15 ವರ್ಷಗಳಿಂದ ಪಶ್ಚಿಮ ಬಂಗಾಳವನ್ನು ಅಕ್ಷರಶಃ ಆಳಿದ್ದ ಟಿಎಂಸಿ ನಾಯಕಿ ಮಮತಾ ಬ್ಯಾನರ್ಜಿ ಅಧಿಪತ್ಯ ಕೊನೆಗೊಳಿಸುವಲ್ಲಿ ಕಡೆಗೂ ಯಶಸ್ವಿಯಾಗಿರುವ ಬಿಜೆಪಿ, ರಾಜ್ಯದಲ್ಲಿ ಮೊದಲ ಸಲ ಅಧಿಕಾರದ ಗದ್ದುಗೆ ಏರಿದೆ
ಕೋಲ್ಕತಾ: 15 ವರ್ಷಗಳಿಂದ ಪಶ್ಚಿಮ ಬಂಗಾಳವನ್ನು ಅಕ್ಷರಶಃ ಆಳಿದ್ದ ಟಿಎಂಸಿ ನಾಯಕಿ ಮಮತಾ ಬ್ಯಾನರ್ಜಿ ಅಧಿಪತ್ಯ ಕೊನೆಗೊಳಿಸುವಲ್ಲಿ ಕಡೆಗೂ ಯಶಸ್ವಿಯಾಗಿರುವ ಬಿಜೆಪಿ, ರಾಜ್ಯದಲ್ಲಿ ಮೊದಲ ಸಲ ಅಧಿಕಾರದ ಗದ್ದುಗೆ ಏರಿದೆ. ರಾಜ್ಯ ವಿಧಾನಸಭೆಯ 294 ಸ್ಥಾನಗಳ ಪೈಕಿ 293 ಸ್ಥಾನಗಳಿಗೆ ಚುನಾವಣೆ ನಡೆದಿದ್ದು, ಭರ್ಜರಿ ಬಹುಮತದೊಂದಿಗೆ ಬಿಜೆಪಿ ಅಧಿಕಾರಕ್ಕೆ ಬಂದಿದೆ.
ವಿಶೇಷ ಮತಪಟ್ಟಿ ಪರಿಷ್ಕರಣೆ ವಿವಾದ, ಬಾಂಗ್ಲನ್ನರ ಅಕ್ರಮ ಒಳನುಸುಳುವಿಕೆ, ಹಿಂದೂಗಳ ಮೇಲಿನ ದೌರ್ಜನ್ಯ ತಡೆಯುವಲ್ಲಿ ಮಮತಾ ವಿಫಲ ಎಂಬ ಆರೋಪ, ಆಡಳಿತದಲ್ಲಿನ ಭ್ರಷ್ಟಾಚಾರದ ಆರೋಪ, ಅತಿಯಾದ ಓಲೈಕೆ ರಾಜಕಾರಣ, ವೈದ್ಯಕೀಯ ವಿದ್ಯಾರ್ಥಿನಿಯ ಮೇಲಿನ ಅತ್ಯಾಚಾರ ಪ್ರಕರಣದಲ್ಲಿ ಟಿಎಂಸಿ ನಾಯಕರ ಕೀಳು ಹೇಳಿಕೆ, ಅಭಿವೃದ್ಧಿಯಲ್ಲಿ ಕುಂಠಿತ, ಸತತ 15 ವರ್ಷಗಳ ಆಡಳಿತ ವಿರೋಧಿ ಅಲೆಗೆ ಸಿಕ್ಕ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅಧಿಕಾರ ಕಳೆದುಕೊಂಡಿದ್ದಾರೆ.
ಅಮಿತ್ ಶಾ ಹೆಣೆದ ಕಾರ್ಯತಂತ್ರ
ಮತ್ತೊಂದೆಡೆ ಸತತ 2 ವರ್ಷಗಳಿಂದ, ಬಂಗಾಳ ಗೆಲ್ಲಲು ಬಿಜೆಪಿಯ ಚುನಾವಣಾ ರಣತಂತ್ರಗಾರ ಅಮಿತ್ ಶಾ ಹೆಣೆದ ಕಾರ್ಯತಂತ್ರ, ಬಿಜೆಪಿಯ ತಳಮಟ್ಟದ ಕಾರ್ಯಕರ್ತರು ಕಳೆದ 2 ತಿಂಗಳಲ್ಲಿ ರಾಜ್ಯವ್ಯಾಪಿ 1.50 ಲಕ್ಷಕ್ಕೂ ಹೆಚ್ಚು ಸಮುದಾಯ ಸಭೆ ನಡೆಸಿ ಮಮತಾ ಸರ್ಕಾರದ ವೈಫಲ್ಯ, ಬಾಂಗ್ಲಾದೇಶದಲ್ಲಿನ ಹಿಂದೂಗಳ ಮೇಲಿನ ದಾಳಿ ಪ್ರಸ್ತಾಪಿಸಿ, ಹಿಂದೂಗಳನ್ನು ಬಡಿದೆಬ್ಬಿಸಿದ್ದು, ಮಮತಾ ಸರ್ಕಾರದ ಓಲೈಕೆ ರಾಜಕಾರಣದ ಬಗ್ಗೆ ಗಮನ ಸೆಳೆದಿದ್ದು ಬಿಜೆಪಿ ಗೆಲುವಿಗೆ ದೊಡ್ಡ ಮಟ್ಟದಲ್ಲಿ ನೆರವು ನೀಡಿದೆ. ಜೊತೆಗೆ ಕಡೆಯ ಹಂತದಲ್ಲಿ ಪ್ರಧಾನಿ ಮೋದಿಯಾಗಿ ಬಿಜೆಪಿ ನಾಯಕರು ನಡೆಸಿದ ಸಂಘಟಿತ ಹೋರಾಟ, ಭರ್ಜರಿ ಪ್ರಚಾರ ಕೂಡಾ ಬಿಜೆಪಿಯು ವಿಧಾನಸಭೆಯಲ್ಲಿ ಸುಲಭವಾಗಿ ಮ್ಯಾಜಿಕ್ ಸಂಖ್ಯೆಯಾದ 148ರ ಗಡಿದಾಟುವುದನ್ನು ಖಚಿತಪಡಿಸಿದೆ.
