ಸಾರಾಂಶ
ಬೆಂಗಳೂರು : ರಾಜ್ಯ ಬಿಜೆಪಿ ಭಿನ್ನಮತ ತಾರಕಕ್ಕೇರಿದ ಬೆನ್ನಲ್ಲೇ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ವಿರುದ್ಧ ಬಂಡಾಯದ ಬಾವುಟ ಬೀಸಿದ್ದ ಭಿನ್ನರ ಗುಂಪಿಗೆ ಪಕ್ಷದ ಹೈಕಮಾಂಡ್ ಬಿಗ್ ಶಾಕ್ ನೀಡಿದೆ.
ದೆಹಲಿ ವಿಧಾನಸಭಾ ಚುನಾವಣೆ ಫಲಿತಾಂಶ ಹೊರಬಿದ್ದ ಬೆನ್ನಲ್ಲೇ ಹೈಕಮಾಂಡ್ ಕಾರ್ಯಪ್ರವೃತ್ತವಾಗಿದೆ. ಭಿನ್ನರ ಗುಂಪಿನ ನಾಯಕ ಎಂದೇ ಬಿಂಬಿತವಾಗಿರುವ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರಿಗೆ ಪಕ್ಷದ ಕೇಂದ್ರ ಶಿಸ್ತು ಸಮಿತಿ ಶೋಕಾಸ್ ನೋಟಿಸ್ ನೀಡಿದೆ. ಜತೆಗೆ ಮೂರು ದಿನಗಳೊಳಗಾಗಿ ಲಿಖಿತ ವಿವರಣೆ ನೀಡುವಂತೆ ಗಡುವನ್ನೂ ವಿಧಿಸಿದೆ.
ಬಹಿರಂಗ ಹೇಳಿಕೆಗಳನ್ನು ನೀಡುವ ಮೂಲಕ ತಾವು ಪಕ್ಷದ ಶಿಸ್ತು ಉಲ್ಲಂಘಿಸುತ್ತಿರುವುದು ಗಮನಕ್ಕೆ ಬಂದಿದೆ. ಇದು ಪಕ್ಷದ ಶಿಸ್ತಿಗೆ ವಿರುದ್ಧವಾಗಿದೆ. ಈ ಹಿಂದೆ ಶೋಕಾಸ್ ನೋಟಿಸ್ ನೀಡಿದ್ದ ವೇಳೆ ಉತ್ತಮ ನಡವಳಿಕೆ ತೋರುವುದಾಗಿ ಭರವಸೆ ನೀಡಿದ್ದಿರಿ. ಆದರೆ ನಿಮ್ಮದೇ ಭರವಸೆಯನ್ನು ನೀವು ಉಲ್ಲಂಘಿಸಿ, ಅದನ್ನೇ ಮುಂದುವರಿಸಿಕೊಂಡು ಬಂದಿದ್ದೀರಿ. ನಿಮ್ಮ ಮೇಲೆ ಏಕೆ ಕ್ರಮ ಕೈಗೊಳ್ಳಬಾರದು ಎಂದು ಮೂರು ದಿನದಲ್ಲಿ ಉತ್ತರ ನೀಡಿ ಎಂದು ನೋಟಿಸ್‌ನಲ್ಲಿ ತೀಕ್ಷ್ಣವಾಗಿ ಬರೆಯಲಾಗಿದೆ.
