೂವರೆ ವರ್ಷ ತುಂಬುವ ಕಾರಣ ಆ ರೀತಿ ಮಾತನಾಡುತ್ತಾರೆ. ಹೈಕಮಾಂಡ್ ತೀರ್ಮಾನಕ್ಕೆ ಎಲ್ಲರೂ ಬದ್ಧರಾಗಿರಬೇಕು. ಹೈಕಮಾಂಡ್ ಹೇಳಿದಂತೆ ಕೇಳಬೇಕು’ ಎಂದು ಅವರು ಹೇಳಿದರು.

‘ಬಿಜೆಪಿಗೆ ವಸ್ತುಸ್ಥಿತಿ ಗೊತ್ತಿಲ್ಲ. ಬಿಜೆಪಿಯವರು ಹೇಳಿದ ಹಾಗೆ ಏನು ನಡೆಯುವುದಿಲ್ಲ. ಬಿಜೆಪಿಯವರು ಜ್ಯೋತಿಷಿಗಳಲ್ಲ. ಬಿಜೆಪಿ ಹೇಳಿದ್ದೆಲ್ಲಾ ಸುಳ್ಳಾಗಿದೆ’ ಎಂದು ಅವರು ಕುಟುಕಿದರು.ಸಿದ್ದು ಬದಲಿಲ್ಲ- ಮಹದೇವಪ್ಪ:

ಈ ನಡುವೆ, ಸಚಿವ ಎಚ್‌.ಸಿ. ಮಹದೇವಪ್ಪ ಮಾತನಾಡಿ, ‘ಸಿದ್ದರಾಮಯ್ಯ ಅವರು 5 ವರ್ಷ ಮುಖ್ಯಮಂತ್ರಿ ಆಗಿರುತ್ತಾರೆ. ಯಾರ್ ಯಾರದ್ದೋ ಹೇಳಿಕೆಗಳಿಗೆ ಹೆಚ್ಚು ಮಹತ್ವ ಕೊಡಬೇಡಿ. ಮುಖ್ಯಮಂತ್ರಿಗಳೇ ನಾನೇ ಮುಂದಿನ ವರ್ಷವೂ ಪುಷ್ಪಾರ್ಚನೆ ಮಾಡುತ್ತೇನೆ ಎಂದು ಹೇಳಿದ್ದಾರೆ. ಮತ್ತೆ ಯಾಕೆ ಆ ಚರ್ಚೆ‌?’ ಎಂದರು.

ಸಿಎಂ ಬದಲಾವಣೆ ಬಗ್ಗೆ ಮಾತಾಡಿದ್ರೆ ಸೂಕ್ತ ಕ್ರಮ: ಡಿಕೆಶಿ

  ಬೆಂಗಳೂರು :  ‘ರಾಜ್ಯದಲ್ಲಿ ಅಧಿಕಾರ ಹಂಚಿಕೆ ಬಗ್ಗೆ ಅನಗತ್ಯ ಚರ್ಚೆ ಮಾಡುವುದು ಪಕ್ಷ ವಿರೋಧಿ ಕೆಲಸ. ಈ ಬಗ್ಗೆ ಮಾತನಾಡುವುದು ಪಕ್ಷಕ್ಕೆ ಹಾನಿ ಮಾಡಿದಂತೆ. ಅಂಥವರ ವಿರುದ್ಧ ಕ್ರಮ ಕೈಗೊಳ್ಳಲಾಗವುದು ಹಾಗೂ ನೋಟಿಸ್‌ ನೀಡಲಾಗುವುದು’ ಎಂದು ಉಪಮುಖ್ಯಮಂತ್ರಿ ಮತ್ತು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಎಚ್ಚರಿಕೆ ನೀಡಿದ್ದಾರೆ.ಕೆಪಿಸಿಸಿಯಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿ, ‘ಅಧಿಕಾರ ಹಂಚಿಕೆ, ಮುಖ್ಯಮಂತ್ರಿ ಬದಲಾವಣೆ ಕುರಿತು ಯಾರೂ ಮಾತನಾಡುವಂತಿಲ್ಲ. ಹಾಗೊಮ್ಮೆ ಮಾತನಾಡಿದರೆ ಪಕ್ಷ ವಿರೋಧಿ ಕೆಲಸವಾಗಲಿದೆ. ರಾಜ್ಯದಲ್ಲಿ ಯಾವುದೇ ಅಧಿಕಾರ ಹಂಚಿಕೆ ವಿಚಾರವಿಲ್ಲ. ಈ ಬಗ್ಗೆ ಮಾತನಾಡುವ ಎಲ್ಲರಿಗೂ ನೋಟಿಸ್‌ ನೀಡಲಾಗುವುದು. ಸಿದ್ದರಾಮಯ್ಯ ಅವರ ಪರ ಅಥವಾ ನನ್ನ ಪರ ಮಾತನಾಡಿದರೂ ಪಕ್ಷಕ್ಕೆ ಹಾನಿ ಮಾಡಿದಂತೆಯೇ. ಆ ಬಗ್ಗೆ ಚರ್ಚಿಸದಂತೆ ನಾನೇ ಹೇಳಿದ್ದೇನೆ’ ಎಂದರು.

‘ಹೈಕಮಾಂಡ್‌ ಹೇಳಿದಂತೆ ಕೇಳುವುದಾಗಿ ಸಿದ್ದರಾಮಯ್ಯ ಅವರೇ ಹೇಳಿದ್ದಾರೆ. ಅವರ ಮಾತೇ ಅಂತಿಮ. ನಮಗೆ ಪಕ್ಷ ಮುಖ್ಯ. ಪಕ್ಷ ಹೇಳಿದಂತೆ ನಡೆಯುವ ಶಿಸ್ತಿನ ಸಿಪಾಯಿಗಳು ನಾವು’ ಎಂದು ಸ್ಪಷ್ಟಪಡಿಸಿದರು.‘ಕಾಂಗ್ರೆಸ್‌ನಲ್ಲಿ ನವೆಂಬರ್‌ ಕ್ರಾಂತಿ ಫಿಕ್ಸ್‌ ಆಗಿದೆ ಎಂದು ಬಿಜೆಪಿ ನಾಯಕರ ಹೇಳಿಕೆ ಕುರಿತು ಪ್ರತಿಕ್ರಿಯಿಸಿ, ಬಿಜೆಪಿ ನಾಯಕರು ಅವರ ಪಕ್ಷದಲ್ಲಿನ ಕ್ರಾಂತಿ ಬಗ್ಗೆ ಚರ್ಚೆ ಮಾಡಿಕೊಳ್ಳಲಿ. ಅವರ ಆಂತರಿಕ ಸಮಸ್ಯೆ ಚರ್ಚೆ ಮಾಡಿ ಅವರ ಮನೆ ಸರಿ ಮಾಡಿಕೊಳ್ಳಲಿ. ಅವರಿಗೆ ಅಗತ್ಯ ಸೂಜಿದಾರವನ್ನು ನಾನು ಕಳುಹಿಸಿಕೊಡುತ್ತೇನೆ. ತಮ್ಮ ಪಕ್ಷದ ಹರಕುಗಳನ್ನು ಹೊಲಿದುಕೊಳ್ಳಲಿ ಎಂದು ತಿರುಗೇಟು ನೀಡಿದರು.

Read more Articles on