ಸಿಎಂ ಪದತ್ಯಾಗಕ್ಕೆ ಮೈಸೂರು ಚಲೋ । ಸಿದ್ದರಾಮಯ್ಯ ವಿರುದ್ಧ ಬಿಜೆಪಿ, ದಳ ಇಂದಿನಿಂದ ಪಾದಯಾತ್ರೆ

| Published : Aug 03 2024, 01:38 AM IST / Updated: Aug 03 2024, 04:47 AM IST

ಸಾರಾಂಶ

ರಾಜ್ಯದ ಕಾಂಗ್ರೆಸ್ ಸರ್ಕಾರ ನಡೆಸಿದೆ ಎನ್ನಲಾದ ವಿವಿಧ ಹಗರಣಗಳ ವಿರುದ್ಧ ಪ್ರತಿಪಕ್ಷಗಳಾದ ಬಿಜೆಪಿ ಮತ್ತು ಜೆಡಿಎಸ್ ಜಂಟಿಯಾಗಿ ಬೆಂಗಳೂರಿನಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ತವರು ಜಿಲ್ಲೆ ಮೈಸೂರಿಗೆ ಹಮ್ಮಿಕೊಂಡಿರುವ ‘ಮೈಸೂರು ಚಲೋ’ ಪಾದಯಾತ್ರೆ ಶನಿವಾರದಿಂದ ಆರಂಭವಾಗಲಿದೆ.

  ಬೆಂಗಳೂರು :  ರಾಜ್ಯದ ಕಾಂಗ್ರೆಸ್ ಸರ್ಕಾರ ನಡೆಸಿದೆ ಎನ್ನಲಾದ ವಿವಿಧ ಹಗರಣಗಳ ವಿರುದ್ಧ ಪ್ರತಿಪಕ್ಷಗಳಾದ ಬಿಜೆಪಿ ಮತ್ತು ಜೆಡಿಎಸ್ ಜಂಟಿಯಾಗಿ ಬೆಂಗಳೂರಿನಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ತವರು ಜಿಲ್ಲೆ ಮೈಸೂರಿಗೆ ಹಮ್ಮಿಕೊಂಡಿರುವ ‘ಮೈಸೂರು ಚಲೋ’ ಪಾದಯಾತ್ರೆ ಶನಿವಾರದಿಂದ ಆರಂಭವಾಗಲಿದೆ.

ಒಟ್ಟು ಏಳು ದಿನಗಳ ಪಾದಯಾತ್ರೆ ಇದಾಗಿದ್ದು, ಎಂಟನೇ ದಿನ ಆ.10ರಂದು ಮೈಸೂರಿನಲ್ಲಿ ಬೃಹತ್ ಪ್ರತಿಭಟನೆ ಮೂಲಕ ಅಂತ್ಯಗೊಳ್ಳಲಿದೆ.

ಹಿಂದೆ 2010ರಲ್ಲಿ ವಿಧಾನಸಭೆಯ ಪ್ರತಿಪಕ್ಷದ ನಾಯಕರಾಗಿದ್ದ ಸಿದ್ದರಾಮಯ್ಯ ಅವರು ಅಂದಿನ ಬಿಜೆಪಿ ಸರ್ಕಾರದಲ್ಲಿನ ಗಣಿ ಹಗರಣದ ವಿರುದ್ಧ ಬೆಂಗಳೂರಿನಿಂದ ಬಳ್ಳಾರಿವರೆಗೆ ಪಾದಯಾತ್ರೆ ನಡೆಸಿದ್ದರು. ನಂತರ ಅವರು ಮುಖ್ಯಮಂತ್ರಿಯಾಗಿದ್ದು ಈಗ ಇತಿಹಾಸ. ಇದೀಗ ಅದೇ ಸಿದ್ದರಾಮಯ್ಯ ಅವರು ಎರಡನೇ ಬಾರಿ ಮುಖ್ಯಮಂತ್ರಿಯಾದ ವೇಳೆ ಅವರ ವಿರುದ್ಧ ಬಿಜೆಪಿ ನಾಯಕರು ಜೆಡಿಎಸ್ ಜತೆಗೂಡಿ ಮುಡಾ ಅಕ್ರಮ ನಿವೇಶನ ಹಗರಣ ಮುಂದಿಟ್ಟುಕೊಂಡು ಮೈಸೂರಿನವರೆಗೆ ಪಾದಯಾತ್ರೆ ನಡೆಸುತ್ತಿದ್ದಾರೆ.

