ಬಿಜೆಪಿಗೆ ಸಂಸದ ಕರಡಿ ಸಂಗಣ್ಣ ರಾಜೀನಾಮೆ

| Published : Apr 17 2024, 02:02 AM IST

ಸಾರಾಂಶ

ಲೋಕಸಭಾ ಟಿಕೆಟ್‌ ವಿಚಾರದಲ್ಲಿ ಮುನಿಸಿಕೊಂಡಿರುವ ಕೊಪ್ಪಳ ಬಿಜೆಪಿ ಸಂಸದ ಸಂಗಣ್ಣ ಕರಡಿ ಅವರು ಪಕ್ಷದ ಪ್ರಾಥಮಿಕ ಸದಸ್ಯತ್ವ ಹಾಗೂ ಸಂಸತ್‌ ಸದಸ್ಯ ಸ್ಥಾನಕ್ಕೆ ಮಂಗಳವಾರ ರಾಜೀನಾಮೆ ನೀಡಿದ್ದು, ಕಾಂಗ್ರೆಸ್‌ ಸೇರಲು ನಿರ್ಧರಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಬೆಂಗಳೂರು/ಕೊಪ್ಪಳ

ಲೋಕಸಭಾ ಟಿಕೆಟ್‌ ವಿಚಾರದಲ್ಲಿ ಮುನಿಸಿಕೊಂಡಿರುವ ಕೊಪ್ಪಳ ಬಿಜೆಪಿ ಸಂಸದ ಸಂಗಣ್ಣ ಕರಡಿ ಅವರು ಪಕ್ಷದ ಪ್ರಾಥಮಿಕ ಸದಸ್ಯತ್ವ ಹಾಗೂ ಸಂಸತ್‌ ಸದಸ್ಯ ಸ್ಥಾನಕ್ಕೆ ಮಂಗಳವಾರ ರಾಜೀನಾಮೆ ನೀಡಿದ್ದು, ಕಾಂಗ್ರೆಸ್‌ ಸೇರಲು ನಿರ್ಧರಿಸಿದ್ದಾರೆ.

ಅದರಂತೆ ಬುಧವಾರ ಬೆಳಗ್ಗೆ 10.30ಕ್ಕೆ ಕೆಪಿಸಿಸಿ ಕಚೇರಿಯಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಸಮ್ಮುಖದಲ್ಲಿ ಅಧಿಕೃತವಾಗಿ ಬೆಂಬಲಿಗರೊಂದಿಗೆ ಕಾಂಗ್ರೆಸ್‌ ಪಕ್ಷ ಸೇರ್ಪಡೆಯಾಗಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಕೊಪ್ಪಳ ಲೋಕಸಭಾ ಟಿಕೆಟ್‌ ನಿರಾಕರಣೆ ಸಂಬಂಧ ಸಂಗಣ್ಣ ಕರಡಿ ಬಿಜೆಪಿ ಬಗ್ಗೆ ಅಸಮಾಧಾನಗೊಂಡಿದ್ದರು. ಈ ಸಂಬಂಧ ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರೊಂದಿಗೆ ಸಂಧಾನ ಸಭೆ ನಡೆದರೂ ಸಂಗಣ್ಣ ಕರಡಿ ಮನವೊಲಿಸಲು ಸಾಧ್ಯವಾಗಿರಲಿಲ್ಲ.

ಇದರ ನಡುವೆಯೇ ಮಾಜಿ ಉಪ ಮುಖ್ಯಮಂತ್ರಿ ಹಾಗೂ ಕಾಂಗ್ರೆಸ್‌ ಶಾಸಕರಾದ ಲಕ್ಷ್ಮಣ ಸವದಿ ಅವರು ಇತ್ತೀಚೆಗೆ ಸಂಗಣ್ಣ ಕರಡಿ ಅವರನ್ನು ಭೇಟಿ ಮಾಡಿ ಕಾಂಗ್ರೆಸ್‌ ಸೇರ್ಪಡೆ ಕುರಿತು ಚರ್ಚಿಸಿದ್ದರು. ಕೊಪ್ಪಳ ಕಾಂಗ್ರೆಸ್ ಅಭ್ಯರ್ಥಿ ರಾಜಶೇಖರ್‌ ಹಿಟ್ನಾಳ್‌ ಅವರು ನಾಮಪತ್ರ ಸಲ್ಲಿಕೆಗೂ ಮೊದಲು ಮಂಗಳವಾರ ಸಂಗಣ್ಣ ನಿವಾಸಕ್ಕೆ ಭೇಟಿ ನೀಡಿ ಆಶೀರ್ವಾದ ಪಡೆದಿದ್ದರು.

ಎಂಎಲ್ಸಿ ಸ್ಥಾನದ ಭರವಸೆ?:

ಕಳೆದೆರಡು ದಿನಗಳಿಂದ ಕಾಂಗ್ರೆಸ್ ನಾಯಕರು ಸಂಗಣ್ಣ ಕರಡಿ ಅವರೊಂದಿಗೆ ನಿರಂತರ ಸಂಪರ್ಕದಲ್ಲಿದ್ದರು. ಸಂಗಣ್ಣ ಕರಡಿ ಅವರ ಬೇಡಿಕೆಯಂತೆ ಕಾಂಗ್ರೆಸ್‌ನಿಂದ ವಿಧಾನಪರಿಷತ್ ಸದಸ್ಯ ಸ್ಥಾನದ ಭರವಸೆ ದೊರೆಯುತ್ತಿದ್ದಂತೆ ಮಂಗಳವಾರ ಸಂಜೆಯೇ ಅವರು ಲೋಕಸಭೆ ಸಭಾಧ್ಯಕ್ಷರಿಗೆ ರಾಜೀನಾಮೆ ಪತ್ರ ಫ್ಯಾಕ್ಸ್ ಮಾಡಿದ್ದಾರೆ. ಇದರ ಜತೆಗೆ ಬಿಜೆಪಿ ಪ್ರಾಥಮಿಕ ಸದಸ್ಯತ್ವಕ್ಕೂ ರಾಜೀನಾಮೆ ನೀಡಿ ಪಕ್ಷದ ರಾಜ್ಯಾಧ್ಯಕ್ಷ ವಿಜಯೇಂದ್ರಗೂ ಕಳುಹಿಸಿಕೊಟ್ಟಿದ್ದಾರೆ.