'ಬಣಜಗಳ ಮೇಲ್ಮಟ್ಟದಲ್ಲಿದೆ, ತಳಮಟ್ಟದಲ್ಲಿ ಅಲ್ಲ - ಎಲ್ಲದಕ್ಕೂ ವಿಶ್ವಾಸ ಕೊರತೆಯೇ ಕಾರಣ'

| Published : Jan 23 2025, 11:38 AM IST

Sunil kumar

ಸಾರಾಂಶ

ಎಲ್ಲದಕ್ಕೂ ವಿಶ್ವಾಸ ಕೊರತೆಯೇ ಕಾರಣ । ಎರಡೂ ಕಡೆಯವರೇ ಮುಂದೆ ಬಂದು ಮಾತಾಡಿದರಷ್ಟೇ ಪರಿಹಾರ: ಸುನೀಲ್‌ಕುಮಾರ್‌

ವಿಜಯ್ ಮಲಗಿಹಾಳ

 ಬೆಂಗಳೂರು : ರಾಜ್ಯ ಬಿಜೆಪಿಯಲ್ಲಿ ಬಣ ರಾಜಕೀಯ ತಾರಕಕ್ಕೇರಿದೆ. ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಪರವಾಗಿ ಮಾಜಿ ಸಚಿವ, ಶಾಸಕರು ಸಭೆಗಳ ಮೇಲೆ ಸಭೆ ನಡೆಸುತ್ತಿದ್ದರೆ, ಶಾಸಕ ಬಸನಗೌಡ ಪಾಟೀಲ್ ಯತ್ನಾಳ ಮತ್ತು ರಮೇಶ್ ಜಾರಕಿಹೊಳಿ ಅವರು ವಿಜಯೇಂದ್ರ ವಿರುದ್ಧ ವಾಗ್ದಾಳಿ ಮುಂದುವರೆಸಿದ್ದಾರೆ. ಈ ಮಧ್ಯೆ ವಿಜಯೇಂದ್ರ ತಂಡದಲ್ಲಿ ರಾಜ್ಯ ಪ್ರಧಾನ ಕಾರ್ಯದರ್ಶಿ ಹುದ್ದೆಯಲ್ಲಿರುವ ಶಾಸಕ ವಿ.ಸುನೀಲ್‌ಕುಮಾರ್ ತಮ್ಮನ್ನು ಜವಾಬ್ದಾರಿಯಿಂದ ಬಿಡುಗಡೆಗೊಳಿಸುವಂತೆ ಮೌಖಿಕವಾಗಿ ಮನವಿ ಮಾಡಿರುವುದು ಕುತೂಹಲ ಮೂಡಿಸಿದೆ. ಈ ಹಿನ್ನೆಲೆಯಲ್ಲಿ ಪ್ರಸಕ್ತ ಬೆಳವಣಿಗೆಗಳ ಬಗ್ಗೆ ಸುನೀಲ್‌ಕುಮಾರ್ ಅವರು ‘ಕನ್ನಡಪ್ರಭ’ದೊಂದಿಗೆ ‘ಮುಖಾಮುಖಿ’ಯಾಗಿದ್ದಾರೆ.

*ರಾಜ್ಯ ಬಿಜೆಪಿಯಲ್ಲಿ ಎಲ್ಲವೂ ಸರಿಯಿಲ್ಲ ಎನ್ನುವುದು ಜಗಜ್ಜಾಹೀರಾಗಿದೆ. ಏನು ನಡೆಯುತ್ತಿದೆ?

