ಪುತ್ರನಿಗೆ ಲೋಕಸಭಾ ಟಿಕೆಟ್ ಕೈತಪ್ಪಿದ್ದರಿಂದ ಅಸಮಾಧಾನಗೊಂಡು ಶಿವಮೊಗ್ಗ ಕ್ಷೇತ್ರದಿಂದ ಬಂಡಾಯ ಸ್ವರ್ಧೆ ಘೋಷಿಸಿರುವ ಮಾಜಿ ಸಚಿವ ಕೆ.ಎಸ್‌.ಈಶ್ವರಪ್ಪ ಅವರಿಗೆ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರಿಂದ ಬುಧವಾರ ದೆಹಲಿಗೆ ಬರುವಂತೆ ಬುಲಾವ್‌ ಬಂದಿದೆ.

 ಶಿವಮೊಗ್ಗ : ಪುತ್ರನಿಗೆ ಲೋಕಸಭಾ ಟಿಕೆಟ್ ಕೈತಪ್ಪಿದ್ದರಿಂದ ಅಸಮಾಧಾನಗೊಂಡು ಶಿವಮೊಗ್ಗ ಕ್ಷೇತ್ರದಿಂದ ಬಂಡಾಯ ಸ್ವರ್ಧೆ ಘೋಷಿಸಿರುವ ಮಾಜಿ ಸಚಿವ ಕೆ.ಎಸ್‌.ಈಶ್ವರಪ್ಪ ಅವರಿಗೆ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರಿಂದ ಬುಧವಾರ ದೆಹಲಿಗೆ ಬರುವಂತೆ ಬುಲಾವ್‌ ಬಂದಿದೆ.

ರಾಜ್ಯದಲ್ಲಿ ಮಂಗಳವಾರದಿಂದ ಅಧಿಕೃತವಾಗಿ ಪ್ರಚಾರಕ್ಕಿಳಿದಿರುವ ಅಮಿತ್‌ ಶಾ ಅವರು ಟಿಕೆಟ್‌ ಹಂಚಿಕೆ ಬಳಿಕ ಪಕ್ಷದಲ್ಲಿ ಭುಗಿಲೆದ್ದಿರುವ ಬಂಡಾಯ ಶಮನಕ್ಕೆ ವಿಶೇಷ ಮುತವರ್ಜಿ ವಹಿಸಿದ್ದು, ಇದರ ಭಾಗವಾಗಿ ಪಕ್ಷದ ಹಿರಿಯ ನಾಯಕ ಈಶ್ವರಪ್ಪ ಅವರಿಗೆ ಖುದ್ದು ಕರೆ ಮಾಡಿ ಮಾತನಾಡಿದ್ದಾರೆ. ಇದೇ ವೇಳೆ ದೆಹಲಿಗೆ ಬಂದು ತಮ್ಮನ್ನು ಭೇಟಿಯಾಗುವಂತೆ ಸೂಚಿಸಿದ್ದಾರೆ.

ಈ ವಿಚಾರವನ್ನು ಸ್ವತಃ ಈಶ್ವರಪ್ಪನವರೇ ಶಿವಮೊಗ್ಗದಲ್ಲಿ ಸುದ್ದಿಗೋಷ್ಠಿ ನಡೆಸಿ ಖಚಿತಪಡಿಸಿದ್ದು, ತಾವು ದೆಹಲಿಗೆ ತೆರಳುತ್ತಿರುವುದಾಗಿಯೂ ತಿಳಿಸಿದ್ದಾರೆ.

ಸ್ಪರ್ಧೆಯಿಂದ ಹಿಂದೆ ಸರಿಯಲ್ಲ:

ಪಕ್ಷದ ಸಾಮಾನ್ಯ ಕಾರ್ಯಕರ್ತನಾಗಿ ವರಿಷ್ಠರು ಕರೆದಾಗ ಗೌರವ ಕೊಡುವುದು ನನ್ನ ಕರ್ತವ್ಯ. ಹೀಗಾಗಿ ನಾನು ದೆಹಲಿಗೆ ಹೋಗುತ್ತಿದ್ದೇನೆಯೇ ಹೊರತು ಸ್ಪರ್ಧೆಯಿಂದ ಯಾವುದೇ ಕಾರಣಕ್ಕೂ ಹಿಂದೆ ಸರಿಯುವ ಮಾತೇ ಇಲ್ಲ ಎಂದು ಇದೇ ವೇಳೆ ಈಶ್ವರಪ್ಪ ಸ್ಪಷ್ಟಪಡಿಸಿದರು.