ಕಳೆದ ಚುನಾವಣೆಗೆ ಹೋಲಿಸಿದರೆ ಈ ಬಾರಿ ಟಿಎಂಸಿಯ ಮತ ಪಾಲು ಶೇ.6-ಶೇ.7ರಷ್ಟು ಇಳಿದಿದ್ದರೆ, ಬಿಜೆಪಿ ಪಾಲು ಶೇ.6-7ರಷ್ಟು ಹೆಚ್ಚಳವಾಗಿದ್ದು ಫಲಿತಾಂಶ ತಿರುವು ಮುರುವಾಗಲು ನೆರವಾಗಿದೆ. 2021ರಲ್ಲಿ ತಾನು ಗೆದ್ದಿದ್ದ ಸ್ಥಾನಗಳ ಪೈಕಿ ಬಹುತೇಕವುಗಳನ್ನು ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿರುವ ಬಿಜೆಪಿ, ಟಿಎಂಸಿ ಪ್ರಾಬಲ್ಯದ ಸ್ಥಾನಗಳನ್ನೂ ಕಸಿದುಕೊಳ್ಳುವಲ್ಲಿ ಯಶಸ್ವಿಯಾಗಿದೆ.
ಬಂಗಾಳದಲ್ಲಿ ಬಿಜೆಪಿ ಗೆದ್ದಿದ್ಹೇಗೆ?
ಟಿಎಂಸಿ ವಿರುದ್ಧ ಕೇಳಿಬಂದ ಅತಿಯಾದ ಓಲೈಕೆ ರಾಜಕಾರಣದ ಆರೋಪ
ಬಾಂಗ್ಲಾ ಅಕ್ರಮ ಒಳನುಸುಳುವಿಕೆ ಬಗ್ಗೆ ಮಮತಾ ಸರ್ಕಾರ ಜಾಣ ಮೌನ
ಹಿಂದೂ ಮೇಲೆ ಸತತ ದೌರ್ಜನ್ಯ ತಡೆಗೆ ಟಿಎಂಸಿ ವಿಫಲ. ಹಿಂದೂ ಆಕ್ರೋಶ
ಬಾಂಗ್ಲಾ ಹಿಂದೂಗಳ ಮೇಲಿನ ಹಿಂಸಾಚಾರವೂ ಚುನಾವಣೆ ಮೇಲೆ ಪರಿಣಾಮ
ಅಭಿವೃದ್ಧಿ ಕಾರ್ಯದಲ್ಲಿ ಹಿನ್ನಡೆ. ಸರ್ಕಾರ, ಸಚಿವರ ಮೇಲೆ ಭ್ರಷ್ಟಾಚಾರ ಆರೋಪ
ಸತತ 15 ವರ್ಷಗಳ ಮಮತಾ ಸರ್ಕಾರದ ಆಡಳಿತ ವಿರೋಧ ಅಲೆ ಬಿಜೆಪಿ ಪರ
ಇವುಗಳನ್ನು ಜನರ ಗಮನಕ್ಕೆ ತರುವಲ್ಲಿ ಯಶಸ್ವಿಯಾದ ಬಿಜೆಪಿ ಕಾರ್ಯತಂತ್ರ
ತನ್ನ ಪ್ರಾಬಲ್ಯದ ಹೊರತಾದ ಕ್ಷೇತ್ರಗಳಲ್ಲೂ ಸಂಘಟನೆಗೆ ಬಿಜೆಪಿ ಒತ್ತು ನೀಡಿದ್ದು
ಎಸ್‌ಐಆರ್ ಮೂಲಕ ನಕಲಿ ಮತದಾರರ ತೆರವು ಟಿಎಂಸಿಗೆ ಭಾರೀ ಶಾಪ
1 ವರ್ಷದಿಂದ ರಾಜ್ಯವ್ಯಾಪಿ 1.64 ಲಕ್ಷ ಸಮುದಾಯ ಸಭೆ ನಡೆಸಿದ್ದ ಬಿಜೆಪಿ
2 ವರ್ಷಗಳಿಂದ ಅಮಿತ್ ಶಾ ಕಾರ್ಯತಂತ್ರ, ಮೋದಿ ಭರ್ಜರಿ ಪ್ರಚಾರ ಸಭೆಗಳು
5 ವರ್ಷಗಳಿಂದ ಟಿಎಂಸಿ ಸವಾಲು ಮೆಟ್ಟಿನಿಲ್ಲುವಲ್ಲಿ ಸುವೇಂದು ಯಶಸ್ವಿಯಾಗಿದ್ದು