-ಬಿಜೆಪಿಯ ಮೊದಲ ಸ್ತರದ ನಾಯಕರ ನಡುವೆ ಅಭಿಪ್ರಾಯ ಭೇದಗಳಿವೆ. ಅದು ಇನ್ನಷ್ಟೇ ಪರಿಹಾರವಾಗಬೇಕು. ಆದರೆ, ತಾಲೂಕು, ಜಿಲ್ಲಾ ಮಟ್ಟದ ನಾಯಕರ ನಡುವೆ ಯಾವುದೇ ಅಭಿಪ್ರಾಯ ಭೇದಗಳಿಲ್ಲ. ನಮ್ಮದು ಕೇಡರ್‌ ಆಧಾರಿತ ಪಕ್ಷ. ಕೇಡರ್‌ಗೆ ಬೇಸರ ಆಗಿದೆ. ಇಲ್ಲ ಅಂತ ಅಲ್ಲ. ಆದರೆ, ಇವತ್ತಿಗೂ ಕೇಡರ್‌ ಗಟ್ಟಿಯಾಗಿದೆ. ಆಂತರಿಕ ಪ್ರಜಾಪ್ರಭುತ್ವ ನಮ್ಮಲ್ಲಿ ಹೆಚ್ಚಿರುವುದರಿಂದ ಸ್ವಲ್ಪ ಅತಿಯಾಗಿ, ಇತ್ತೀಚೆಗೆ ಪಕ್ಷದ ಕುರಿತು ಬರುತ್ತಿರುವ ಹೇಳಿಕೆಗಳನ್ನು ನಾನು ಸಹ ಒಪ್ಪಲಾರೆ. ಶೀಘ್ರದಲ್ಲಿಯೇ ಇದು ಸರಿಯಾಗಲಿದೆ ಎಂಬ ವಿಶ್ವಾಸ ಇದೆ.

*ನಿಮ್ಮ ಪ್ರಕಾರ ಕೇಡರ್‌ಗೆ ಯಾಕೆ ಬೇಸರ ಆಗಿದೆ?

-ನಮ್ಮದು ಕೇಡರ್‌ ತತ್ವದ ಆಧಾರದ ಮೇಲೆ ಕೆಲಸ ಮಾಡುವಂತಹ ಪಕ್ಷ. ಅದು ಯಾವುದೇ ವ್ಯಕ್ತಿಯ ಹಿಂದೆ ಕೆಲಸ ಮಾಡುವ ಕೇಡರ್‌ ಅಲ್ಲ. ಹಾಗಾಗಿ ಯಾವುದೇ ವ್ಯಕ್ತಿ ಪರ ನಮ್ಮ ಕೇಡರ್‌ ಇರುವುದಿಲ್ಲ. ವ್ಯಕ್ತಿಗಳು ಮಾಡುವಂತಹ ಹೇಳಿಕೆ, ವ್ಯಕ್ತಿಗಳ ನಡವಳಿಕೆಗಳಿಂದ ತಾತ್ಕಾಲಿಕ ವಿಚಲಿತವಾಗಿದ್ದರೂ ಅದನ್ನು ಸರಿಪಡಿಸಿಕೊಳ್ಳುವ ವ್ಯವಸ್ಥೆ ತಳಮಟ್ಟದ ಕಾರ್ಯಕರ್ತರಲ್ಲಿ ಇದೆ. ಹೀಗಾಗಿ ಇದನ್ನು ತಕ್ಷಣ ನಾವು ಸುಧಾರಿಸಿಕೊಂಡು ಮುಂದಕ್ಕೆ ಹೋಗಬಹುದು.

*ಪಕ್ಷದಲ್ಲಿ ಭಿನ್ನಮತ ತಾರಕಕ್ಕೇರಿದೆ. ಬಹಿರಂಗ ವಾಕ್ಸಮರದ ಹಂತಕ್ಕೆ ತಲುಪಬೇಕಿತ್ತೇ?

