ಸಿದ್ದರಾಮಯ್ಯ ಮುಡಾ ಕೇಸ್‌ನಲ್ಲಿ ಲೋಕಾ ಬಿ ರಿಪೋರ್ಟ್‌ - ಸಿಎಂ, ಪತ್ನಿ ಸೇರಿ ನಾಲ್ವರ ವಿರುದ್ಧ ಸಾಕ್ಷ್ಯ ಇಲ್ಲ

| N/A | Published : Feb 21 2025, 05:19 AM IST

Siddaramaiah
ಸಿದ್ದರಾಮಯ್ಯ ಮುಡಾ ಕೇಸ್‌ನಲ್ಲಿ ಲೋಕಾ ಬಿ ರಿಪೋರ್ಟ್‌ - ಸಿಎಂ, ಪತ್ನಿ ಸೇರಿ ನಾಲ್ವರ ವಿರುದ್ಧ ಸಾಕ್ಷ್ಯ ಇಲ್ಲ
Share this Article
  • FB
  • TW
  • Linkdin
  • Email

ಸಾರಾಂಶ

  ಮುಡಾ (ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ) ಪ್ರಕರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಅವರ ಪತ್ನಿ ಪಾರ್ವತಿ ಸೇರಿ ನಾಲ್ವರ ವಿರುದ್ಧ ಯಾವುದೇ ಸಾಕ್ಷ್ಯಾಧಾರಗಳು ಇಲ್ಲವೆಂದು ಲೋಕಾಯುಕ್ತ ಪೊಲೀಸರು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ‘ಬಿ’ ವರದಿ ಸಲ್ಲಿಸಿದ್ದಾರೆ.

 ಬೆಂಗಳೂರು :  ರಾಜ್ಯ ರಾಜಕಾರಣದಲ್ಲಿ ತೀವ್ರ ಆರೋಪ-ಪ್ರತ್ಯಾರೋಪಗಳಿಗೆ ಕಾರಣವಾಗಿದ್ದ ಮುಡಾ (ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ) ಪ್ರಕರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಅವರ ಪತ್ನಿ ಪಾರ್ವತಿ ಸೇರಿ ನಾಲ್ವರ ವಿರುದ್ಧ ಯಾವುದೇ ಸಾಕ್ಷ್ಯಾಧಾರಗಳು ಇಲ್ಲವೆಂದು ಲೋಕಾಯುಕ್ತ ಪೊಲೀಸರು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ‘ಬಿ’ ವರದಿ ಸಲ್ಲಿಸಿದ್ದಾರೆ.

ಈ ವರದಿ ಸಲ್ಲಿಕೆಯಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತುಸು ನಿರಾಳರಾಗಿದ್ದಾರೆ.

ಗುರುವಾರ ಮೈಸೂರು ಲೋಕಾಯುಕ್ತ ಎಸ್ಪಿ ಉದೇಶ್‌ ಅವರು ನ್ಯಾಯಾಲಯಕ್ಕೆ ಹಾಜರಾಗಿ ದಾಖಲೆ ಸಹಿತ 11,200 ಪುಟಗಳ ವರದಿ ಸಲ್ಲಿಸಿದರು. ವರದಿಯು 800 ಪುಟಗಳಿದ್ದು, ಇತರ ದಾಖಲೆಗಳು ಸೇರಿ ಒಟ್ಟು 11,200 ಪುಟಗಳಷ್ಟಾಗಿದೆ. ಈ ವರದಿ 27 ಸಂಪುಟಗಳನ್ನು ಹೊಂದಿದ್ದು, 50 ಮಂದಿಯ ಹೇಳಿಕೆಗಳನ್ನು ದಾಖಲು ಮಾಡಲಾಗಿದೆ. ವರದಿ ಸ್ವೀಕರಿಸಿದ ನ್ಯಾಯಾಲಯ ವಿಚಾರಣೆಯನ್ನು ಸೋಮವಾರಕ್ಕೆ (ಫೆ.24) ಮುಂದೂಡಿದೆ.

