ಕಳ್ಳತನ ಮಾಡಿರುವ ಕಳ್ಳ ಕಾಂಗ್ರೆಸ್‌ ಓಡುತ್ತಿದೆ-ಅವರನ್ನು ಹಿಡಿಯುವುದಕ್ಕಾಗಿ ಬಿಜೆಪಿ ಓಡುತ್ತಿದೆ : ಆರ್‌.ಅಶೋಕ್‌

| Published : Aug 09 2024, 12:35 AM IST / Updated: Aug 09 2024, 04:09 AM IST

R Ashok

ಸಾರಾಂಶ

ಮುಖ್ಯಮಂತ್ರಿಯಾಗಿ ರಾಜ್ಯದ ಕಾವಲು ಕಾಯಪ್ಪ, ಜನರಿಗೆ ಒಳ್ಳೆಯದು ಮಾಡಪ್ಪ ಅಂದ್ರೆ ಸಿಕ್ಕಿದ್ದನ್ನೆಲ್ಲಾ ದೋಚುತ್ತಿದ್ದಾರೆ. ಬಡವರಿಗೆ ಸಿಗಬೇಕಾದ ಸೈಟುಗಳನ್ನೆಲ್ಲಾ ನುಂಗಿದ್ದಾರೆ. ಕಾನೂನು ಕಾಪಾಡಬೇಕಾದವರೇ ಕಾನೂನು ಬಾಹೀರವಾಗಿ ನಿವೇಶನಗಳನ್ನು ತಮ್ಮ ಕುಟುಂಬದವರ ಪಾಲಾಗಿಸಿಕೊಂಡಿದ್ದಾರೆ.

 ಶ್ರೀರಂಗಪಟ್ಟಣ :  ಕಳ್ಳತನ ಮಾಡಿರುವ ಕಳ್ಳ ಕಾಂಗ್ರೆಸ್‌ ಓಡುತ್ತಿದೆ. ಅವರನ್ನು ಹಿಡಿಯುವುದಕ್ಕಾಗಿ ಬಿಜೆಪಿ ಓಡುತ್ತಿದೆ ಎಂದು ವಿಪಕ್ಷ ನಾಯಕ ಆರ್‌.ಅಶೋಕ್ ವ್ಯಂಗ್ಯವಾಗಿ ಹೇಳಿದರು.

ಶ್ರೀರಂಗಪಟ್ಟಣದಲ್ಲಿ ಬಹಿರಂಗಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಬಡವರ ದುಡ್ಡನ್ನು ಲೂಟಿ ಹೊಡೆದಿರುವವರು ಮೈಸೂರು ಸೇರಿಕೊಂಡಿದ್ದಾರೆ. ಅವರನ್ನು ಹಿಡಿಯುವುದಕ್ಕಾಗಿ ನಾವು ಮೈಸೂರು ಕಡೆಗೆ ಹೊರಟಿದ್ದೇವೆ. ಮೈಸೂರು ನೋಡುವುದಕ್ಕಲ್ಲ ನಾವು ಓಡುತ್ತಿರೋದು. ಕಳ್ಳ-ಮಳ್ಳರನ್ನು ಹಿಡಿಯುವುದಕ್ಕಾಗಿ ಓಡುತ್ತಿದ್ದೇವೆ ಎಂದು ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್‌ ಹೆಸರೇಳದೆ ಟೀಕಿಸಿದರು.

ಮುಖ್ಯಮಂತ್ರಿಯಾಗಿ ರಾಜ್ಯದ ಕಾವಲು ಕಾಯಪ್ಪ, ಜನರಿಗೆ ಒಳ್ಳೆಯದು ಮಾಡಪ್ಪ ಅಂದ್ರೆ ಸಿಕ್ಕಿದ್ದನ್ನೆಲ್ಲಾ ದೋಚುತ್ತಿದ್ದಾರೆ. ಬಡವರಿಗೆ ಸಿಗಬೇಕಾದ ಸೈಟುಗಳನ್ನೆಲ್ಲಾ ನುಂಗಿದ್ದಾರೆ. ಕಾನೂನು ಕಾಪಾಡಬೇಕಾದವರೇ ಕಾನೂನುಬಾಹೀರವಾಗಿ ನಿವೇಶನಗಳನ್ನು ತಮ್ಮ ಕುಟುಂಬದವರ ಪಾಲಾಗಿಸಿಕೊಂಡಿದ್ದಾರೆ. ಇಂತಹವರು ಅಧಿಕಾರ ನಡೆಸುವುದಕ್ಕೆ ಯೋಗ್ಯರಲ್ಲ. ಅವರು ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಬೇಕು. ಅವರು ರಾಜೀನಾಮೆ ನೀಡುವವರೆಗೂ ನಮ್ಮ ಹೋರಾಟ ನಿಲ್ಲುವುದಿಲ್ಲ. ಕಾಂಗ್ರೆಸ್‌ ಅವನತಿ ಆಗಲೇಬೇಕು ಎಂದು ದೃಢವಾಗಿ ಹೇಳಿದರು.

ಮುಖ್ಯಮಂತ್ರಿ ಜೊತೆಗೆ ಶಾಸಕರೂ ಲೂಟಿ ಹೊಡೆಯೋಕೆ ಶುರು ಮಾಡಿದ್ದಾರೆ. ವರ್ಗಾವಣೆಗೆ 40 ಲಕ್ಷ ಡಿಮ್ಯಾಂಡ್ ಮಾಡುತ್ತಿದ್ದಾರೆ. ಪ್ರಾಮಾಣಿಕ ಅಧಿಕಾರಿಗಳು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಇವರಿಗೆ ಜನರ ಅಭಿವೃದ್ಧಿ ಬೇಕಾಗಿಲ್ಲ. ರಾಜ್ಯದ ಅಭಿವೃದ್ಧಿ ಕಡೆ ಗಮನವಿಲ್ಲ. ನೆರೆ ಸಂತ್ರಸ್ತರ ಸಂಕಷ್ಟಕ್ಕೆ ಸ್ಪಂದಿಸುವುದು ಬೇಕಿಲ್ಲ. ರಾಜ್ಯದ ಜನರ ಹಣವನ್ನು ಲೂಟಿ ಮಾಡುವುದನ್ನೇ ಕಾಯಕವಾಗಿಸಿಕೊಂಡಿದ್ದಾರೆ ಎಂದು ಕಿಡಿಕಾರಿದರು.

ಸಭೆಯಲ್ಲಿ ಮಾಜಿ ಉಪಮುಖ್ಯಮಂತ್ರಿ ಡಾ.ಸಿ.ಎನ್‌.ಅಶ್ವತ್ಥನಾರಾಯಣ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ಮಾಜಿ ಸಚಿವರಾದ ಸಿ.ಟಿ.ರವಿ, ಕೆ.ಸಿ.ನಾರಾಯಣಗೌಡ, ಶಾಸಕರಾದ ಕೃಷ್ಣಪ್ಪ, ಮಹೇಶ್‌, ರಾಮಮೂರ್ತಿ, ಮರಿಸ್ವಾಮಿ, ಜೆಡಿಎಸ್‌ ಯುವ ಘಟಕದ ಅಧ್ಯಕ್ಷ ನಿಖಿಲ್‌ ಕುಮಾರಸ್ವಾಮಿ, ಮಾಜಿ ಶಾಸಕ ಅನ್ನದಾನಿ, ಎಸ್‌.ಸಚ್ಚಿದಾನಂದ, ಶ್ರೀಧರ್‌ ಇತರರಿದ್ದರು.