-ಸರಿಯಲ್ಲ. ಇದನ್ನು ನಾನು ಒಪ್ಪಲಾರೆ. ಖಂಡಿತಾ ಇತ್ತೀಚಿನ ಬೆಳವಣಿಗೆ ಕಾರ್ಯಕರ್ತರಿಗೆ ಯಾವುದೇ ಸಮಾಧಾನ ತಂದಿಲ್ಲ. ಇದು ಎಲ್ಲರೂ ಅವಲೋಕನ ಮಾಡುವಂತಹ ಪರಿಸ್ಥಿತಿ. ಪಕ್ಷದಲ್ಲಿ ಭಿನ್ನಮತ ಯಾವುದೇ ಒಬ್ಬ ವ್ಯಕ್ತಿಯಿಂದ ಆಗುವಂತಹದ್ದಲ್ಲ. ಇಡೀ ಸಮೂಹ ಈ ನಿಟ್ಟಿನಲ್ಲಿ ಯೋಚನೆ ಮಾಡಬೇಕಾಗಿದೆ. ಹಾಗಾಗಿ ದೊಡ್ಡ ಪ್ರಮಾಣದಲ್ಲಿ ಸರಿ ಮಾಡಿ ಕೊಂಡೊಯ್ಯುವ ಜವಾಬ್ದಾರಿ ಬೂತ್‌ ಮಟ್ಟದಿಂದ ರಾಜ್ಯ ಮಟ್ಟದವರೆಗಿನ ನಾಯಕರಿಗೆ ಇದ್ದೇ ಇದೆ. ಇದು ಇವತ್ತಿನ ಅನಿವಾರ್ಯವೂ ಹೌದು. ನಾವು ಅಧಿಕಾರಕ್ಕೆ ಬರಬೇಕು ಎನ್ನುವುದಕ್ಕಿಂತ ಹೆಚ್ಚಾಗಿ ನಮ್ಮ ವಿಚಾರ ವಿರೋಧಿಗಳು ವಿಜೃಂಭಜಿಸುತ್ತಿರುವ ಹಿನ್ನೆಲೆಯಲ್ಲಿ ನಮ್ಮ ವಿಚಾರವನ್ನು ವಿಸ್ತಾರಗೊಳಿಸಲು ಮತ್ತು ಗಟ್ಟಿಗೊಳಿಸಲು ನಾವೆಲ್ಲರೂ ಒಟ್ಟಾಗಿ ಕೆಲಸ ಮಾಡಬೇಕಾದ ಅನಿವಾರ್ಯತೆ ಇದೆ.

*ಬಿಜೆಪಿ ಅಧಿಕಾರಕ್ಕೆ ಬಂದರೂ, ಬಾರದಿದ್ದರೂ ಬಿಜೆಪಿ ಎಂದರೆ ‘ಭಾರತೀಯ ಜಗಳ ಪಕ್ಷ’ ಎನ್ನುವಂತಾಗಿದೆ?

-ಇದನ್ನು ನಾನು ಒಪ್ಪುವುದಿಲ್ಲ.

*ಅಧಿಕಾರ ಇದ್ದಾಗ ಜಗಳ ಸಹಜ. ಆದರೆ, ಅಧಿಕಾರ ಇಲ್ಲದಿದ್ದರೂ ಈ ಮಟ್ಟದಲ್ಲಿ ಬಿಕ್ಕಟ್ಟು ಬೇಕಾ?

-ಏನೆಂದರೆ, ನಾಲ್ಕೈದು ಜನರ ನಡುವೆ ಇರುವಂತಹದ್ದನ್ನು ಇಡೀ ಪಕ್ಷದ ಮೇಲೆ ತರುವಂತಹದ್ದಲ್ಲ. ವ್ಯಕ್ತಿಗಳ ನಡುವೆ ಇದೆ. ಉಡುಪಿ, ದಕ್ಷಿಣ ಕನ್ನಡದಲ್ಲಿ ಇದೆಯೇ? ಅಲ್ಲಿ ಇಲ್ಲ.

*ಹಾಗಾದರೆ ಪಕ್ಷ ಹಳಿ ತಪ್ಪಿದ್ದು ಎಲ್ಲಿ?

