ಹೆಣ್ಣಿನ ಕುರಿತಾದ ಬೈಯ್ಗುಳ ಹಾಗೂ ಪ್ರೀತಿ ಮಾತಿನಿಂದ ಸ್ತ್ರೀಯರ ಬಂಧನ : ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ

| N/A | Published : Mar 23 2025, 01:36 AM IST / Updated: Mar 23 2025, 04:17 AM IST

ಹೆಣ್ಣಿನ ಕುರಿತಾದ ಬೈಯ್ಗುಳ ಹಾಗೂ ಪ್ರೀತಿ ಮಾತಿನಿಂದ ಸ್ತ್ರೀಯರ ಬಂಧನ : ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ
Share this Article
  • FB
  • TW
  • Linkdin
  • Email

ಸಾರಾಂಶ

ಹೆಣ್ಣಿನ ಕುರಿತಾದ ಬೈಯ್ಗುಳ ಹಾಗೂ ಪ್ರೀತಿ ಮಾತಿನಿಂದ ತುಟಿ ಹೊಲಿಯುವ ಸಂಚು, ಮರ್ಯಾದೆಗೇಡು ಹತ್ಯೆಗಳಲ್ಲಿ ಕಾಣುವ ದ್ವೇಷ ಗಂಡಾಳಿಕೆಯ ಭಾಷೆಯೇ ಆಗಿದ್ದು, ಈ ಸಂಚನ್ನು ದಾಟುವ ಸವಾಲು ನಮ್ಮ ಮುಂದಿದೆ ಎಂದು ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ಕೆ.ವಿ.ಪ್ರಭಾಕರ್‌ ಅಭಿಪ್ರಾಯಪಟ್ಟರು.

 ಬೆಂಗಳೂರು :  ಹೆಣ್ಣಿನ ಕುರಿತಾದ ಬೈಯ್ಗುಳ ಹಾಗೂ ಪ್ರೀತಿ ಮಾತಿನಿಂದ ತುಟಿ ಹೊಲಿಯುವ ಸಂಚು, ಮರ್ಯಾದೆಗೇಡು ಹತ್ಯೆಗಳಲ್ಲಿ ಕಾಣುವ ದ್ವೇಷ ಗಂಡಾಳಿಕೆಯ ಭಾಷೆಯೇ ಆಗಿದ್ದು, ಈ ಸಂಚನ್ನು ದಾಟುವ ಸವಾಲು ನಮ್ಮ ಮುಂದಿದೆ ಎಂದು ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ಕೆ.ವಿ.ಪ್ರಭಾಕರ್‌ ಅಭಿಪ್ರಾಯಪಟ್ಟರು.

ಅಖಿಲ ಕರ್ನಾಟಕ ಲೇಖಕಿಯರ ಸಮ್ಮೇಳನದಲ್ಲಿ, ‘ಭಾಷೆ: ಸಾಧ್ಯತೆ ಮತ್ತು ಸವಾಲುಗಳು’ ಕುರಿತ ಗೋಷ್ಠಿಯಲ್ಲಿ ಅವರು ಮಾತನಾಡಿದರು.

ಅಮ್ಮ, ಅಕ್ಕ, ಪತ್ನಿ, ಅಜ್ಜಿ ಪದಗಳಿಲ್ಲದ ಬೈಯ್ಗುಳಗಳೇ ಇಲ್ಲದ ದ್ವೇಷದ ಭಾಷೆ ಒಂದು ಕಡೆಗಿದೆ. ಹೆಣ್ಣನ್ನು ದೇವತೆ, ಗೋಮಾತೆ ಎಂದು ಕರೆಯುತ್ತಲೇ ಪ್ರೀತಿಯ ಮಾತಿನಿಂದಲೇ ಆಕೆಯ ತುಟಿಗಳನ್ನು ಹೊಲಿಯುವ ಭಾಷೆಯೂ ಮತ್ತೊಂದು ಕಡೆಗಿದೆ. ಈ ಎರಡೂ ಸಂಚನ್ನು ದಾಟುವ ಸವಾಲು ನಮ್ಮ ಮುಂದಿದೆ ಎಂದರು.

