ಕೇಂದ್ರದಲ್ಲಿ ಮತ್ತೆ ಬಿಜೆಪಿ ಸರ್ಕಾರ: ಶಾಸಕ ಕೊತ್ತೂರು

| Published : Jun 04 2024, 12:32 AM IST / Updated: Jun 04 2024, 04:26 AM IST

ಕೇಂದ್ರದಲ್ಲಿ ಮತ್ತೆ ಬಿಜೆಪಿ ಸರ್ಕಾರ: ಶಾಸಕ ಕೊತ್ತೂರು
Share this Article
  • FB
  • TW
  • Linkdin
  • Email

ಸಾರಾಂಶ

ಈಗ ಸುಳ್ಳು ಹೇಳುವ ಅವಶ್ಯಕತೆಯಿಲ್ಲ, ನಾನು ಕಾಂಗ್ರೆಸ್ ಶಾಸಕನಾಗಿದ್ದು, ವಾಸ್ತವಾಂಶ ಮರೆಮಾಚಲು ಸಾಧ್ಯವಿಲ್ಲ. ಮೊದಲಿನಿಂದಲೂ ಬಿಜೆಪಿಗೆ ಹೆಚ್ಚು ಸ್ಥಾನಗಳು ಬರುತ್ತವೆ ಎಂದು ಹೇಳಲಾಗುತ್ತಿದೆ. ಅದರಲ್ಲಿ ಅನುಮಾನವಿಲ್ಲ.

 ಕೋಲಾರ : 2024 ರ ಲೋಕಸಭಾ ಚುನಾವಣೆ ಬಗ್ಗೆ ವಿವಿಧ ಸಮೀಕ್ಷೆಗಳು ಬಹಿರಂಗಪಡಿಸಿರುವ ಅಂಕಿ ಅಂಶಗಳ ಪ್ರಕಾರ ದೇಶದಲ್ಲಿ ಮತ್ತೆ ಬಿಜೆಪಿಗೇ ಹೆಚ್ಚು ಸ್ಥಾನಗಳು ಬರುತ್ತವೆ ಎನ್ನಲಾಗಿದೆ. ಇದರಿಂದಾಗಿ ಕೇಂದ್ರದಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರಲಿದೆ. ಮುಂದಿನ 5 ವರ್ಷಗಳ ಲೋಕಸಭಾ ಚುನಾವಣೆಯಲ್ಲಿ ದೇಶದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುವುದು ಗ್ಯಾರಂಟಿ. ಇದು ಕಾಂಗ್ರೆಸ್ ಟಾರ್ಗೆಟ್ ಎಂದು ಶಾಸಕ ಕೊತ್ತೂರು ಜಿ. ಮಂಜುನಾಥ್ ತಿಳಿಸಿದರು. ನಗರದಲ್ಲಿ ಸೋಮವಾರ ಆಗ್ನೇಯ ಶಿಕ್ಷಕರ ಕ್ಷೇತ್ರದ ಚುನಾವಣೆ ಸಂದರ್ಭದಲ್ಲಿ ಮತದಾನ ಕೇಂದ್ರ ಬಳಿ ಅವರು ಮಾಧ್ಯಮ ಪ್ರತಿನಿಧಿಗಳು ಎಕ್ಸಿಟ್ ಫೋಲ್ ಸಮೀಕ್ಷೆ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದರು.

