ಸಾರಾಂಶ
ಚಳ್ಳಕೆರೆ: ಶರೀರದಲ್ಲಿ ರಕ್ತಸಂಚಾರ ವ್ಯತ್ಯಯವಾದರೆ ಅಥವಾ ರಕ್ತದ ಅಂಶ ಕಡಿಮೆಯಾದರೆ ಪ್ರಾಣಕ್ಕೆ ಅಪಾಯ. ಆದ್ದರಿಂದ ರಕ್ತದಾನದ ಮೂಲಕ ಬೇರೆಯವರ ಜೀವ ಉಳಿಸುವ ಮಹತ್ಕಾರ್ಯಕ್ಕೆ ನೆರವಾಗಬೇಕು ಎಂದು ಚನ್ನಮ್ಮನಾಗತಿಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಬಿ.ಆನಂದಕುಮಾರ್ ತಿಳಿಸಿದರು.
ಅವರು, ಗ್ರಾಮದ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸ್ವಯಂಪ್ರೇರಿತ ರಕ್ತದಾನ ಶಿಬಿರದಲ್ಲಿ ಭಾಗವಹಿಸಿ, ತಾವು ಸಹ ರಕ್ತದಾನ ಮಾಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ವೈದ್ಯಾಧಿಕಾರಿ ಡಾ.ಮಂಜುನಾಥ ಮಾತನಾಡಿ, ಅಮೂಲ್ಯ ದಾನಗಳಲ್ಲಿ ರಕ್ತದಾನವೂ ಒಂದಾಗಿದೆ. ಹೆಚ್ಚು ರಕ್ತ ಸಂಗ್ರಹಿಸಿದರೆ ಮಾತ್ರ ಪ್ರಾಣಾಪಾಯವನ್ನು ಎದುರಿಸುವ ರೋಗಿಗಳಿಗೆ ಮರುಜೀವ ನೀಡಬಹುದಾಗಿದೆ. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಎಚ್‌ಐವಿ ನಿಯಂತ್ರಣ ಘಟಕ, ತಾಲೂಕು ಆರೋಗ್ಯಾಧಿಕಾರಿಗಳ ಸಹಯೋಗದಲ್ಲಿ ಈ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದರು.
ವೈದ್ಯಾಧಿಕಾರಿ ಡಾ.ರಘುನಂದನ್ ಮಾತನಾಡಿ, ಇಂದಿನ ಸ್ವಯಂಪ್ರೇರಿತ ರಕ್ತದಾನ ಶಿಬಿರದಲ್ಲಿ ೪೦ಕ್ಕೂ ಹೆಚ್ಚು ಜನರು ರಕ್ತವನ್ನು ದಾನರೂಪದಲ್ಲಿ ನೀಡಿದ್ಧಾರೆ. ರಕ್ತದಾನ ಮಾಡಿದ ಎಲ್ಲರಿಗೂ ಆರೋಗ್ಯ ಇಲಾಖೆ ಪರವಾಗಿ ಅಭಿನಂದಿಸುವೆ. ಮುಂದಿನ ದಿನಗಳಲ್ಲೂ ಸಹಕಾರ ನೀಡುವಂತೆ ಮನವಿ ಮಾಡಿದರು.
ಕಾರ್ಯಕ್ರಮದಲ್ಲಿ ಪಂಚಾಯಿತಿ ಸದಸ್ಯರಾದ ತಿಪ್ಪೇಸ್ವಾಮಿ, ರಾಜಣ್ಣ, ದಳಪತಿಭೀಮಪ್ಪ, ಪಿಡಿಒ ಕರ‍್ಲಯ್ಯ, ಆರೋಗ್ಯ ನಿರೀಕ್ಷಾಣಾಧಿಕಾರಿ ಲೋಕನಾಥ, ಕರಿಯಣ್ಣ, ಜಿಲ್ಲಾ ರಕ್ತಕೇಂದ್ರದ ಅಧಿಕಾರಿ ಡಾ.ರೂಪ ಮುಂತಾದವರು ಪಾಲ್ಗೊಂಡಿದ್ದರು.