ಸಾರಾಂಶ
ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಇಬ್ಬರೂ ಕಾಂಗ್ರೆಸ್‌ಗೆ ಅನಿವಾರ್ಯ. ಯಾರೋ ಹೇಳಿಕೆ ನೀಡಿದರು ಎಂಬ ಕಾರಣಕ್ಕೆ ಯಾವುದೇ ಬದಲಾವಣೆ ಆಗುವುದಿಲ್ಲ
ಬೆಂಗಳೂರು : ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಇಬ್ಬರೂ ಕಾಂಗ್ರೆಸ್‌ಗೆ ಅನಿವಾರ್ಯ. ಯಾರೋ ಹೇಳಿಕೆ ನೀಡಿದರು ಎಂಬ ಕಾರಣಕ್ಕೆ ಯಾವುದೇ ಬದಲಾವಣೆ ಆಗುವುದಿಲ್ಲ. ಬಣ ರಾಜಕೀಯ ಮಾಡಿದರೆ ಗುಲಾಂ ನಬಿ ಆಜಾದ್ ಗುಂಪಿನಂತೆ ಪಶ್ಚಾತ್ತಾಪ ಪಡಬೇಕಾಗುತ್ತದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಜಿ.ಸಿ.ಚಂದ್ರಶೇಖರ್ ಹೇಳಿದ್ದಾರೆ.
ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿ, ಬದಲಾವಣೆ ಬಗ್ಗೆ ಮಾತನಾಡುವವರು ಒಂದು ವರ್ಷದಿಂದಲೇ ಮಾತನಾಡುತ್ತಿದ್ದಾರೆ. ಅವರು ಮಾತನಾಡಿದ್ದು ಯಾವುದಾದರೂ ಆಗಿದೆಯೇ? ಅವರ ಮಾತು ಅಥವಾ ನಿರ್ಧಾರಗಳ ಮೇಲೆ ಇಲ್ಲಿ ಏನೂ ಆಗುವುದಿಲ್ಲ. ನಮ್ಮ ಹೈಕಮಾಂಡ್ ತುಂಬಾ ಶಕ್ತಿಯುತವಾಗಿದೆ. ಜತೆಗೆ ಹೈಕಮಾಂಡ್ ಯಾರೂ ಬಹಿರಂಗ ಹೇಳಿಕೆ ನೀಡಬಾರದು ಎಂದು ಹಲವು ಬಾರಿ ಸ್ಪಷ್ಟವಾಗಿ ಹೇಳಿದೆ. ಹೈಕಮಾಂಡ್ ಸೂಚನೆ ಹೊರತಾಗಿಯೂ ಬದಲಾವಣೆ ಬಗ್ಗೆ ಮಾತನಾಡುವವರು ಶಿಶುಪಾಲರು ಇದ್ದಂತೆ, ಹೈಕಮಾಂಡ್ ಶ್ರೀಕೃಷ್ಣನಿದ್ದಂತೆ ಎಂದು ಎಚ್ಚರಿಸಿದರು.
ಜಿ-23 ಗುಂಪು ಏನಾಯಿತು?:
ನಮ್ಮಲ್ಲಿ ಯಾರೂ ಬಣ ರಾಜಕೀಯ ಮಾಡಬಾರದು. ಯಾವುದೇ ಸಮಾವೇಶ ನಡೆಸಿದರೂ ಪಕ್ಷದ ಚೌಕಟ್ಟಿನಲ್ಲೇ ನಡೆಸಬೇಕು. ಇಲ್ಲಿ ಕಾಂಗ್ರೆಸ್ ಎಂದರೆ ಮಾತ್ರ ಮುಂದೆ ಅವಕಾಶ. ಇಲ್ಲಿ ಬಣಕ್ಕೆ ಬೆಲೆ ಇದೆ ಎಂದುಕೊಂಡರೆ ಪಶ್ಚಾತ್ತಾಪ ಪಡಬೇಕಾಗುತ್ತದೆ. ಗುಲಾಂ ನಬಿ ಆಜಾದ್ ಸೇರಿ ಇದ್ದ ಜಿ-23 ಎನ್ನುವ ಗುಂಪು ಬಗ್ಗೆ ನಿಮಗೆ ಗೊತ್ತಿರಬಹುದು. ಅದು ಏನಾಯಿತು ಎಂಬುದು ಗೊತ್ತಿದೆಯಲ್ಲ ಎಂದು ಪ್ರಶ್ನಿಸಿದರು.
ಬಣಕ್ಕೆ ಕಾಂಗ್ರೆಸ್ ಪಕ್ಷದಲ್ಲಿ ಬೆಲೆ ಇಲ್ಲ
ಬದಲಾವಣೆ ಬಗ್ಗೆ ಮಾತನಾಡುವವರು ಒಂದು ವರ್ಷದಿಂದಲೇ ಮಾತನಾಡುತ್ತಿದ್ದಾರೆ. ಅವರು ಮಾತನಾಡಿದ್ದು ಯಾವುದಾದರೂ ಆಗಿದೆಯೇ? ಅವರ ಮಾತು ಅಥವಾ ನಿರ್ಧಾರಗಳ ಮೇಲೆ ಇಲ್ಲಿ ಏನೂ ಆಗುವುದಿಲ್ಲ. ಇಲ್ಲಿ ಕಾಂಗ್ರೆಸ್ ಎಂದರೆ ಮಾತ್ರ ಮುಂದೆ ಅವಕಾಶ. ಇಲ್ಲಿ ಬಣಕ್ಕೆ ಬೆಲೆ ಇದೆ ಎಂದುಕೊಂಡರೆ ಪಶ್ಚಾತ್ತಾಪ ಪಡಬೇಕಾಗುತ್ತದೆ.
- ಜಿ.ಸಿ. ಚಂದ್ರಶೇಖರ್, ಕೆಪಿಸಿಸಿ ಕಾರ್ಯಾಧ್ಯಕ್ಷ