-ಒಂದು ವಿಶ್ವಾಸದ ಕೊರತೆ. ವಿಶ್ವಾಸ ಕೊರತೆ ಬಗ್ಗೆ ಯಾರು ಹೇಳಿಕೆ ನೀಡುತ್ತಿದ್ದಾರೋ ಅವರೇ ಕುಳಿತು ಪರಿಹಾರವನ್ನು ಕಂಡುಕೊಳ್ಳಬೇಕಿದೆ. ಎರಡನೇಯದು ನಾಯಕತ್ವವನ್ನು ಒಪ್ಪಿಕೊಳ್ಳುವ ಮಾನಸಿಕತೆ ಎಲ್ಲರಿಗೂ ಬರಬೇಕು. ಈ ಎರಡರ ನಡುವೆ ಇರುವ ಅಂತರವನ್ನು ಕಡಿಮೆ ಮಾಡಬೇಕಿರುವುದು ದೊಡ್ಡ ಸವಾಲು ಇದೆ.

*ಪಕ್ಷದಲ್ಲಿನ ಎರಡೂ ಬಣದಲ್ಲೂ ತಪ್ಪುಗಳಿವೆಯಾ?

-ಸಹಜ ಅಲ್ಲವೇ? ತಪ್ಪು ಎನ್ನುವುದಕ್ಕಿಂತ ಎರಡೂ ಕಡೆಯವರು ಒಂದು ಹೆಜ್ಜೆ ಮುಂದೆ ಬಂದು ಮಾತನಾಡಬೇಕು.

*ವಿಜಯೇಂದ್ರ ಅವರು ರಾಜ್ಯಾಧ್ಯಕ್ಷರಾಗಿ ಆಯ್ಕೆಯಾದ ಬೆನ್ನಲ್ಲೇ ಭಿನ್ನಮತ ಪ್ರಾರಂಭವಾಗಿದೆ. ಅಂದರೆ, ಆಯ್ಕೆ ಪ್ರಕ್ರಿಯೆಯೇ ಸರಿ ಇರಲಿಲ್ಲವೇ?

-ಇದು ಪಕ್ಷದ ಅಂತರಿಕ ವಿಚಾರ. ನಾನು ಈ ಬಗ್ಗೆ ಮಾತನಾಡಲ್ಲ.

*ನಿಮ್ಮ ಹೆಸರು ಕೂಡ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಕೇಳಿಬಂದಿತ್ತು. ನಂತರ ಪ್ರಧಾನ ಕಾರ್ಯದರ್ಶಿ ಹುದ್ದೆ ಒಪ್ಪಿಕೊಂಡಿದ್ದಿರಿ. ಈಗ ಒಂದು ವರ್ಷ ಕಳೆದ ಮೇಲೆ ಬೇಡ ಎಂದು ಹೇಳುತ್ತಿರುವುದರ ಹಿಂದೆ ಅಸಮಾಧಾನ ಕಾರಣವಿದೆಯೇ?

-ಇದು ಪೂರ್ಣ ವೈಯಕ್ತಿಕ ಕಾರಣ. ಇದರಲ್ಲಿ ಯಾವುದೇ ಅಸಮಾಧಾನ ಇಲ್ಲ. ಬಣ ರಾಜಕೀಯಯೂ ಇಲ್ಲ. ಆ ಹುದ್ದೆಗೆ ನ್ಯಾಯ ಕೊಡುವುದು ನನ್ನ ಕರ್ತವ್ಯ. ವೈಯಕ್ತಿಕ ಸಮಸ್ಯೆಯಿಂದ ನ್ಯಾಯ ಕೊಡಲು ಆಗುತ್ತಿಲ್ಲ. ಹೀಗಾಗಿ ಆ ಜವಾಬ್ದಾರಿಯಿಂದ ಬಿಡುಗಡೆ ಮಾಡಬೇಕು ಎಂಬುದು ನನ್ನ ಮನಸ್ಸಿಗೆ ಬಂದಿದೆ.

*ಪಕ್ಷದ ನಾಯಕರಿಗೆ ಈ ಬಗ್ಗೆ ತಿಳಿಸಿದ್ದೀರಾ?

-ಇನ್ನಷ್ಟೇ ಹೇಳಬೇಕಿದೆ. ರಾಜ್ಯಾಧ್ಯಕ್ಷರ ಗಮನಕ್ಕೆ ತರಲು ಆಗಿಲ್ಲ. ಪ್ರಮುಖರೊಂದಿಗೆ ಚರ್ಚೆ ಮಾಡಿದ್ದೇನೆ.