ನಾವು ಮೇಲಕ್ಕೆ ಮೇಲಕ್ಕೆ ಹೋದಷ್ಟೂ ಮನುಷ್ಯ ನಿರ್ಮಿತ ದೇಶದ ಗಡಿಗಳು ಕಾಣೆ ಆಗುತ್ತವೆ. ಕೆಳಕ್ಕೆ ಇಳಿದಾಗಲಷ್ಟೆ ಈ ಗಡಿಗಳೆಲ್ಲಾ ಕಾಣುತ್ತವೆ ಎಂದು ಸುನೀತಾ ವಿಲಿಯಮ್ಸ್‌ ಎಂದಿದ್ದಾರೆ. ಒಂದು ಕಡೆ ಬಾಹ್ಯಾಕಾಶದಲ್ಲಿ ಬದುಕು ನಡೆಸಿ ಬಂದ ಸುನಿತಾ ವಿಲಿಯಮ್ಸ್‌ ಇದ್ದರೆ. ಮತ್ತೊಂದು ಕಡೆ ಕುಂಬ ಮೇಳದ ನದಿಯಲ್ಲಿ ಮುಳುಗೆದ್ದ ಸಮಾಜ ಇದೆ. ಇದು ಮಹಿಳಾ ಸಮಾಜದ ಮುಂದೆ ಇರುವ ಸಾಧ್ಯತೆ ಮತ್ತು ಸವಾಲು ಎಂದು ಅರ್ಥೈಸಬೇಕಿದೆ ಎಂದು ಹೇಳಿದರು.

ಜಾತಿ ಕಾರಣಕ್ಕೆ ಪೋಷಕರಿಂದಲೇ ನಡೆಯುತ್ತಿರುವ ಮರ್ಯಾದೆಗೇಡು ಹತ್ಯೆ, ಜಾತಿ-ಧರ್ಮ ಮೀರಿ ಪ್ರೀತಿಯ ಅಂಗಳದಲ್ಲಿ ಒಂದಾದ ಲಿವಿಂಗ್‌ ರಿಲೇಷನ್‌ ಶಿಪ್‌ನಲ್ಲಿ ನಡೆಯುತ್ತಿರುವ ಕೊಲೆಗಳು ಮತ್ತು ಬಾಲಕಿಯರಿಂದ-ವೃದ್ಧೆಯರ ಮೇಲೂ ನಡೆಯುತ್ತಿರುವ ಸಾಮೂಹಿಕ ಅತ್ಯಾಚಾರ ಇಂದು ಹೆಚ್ಚು ಸದ್ದು ಮಾಡುತ್ತಿರುವುದು ವಿಷಾದನೀಯ ಎಂದು ತಿಳಿಸಿದರು.

ಭೂಮಿಯ ಅರ್ಧ ಭಾಗದಷ್ಟಿರುವ ಮಹಿಳೆಯರ ಹೋರಾಟ, ಚಳವಳಿ, ಪ್ರತಿರೋಧ ಆಕಾಶದ ಅರ್ಧಭಾಗ ಧಕ್ಕಿಸಿಕೊಳ್ಳುವ ದಿಕ್ಕಿನಲ್ಲಿ ರಭಸವಾಗಿ ನಡೆಯುತ್ತಲೇ ಇವೆ. ಈ ಚಳವಳಿಗಳ ಜತೆಗೆ ಪುರುಷ ಜಗತ್ತು ಸಹೃದಯತೆಯಿಂದ ಸೇರಿದಾಗ ‘ಆನಂದಮಯ ಈ ಜಗ ಹೃದಯ’ ಎನ್ನುವ ಕುವೆಂಪು ಅವರ ಸಾಲಿನ ಬದಲಾವಣೆಗೆ ಕಾರಣ ಆಗಬಹುದು ಎಂದು ಅಭಿಪ್ರಾಯಪಟ್ಟರು.

ಗೋಷ್ಠಿಯ ಅಧ್ಯಕ್ಷತೆಯನ್ನು ಡಾ। ಎಂ.ಎಸ್.ಆಶಾದೇವಿ ಅಧ್ಯಕ್ಷತೆ ವಹಿಸಿದ್ದರು. ಡಾ। ಸುರೇಶ್ ನಾಗಲಮಡಿಕೆ, ಪ್ರೀತಿ ನಾಗರಾಜ್, ವಸುಧೇಂದ್ರ ಅವರು ವಿಷಯ ಮಂಡನೆ ಮಾಡಿದರು.