ಒಂದು ವೇಳೆ, ಈ ಮೂರು ದಿನಗಳಲ್ಲಿ ವಿವರಣೆ ನೀಡದಿದ್ದರೆ, ಏನೂ ಹೇಳುವುದು ಇಲ್ಲವೆಂದು ಭಾವಿಸಿ ಅಂತಿಮ ಹಂತದ ಕ್ರಮ ಕೈಗೊಳ್ಳಲಾಗುವುದು ಎಂಬ ಖಡಕ್ ಎಚ್ಚರಿಕೆಯನ್ನೂ ಕೊಟ್ಟಿದೆ. ಯತ್ನಾಳ್ ಸೇರಿ ಅವರ ಬಣದ ಮುಖಂಡರು ಸೋಮವಾರ ವಾರದಲ್ಲಿ ಎರಡನೇ ಬಾರಿ ದೆಹಲಿಗೆ ತೆರಳಿ ಸಭೆಗಳ ಮೇಲೆ ಸಭೆಗಳನ್ನು ನಡೆಸುತ್ತಿರುವ ಮಧ್ಯೆಯೇ ಪಕ್ಷದ ಕೇಂದ್ರ ಶಿಸ್ತು ಸಮಿತಿ ಸದಸ್ಯ ಕಾರ್ಯದರ್ಶಿ ಓಂ ಪಾಠಕ್ ಅವರು ಶೋಕಾಸ್ ನೋಟಿಸ್ ನೀಡಿರುವುದು ಕುತೂಹಲ ಮೂಡಿಸಿದೆ.
ಯತ್ನಾಳ್ ಅವರಿಗೆ ನೀಡುತ್ತಿರುವ ಎರಡನೆಯ ಶೋಕಾಸ್ ನೋಟಿಸ್ ಇದಾಗಿದೆ. ಕಳೆದ ಡಿಸೆಂಬರ್ ತಿಂಗಳಲ್ಲಿ ಮೊದಲ ಶೋಕಾಸ್ ನೋಟಿಸ್ ನೀಡಲಾಗಿತ್ತು. ಅದಕ್ಕೆ ಆರು ಪುಟಗಳ ವಿವರಣೆಯನ್ನೂ ಯತ್ನಾಳ್ ಅವರು ನೀಡಿದ್ದರು. ಆದರೆ, ತಮ್ಮ ನಿಲುವಿನಲ್ಲಿ ಬದಲಾವಣೆ ಮಾಡಿಕೊಳ್ಳದ ಅವರು ಸತತವಾಗಿ ಪಕ್ಷದ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹಾಗೂ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ವಿರುದ್ಧ ಬಹಿರಂಗ ಹೇಳಿಕೆಗಳನ್ನು ನೀಡುತ್ತಲೇ ಇದ್ದರು. ಜತೆಗೆ ಪಕ್ಷದ ರಾಜ್ಯ ಉಸ್ತುವಾರಿಗಳ ಬಗ್ಗೆಯೂ ಅವರು ಲಘುವಾಗಿ ಮಾತನಾಡಿದ್ದರು.
ಅಸಮಾಧಾನ ವ್ಯಕ್ತಪಡಿಸಿದ್ದ ಬಿವೈವಿ:
ಇದರಿಂದ ಕೆಂಡಾಮಂಡಲವಾದ ವಿಜಯೇಂದ್ರ ಅವರು ಇತ್ತೀಚೆಗೆ ಪತ್ರಿಕಾಗೋಷ್ಠಿ ನಡೆಸಿ ಯತ್ನಾಳ್ ಅವರು ಯಡಿಯೂರಪ್ಪ ವಿರುದ್ಧ ನೀಡುತ್ತಿರುವ ಹೇಳಿಕೆಗಳ ಬಗ್ಗೆ ಪಕ್ಷದ ನಾಯಕರು ಮೌನ ವಹಿಸಿದ್ದರ ಬಗ್ಗೆ ಆಕ್ರೋಶಭರಿತರಾಗಿ ಮಾತನಾಡಿದ್ದರು. ಯಡಿಯೂರಪ್ಪ ವಿರುದ್ಧ ಹೇಳಿಕೆ ನೀಡಿದರೂ ಅದನ್ನು ತಡೆಯಲು ಪ್ರಯತ್ನಿಸದೇ ಇರುವುದು ಅಪರಾಧ ಎಂದು ಹರಿಹಾಯ್ದಿದ್ದರು.