*ಒಂದು ವರ್ಷ ಪ್ರಧಾನ ಕಾರ್ಯದರ್ಶಿಯಾಗಿ ಕೆಲಸ ಮಾಡಿದ್ದು ಸಮಾಧಾನ ತಂದಿದೆಯೇ?

-ಸಮಾಧಾನ ಇದೆ. ಇನ್ನಷ್ಟು ಕೆಲಸ ಮಾಡಲು ಅವಕಾಶ ಇತ್ತು. ಅದರ ನಡುವೆ ಲೋಕಸಭೆ ಚುನಾವಣೆ ಬಂತು. ಸಣ್ಣಪುಟ್ಟ ಅಡೆತಡೆ ರಾಜಕಾರಣದಲ್ಲಿ ಇರುವುದು ಸಹಜ.

*ಈಗಿನ ಬಣ ರಾಜಕೀಯಕ್ಕೂ ನಿಮ್ಮ ನಿರ್ಧಾರಕ್ಕೂ ಏನಾದರೂ ಸಂಬಂಧ ಇದೆಯೇ? ನಿಮ್ಮದು ಯಾವ ಬಣ?

-ಆ ರೀತಿಯ ಯಾವುದೇ ಸಂಬಂಧ ಇಲ್ಲ. ನಾನು ಯಾವುದೇ ಬಣಕ್ಕೆ ಸೇರಿದವನಲ್ಲ. ಬಿಜೆಪಿಗ.

*ವಿಜಯೇಂದ್ರ ಅವರ ಬಗ್ಗೆ ನಿಮಗೂ ಬೇಸರ ಉಂಟಾಗಿದೆಯೇ?

-ಅಂಥದ್ದೇನೂ ಇಲ್ಲ.

*ರಾಜ್ಯ ಘಟಕದ ಎರಡು ಬಣಗಳ ಹಿರಿಯ ನಾಯಕರು ಬಾಯಿಗೆ ಬಂದಂತೆ ಹೇಳಿಕೆ ನೀಡುತ್ತಿದ್ದಾರಲ್ಲ?

-ಈ ಎರಡೂ ಬಣಕ್ಕೂ ಒಬ್ಬರು ಸೇತುವೆಯಾಗಬೇಕಾದ ಅಗತ್ಯ ಇದೆ. ಸೇತುವೆಯಾಗಿ ಮಾತುಕತೆಗೆ ಕೂರಿಸಿ ಪರಿಹಾರ ಮಾಡಬೇಕಾದುದ್ದನ್ನು ಯಾರಾದರೂ ಹಿರಿಯರು, ಕೋರ್‌ ಕಮಿಟಿ ಸದಸ್ಯರು ಮಾಡಬೇಕಿದೆ.

*ಈ ಪ್ರಯತ್ನ ಆಗಿದೆ. ಬಸನಗೌಡ ಪಾಟೀಲ ಯತ್ನಾಳ ಬಣದ ನಾಯಕರು ಮಾತುಕತೆಗೆ ಒಪ್ಪುತ್ತಿಲ್ಲ ಎಂಬ ಮಾತು ಬಿಜೆಪಿಯಿಂದಲೇ ಕೇಳಿಬರುತ್ತಿದೆ?

-ಇದು ನನ್ನ ಗಮನಕ್ಕೆ ಬಂದಿಲ್ಲ.

*ಸಂಘದ ಮುಖಂಡರು ಯಾಕೆ ಈ ಬಗ್ಗೆ ಮೌನವಾಗಿದ್ದಾರೆ? ಹಿಂದೆ ಇಂಥ ಸಮಸ್ಯೆ ಬಂದಾಗ ಮಧ್ಯೆ ಪ್ರವೇಶಿಸಿ ಸರಿ ಮಾಡುತ್ತಿದ್ದರಲ್ಲ?

