‘ಎಚ್.ಡಿ.ಕುಮಾರಸ್ವಾಮಿ ಧೋರಣೆ ನೋಡುತ್ತಿದ್ದರೆ, ಸದ್ಯದಲ್ಲೇ ಜೆಡಿಎಸ್ ಪಕ್ಷ ಬಿಜೆಪಿ ಜತೆ ವಿಲೀನವಾಗುವ ಸಾಧ್ಯತೆ ಇದೆ. ಆಗುವುದಾದರೆ ಬೇಗ ವಿಲೀನವಾಗಲಿ. ಆಗ ಆಟಕ್ಕೆ ಮೂರು ಪಕ್ಷ, ಲೆಕ್ಕಕ್ಕೆ ಮಾತ್ರ ಎರಡು ಪಕ್ಷ ಎಂಬ ಗೊಂದಲವಿರುವುದಿಲ್ಲ’ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ವ್ಯಂಗ್ಯವಾಡಿದ್ದಾರೆ.

 ಬೆಂಗಳೂರು : ‘ಎಚ್.ಡಿ.ಕುಮಾರಸ್ವಾಮಿ ಧೋರಣೆ ನೋಡುತ್ತಿದ್ದರೆ, ಸದ್ಯದಲ್ಲೇ ಜೆಡಿಎಸ್ ಪಕ್ಷ ಬಿಜೆಪಿ ಜತೆ ವಿಲೀನವಾಗುವ ಸಾಧ್ಯತೆ ಇದೆ. ಆಗುವುದಾದರೆ ಬೇಗ ವಿಲೀನವಾಗಲಿ. ಆಗ ಆಟಕ್ಕೆ ಮೂರು ಪಕ್ಷ, ಲೆಕ್ಕಕ್ಕೆ ಮಾತ್ರ ಎರಡು ಪಕ್ಷ ಎಂಬ ಗೊಂದಲವಿರುವುದಿಲ್ಲ’ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ವ್ಯಂಗ್ಯವಾಡಿದ್ದಾರೆ.

ಕೆಪಿಸಿಸಿ ಕಚೇರಿಯಲ್ಲಿ ಗುರುವಾರ ಚಾಮರಾಜಪೇಟೆ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಮುಖಂಡ ಗೋವಿಂದರಾಜ್ ಹಾಗೂ ಅವರ ಬೆಂಬಲಿಗರನ್ನು ಪಕ್ಷಕ್ಕೆ ಬರ ಮಾಡಿಕೊಂಡು ಮಾತನಾಡಿದರು.

ಬಿಜೆಪಿ, ಜೆಡಿಎಸ್‌ವಿಲೀನವಾದರೆ ನಮಗೂ ಒಳ್ಳೆಯದೇ. ನಾವೂ ನೇರವಾಗಿ ಬಿಜೆಪಿ ಜೊತೆ ಹೋರಾಟ ಮಾಡಬಹುದು. ಆಗ ಆಟಕ್ಕೆ ಮೂರು ಪಕ್ಷ, ಲೆಕ್ಕಕ್ಕೆ ಮಾತ್ರ ಎರಡು ಪಕ್ಷ ಎಂಬ ಗೊಂದಲ ಇರುವುದಿಲ್ಲ. ಅವರು ಬೇಗ ತೀರ್ಮಾನ ಮಾಡಿದರೆ ನಾವು ನಮ್ಮ ತೀರ್ಮಾನ ಮಾಡಿಕೊಳ್ಳಬಹುದು. ಈಗ ಅಡ್ಡಗೋಡೆ ಮೇಲೆ ದೀಪ ಇಟ್ಟಂತೆ ಆಡುತ್ತಿದ್ದಾರೆ ಎಂದು ಲೇವಡಿ ಮಾಡಿದರು.