ಅಮಿತ್ ಶಾ ಅವರು ಬೆಳಗ್ಗೆ ಕರೆ ಮಾಡಿ ‘ನೀವು ಹಿರಿಯ ನಾಯಕರಿದ್ದೀರಿ. ಆದರೂ ಪಕ್ಷೇತರವಾಗಿ ಸ್ಪರ್ಧೆ ಮಾಡುತ್ತಿರುವುದು ಅಚ್ಚರಿ ತಂದಿದೆ. ನೀವ್ಯಾಕೆ ಈ ರೀತಿ ಸ್ಪರ್ಧೆ ಮಾಡುತ್ತಿದ್ದೀರಿ?’ ಎಂದು ಕೇಳಿದರು. ‘ಮೂರು ತಿಂಗಳ ಹಿಂದೆ ನಿಮ್ಮೊಂದಿಗೆ ಮಾತನಾಡಿದ್ದೆ. ಆದರೂ ಯಾವುದೇ ಬದಲಾವಣೆ ಮಾಡಿಲ್ಲ. ಈಗ ನೀವು ದೆಹಲಿಗೆ ಕರೆಯುತ್ತಿದ್ದೀರಿ, ನಾನು ಬರುತ್ತೇ‌ನೆ. ಆದರೆ, ಸ್ಪರ್ಧೆಯಿಂದ ಯಾವುದೇ ಕಾರಣಕ್ಕೂ ಹಿಂದೆ ಸರಿಯಲ್ಲ’ ಎಂದು ಸ್ಪಷ್ಟವಾಗಿ ತಿಳಿಸಿದ್ದೇನೆ ಎಂದು ಮಾತುಕತೆ ಕುರಿತು ಮಾಹಿತಿ ನೀಡಿದರು.

ಹಿಂದೂ ಪರ ನಾಯಕರು, ಹಿಂದುಳಿದ ವರ್ಗದ ನಾಯಕರನ್ನು ರಾಜ್ಯ ಬಿಜೆಪಿಯಲ್ಲಿ ಕಡೆಗಣಿಸಲಾಗುತ್ತಿದೆ. ಇದರ ವಿರುದ್ಧ ನನ್ನ ಸ್ಪರ್ಧೆ. ಹಿಂದೆ ಸಂಗೊಳ್ಳಿ ರಾಯಣ್ಣ ಬ್ರಿಗೇಡ್‌ ಮಾಡಿದಾಗ ವರಿಷ್ಠರ ಸೂಚನೆಯಂತೆ ಅದನ್ನು ನಿಲ್ಲಿಸಿದ್ದೆ. ವಿಧಾನಸಭೆ ಚುನಾವಣೆಗೆ ನಿಲ್ಲಬೇಡಿ ಎಂದಾಗಲೂ ಆ ಸೂಚನೆ ಪಾಲಿಸಿದೆ. ಆದರೆ, ಈಗ ನಾನು ಯಾಕೆ ಸ್ಪರ್ಧೆ ಮಾಡುತ್ತಿದ್ದೇನೆ ಎಂಬುದುನ್ನು ಪ್ರಧಾನಿ ನರೇಂದ್ರ ಮೋದಿ ಹಾಗೂ ಅಮಿತ್‌ ಶಾ ಅವರಿಗೆ ಸ್ಪಷ್ಟವಾಗಿ ತಿಳಿಸಿ, ಅವರನ್ನು ಒಪ್ಪಿಸುವ ಶಕ್ತಿ ಈಗ ನನಗೆ ಬಂದಿದೆ ಎಂದು ಈಶ್ವರಪ್ಪ ತಿಳಿಸಿದರು.