-ಸಂಘಕ್ಕೂ ಒಂದು ಮಿತಿ ಇದೆ. ಅದನ್ನು ಮೀರಿ ಸಂಘದ ಮುಖಂಡರು ಹೇಗೆ ಕೆಲಸ ಮಾಡುತ್ತಾರೆ?

*ಹಿಂದೆ ಯಡಿಯೂರಪ್ಪ ಮತ್ತು ಅನಂತಕುಮಾರ್ ನಡುವೆ ದೊಡ್ಡಮಟ್ಟದಲ್ಲಿ ಭಿನ್ನಾಭಿಪ್ರಾಯ ಬಂದಾಗ ಸಂಘದ ಮುಖಂಡರೇ ಮಧ್ಯಸ್ಥಿಕೆ ವಹಿಸಿದ್ದರು?

-ಅನಂತಕುಮಾರ್ ರೀತಿಯಾದ ನಾಯಕತ್ವ, ಯಡಿಯೂರಪ್ಪ ರೀತಿಯಾದ ನಾಯಕತ್ವ ಇವತ್ತು ಇಲ್ಲವಲ್ಲ. ಆ ರೀತಿಯಾದ ನಾಯಕತ್ವ ಇನ್ನಷ್ಟೇ ಬೆಳೆಯಬೇಕಿದೆ.

*ಪಕ್ಷದ ಹಲವು ಹಿರಿಯ ನಾಯಕರು ತೆರೆಮರೆಯಲ್ಲಿ ಯತ್ನಾಳ ಬಣದ ಬೆಂಬಲಕ್ಕೆ ನಿಂತಿದ್ದಾರಂತೆ?

-ನನಗೆ ಗೊತ್ತಿಲ್ಲ. ನಾನು ಹೇಗೆ ತೆರೆಮರೆಯಲ್ಲಿ ನಡೆಯುವುದನ್ನು ನೋಡಲಿ. ನಾನು ಬಹಿರಂಗವಾಗಿ ಮತ್ತು ನೇರವಾಗಿ ಹೇಳುವವನು. ನಾನು ತೆರೆಮರೆಯಲ್ಲಿ ನೋಡೋಕೆ ಹೋಗಲ್ಲ.

*ವರಿಷ್ಠರು ಮನಸ್ಸು ಮಾಡಿದರೆ ಈ ಬಿಕ್ಕಟ್ಟು ತಕ್ಷಣ ಸರಿಪಡಿಸಬಹುದಲ್ಲವೇ?

-ಬಗೆಹರಿಯುತ್ತೆ. ಕಾರ್ಯಕರ್ತರಿಗೆ ವಿಶ್ವಾಸದಿಂದ ಹೇಳುತ್ತೇನೆ. ನೂರಕ್ಕೆ ನೂರರಷ್ಟು ಕೆಲವೇ ದಿನಗಳಲ್ಲಿ ಇದು ಬಗೆಹರಿಯುತ್ತೆ. ಮತ್ತೊಮ್ಮೆ ನಾವು ಎದ್ದು ನಿಲ್ಲುತ್ತೇವೆ. ಪ್ರಬಲ ವಿರೋಧ ಪಕ್ಷವಾಗಿ ಕೆಲಸ ಮಾಡಬೇಕು ಎಂಬ ಅಭಿಪ್ರಾಯವನ್ನು ರಾಜ್ಯ ಘಟಕ ತುಂಬಲಿದೆ.

*ಕಾಂಗ್ರೆಸ್‌ನಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಸೂಚನೆ ನೀಡಿದ ಬಹಿರಂಗ ಹೇಳಿಕೆಗಳಿಗೆ ಬ್ರೇಕ್ ಬಿದ್ದಿತು. ಅಂಥ ಸೂಚನೆ ಬಿಜೆಪಿ ವರಿಷ್ಠರಿಂದ ಯಾಕೆ ಬರುತ್ತಿಲ್ಲ?