ಪ್ರಕರಣದಲ್ಲಿ ಮೊದಲ ಆರೋಪಿಯಾಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, 2ನೇ ಆರೋಪಿಯಾಗಿರುವ ಸಿದ್ದರಾಮಯ್ಯ ಪತ್ನಿ ಪಾರ್ವತಿ, ಮೂರನೇ ಆರೋಪಿ ಮಲ್ಲಿಕಾರ್ಜುನ ಸ್ವಾಮಿ ಹಾಗೂ ಜಮೀನು ಮಾರಾಟ ಮಾಡಿದ್ದ ನಾಲ್ಕನೇ ಆರೋಪಿ ಜೆ.ದೇವರಾಜು ಮೇಲಿನ ಆರೋಪಗಳು ಸಾಕ್ಷ್ಯಾಧಾರಗಳ ಕೊರತೆಯಿಂದ ಸಾಬೀತಾಗಿಲ್ಲ ಎಂದು ವರದಿಯಲ್ಲಿ ಉಲ್ಲೇಖಿಸಿ ಬಿ ವರದಿ ಸಲ್ಲಿಕೆ ಮಾಡಲಾಗಿದೆ ಎಂದು ಮೂಲಗಳು ಹೇಳಿವೆ.

ಆಕ್ಷೇಪಣೆ ನಿರೀಕ್ಷೆ:

ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿ ನಾಲ್ವರ ವಿರುದ್ಧ ಲೋಕಾಯುಕ್ತ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಪ್ರಕರಣದಲ್ಲಿ ಸಾಕ್ಷ್ಯಾಧಾರಗಳ ಕೊರತೆಯಿದೆ. ಆರೋಪಿಗಳ ವಿರುದ್ಧದ ಆರೋಪ ಸಾಬೀತಾಗಿಲ್ಲ. ಈ ಕುರಿತು ನ್ಯಾಯಾಲಯಕ್ಕೆ ಅಂತಿಮ ವರದಿ ಸಲ್ಲಿಸಲಾಗುತ್ತಿದೆ. ಈ ಅಂಶಗಳ ಬಗ್ಗೆ ವಿರೋಧವಿದ್ದರೆ ಒಂದು ವಾರದೊಳಗೆ ಆಕ್ಷೇಪಣೆ ಸಲ್ಲಿಸಬಹುದು ಎಂದು ದೂರುದಾರ ಮತ್ತು ಸಾಮಾಜಿಕ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ಅವರಿಗೆ ಲೋಕಾಯುಕ್ತ ಪೊಲೀಸರು ನೀಡಿರುವ ನೊಟೀಸ್‌ನಲ್ಲಿ ತಿಳಿಸಿದ್ದರು. ಈ ಹಿನ್ನೆಲೆಯಲ್ಲಿ ದೂರುದಾರರು ಶೀಘ್ರದಲ್ಲೇ ಲೋಕಾಯುಕ್ತ ಪೊಲೀಸರು ಸಲ್ಲಿಸಿರುವ ವರದಿಗೆ ಆಕ್ಷೇಪಣೆ ಸಲ್ಲಿಸುವ ನಿರೀಕ್ಷೆ ಇದೆ.

- 11200 ಪುಟಗಳ ವರದಿ । ಸಿದ್ದು ತುಸು ನಿರಾಳ

- ಮೈಸೂರು ಲೋಕಾಯುಕ್ತ ಎಸ್ಪಿ ಉದೇಶ್‌ರಿಂದ ಜನಪ್ರತಿನಿಧಿ ಕೋರ್ಟ್‌ಗೆ ತನಿಖಾ ವರದಿ

- 11200 ಪುಟಗಳ ವರದಿ. ಅದರಲ್ಲಿ 800 ಪುಟ ತನಿಖಾ ವರದಿ. ಉಳಿದದ್ದು ದಾಖಲೆಗಳು

- 27 ಸಂಪುಟಗಳಿಂದ ಕೂಡಿರುವ ವರದಿ. 80 ಮಂದಿಯ ಹೇಳಿಕೆಗಳೂ ಇದರಲ್ಲಿ ಉಲ್ಲೇಖ

- ಸಿದ್ದು, ಪತ್ನಿ, ಭಾಮೈದ ಸೇರಿದಂತೆ ನಾಲ್ವರಿಗೆ ಮುಡಾ ಕೇಸ್‌ ವರದಿಯಲ್ಲಿ ಕ್ಲೀನ್‌ಚಿಟ್‌

- ವರದಿ ಸ್ವೀಕರಿಸಿದ ನ್ಯಾಯಾಲಯ. ವಿಚಾರಣೆ ಫೆ.24ರ ಸೋಮವಾರಕ್ಕೆ ಮುಂದೂಡಿಕೆ