ಕೆಲಸ ಮಾಡದಿದ್ರೂ ಬಿಜೆಪಿ ನಾಯಕರಿಗೆ ಪ್ರಚಾರದ ಹುಚ್ಚು ಜಾಸ್ತಿ : ರಾಮಲಿಂಗಾರೆಡ್ಡಿ

| N/A | Published : Aug 10 2025, 01:30 AM IST / Updated: Aug 10 2025, 09:45 AM IST

Ramalingareddy

ಸಾರಾಂಶ

ಮೆಟ್ರೋ ಯೋಜನೆಯಲ್ಲಿ ರಾಜ್ಯ ಸರ್ಕಾರದ ಪಾಲು ದೊಡ್ಡದಿದೆ. ಮೆಟ್ರೋ 1ನೇ ಹಂತದಲ್ಲಿ ರಾಜ್ಯ ಸರ್ಕಾರ ಭೂಮಿ ಸೇರಿ ಶೇ.30ರಷ್ಟು ಅನುದಾನ ನೀಡಿದೆ. ಇನ್ನು ಕೇಂದ್ರ ಸರ್ಕಾರ ಶೇ.25 ಮತ್ತು ಉಳಿದ ಶೇ.45ರಷ್ಟು ಹಣವನ್ನು ಸಾಲದ ರೂಪದಲ್ಲಿ ಬಿಎಂಆರ್‌ಸಿಎಲ್‌ ಪಡೆದಿತ್ತು. 

 ಬೆಂಗಳೂರು :  ಬಿಜೆಪಿ ನಾಯಕರಿಗೆ ಕೆಲಸಕ್ಕಿಂತ ಪ್ರಚಾರದ ಹುಚ್ಚು ಆಸ್ತಿ. ಏನೂ ಮಾಡದಿದ್ದರೂ ಪ್ರಚಾರ ಪಡೆಯುತ್ತಾರೆ. ಬೇರೆಯವರ ಕೆಲಸ ತಾವೇ ಮಾಡಿದ್ದಾಗಿ ಹೇಳುತ್ತಾರೆ. ನಮ್ಮ ಮೆಟ್ರೋ ಹಳದಿ ಮಾರ್ಗದಲ್ಲೂ ಅದನ್ನೇ ಮಾಡುತ್ತಿದ್ದಾರೆ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕೆಪಿಸಿಸಿ ಕಚೇರಿಯಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ನಮ್ಮ ಮೆಟ್ರೋ ಹಳದಿ ಮಾರ್ಗಕ್ಕೆ ಸಂಬಂಧಿಸಿ ಬಿಜೆಪಿ ನಾಯಕರು ಇಡೀ ಮೆಟ್ರೋ ಯೋಜನೆಯನ್ನೇ ಕೇಂದ್ರದ ಬಿಜೆಪಿ ಸರ್ಕಾರ ಮಾಡಿದೆ ಎಂದು ಪ್ರಚಾರ ಮಾಡುತ್ತಾ, ರಾಜ್ಯ ಸರ್ಕಾರದ ವಿರುದ್ಧ ಟೀಕೆ ಮಾಡುತ್ತಿದ್ದಾರೆ. ಆದರೆ, 2006ರಲ್ಲಿ ಧರಂ ಸಿಂಗ್‌ ಮುಖ್ಯಮಂತ್ರಿಯಾಗಿದ್ದಾಗ ಆಗಿನ ಪ್ರಧಾನಿ ಮನಮೋಹನ್‌ ಸಿಂಗ್‌ ಶಂಕುಸ್ಥಾಪನೆ ನೆರವೇರಿಸಿದ್ದರು. ಮೆಟ್ರೋ ಸಂಸ್ಥೆ ಯಾವುದೇ ಪಕ್ಷದ ಸ್ವತ್ತಲ್ಲ. ಆದರೆ, ಬಿಜೆಪಿ ನಾಯಕರಿಗೆ ಪ್ರಚಾರ ಹುಚ್ಚಿದ್ದು, ಕೆಲಸ ಮಾಡದಿದ್ದರೂ ಪ್ರಚಾರ ಪಡೆಯುತ್ತಾರೆ ಎಂದರು.