-ಸಹಜವಾಗಿ ಇಂತಹ ಭಾವನೆ ಇದೆ. ಕಾಂಗ್ರೆಸ್‌ ಮತ್ತು ನಮಗೂ ಬಹಳಷ್ಟು ವಿಷಯದಲ್ಲಿ ವ್ಯತ್ಯಾಸ ಇದೆ. ಕಾಂಗ್ರೆಸ್‌ ಭಿನ್ನಮತದಿಂದ ಪಕ್ಷವೇ ಒಡೆದುಹೋಗಿದೆ. ನಮ್ಮಲ್ಲಿ ಆ ರೀತಿ ಆಗಿಲ್ಲ. ಅಂತರಿಕ ಪ್ರಜಾಪ್ರಭುತ್ವ ಹೆಚ್ಚಾಗಿದೆ. ಆದರೆ ಭಾವನೆಗಳನ್ನು ಮಾಧ್ಯಮಗಳ ಮೂಲಕ ಹೇಳಬಾರದು. ನಾಲ್ಕು ಗೋಡೆಗಳ ನಡುವೆ ಭಾವನೆಗಳನ್ನು ಹೇಳಬೇಕು ಎಂಬುದು ನನ್ನ ಅಭಿಪ್ರಾಯ.

*ವರಿಷ್ಠರ ಪೈಕಿ ಕೆಲವರಿಗೆ ಬಿಕ್ಕಟ್ಟು ಮುಂದುವರಿಯಲಿ ಎಂಬ ಉದ್ದೇಶ ಇರಬಹುದೇ?

-ಯಾವ ನಾಯಕರಿಗೂ ಅಂಥ ಉದ್ದೇಶ ಇರುವುದಿಲ್ಲ. ನಮ್ಮ ವರಿಷ್ಠರ ಪೈಕಿ ಯಾರಿಗೂ ಇಲ್ಲ.

*ಕಾಂಗ್ರೆಸ್‌ ಆಡಳಿತ ವೈಫಲ್ಯದ ಅಸ್ತ್ರಗಳನ್ನು ಇಟ್ಟುಕೊಂಡು ಹೋರಾಟ ಮಾಡುವಲ್ಲಿ ಬಿಜೆಪಿ ವಿಫಲವಾಗಿದೆ ಎಂಬ ಆರೋಪ ಬಲವಾಗಿ ಕೇಳಿ ಬರುತ್ತಿದೆ?

-ಜನರ ನಿರೀಕ್ಷೆಗೆ ತಕ್ಕಂತೆ ದೊಡ್ಡ ಪ್ರಮಾಣದಲ್ಲಿ ರಸ್ತೆಗಿಳಿಯಲು ಆಗಲಿಲ್ಲ ಎನ್ನುವುದನ್ನು ಒಪ್ಪುತ್ತೇನೆ. ಆದರೆ ಇವತ್ತಿನ ಸರ್ಕಾರದ ವೈಫಲ್ಯಗಳು ಹೇಗಿವೆ ಎಂದರೆ ನಿತ್ಯ ನಾವು ರಸ್ತೆಯ ಮೇಲೆ ಇರಬೇಕು ಎನ್ನುವಂತಿವೆ. ಪ್ರತಿದಿನ ರಸ್ತೆಯ ಮೇಲೆ ರಾಜಕೀಯ ಪಕ್ಷಕ್ಕೆ ಇರಲು ಹೇಗೆ ಆಗುತ್ತದೆ ಹೇಳಿ. ಅಷ್ಟೊಂದು ಹಗರಣಗಳು, ವ್ಯವಸ್ಥೆಯ ಲೋಪಗಳಿವೆ. ನಾವು ಎಲ್ಲಿ ಹೋರಾಟ ಮಾಡಬೇಕು ಅಲ್ಲಿ ಮಾಡುತ್ತಿದ್ದೇವೆ. ಖಂಡಿತ ನಾವು ವಿಧಾನಸಭೆ ಒಳಗೆ ಮತ್ತು ಹೊರಗೆ ಹೋರಾಟ ಮುಂದುವರಿಸುತ್ತೇವೆ.