ಬೆಳಗ್ಗೆ 9 ಗಂಟೆಗೆ ಕೆಂಗೇರಿಯ ಕೆಂಪಮ್ಮ ದೇವಸ್ಥಾನದ ಬಳಿಯ ಜೆಕೆ ಗ್ರ್ಯಾಂಡ್‌ ಅರೆನಾ ಸೆಂಟರ್‌ನಲ್ಲಿ ಕಹಳೆ ಊದುವ ಮೂಲಕ ಪಾದಯಾತ್ರೆಯನ್ನು ಉದ್ಘಾಟಿಸಲಾಗುತ್ತದೆ. ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ, ಕೇಂದ್ರ ಭಾರಿ ಕೈಗಾರಿಕಾ ಸಚಿವ ಎಚ್.ಡಿ.ಕುಮಾರಸ್ವಾಮಿ, ಬಿಜೆಪಿ ರಾಜ್ಯ ಉಸ್ತುವಾರಿ ರಾಧಾಮೋಹನ್‌ದಾಸ್ ಅಗರ್‌ವಾಲ್‌, ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ವಿಧಾನಮಂಡಲದ ಉಭಯ ಸದನಗಳ ಪ್ರತಿಪಕ್ಷದ ನಾಯಕರಾದ ಆರ್.ಅಶೋಕ್‌, ಛಲವಾದಿ ನಾರಾಯಣಸ್ವಾಮಿ, ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಸುರೇಶ್‌ಬಾಬು, ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಸೇರಿದಂತೆ ಹಲವು ನಾಯಕರು ಉಪಸ್ಥಿತರಿರಲಿದ್ದಾರೆ.

ಆ.10ರಂದು ಬೆಳಗ್ಗೆ 10.30ಕ್ಕೆ ಮೈಸೂರಿನಲ್ಲಿ ಬೃಹತ್ ಸಮಾರೋಪ ಸಮಾರಂಭ ನಡೆಯಲಿದ್ದು, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಪಾಲ್ಗೊಳ್ಳುವ ನಿರೀಕ್ಷೆಯಿದೆ.

ಕಳೆದ ವಿಧಾನಮಂಡಲದ ಅಧಿವೇಶನದಲ್ಲಿ ರಾಜ್ಯ ಸರ್ಕಾರದ ಹಗರಣಗಳ ಬಗ್ಗೆ ಅದರಲ್ಲೂ ಮೈಸೂರು ಅಭಿವೃದ್ಧಿ ಪ್ರಾಧಿಕಾರದ (ಮುಡಾ) ಅಕ್ರಮ ನಿವೇಶನ ಹಂಚಿಕೆ ಪ್ರಸ್ತಾಪಿಸಿ ಸಿಬಿಐ ತನಿಖೆಗೆ ನೀಡುವುದರ ಜತೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ರಾಜೀನಾಮೆಗೆ ಆಗ್ರಹಿಸಿ ಅಹೋರಾತ್ರಿ ಧರಣಿ ನಡೆಸಿದ ಪ್ರತಿಪಕ್ಷಗಳು ಮೈಸೂರಿಗೆ ಪಾದಯಾತ್ರೆ ನಡೆಸುವ ಬಗ್ಗೆ ನಿರ್ಧಾರ ಕೈಗೊಂಡಿದ್ದವು. ನಂತರ ಆ.3ರಿಂದ ಪಾದಯಾತ್ರೆಯನ್ನೂ ಘೋಷಿಸಲಾಗಿತ್ತು.

ಬಳಿಕ ಮಿತ್ರ ಪಕ್ಷಗಳಾದ ಬಿಜೆಪಿ ಮತ್ತು ಜೆಡಿಎಸ್ ನಡುವೆ ಯಾತ್ರೆಗೆ ಸಂಬಂಧಿಸಿದಂತೆ ಗೊಂದಲ ಉಂಟಾಗಿ ಮುಂದೂಡಬೇಕಾದ ಪರಿಸ್ಥಿತಿ ಎದುರಾಗಿತ್ತು. ಕೊನೆಯ ಕ್ಷಣದಲ್ಲಿ ಬಿಜೆಪಿ ವರಿಷ್ಠರ ಮಧ್ಯೆ ಪ್ರವೇಶದಿಂದ ಗೊಂದಲ ಬಗೆಹರಿದು ನಿಗದಿತ ದಿನದಂದೆ ಪಾದಯಾತ್ರೆ ಆರಂಭವಾಗುವಂತಾಯಿತು.

ಪಾದಯಾತ್ರೆಯಲ್ಲಿ ವಿಜಯೇಂದ್ರ, ಅಶೋಕ್‌, ಛಲವಾದಿ ನಾರಾಯಣಸ್ವಾಮಿ, ಸುರೇಶ್‌ಬಾಬು, ನಿಖಿಲ್ ಕುಮಾರಸ್ವಾಮಿ ಮೊದಲಾದ ನಾಯಕರು ಸಕ್ರಿಯವಾಗಿ ಪಾಲ್ಗೊಳ್ಳಲಿದ್ದಾರೆ. ಪ್ರತಿದಿನ ಸರಾಸರಿ 20 ಕಿ.ಮೀ. ಸಂಚರಿಸುವ ಉದ್ದೇಶ ಹೊಂದಲಾಗಿದ್ದು, ಈ ಪಾದಯಾತ್ರೆಯಲ್ಲಿ ಪ್ರತಿದಿನ ಕನಿಷ್ಠ 8ರಿಂದ 10 ಸಾವಿರ ಜನರು ಪಾಲ್ಗೊಳ್ಳುವ ನಿರೀಕ್ಷೆ ಇದೆ.

