ಸಾರಾಂಶ
ಬೆಳಗಾವಿಯ ಬಹಿರಂಗ ವೇದಿಕೆಯಲ್ಲಿ ಮುಖ್ಯಮಂತ್ರಿಗಳಿಂದ ನಿಂದನೆ ಅನುಭವಿಸಿದ್ದ ಧಾರವಾಡದ ಎಎಸ್‌ಪಿ ನಾರಾಯಣ ಭರಮನಿ ಸೇವೆಯಿಂದ ನಿವೃತ್ತಿ ಬಯಸಿರುವುದು ಅತ್ಯಂತ ನೋವಿನ ಹಾಗೂ ದುರ್ದೈವದ ಸಂಗತಿ ಎಂದು ವಿಧಾನಸಭೆ ಪ್ರತಿಪಕ್ಷ ನಾಯಕ ಆರ್.ಅಶೋಕ್ ಮತ್ತು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದ್ದಾರೆ.
ಬೆಂಗಳೂರು : ಬೆಳಗಾವಿಯ ಬಹಿರಂಗ ವೇದಿಕೆಯಲ್ಲಿ ಮುಖ್ಯಮಂತ್ರಿಗಳಿಂದ ನಿಂದನೆ ಅನುಭವಿಸಿದ್ದ ಧಾರವಾಡದ ಎಎಸ್‌ಪಿ ನಾರಾಯಣ ಭರಮನಿ ಸೇವೆಯಿಂದ ನಿವೃತ್ತಿ ಬಯಸಿರುವುದು ಅತ್ಯಂತ ನೋವಿನ ಹಾಗೂ ದುರ್ದೈವದ ಸಂಗತಿ ಎಂದು ವಿಧಾನಸಭೆ ಪ್ರತಿಪಕ್ಷ ನಾಯಕ ಆರ್.ಅಶೋಕ್ ಮತ್ತು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಹೆಚ್ಚುವರಿ ಎಎಸ್‌ಪಿ ನಾರಾಯಣ ಭರಮನಿ ಅವರ ಮೇಲೆ ನೀವು ಬಹಿರಂಗ ವೇದಿಕೆ ಮೇಲೆ ಕೈಎತ್ತಿದ್ದ ಘಟನೆಗೆ ಕಾರಣ ನಿಮ್ಮ ಅಧಿಕಾರದ ದರ್ಪವೋ, ಮದವೋ, ದುರಹಂಕಾರವೋ, ವಿಫಲ ಸರ್ಕಾರ ಮುನ್ನಡೆಸುತ್ತಿರುವ ಹತಾಶೆಯೋ ಅಥವಾ ಇಷ್ಟರಲ್ಲೇ ಅಧಿಕಾರ ಬಿಟ್ಟುಕೊಡಬೇಕು ಎನ್ನುವ ನೋವೋ ಎಂಬುದನ್ನು ನಿಮ್ಮ ಆತ್ಮಾವಲೋಕನಕ್ಕೆ ಬಿಡುತ್ತೇನೆ ಎಂದು ಆರ್.ಅಶೋಕ್ ತಿಳಿಸಿದ್ದಾರೆ.
ನಿಮ್ಮ ನಡೆಯಿಂದ ಒಬ್ಬ ಕರ್ತವ್ಯನಿಷ್ಠ ಅಧಿಕಾರಿ ಸ್ವಾಭಿಮಾನಕ್ಕೆ ಧಕ್ಕೆ ಬಂದಿದೆ. ಇಡೀ ಪೊಲೀಸ್ ಇಲಾಖೆ ಮನೋಬಲಕ್ಕೆ ಚ್ಯುತಿ ತಂದಿದೆ. ಅಧಿಕಾರಶಾಹಿಯ ನೈತಿಕತೆಗೆ ಪೆಟ್ಟು ಕೊಟ್ಟಿದೆ, ನೌಕರಶಾಹಿಯ ಆತ್ಮಸ್ಥೈರ್ಯ ಕುಸಿದಿದೆ. ನಿಮ್ಮ ಯಡವಟ್ಟುಗಳಿಂದ ಪ್ರತಿ ದಿನ ಒಂದಲ್ಲ ಒಂದು ಒಂದು ರೀತಿ ತಮ್ಮ ಸರ್ಕಾರಕ್ಕೆ, ವೈಯಕ್ತಿಕವಾಗಿ ತಮಗೆ ಕೆಟ್ಟ ಹೆಸರು ಬರುತ್ತಲೇ ಇದೆ. ಇನ್ನಾದರೂ ಈ ಭಂಡ ಬಾಳು ಬಿಡಿ. ಅಧಿಕಾರದ ವ್ಯಾಮೋಹ ಬಿಟ್ಟು ರಾಜೀನಾಮೆ ಕೊಟ್ಟು ಇರುವ ಅಲ್ಪಸ್ವಲ್ಪ ಗೌರವವನ್ನಾದರೂ ಉಳಿಸಿಕೊಳ್ಳಿ. ನಿವೃತ್ತಿ ಅಂಚಿನಲ್ಲಿ ಖಳನಾಯಕನಾಗಿ ಇತಿಹಾಸಪುಟ ಸೇರುವುದಕ್ಕಿಂತ, ಗೌರವದಿಂದ ಕುರ್ಚಿ ತ್ಯಾಗ ಮಾಡುವುದು ನಿಮಗೂ ಒಳಿತು, ರಾಜ್ಯಕ್ಕೂ ಒಳಿತು ಎಂದು ಅವರು ಸಾಮಾಜಿಕ ಜಾಲತಾಣದ ಮೂಲಕ ವಾಗ್ದಾಳಿ ನಡೆಸಿದ್ದಾರೆ.
