ಸಾರಾಂಶ
- ವಿಜಯೇಂದ್ರ ವಿರುದ್ಧ ಆರೋಪಗಳ ಸುರಿಮಳೆ ಮಾಡಿದ ಭಿನ್ನರ ಪಡೆ ನಾಯಕ- ಹಲವರೂ ಮಾತಾಡಿದ್ದಾರೆ, ನನ್ನ ಹೇಳಿಕೆ ಮಾತ್ರ ಪರಿಗಣಿಸಿದ್ದೀರಿ ಎಂದು ದೂರು
--ಯತ್ನಾಳ್ ಉತ್ತರ ಏನು?
- ನಾನು ಪಕ್ಷದ ವಿರುದ್ಧ ಯಾವುದೇ ಹೇಳಿಕೆ ನೀಡಿಲ್ಲ. ವಿಜಯೇಂದ್ರ ಅವರ ಅಸಮರ್ಥತೆ, ವೈಫಲ್ಯ ಕುರಿತು ಹೇಳಿಕೆ ನೀಡಿದ್ದೇನೆ.- ಏಕಪಕ್ಷೀಯ ನಿರ್ಧಾರ, ಹೊಂದಾಣಿಕೆ ರಾಜಕಾರಣವನ್ನೇ ರೂಢಿಸಿಕೊಂಡಿರುವ ವಿಜಯೇಂದ್ರ ಅವರದ್ದು ಹೊಂದಾಣಿಕೆ ರಾಜಕೀಯ
- ವಿಜಯೇಂದ್ರ ವಿರುದ್ಧ ನನ್ನ ಹೇಳಿಕೆ ಪಕ್ಷ ವಿರೋಧಿ ಚಟುವಟಿಕೆ ಅಲ್ಲ, ಅವರನ್ನು ರಾಜ್ಯಾಧ್ಯಕ್ಷರನ್ನಾಗಿ ಮುಂದುವರೆಸಿದರೆ ಪಕ್ಷಕ್ಕೆ ನಷ್ಟ ಕಟ್ಟಿಟ್ಟ ಬುತ್ತಿ- ವಿಜಯೇಂದ್ರ ರಾಜ್ಯಾಧ್ಯಕ್ಷರಾದ ಬಳಿಕ ನಡೆದ ಲೋಕಸಭಾ, 3 ವಿಧಾನಸಭೆ ಉಪ ಚುನಾವಣೆಯಲ್ಲಿ ಕಳಪೆ ಪ್ರದರ್ಶನ. ನಮ್ಮ ಸಂಖ್ಯಾಬಲ ಕ್ಷೀಣ
- ಪಕ್ಷದ ಸಂಘಟನೆಗಾಗಿ ವಿಜಯೇಂದ್ರ ರಾಜ್ಯ ಪ್ರವಾಸ ಕೈಗೊಂಡಿಲ್ಲ. ಕೇವಲ ಹೆಸರಿಗಷ್ಟೇ ರಾಜ್ಯ ಪ್ರವಾಸ ಮಾಡಿದ್ದು ಸ್ಥಳೀಯ ಸಮಸ್ಯೆ ಬಗೆಹರಿಸಲು ಪ್ರಯತ್ನಿಸಿಲ್ಲ---
ಕನ್ನಡಪ್ರಭ ವಾರ್ತೆ ಬೆಂಗಳೂರುಬಿಜೆಪಿಯ ಭಿನ್ನರ ಪಾಳೆಯದ ನಾಯಕರೂ ಆಗಿರುವ ಶಾಸಕ ಬಸನಗೌಡ ಪಾಟೀಲ್ ಯತ್ನಾಳ ಅವರು ತಮಗೆ ನೀಡಿದ್ದ ಶೋಕಾಸ್ ನೋಟಿಸ್‌ಗೆ ಕೊನೆಗೂ ಉತ್ತರ ನೀಡಿದ್ದಾರೆ.