ಈ ಮಧ್ಯೆ ವಿಜಯೇಂದ್ರ ಅವರು ಭಾನುವಾರ ದಿಢೀರ್ ದೆಹಲಿಗೆ ತೆರಳಿದ್ದರು. ಪಕ್ಷದ ವರಿಷ್ಠರನ್ನು ಭೇಟಿ ಮಾಡುವ ಉದ್ದೇಶದಿಂದ ದೆಹಲಿಗೆ ಬಂದಿಲ್ಲ ಎಂದು ಸ್ಪಷ್ಟನೆ ನೀಡಿದರೂ ಅವರು ಕೆಲ ನಾಯಕರನ್ನು ಭೇಟಿ ಮಾಡಿ ಯತ್ನಾಳ್ ಅವರ ಹೇಳಿಕೆಗಳಿಗೆ ಬ್ರೇಕ್ ಹಾಕುವ ಅಗತ್ಯತೆಯನ್ನು ಪ್ರತಿಪಾದಿಸಿದರು ಎನ್ನಲಾಗಿದೆ.
- 3 ದಿನಗಳಲ್ಲಿ ಉತ್ತರ ನೀಡಲು ಶಿಸ್ತು ಸಮಿತಿ ತಾಕೀತು- ಉತ್ತರ ಬಾರದಿದ್ದರೆ ಕಠಿಣ ಕ್ರಮ ಕೈಗೊಳ್ಳುವ ಎಚ್ಚರಿಕೆ
ನೋಟಿಸ್‌ನಲ್ಲೇನಿದೆ?
ಈ ಹಿಂದೆ ಶೋಕಾಸ್ ನೋಟಿಸ್ ನೀಡಿದ್ದ ವೇಳೆ ಉತ್ತಮ ನಡವಳಿಕೆ ತೋರುವುದಾಗಿ ಭರವಸೆ ನೀಡಿದ್ದಿರಿ. ಆದರೆ ನಿಮ್ಮದೇ ಭರವಸೆಯನ್ನು ನೀವು ಉಲ್ಲಂಘಿಸಿ, ಅದನ್ನೇ ಮುಂದುವರಿಸಿಕೊಂಡು ಬಂದಿದ್ದೀರಿ. ನಿಮ್ಮ ಮೇಲೆ ಏಕೆ ಕ್ರಮ ಕೈಗೊಳ್ಳಬಾರದು?
ನೋಟಿಸ್ ಬಂದಿಲ್ಲಕೇಂದ್ರ ಶಿಸ್ತು ಸಮಿತಿಯಿಂದ ಅಧಿಕೃತವಾಗಿ ನನಗೆ ಯಾವುದೇ ನೋಟಿಸ್ ಬಂದಿಲ್ಲ. ನೋಟಿಸ್ ಬಂದ ಮೇಲೆ ವಿವರವಾದ ಉತ್ತರ ಕೊಡುತ್ತೇನೆ.- ಬಸನಗೌಡ ಪಾಟೀಲ ಯತ್ನಾಳ
ಸುಧಾಕರ್ ವಿರೋಧ: ಚಿಕ್ಕಬಳ್ಳಾಪುರ ಅಧ್ಯಕ್ಷಆಯ್ಕೆಗೆ ವರಿಷ್ಠರ ತಡೆಬೆಂಗಳೂರು: ಮಾಜಿ ಸಚಿವ ಹಾಗೂ ಹಾಲಿ ಸಂಸದ ಡಾ.ಕೆ.ಸುಧಾಕರ್ ಅವರ ತೀವ್ರ ವಿರೋಧದ ಹಿನ್ನೆಲೆಯಲ್ಲಿ ಚಿಕ್ಕಬಳ್ಳಾಪುರ ಜಿಲ್ಲಾ ಬಿಜೆಪಿ ಅಧ್ಯಕ್ಷರಾಗಿ ನೇಮಕಗೊಂಡಿದ್ದ ಬಿ.ಸಂದೀಪ್ ಆಯ್ಕೆಗೆ ಪಕ್ಷದ ವರಿಷ್ಠರು ತಡೆ ನೀಡಿದ್ದಾರೆ. ಈ ಸಂಬಂಧ ರಾಜ್ಯ ಬಿಜೆಪಿ ಉಸ್ತುವಾರಿ ಡಾ.ರಾಧಾ ಮೋಹನ್ ದಾಸ್ ಅಗರ್ವಾಲ್ ಅವರು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರಗೆ ಪತ್ರ ಬರೆದಿದ್ದಾರೆ.