ಜೆಡಿಎಸ್‌ನವರು ತಮ್ಮ ಅಸ್ತಿತ್ವ ಉಳಿಸಿಕೊಳ್ಳಲು ನಾವು ಫ್ರೆಂಡ್ಲಿ ಫೈಟ್ ಮಾಡುತ್ತೇವೆ ಎಂದಿದ್ದಾರೆ. ದಯವಿಟ್ಟು ಫ್ರೆಂಡ್ಲಿ ಫೈಟ್ ಬೇಡ, ನೇರವಾಗಿ ಹೋರಾಟ ಮಾಡಿ. ನೀವು ಒಟ್ಟಾಗಿ ಸೀಟು ಹಂಚಿಕೊಂಡು ಹೋರಾಟ ಮಾಡಿ. ನಿಮ್ಮ ಫ್ರೆಂಡ್ಲಿ ಫೈಟ್ ನಿಂದ ನಿಮ್ಮ ಕಾರ್ಯಕರ್ತರಿಗೆ ಗೊಂದಲವಾಗುತ್ತದೆ. ನೇರವಾಗಿ ಹೋರಾಟ ಮಾಡಲು ನಾವು ಸಿದ್ಧವಿದ್ದೇವೆ ಎಂದು ಶಿವಕುಮಾರ್ ಸವಾಲು ಹಾಕಿದರು.ಕಾಂಗ್ರೆಸ್‌ಗೆ ಸೇರ್ಪಡೆಯಾಗುತ್ತಿದ್ದಾರೆ:

ಜೆಡಿಎಸ್, ಬಿಜೆಪಿಯಿಂದ ಹಲವರು ಕಾಂಗ್ರೆಸ್‌ಗೆ ಬರುತ್ತಿದ್ದಾರೆ. ಪಕ್ಷಕ್ಕೆ ಬರುವುದು, ವಾಪಸ್ ಹೋಗುವುದು ಮಾಡಬೇಡಿ. ಜೆಡಿಎಸ್ ಪಕ್ಷವನ್ನು ಅವರು ತಮ್ಮ ವೈಯಕ್ತಿಕ ಆಸ್ತಿಯಂತೆ ಮಾಡಿಕೊಂಡಿದ್ದಾರೆ. ಜೆಡಿಎಸ್ ಪಕ್ಷಕ್ಕೆ ಒಂದು ಸಿದ್ಧಾಂತ, ನೀತಿ ಇಲ್ಲ. ನೀವು ಬಂದ ಮೇಲೆ ಎಲ್ಲರೂ ಒಗ್ಗಟ್ಟಾಗಿ ಶ್ರಮಿಸಿ, ಜನರ ಸೇವೆ ಮಾಡಿ. ನಿಮ್ಮ ಸರ್ಕಾರ ಆಡಳಿತದಲ್ಲಿದ್ದು, ಇದನ್ನು ಉಪಯೋಗಿಸಿಕೊಳ್ಳಿ ಎಂದು ಕರೆ ನೀಡಿದರು.

ಸಚಿವ ಜಮೀರ್ ಅಹ್ಮದ್‌ ಖಾನ್‌ ಸಮ್ಮುಖದಲ್ಲಿ ಗೋವಿಂದರಾಜ್ ಹಾಗೂ ಅವರ ಧರ್ಮಪತ್ನಿ ಗೌರಮ್ಮ, ಚಂದ್ರಶೇಖರ್, ಜೆಡಿಎಸ್ ಅಧ್ಯಕ್ಷರಾಗಿದ್ದ ಡೇವಿಡ್ ಸೇರಿದಂತೆ ಹಲವರು ಪಕ್ಷ ಸೇರ್ಪಡೆಗೊಂಡರು.

779 ಆಕಾಂಕ್ಷಿಗಳಿಂದ ಅರ್ಜಿ ಬಂದಿದ್ದು,ಜ.10ರೊಳಗೆ ಅರ್ಜಿ ಸಲ್ಲಿಸಿ: ಡಿಸಿಎಂ

ಬೆಂಗಳೂರು ನಗರದಲ್ಲಿ ಪಾಲಿಕೆ ಚುನಾವಣೆ ಸಮೀಪಿಸುತ್ತಿದೆ. ಈಗಾಗಲೇ ಒಟ್ಟು 779 ಆಕಾಂಕ್ಷಿಗಳು ಟಿಕೆಟ್‌ಗಾಗಿ ಅರ್ಜಿ ಸಲ್ಲಿಸಿದ್ದು, ಆಕಾಂಕ್ಷಿಗಳು ಜ.10ರೊಳಗೆ ಅರ್ಜಿ ಸಲ್ಲಿಸಬೇಕು ಎಂದು ಡಿ.ಕೆ. ಶಿವಕುಮಾರ್‌ ಹೇಳಿದರು.