ತಮಗೆ ನೋಟಿಸ್ ಬಂದಿಲ್ಲ, ಬಂದರೂ ಉತ್ತರಿಸುವುದಿಲ್ಲ ಎನ್ನುತ್ತಿದ್ದ ಯತ್ನಾಳ ಅವರು ಈಗಲೂ ಉತ್ತರ ನೀಡಿರುವ ಬಗ್ಗೆ ಯಾವುದೇ ಪ್ರತಿಕ್ರಿಯೆ ಕೊಟ್ಟಿಲ್ಲ. ಆದರೆ, ಅವರ ಆಪ್ತರು ಮಾತ್ರ ನೋಟಿಸ್‌ಗೆ ಇ-ಮೇಲ್ ಮೂಲಕ ಉತ್ತರ ನೀಡಿದ್ದಾರೆ ಎಂದಷ್ಟೇ ಮಾಹಿತಿ ಹೊರಹಾಕಿದ್ದಾರೆ. ಯಾವಾಗ ಉತ್ತರಿಸಿದ್ದಾರೆ ಎಂಬುದು ಈಗಲೂ ಸ್ಪಷ್ಟವಾಗಿಲ್ಲ.ನಿರೀಕ್ಷೆಯಂತೆ ನೋಟಿಸ್‌ನಲ್ಲಿ, ತಾವು ಪಕ್ಷದ ವಿರುದ್ಧ ಯಾವುದೇ ಹೇಳಿಕೆ ನೀಡಿಲ್ಲ. ಪಕ್ಷದ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರ ಅಸಮರ್ಥತೆ, ವೈಫಲ್ಯ ಕುರಿತು ಹೇಳಿಕೆ ನೀಡಿದ್ದೇನೆ. ಇದು ಪಕ್ಷ ವಿರೋಧಿ ಚಟುವಟಿಕೆ ಅಲ್ಲ ಎಂದು ಬಲವಾಗಿ ಸಮರ್ಥಿಸಿಕೊಂಡಿದ್ದಾರೆ. ಏಕಪಕ್ಷೀಯ ನಿರ್ಧಾರ, ಹೊಂದಾಣಿಕೆ ರಾಜಕಾರಣವನ್ನೇ ರೂಢಿಸಿಕೊಂಡಿರುವ ವಿಜಯೇಂದ್ರ ಅವರನ್ನು ರಾಜ್ಯಾಧ್ಯಕ್ಷರನ್ನಾಗಿ ಮುಂದುವರೆಸಿದರೆ ಪಕ್ಷಕ್ಕೆ ನಷ್ಟ ಕಟ್ಟಿಟ್ಟ ಬುತ್ತಿ ಎಂದು ಖಡಕ್ಕಾಗಿ ಹೇಳಿದ್ದಾರೆ ಎನ್ನಲಾಗಿದೆ.
ಇದೇ ವೇಳೆ ಯತ್ನಾಳ ಅವರು ಎಷ್ಟು ಪುಟಗಳ ಉತ್ತರ ನೀಡಿದ್ದಾರೆ ಎಂಬುದರ ಬಗ್ಗೆಯೂ ಗೊಂದಲವಿದೆ. ಎರಡು ಪುಟಗಳು, ಐದು ಪುಟಗಳು, ಒಂಬತ್ತು ಪುಟಗಳು, ಹನ್ನೆರಡು ಪುಟಗಳು ಎಂಬಿತ್ಯಾದಿ ಮಾಹಿತಿ ಹಬ್ಬಿದೆ. ಇದನ್ನು ಸ್ವತಃ ಯತ್ನಾಳ ಅವರೇ ಖಚಿತಪಡಿಸಬೇಕಿದೆ.ಆದರೆ, ತಮ್ಮ ಉತ್ತರದ ಜತೆಗೆ ವಿಜಯೇಂದ್ರ ಮತ್ತವರ ಬೆಂಬಲಿಗರಾದ ಮಾಜಿ ಸಚಿವರಾದ ಎಂ.ಪಿ.ರೇಣುಕಾಚಾರ್ಯ, ಕಟ್ಟಾ ಸುಬ್ರಹ್ಮಣ್ಯನಾಯ್ಡು ಮತ್ತಿತರ ಹೇಳಿಕೆಗಳು, ಜತೆಗೆ ವಿಜಯೇಂದ್ರ ವಿರುದ್ಧ ಮಾತನಾಡಿದ ಸಂಸದ ಡಾ.ಕೆ.ಸುಧಾಕರ್, ಮಾಜಿ ಸಚಿವ ಬಿ.ಶ್ರೀರಾಮುಲು ಅವರ ಹೇಳಿಕೆಗಳನ್ನು ಒಳಗೊಂಡ ಪತ್ರಿಕಾ ತುಣಕುಗಳನ್ನು ಲಗತ್ತಿಸಿ ರವಾನಿಸಿದ್ದಾರೆ ಎಂದು ತಿಳಿದು ಬಂದಿದೆ.