ವಿಜಯೇಂದ್ರ ಅವರು, ಸಿದ್ದರಾಮಯ್ಯನವರ ಸರ್ಕಾರದಲ್ಲಿ ಗೌರವಸ್ಥ ಅಧಿಕಾರಿಗಳಿಗೆ ಉಳಿಗಾಲವಿಲ್ಲ.” ಗೌರವಸ್ಥ ಕ್ರಿಯಾಶೀಲ ಅಧಿಕಾರಿಗಳಿಗೆ ಕಪಾಳಮೋಕ್ಷ, ಸಾರ್ವಜನಿಕವಾಗಿ ಬಹಿರಂಗ ವೇದಿಕೆಯಲ್ಲೇ ಅಪಮಾನಿಸುವುದು, ಏಕವಚನದಲ್ಲಿ ಸಂಬೋಧಿಸುವುದು ಈ ಸರ್ಕಾರದಲ್ಲಿ ಸಾಮಾನ್ಯ ಎಂದು ಆರೋಪಿಸಿದ್ದಾರೆ.
ಬೆಳಗಾವಿಯ ಬಹಿರಂಗ ವೇದಿಕೆಯಲ್ಲಿ ಮುಖ್ಯಮಂತ್ರಿಗಳಿಂದ ನಿಂದನೆ ಅನುಭವಿಸಿದ್ದ ಪೊಲೀಸ್ ಅಧಿಕಾರಿ ನಾರಾಯಣ ಭರಮನಿ ಇದೀಗ ತಮಗಾದ ಅವಮಾನದಿಂದ ಮನನೊಂದು ಗೌರವದಿಂದ ಕರ್ತವ್ಯ ನಿಭಾಯಿಸಿದರೂ ಕೆಟ್ಟ ವ್ಯವಸ್ಥೆಯಲ್ಲಿ ಸೇವೆ ಸಲ್ಲಿಸುವುದು ಸಾಧ್ಯವೇ ಇಲ್ಲ ಎಂಬ ನಿರ್ಧಾರಕ್ಕೆ ಬಂದು ನಿವೃತ್ತಿ ಬಯಸಿರುವುದು ಅತ್ಯಂತ ನೋವಿನ ಹಾಗೂ ದುರ್ದೈವದ ಸಂಗತಿ. ಇಂತಹ ಅಧಿಕಾರಿಗಳಿಗೆ ನೈತಿಕ ಬಲ ತುಂಬಲು ಈ ನಾಡಿನಲ್ಲಿ ಪ್ರಜ್ಞಾವಂತ ಜನರಿದ್ದಾರೆ, ಮಾಧ್ಯಮಗಳಿವೆ, ಭರಮನಿಯವರು ಯಾವುದೇ ಕಾರಣಕ್ಕೂ ಎದೆಗುಂದದೆ ತಮ್ಮ ರಾಜೀನಾಮೆ ನಿರ್ಧಾರದಿಂದ ಹಿಂದೆ ಸರಿಯಲಿ ಎಂದು ವಿನಂತಿಸುವೆ, ನಾವು ನಿಮ್ಮೊಂದಿಗೆ ಇದ್ದೇವೆ ಎಂದು ಸಾಮಾಜಿಕ ಜಾಲತಾಣದ ಮೂಲಕ ಹೇಳಿದ್ದಾರೆ.