ಮೆಟ್ರೋ ಯೋಜನೆಯಲ್ಲಿ ರಾಜ್ಯ ಸರ್ಕಾರದ ಪಾಲು ದೊಡ್ಡದಿದೆ. ಮೆಟ್ರೋ 1ನೇ ಹಂತದಲ್ಲಿ ರಾಜ್ಯ ಸರ್ಕಾರ ಭೂಮಿ ಸೇರಿ ಶೇ.30ರಷ್ಟು ಅನುದಾನ ನೀಡಿದೆ. ಇನ್ನು ಕೇಂದ್ರ ಸರ್ಕಾರ ಶೇ.25 ಮತ್ತು ಉಳಿದ ಶೇ.45ರಷ್ಟು ಹಣವನ್ನು ಸಾಲದ ರೂಪದಲ್ಲಿ ಬಿಎಂಆರ್‌ಸಿಎಲ್‌ ಪಡೆದಿತ್ತು. ಉಳಿದೆರಡು ಹಂತದ ಯೋಜನೆಯಲ್ಲೂ ರಾಜ್ಯ ಸರ್ಕಾರ ಭೂಮಿ ಜತೆಗೆ ಕೇಂದ್ರ ಸರ್ಕಾರಕ್ಕಿಂತ ಹೆಚ್ಚಿನ ಅನುದಾನ ನೀಡಿದೆ. ಮೆಟ್ರೋ ಯೋಜನೆಗೆ ಈವರೆಗೆ ರಾಜ್ಯ ಸರ್ಕಾರ 24 ಸಾವಿರ ಕೋಟಿ ರು. ನೀಡಿದ್ದರೆ, ಕೇಂದ್ರ ಸರ್ಕಾರ 17,803 ಕೋಟಿ ರು. ಮತ್ತು 4.35 ಲಕ್ಷ ಕೋಟಿ ರು. ಸಾಲದ ರೂಪದಲ್ಲಿ ಪಡೆಯಲಾಗಿದೆ. ಮೆಟ್ರೋ ಸಂಸ್ಥೆ ಯೋಜನೆಗಾಗಿ ಪಡೆದಿರುವ ಸಾಲಕ್ಕೆ ರಾಜ್ಯ ಸರ್ಕಾರ ಗ್ಯಾರಂಟಿ ನೀಡಿದೆ. ಬಿಎಂಆರ್‌ಸಿಎಲ್‌ ಸಾಲ ಮರು ಪಾವತಿಸದಿದ್ದರೆ ರಾಜ್ಯ ಸರ್ಕಾರ ಭರಿಸಬೇಕಾಗುತ್ತದೆ ಎಂದು ಹೇಳಿದರು.

ಮೆಟ್ರೋ ಯೋಜನೆಗೆ ಪ್ರತಿ ಹಂತದಲ್ಲೂ ರಾಜ್ಯ ಸರ್ಕಾರ ಆರ್ಥಿಕ ಮತ್ತು ಭೂಮಿ ನೆರವು ನೀಡಿದೆ. ಆದರೂ, ರಾಜ್ಯದ ಬಿಜೆಪಿ ನಾಯಕರು ರಾಜ್ಯದ ಬಗ್ಗೆಯೇ ಅಪಪ್ರಚಾರ ಮಾಡುತ್ತಿದ್ದಾರೆ. ಯೋಜನೆ ವಿಳಂಬದಲ್ಲಿ ಕೇಂದ್ರ ಸರ್ಕಾರದ ಹೊಣೆಯಿಲ್ಲವೇ ಎಂದು ಬಿಜೆಪಿ ನಾಯಕರು ತಿಳಿಸಬೇಕು ಎಂದು ಆಗ್ರಹಿಸಿದರು.

ತಾಂತ್ರಿಕ ಸಮಸ್ಯೆಯನ್ನು ತಾವೇ ಬಗೆಹರಿಸಿದ್ದು ಎಂದು ತೇಜಸ್ವಿ ಸೂರ್ಯ ಹೇಳಿರುವುದಕ್ಕೆ ಪ್ರತಿಕ್ರಿಯಿಸಿ, ಅವರೇ ಬಗೆಹರಿಸಿದ್ದರೆ ಯೋಜನೆ ತಡವಾಗಿದ್ದು ಏತಕ್ಕಾಗಿ ಎಂದು ಅವರು ತಿಳಿಸಬೇಕು. ಕಳೆದ 11 ವರ್ಷಗಳಿಂದ ಕೇಂದ್ರದಲ್ಲಿ ಬಿಜೆಪಿ ಅಧಿಕಾರದಲ್ಲಿದೆ. ಕೇಂದ್ರದ ತಪ್ಪು ಇಟ್ಟುಕೊಂಡು ನಮ್ಮ ಮೇಲೆ ಹೇಳುತ್ತಾರೆ. ಒಕ್ಕೂಟ ವ್ಯವಸ್ಥೆಯಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಜತೆಯಲ್ಲಿ ಸಾಗಬೇಕು. ಅದನ್ನು ಬಿಟ್ಟು ಎಲ್ಲವನ್ನೂ ತಾವೇ ಮಾಡಿದ್ದು, ರಾಜ್ಯ ಸರ್ಕಾರ ಏನೂ ಮಾಡಿಲ್ಲ ಎಂದು ಹೇಳುವುದು ಸರಿಯಲ್ಲ. ಇನ್ನು ಭೂಸ್ವಾಧೀನದಲ್ಲಿ ಸಮಸ್ಯೆಯಿತ್ತು ಎಂದಿದ್ದಾರೆ. ಅದಕ್ಕೂ ಅವರಿಗೂ ಏನು ಸಂಬಂಧ? ಇದು ರಾಜ್ಯ ಸರ್ಕಾರದ ಕೆಲಸ. ಅದೂ ಅವರಿಗೆ ತಿಳಿದಿಲ್ಲ ಎಂದರು.

Read more Articles on