ಬಿವೈವಿ ವಿರುದ್ಧ ಆರೋಪ ಸುರಿಮಳೆ:ವಿಜಯೇಂದ್ರ ಅವರು ರಾಜ್ಯಾಧ್ಯಕ್ಷರಾದ ಬಳಿಕ ನಡೆದ ಲೋಕಸಭಾ ಚುನಾವಣೆಯಲ್ಲಿ ಕಳಪೆ ಪ್ರದರ್ಶನ ಮಾಡಿದ್ದೇವೆ. ನಮ್ಮ ಸಂಖ್ಯಾಬಲ ಕ್ಷೀಣಿಸಿದೆ. ಮೂರು ವಿಧಾನಸಭಾ ಕ್ಷೇತ್ರಗಳಿಗೆ ನಡೆದ ಉಪಚುನಾವಣೆಯಲ್ಲಿ ಸೋಲು ಅನುಭವಿಸಿದ್ದೇವೆ. ಪಕ್ಷದ ಸಂಘಟನೆಗಾಗಿ ರಾಜ್ಯ ಪ್ರವಾಸ ಕೈಗೊಂಡಿಲ್ಲ. ಕೇವಲ ಹೆಸರಿಗಷ್ಟೇ ರಾಜ್ಯ ಪ್ರವಾಸ ಮಾಡಿದ್ದಾರೆಯೇ ಹೊರತು ಯಾವುದೇ ಜಿಲ್ಲೆಯಲ್ಲೂ ಅಲ್ಲಿನ ಸಂಘಟನೆಯ ಸ್ಥಳೀಯ ಸಮಸ್ಯೆ ಬಗೆಹರಿಸಲು ಪ್ರಯತ್ನಿಸಿಲ್ಲ ಎಂದು ಯತ್ನಾಳ ದೂರಿದ್ದಾರೆ.ಕಲಬುರಗಿಯಲ್ಲಿ ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ ವಿರುದ್ಧ ನಡೆದ ಪ್ರತಿಭಟನೆಗೆ ವಿಜಯೇಂದ್ರ ಗೈರು ಹಾಜರಾಗಿದ್ದರು. ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಪ್ರತಿಭಟನೆಗೂ ಗೈರಾಗಿದ್ದರು. ಸದಾ ಕಾಲ ಹೊಂದಾಣಿಕೆ ರಾಜಕಾರಣವನ್ನೇ ಮಾಡಿಕೊಂಡು ಬಂದಿದ್ದಾರೆ. ಕೇವಲ ನೆಪಮಾತ್ರಕ್ಕೆ ಎಂಬಂತೆ ಆಡಳಿತಾರೂಢ ಕಾಂಗ್ರೆಸ್ ವಿರುದ್ಧ ಹೇಳಿಕೆ ನೀಡುತ್ತಾರೆ. ರಾಜ್ಯಾಧ್ಯಕ್ಷರಾಗಿ ವಿಜಯೇಂದ್ರ ಅವರು ಪಕ್ಷದ ಪ್ರಮುಖ ನಿರ್ಣಯಗಳನ್ನು ಏಕಪಕ್ಷೀಯವಾಗಿ ಕೈಗೊಳ್ಳುತ್ತಾರೆ. ಪಕ್ಷದ ಹಿರಿಯ ನಾಯಕರನ್ನು ವಿಶ್ವಾಸಕ್ಕೇ ತೆಗೆದುಕೊಳ್ಳುವುದಿಲ್ಲ ಎಂದು ತಮ್ಮ ಉತ್ತರದಲ್ಲಿ ಯತ್ನಾಳ ಅವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.ಅಲ್ಲದೆ ಶಿಸ್ತು ಸಮಿತಿಯ ಅಧ್ಯಕ್ಷರಾಗಿರುವ ಓಂ ಪ್ರಕಾಶ್ ಅವರನ್ನು ಉದ್ದೇಶಿಸಿ, ನೀವು ಪಕ್ಷದ ಇತರ ನಾಯಕರ ಹೇಳಿಕೆಗಳನ್ನು ಪರಿಗಣಿಸದೆ ನನ್ನ ಹೇಳಿಕೆಯನ್ನು ಮಾತ್ರ ಗಮನಿಸಿದ್ದೀರಿ. ನಾನೊಬ್ಬನೇ ಮಾತನಾಡಿಲ್ಲ. ಹಲವರು ಪಕ್ಷದ ವರ್ಚಸ್ಸಿಗೆ ಧಕ್ಕೆಯಾಗುವಂಥ ಹೇಳಿಕೆಗಳನ್ನು ನೀಡಿದ್ದಾರೆ ಎಂಬುದನ್ನೂ ಯತ್ನಾಳ ಅವರು ಪ್ರಸ್ತಾಪಿಸಿದ್ದಾರೆ ಎನ್ನಲಾಗಿದೆ.