ಬಿಜೆಪಿ ಹೆಚ್ಚು ಸ್ಥಾನ ಪಡೆಯಲಿದೆ

ಈಗ ಸುಳ್ಳು ಹೇಳುವ ಅವಶ್ಯಕತೆಯಿಲ್ಲ, ನಾನು ಕಾಂಗ್ರೆಸ್ ಶಾಸಕನಾಗಿದ್ದು, ವಾಸ್ತವಾಂಶ ಮರೆಮಾಚಲು ಸಾಧ್ಯವಿಲ್ಲ. ಮೊದಲಿನಿಂದಲೂ ಬಿಜೆಪಿಗೆ ಹೆಚ್ಚು ಸ್ಥಾನಗಳು ಬರುತ್ತವೆ ಎಂದು ಹೇಳಲಾಗುತ್ತಿದೆ. ಅದರಲ್ಲಿ ಅನುಮಾನವಿಲ್ಲ. ಆದರೆ ಕಾಂಗ್ರೆಸ್‌ ಹೆಚ್ಚು ಕೆಲಸ ಮಾಡಿದೆ. ಮುಂದಿನ 5 ವರ್ಷಗಳ ಬಳಿಕ ನಡೆಯುವ ಚುನಾವಣೆಯಲ್ಲಿ ಕಾಂಗ್ರೆಸ್‌ ಅಧಿಕಾರಕ್ಕೆ ಬಂದೇ ಬರುತ್ತದೆ, ಅದಕ್ಕಾಗಿ ಈಗಿನಿಂದಲೇ ತಯಾರಿ ನಡೆದಿದೆ ಎಂದರು.

ರಾಜ್ಯದಲ್ಲಿ ಬಿಜೆಪಿ ಮತ್ತು ಜೆಡಿಎಸ್ ಮೈತ್ರಿ ಹಾಗೂ ಕಾಂಗ್ರೆಸ್‌ಗೆ ಸಮಾನ ಸ್ಥಾನಗಳು ಬರಲಿವೆ. ಕೋಲಾರ ಕ್ಷೇತ್ರದಲ್ಲಿ ೨೯ ಸಾವಿರ ಮತಗಳ ಅಂತರದಿಂದ ಕಾಂಗ್ರೆಸ್ ಅಭ್ಯರ್ಥಿ ಗೌತಮ್ ಗೆಲ್ಲಲಿದ್ದಾರೆ ಎಂದರು.

ರಮೇಶ್‌ಕುಮಾರ್‌ ಲಾಬಿ ಮಾಡಿಲ್ಲ

ಮಾಜಿ ಸ್ಪೀಕರ್ ಕೆ.ಆರ್ ರಮೇಶ್ ಕುಮಾರ್ ರವರು ಎಂಎಲ್ಸಿಗಾಗಿ ಲಾಬಿ ನಡೆಸಿಲ್ಲ. ಅವರಿಗಾಗಿ ಎರಡು ಜಿಲ್ಲೆಯ ಶಾಸಕರು ಸೇರಿ ಲಾಬಿ ನಡೆಸಿದೆವು. ಇದು ಪ್ರಯತ್ನ ಮಾತ್ರ, ಮುಂದಿನ ದಿನಗಳಲ್ಲಿ ಅವರಿಗೆ ಒಳ್ಳೆಯ ಸ್ಥಾನಮಾನ ಸಿಗಲೂಬಹುದು. ನಾವು ಪ್ರಯತ್ನ ಮಾಡಿದ್ದೇವೆ ಅಷ್ಟೇ. ಅದು ತಪ್ಪಿದೆಯಾದರೂ ಮುಂದೆ ಒಂದು ಸ್ಥಾನಮಾನ ಸಿಗುತ್ತದೆ ಎಂಬ ನಂಬಿಕೆ ಇದೆ. ಮಂತ್ರಿ ಮಂಡಲ ವಿಸ್ತರಣೆಯಾದಲ್ಲಿ ಕೋಲಾರ ಜಿಲ್ಲೆಗೆ ಸಚಿವ ಸ್ಥಾನ ಸಿಗಲಿದೆ ಎಂದರು.

 ಮತ ಎಣಿಕೆ ಮುಗಿದ ನಂತರ ಅಭಿವೃದ್ಧಿಗೆ ಹೆಚ್ಚು ಒತ್ತು ನೀಡಲಾಗುವುದು. ಕೋಲಾರದಲ್ಲಿ ರಸ್ತೆಗಳು ಅಭಿವೃದ್ಧಿಯಾಗಬೇಕಾಗಿದೆ. ರಸ್ತೆಗಳ ಅಭಿವೃದ್ಧಿಗಾಗಿ ೪೦ ಕೋಟಿ ರು.ಗಳ ಟೆಂಡರ್ ಪ್ರಕ್ರಿಯೆ ಮುಗಿದಿದೆ. ಜೂ.೬ ಕ್ಕೆ ನೀತಿ ಸಂಹಿತೆ ಮುಕ್ತಾಯಗೊಳ್ಳಲಿದೆ. ಅಭಿವೃದ್ಧಿ ಕೆಲಸಗಳನ್ನು ಪ್ರಾರಂಭಿಸಲಾಗುವುದು. ರಸ್ತೆಗಳ ಅಭಿವೃದ್ಧಿಗೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಬೇಕಾಕು. ಅಧಿಕಾರಿಗಳು ಆ ಕೆಲಸವನ್ನು ಮಾಡುತ್ತಾರೆ ಎಂದರು.