*ಹಿಂದುತ್ವದ ಅಜೆಂಡಾ ಬಗ್ಗೆ ಪಕ್ಷದಲ್ಲಿ ಆಂತರಿಕ ಭಿನ್ನಾಭಿಪ್ರಾಯ ಉದ್ಭ‍ವಿಸಿದೆಯೇ?

-ಬಿಜೆಪಿಯಲ್ಲಿ ಆ ರೀತಿ ಇಲ್ಲ. ವ್ಯಕ್ತಿಗಳ ನಡುವೆ ಇರಬಹುದು. ಕೆಲವರು ನಮ್ಮ ಸಿದ್ಧಾಂತ ಹಿನ್ನೆಲೆಯಲ್ಲಿ ಬಂದವರು ಇರಬಹುದು. ಕೆಲವು ಅಭಿವೃದ್ಧಿ ನೋಡಿ ಬಂದಿರುವವರು ಇರಬಹುದು. ಇನ್ನೂ ಕೆಲವರು ನಾಯಕತ್ವ ನೋಡಿ ಬಂದಿರುವವರು ಇರಬಹುದು. ಕೆಲವರ ಆದ್ಯತೆ ಒಂದೊಂದು ಇರಬಹುದು. ನನ್ನ ಆದ್ಯತೆ ಹಿಂದುತ್ವ ಅಷ್ಟೇ. ನನಗೆ ಇರುವ ಆದ್ಯತೆ ಇನ್ನೊಬ್ಬರಿಗೆ ಇರಬೇಕು ಅಂತ ಇಲ್ಲವಲ್ಲ.

*ಬಿಜೆಪಿ ಭಿನ್ನಾಭಿಪ್ರಾಯಕ್ಕೆ ಪರಿಹಾರವೇನು?

-ನಾಲ್ಕು ಗೋಡೆಗಳ ಮಧ್ಯೆ ಕುಳಿತು ಬಗೆಹರಿಸಿಕೊಳ್ಳುವುದೇ ಪರಿಹಾರ.

*ಪಕ್ಷದ ರಾಜ್ಯ ಉಸ್ತುವಾರಿ ಬಂದು ಸರಣಿ ಸಭೆ ನಡೆಸಿದರೂ ಬಿಕ್ಕಟ್ಟು ಬಗೆಹರಿಯಲಿಲ್ಲ?

-ಪ್ರಯತ್ನ ಮಾಡುತ್ತಿದ್ದಾರೆ. ಆ ನಿಟ್ಟಿನಲ್ಲಿ ಚರ್ಚೆ ನಡೆಯುತ್ತಿದೆ.

*ನೀವು ಕೂಡ ಮುಂದಿನ ರಾಜ್ಯಾಧ್ಯಕ್ಷ ಹುದ್ದೆ ಆಕಾಂಕ್ಷಿಯಂತೆ?

-ನಾನು ರಾಜ್ಯಾಧ್ಯಕ್ಷ ಹುದ್ದೆಯ ಆಕಾಂಕ್ಷಿಯಲ್ಲ. ಕಾರ್ಯಕರ್ತನಾಗಿ ಕೆಲಸ ಮಾಡಬೇಕು ಎಂದುಕೊಂಡಿದ್ದೇನೆ. ವೈಯಕ್ತಿಕ ಸಮಸ್ಯೆಗಳು ಪರಿಹಾರವಾದ ಬಳಿಕ ಸಕ್ರಿಯವಾಗಿ ಪಕ್ಷದ ಕೆಲಸ ಚಟುವಟಿಕೆಯಲ್ಲಿರುತ್ತೇನೆ. ಹಾಗಂತ ಈಗ ಚಟುವಟಿಕೆಯಿಂದ ಮುಕ್ತನಾಗುತ್ತೇನೆ ಅಂತ ಅಲ್ಲ. ವಿಶೇಷ ಕಾರ್ಯಕ್ರಮಗಳು ಬಂದಾಗ ಚಟುವಟಿಕೆಯಲ್ಲಿ ಭಾಗಿಯಾಗುತ್ತೇನೆ.