ಇದೇ ತಿಂಗಳ 10ರಂದು ಕೇಂದ್ರ ಬಿಜೆಪಿಯ ಶಿಸ್ತು ಸಮಿತಿ ಯತ್ನಾಳ ಅವರಿಗೆ ಶೋಕಾಸ್ ನೋಟಿಸ್ ನೀಡಿತ್ತು. ಜತೆಗೆ ಮೂರು ದಿನಗಳೊಳಗಾಗಿ ನೋಟಿಸ್‌ಗೆ ವಿವರಣೆ ನೀಡಬೇಕು. ಇಲ್ಲದಿದ್ದರೆ ನೀವು ಹೇಳುವುದು ಏನೂ ಇಲ್ಲ ಎಂದು ಭಾವಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂಬ ಎಚ್ಚರಿಕೆಯನ್ನೂ ಕೊಡಲಾಗಿತ್ತು.---
ಇಂದು ವಿಜಯೇಂದ್ರ ಸುದ್ದಿಗೋಷ್ಠಿ ಕುತೂಹಲ- ರಾಜಕೀಯ ಬಿಕ್ಕಟ್ಟಿನ ಬಗ್ಗೆ ಮಾತಾಡ್ತೇನೆ- ಭಿನ್ನರ ಸಭೆಗೂ ಮುನ್ನ ಮಾಧ್ಯಮಗೋಷ್ಠಿಕನ್ನಡಪ್ರಭ ವಾರ್ತೆ ಬೆಂಗಳೂರು
ಪಕ್ಷದ ಭಿನ್ನಮತೀಯರು ಮತ್ತೆ ಸಕ್ರಿಯರಾಗಿ ಗುರುವಾರ ಸಭೆ ನಡೆಸಲು ನಿರ್ಧರಿಸಿದ ಬೆನ್ನಲ್ಲೇ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ಬುಧವಾರ ಪತ್ರಿಕಾಗೋಷ್ಠಿ ನಡೆಸಲು ಮುಂದಾಗಿರುವುದು ಕುತೂಹಲ ಮೂಡಿಸಿದೆ.ಪ್ರಸಕ್ತ ರಾಜಕೀಯ ಬಿಕ್ಕಟ್ಟಿನ ಕುರಿತು ಪತ್ರಿಕಾಗೋಷ್ಠಿಯಲ್ಲಿ ಮಾತನಾಡುವೆ ಎಂದು ಸ್ವತಃ ವಿಜಯೇಂದ್ರ ಅವರೇ ಹೇಳಿದ್ದಾರೆ. ಬೆಳಗ್ಗೆ 11.30ಕ್ಕೆ ಪಕ್ಷದ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ನಿಗದಿಯಾಗಿದೆ.ಮಂಗಳವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾಳೆ (ಬುಧವಾರ) ಸುದೀರ್ಘ ಪತ್ರಿಕಾಗೋಷ್ಠಿ ಕರೆಯಲಿದ್ದೇನೆ. ರಾಜ್ಯದ ಗ್ಯಾರಂಟಿ ಕುರಿತ ಬಿಕ್ಕಟ್ಟು, ರಾಜಕೀಯ ಬಿಕ್ಕಟ್ಟಿನ ಕುರಿತು ಮಾತನಾಡುವೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.ಯತ್ನಾಳ ಅವರ ಬಣದ ಮುಖಂಡರು ಸಭೆ ನಡೆಸುವ ಕುರಿತ ಪ್ರಶ್ನೆಗೆ ಉತ್ತರಿಸಿದ ವಿಜಯೇಂದ್ರ, ಅವರು ಹಿರಿಯರು. ಸಭೆ ಕರೆದು ಪಕ್ಷವನ್ನು ಹೇಗೆ ಬಲಪಡಿಸಬೇಕೆಂಬ ಚರ್ಚೆ ಮಾಡುವುದಕ್ಕೆ ಯಾರು ಬೇಡ ಎನ್ನುತ್ತಾರೆ ಎಂದು ಮಾರ್ಮಿಕವಾಗಿ ಹೇಳಿದರು.