ಮೊದಲ ದಿನ ಶನಿವಾರ ಕೆಂಗೇರಿಯಿಂದ ಬಿಡದಿವರೆಗೆ ಯಾತ್ರೆ ಸಾಗಲಿದೆ. ಎರಡನೇ ದಿನ ಆ.4ರಂದು ಬಿಡದಿಯಿಂದ ರಾಮನಗರದವರೆಗೆ, ಆ.5ರಂದು ರಾಮನಗರದಿಂದ ಚನ್ನಪಟ್ಟಣದವರೆಗೆ, ಆ.6ರಂದು ಚನ್ನಪಟ್ಟಣದಿಂದ ಮದ್ದೂರಿನವರೆಗೆ, ಆ.7ರಂದು ಮದ್ದೂರಿನಿಂದ ಮಂಡ್ಯದವರೆಗೆ, ಆ.8ರಂದು ಮಂಡ್ಯದಿಂದ ಶ್ರೀರಂಗಪಟ್ಟಣದವರೆಗೆ ಹಾಗೂ ಆ.9ರಂದು ಶ್ರೀರಂಗಪಟ್ಟಣದಿಂದ ಮೈಸೂರಿನವರೆಗೆ ಸಂಚರಿಸಲಿದೆ.

ಈ ಅವಧಿಯಲ್ಲಿ ಉದ್ಘಾಟನೆ, ಸಮಾರೋಪ ಸೇರಿಸಿಕೊಂಡು ಒಟ್ಟು ಏಳು ದೊಡ್ಡ ಪ್ರತಿಭಟನಾ ಸಭೆಗಳು ನಡೆಯಲಿವೆ. ಬಿಜೆಪಿ- ಜೆಡಿಎಸ್ ಮುಖಂಡರು ಈ ಸಭೆಗಳನ್ನು ಉದ್ದೇಶಿಸಿ ಮಾತನಾಡಿ ಕಾಂಗ್ರೆಸ್ ಸರ್ಕಾರದಲ್ಲಿ ನಡೆದಿದೆ ಎನ್ನಲಾದ ಹಗರಣಗಳ ಬಗ್ಗೆ ಜನರಿಗೆ ಮಾಹಿತಿ ನೀಡಲಿದ್ದಾರೆ. 

7 ದಿನಗಳ ನಡಿಗೆ

ದಿನ 1 ಆ.3, ಶನಿವಾರ: ಕೆಂಗೇರಿಯಲ್ಲಿ ಚಾಲನೆ. ಬಿಡದಿಯಲ್ಲಿ ವಾಸ್ತವ್ಯ

ದಿನ 2 ಆ.4, ಭಾನುವಾರ: ಬಿಡದಿಯಿಂದ ರಾಮನಗರದವರೆಗೆ ಯಾತ್ರೆ

ದಿನ 3 ಆ.5, ಸೋಮವಾರ: ರಾಮನಗರದಿಂದ ಚನ್ನಪಟ್ಟಣಕ್ಕೆ ನಡಿಗೆ

ದಿನ 4 ಆ.6, ಮಂಗಳವಾರ: ಚನ್ನಪಟ್ಟಣದಿಂದ ಮದ್ದೂರುವರೆಗೆ ಯಾತ್ರೆ

ದಿನ 5 ಆ.7, ಬುಧವಾರ: ಮದ್ದೂರಿನಿಂದ ಮಂಡ್ಯದವರೆಗೆ ಕಾಲ್ನಡಿಗೆ

ದಿನ 6, ಆ.8, ಗುರುವಾರ: ಮಂಡ್ಯದಿಂದ ಶ್ರೀರಂಗಪಟ್ಟಣದವರೆಗೆ ನಡಿಗೆ

ದಿನ 7, ಆ.9, ಶುಕ್ರವಾರ: ಶ್ರೀರಂಗಪಟ್ಟಣದಿಂದ ಮೈಸೂರುವರೆಗೆ ಯಾತ್ರೆ

--

ಆ.10ಕ್ಕೆ ಮೈಸೂರಲ್ಲಿ ಸಮಾವೇಶ: ಅಮಿತ್‌ ಶಾ ಭಾಗಿ ಸಾಧ್ಯತೆ

ಆ.10ರಂದು ಬೆಳಗ್ಗೆ 10.30ಕ್ಕೆ ಮೈಸೂರಿನಲ್ಲಿ ಬೃಹತ್ ಸಮಾರೋಪ ಸಮಾರಂಭ ನಡೆಯಲಿದ್ದು, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಪಾಲ್ಗೊಳ್ಳುವ ನಿರೀಕ್ಷೆಯಿದೆ.