ವರ್ತುಲ ರಸ್ತೆಗೆ ₹100 ಕೋಟಿ

ವರ್ತುಲ ರಸ್ತೆಗೆ ನಾಗಲಾಪುರ ಗೇಟ್‌ನಿಂದ ಕಾಳಹಸ್ತಿಪುರ ಗೇಟ್ ತನಕ ಈಗಾಗಲೇ ಡಿಪಿಆರ್ ಮುಗಿದಿದೆ. ೧೦೦ ಕೋಟಿ ರು. ಇದಕ್ಕಾಗಿ ಇಡಲಾಗಿದೆ. ಕಾಳಹಸ್ತಿಪುರ ಗೇಟಿನಿಂದ ನಾಗಲಾಪುರ ಗೇಟ್ ತನಕ ೨ನೇ ರಸ್ತೆಗೆ ಡಿಪಿಆರ್. ಆಗಬೇಕಾಗಿದೆ. ಇದು ಶ್ರೀನಿವಾಸಪುರ ರಸ್ತೆ, ಚಿಕ್ಕಬಳ್ಳಾಪುರ ರಸ್ತೆ ಸೇರಿಕೊಂಡು ವರ್ತುಲ ರಸ್ತೆ ನಿರ್ಮಾಣಗೊಳ್ಳುತ್ತದೆ. ಎಪಿಎಂಸಿ ಜಾಗಕ್ಕಾಗಿ ಈಗಾಗಲೇ ೨ ಜಾಗಳಲ್ಲಿ ಜಮೀನನ್ನು ಗುರ್ತಿಸಲಾಗಿದೆ. ಇದರಲ್ಲಿ ಚಲುವನಹಳ್ಳಿ ಬಳಿ ಇರುವ ಜಾಗವನ್ನು ಗುರ್ತಿಸಲಾಗಿದೆ ಎಂದರು.

ಶ್ರೀನಿವಾಸ್‌ಗೆ ಶಿಕ್ಷಕರ ಬೆಂಬಲ

ಶಿಕ್ಷಕರು ಬುದ್ಧಿವಂತರು. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿ ಇರುವುದರಿಂದ ಶಿಕ್ಷಕರ ಸಮಸ್ಯೆಗಳ ಬಗ್ಗೆ ಧ್ವನಿಯೆತ್ತುವಂತಹ ಅಭ್ಯರ್ಥಿಯನ್ನು ಗೆಲ್ಲಿಸಿಕೊಳ್ಳಬೇಕು. ಕಾಂಗ್ರೆಸ್ ಸರ್ಕಾರ ಇರುವುದರಿಂದ ಕಾಂಗ್ರೆಸ್ ಅಭ್ಯರ್ಥಿಯನ್ನು ಗೆಲ್ಲಿಸಿಕೊಂಡರೆ ಶಿಕ್ಷಕರ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಲು ಅನುಕೂಲವಾಗುತ್ತವೆಂದು ಕಾಂಗ್ರೆಸ್‌ ಅಭ್ಯರ್ಥಿ ಡಿ.ಟಿ.ಶ್ರೀನಿವಾಸ್ ರವರನ್ನು ಶಿಕ್ಷಕರು ಬೆಂಬಲಿಸಿದ್ದಾರೆ ಎಂದರು. ಬಂಗಾರಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸೀಸಂದ್ರ ಗೋಪಾಲಗೌಡ, ಮುಖಂಡರಾದ ಮೈಲಾಂಡಹಳ್ಳಿ ಮುರಳಿ, ಮಲೇಷಿಯಾ ರಾಜಕುಮಾರ್, ವೈ.ಶಿವಕುಮಾರ್, ಪ್ರಸಾದ್ ಬಾಬು ಇದ್ದರು.