ಬೆಂಗಳೂರು ಪಶ್ಚಿಮ ಪಾಲಿಕೆಯಲ್ಲಿ 247, ಬೆಂಗಳೂರು ಉತ್ತರದಲ್ಲಿ 199, ಬೆಂಗಳೂರು ದಕ್ಷಿಣದಲ್ಲಿ 129, ಬೆಂಗಳೂರು ಕೇಂದ್ರದಲ್ಲಿ 106, ಬೆಂಗಳೂರು ಪೂರ್ವದಲ್ಲಿ 78 ಅರ್ಜಿಗಳನ್ನು ತೆಗೆದುಕೊಳ್ಳಲಾಗಿದೆ. ಅರ್ಜಿ ತೆಗೆದುಕೊಂಡವರು ಕೊನೆ ದಿನದವರೆಗೂ ಕಾಯಬೇಡಿ. ಎರಡು ಮೂರು ದಿನಗಳಲ್ಲೇ ಸಲ್ಲಿಕೆ ಮಾಡಿ. ನಾವು ಕೂಡ ಪಕ್ಷದ ಅಭ್ಯರ್ಥಿ ಆಯ್ಕೆಗೆ ವಿಮರ್ಶೆ ಮಾಡಬೇಕಿದೆ. ಕೊನೇ ಘಳಿಗೆಯಲ್ಲಿ ಸಲ್ಲಿಕೆಯಾದರೆ ವಿಮರ್ಶೆ ಮಾಡುವುದು ಕಷ್ಟವಾಗುತ್ತದೆ. ಜ.10ರ ಒಳಗಾಗಿ ಅರ್ಜಿ ಕೊಟ್ಟರೆ ನಾವು ನಮ್ಮ ತಂಡವನ್ನು ಕಳುಹಿಸಿ ವರದಿ ಪಡೆಯಬಹುದು ಎಂದು ಹೇಳಿದರು.

ಇದು ಚುನಾವಣಾ ವರ್ಷ: ಡಿಕೆಶಿ

ಪಾಲಿಕೆ ಚುನಾವಣೆಯಲ್ಲಿ ನಾವು ಗೆಲ್ಲುತ್ತೇವೋ, ಸೋಲುತ್ತೇವೋ ಬೇರೆ. ಪಾಲಿಕೆ ಚುನಾವಣೆ ಬಗ್ಗೆ ಸರ್ಕಾರ ಈಗಾಗಲೇ ನ್ಯಾಯಾಲಯದಲ್ಲಿ ಅಫಿಡವಿಟ್ ಸಲ್ಲಿಸಿದೆ. ಇದರ ಜೊತೆಗೆ ಈ ವರ್ಷವನ್ನು ಚುನಾವಣಾ ವರ್ಷ ಎಂದು ಪರಿಗಣಿಸಿದ್ದೇವೆ ಎಂದು ಡಿ.ಕೆ.ಶಿವಕುಮಾರ್‌ ಹೇಳಿದರು.

ಈ ವರ್ಷವೇ ಇತರೆ ಸ್ಥಳೀಯ ಸಂಸ್ಥೆಗಳ ಚುನಾವಣೆ ನಡೆಸಲಾಗುವುದು. ಈ ಬಗ್ಗೆ ಮುಖ್ಯಮಂತ್ರಿಗಳು ಗ್ರಾಮೀಣಾಭಿವೃದ್ಧಿ ಸಚಿವರ ಜೊತೆ ಚರ್ಚಿಸಿ ಇರುವ ಕಾನೂನು ಅಡೆತಡೆ ನಿವಾರಣೆಗೆ ತೀರ್ಮಾನಿಸಿದ್ದಾರೆ. ಹೀಗಾಗಿ ಕಾರ್ಯಕರ್ತರು ಚುನಾವಣೆಗೆ ಸಿದ್ಧರಾಗಬೇಕು ಎಂದು ಕರೆ ನೀಡಿದರು.